Categories
ರಚನೆಗಳು

ಪ್ರಸನ್ನ ಶ್ರೀನಿವಾಸದಾಸರು

ಪ್ರಸನ್ನ ಶ್ರೀ ನರಸಿಂಹ (ಪ್ರಹ್ಲಾದ ಚರಿತೆ)

ಪ್ರಥಮ ಅಧ್ಯಾಯ – ಹಿರಣ್ಯಕಶಿಪು ಪೂರ್ವ ವೃತ್ತಾಂತ
ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ
ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ
ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ
ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ
ತೋಯಸ್ಥ ಪತ್ರಸ್ಥ ತೋಯಜಾಲಯಾ ಸ್ತುತ್ಯ
ತೋಯಜಾಸನ ಅಂಡ ಸ್ರಷ್ಟಾ ಸರ್ವಸ್ಥ
ಅಚ್ಯುತಾನಂತ ಗೋವಿಂದ ನೀ ಸಜ್ಜನರ
ಭಯ ನಿವಾರಣ ಮಾಳ್ಪಿ ತೋರಿ ಆಗಾಗ ೧
ಪ್ರಳಯ ಜಲಚರ ಶೈಲಧರ ಧರೋದ್ಧರ ನಮೋ
ಬಾಲಕಗೆ ಒಲಿದು ಬಲಿಯಲಿ ದಾನ ಕೇಳಿ
ಖಳ ಕುಪಾಲರ ಸದೆದು ಜಲಧಿಯ ಬಂಧಿಸಿದ
ಲಲನೇರ ರಂಜಿತ ಶಿಶು ಶಂಭಳದಿ ತೋರ್ವಿ ೨
ಏಕದಾ ಬ್ರಹ್ಮನ ಸುತರು ಸನಕಾದಿಗಳು
ಏಕಾತ್ಮ ಶ್ರೀ ವಿಷ್ಣುಲೋಕಕ್ಕೆ ಬರಲು
ದಿಗ್ವಾಸಸ ಶಿಶುರೂಪ ಆ ಮುನಿವರರ
ಲೆಕ್ಕಿಸದೇ ತಡೆದರು ದ್ವಾರಪಾಲಕರು ೩
ಜಯವಿಜಯರೆಂಬ ಆ ದ್ವಾರಪಾಲಕರಿಗೆ೦
ಮಾಯೇಶ ಹರಿ ಪ್ರಿಯತರರು ಮುನಿವರರು
ಈಯಲು ಶಾಪವ ಆ ವಿಷ್ಣು ಪಾರ್ಶದರು೦
ದೈತ್ಯಜನ್ಮವ ಹೊಂದಿದರು ಪತನವಾಗಿ ೪
ಸುತಪೋನಿಧಿ ಕಶ್ಯಪ ತೇಜೋಲ್ಬಣದಿಂ
ದಿತಿದೇವಿ ಜಠರದಲಿ ವಿಷ್ಣು ಪಾರ್ಶದರು
ಪತಿತ ಆ ಜಯ ವಿಜಯರು ಪ್ರವೇಶಿಸಿದರು
ದಿತಿ ಹಡೆದಳು ಗಂಡು ಮಕ್ಕಳೀರ್ವರನು ೫
ದಿತಿದೇವಿ ಅಗ್ರಸುತ ಹಿರಣ್ಯಕಶಿಪು ಜಯ
ದಿತಿ ಅವರಸುತ ವಿಜಯನೇ ಹಿರಣ್ಯಾಕ್ಷ
ಗದೆ ಹಿಡಿದು ಸುರರಿಗೆ ಉಪಟಳ ಕೊಟ್ಟನು
ಈ ಧರೆಯ ಅಬ್ಧಿಯ ಕೆಳಗೆ ಅಡಗಿಸಿದ ೬
ಸುರಸುಜನ ಕ್ಷೇಮಾರ್ಥ ಪದುಮಜ ಪ್ರಾರ್ಥಿಸಲು
ಕರದಿಂದ ಹೊಡೆದು ಹಿರಣ್ಯಾಕ್ಷನ ಕೊಂದು
ಧರೆಯ ಲೀಲೆಯಿಂದ ಮೇಲೆತ್ತಿತಂದಿ
ವರಶ್ಯಾಮಸುಂದರ ವರಾಹ ಹರಿ ನೀನು ೭
ಜಯ ಜಯತು ವೇಧಪಿತ ಶ್ರೀ ಪ್ರಸನ್ನ ಶ್ರೀನಿವಾಸ ನರಸಿಂಹ
ಜಯ ಗುಣಾರ್ಣವ ಭೂಮಾನ್ ಲಕ್ಷ್ಮೀಸಮೇತ
ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ
ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ ೮
-ಇತಿ ಪ್ರಥಮಾಧ್ಯಾಯ ಸಂಪೂರ್ಣಂ –

ದ್ವಿತೀಯ ಅಧ್ಯಾಯ
ಹಿರಣ್ಯಕಶಿಪು ವರ ವೃತ್ತಾಂತ
ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ
ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ
ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ
ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ
ಮೂರ್ಜಗದ ದೊರೆ ಹರೇ ನೀ ತನ್ನ ತಮ್ಮನ
ಭಂಜಿಸಿದೆ ಎಂದು ಕಡುಕೋಪಗೊಂಡು
ದುರ್ಜನ ದಾನವ ವಂದಿತ ಹಿರಣ್ಯಕನು
ರಜಸ್ತಮೋಚ್ಛದಿ ದ್ವೇಷ ಮಾಡಿದನು ನಿನ್ನಲ್ಲಿ ೧
ಶೂಲದಿಂ ಅಚ್ಯುತನ ಕುತ್ತಿಗೆ ಕತ್ತರಿಸಿ
ಗಳರುಧಿರ ತರ್ಪಣ ಕೊಡುವೆ ಎನ್ನುತ್ತ
ಖಳ ದೈತ್ಯ ಪ್ರಮುಖರಿಗೆ ಹೇಳಿದನು ವೈಷ್ಣವ
ಸ್ಥಳ ದ್ವಿಜ ಗೋ ಭಕ್ತರನ್ನ ತರಿ ಎಂದ ೨
ಗರ್ಜಿಸುತ ದೈತ್ಯರು ಪುರ ಗ್ರಾಮ ಆಶ್ರಮ
ವ್ರಜಕ್ಷೇತ್ರ ದಹಿಸÀಲು ಹಿರಣ್ಯಕಶಿಪು
ಅಜೇಯಾಜರಾಮರತ್ವವ ಅಪ್ರತಿ ಮುಖ್ಯ
ರಾಜತ್ವ ಹೊಂದಲು ತಪಸ್ಸು ಮಾಡಿದನು ೩
ಊಧ್ರ್ವದಲಿ ಬಾಹುಗಳ ನಭದಲಿ ದೃಷ್ಟಿಯು
ಪಾದಾಂಗುಷ್ಟ ಮಾತ್ರದಿ ನಿಂತು ತಪವ
ಗೈದನು ಆ ತಪೋಧೂಮಾಗ್ನಿ ಪೀಡಿತ
ತ್ರಿದಿವರು ಮೊರೆ ಇಟ್ಟರು ಬ್ರಹ್ಮನಲ್ಲಿ ೪
ಪದುಮಭವ ಭೃಗು ದಕ್ಷಾದಿಗಳೊಡೆಯೈದು
ದೈತ್ಯೇಶ್ವರ ಹಿರಣ್ಯಕನ ಆಶ್ರಮವ
ಭದ್ರಂತೇ ತಪಸಿದ್ಧಿ ಆಯಿತು ವಶೀಕೃತನಾದ
ಉತ್ತಿಷ್ಠೋತ್ತಿಷ್ಠ ವರ ಕೊಡುವೆನು ಎಂದ ೫
ಬ್ರಹ್ಮನ್ನ ನೋಡಿ ಹಿರಣ್ಯಕನು ಸನ್ನಮಿಸಿ –
ಬ್ರಹಾಂತರ್ಗತ ಹರಿ ವಿವಕ್ಷಿತ ಗುಣಗಳ
ಬ್ರಹ್ಮ ಹರುಷದಿಂದಲಿ ಸಮ್ಯಕ್ ಕೀರ್ತನೆ ಮಾಡಿ
ಆ ಹಂಸವಾಹನನ ವರಗಳ ಬೇಡಿದನು ೬
ಸರೋರುಹಾಸನ ಸೃಷ್ಟ ಸರ್ವಭೂತಂಗಳು
ನರ ಅಹೀ ಮೃಗ ಪ್ರಾಣ ಉಳ್ಳವು ಇಲ್ಲದವು
ಹೊರ ಒಳಗೆ ಭೂಮ್ಯಾಂಬರ ದಿವಾ ರಾತ್ರಿಯು
ಸುರಾಸುರ ಮೃತ್ಯು ಮಾ ಭೂನ್ಮ್‍ಮ ಎಂದ ೭
ಏಕಪಥ್ಯವು ಅಪ್ರತಿ ಶಕ್ತಿಮತ್ಯವವು
ಲೋಕಪಾಲಕರಂತೆ ಬಲವು ಮಹಿಮೆಗಳು
ಯೋಗಿ ತಪಸ್ವಿಗಳಂತೆ ಸಿದ್ಧಿಗಳು ಸರ್ವವು
ಬೇಕು ತನಗೆಂದು ವರ ಬೇಡಿದ ಬ್ರಹ್ಮನ್ನ ೮
ಶತಧೃತಿಯು ಈ ದುರ್ಲಭ ವರಗಳನ್ನಿತ್ತು
ತಾ ತೆರಳಿದನು ದೈತ್ಯನಿಂ ಪೂಜೆಗೊಂಡು
ಭ್ರಾತೃವಧ ಅನುಸ್ಮರಿಸಿ ಹರಿದ್ವೇಷ ಬೆಳಸಿದನು
ಲಬ್ಧವರ ದೈತ್ಯೇಶ ಇನ್ನೂ ಹೆಚ್ಚಾಗಿ ೯
ನರಸುರಾಸುರ ಋಷಿ ಗರುಡೋರಗ ಸಿದ್ಧ
ಚಾರಣ ವಿದ್ಯಾಧರ ಯಕ್ಷ ಗಂಧರ್ವ
ಪಿತೃ ಪ್ರೇತ ಭೂತಪತಿ ರಾಕ್ಷಸ ಪಿಶಾಚೇಶ
ಸರ್ವರನು ಜೈಸಿ ತನ್ನವಶ ಮಾಡಿಕೊಂಡ ೧೦
ಮೂರ್ಲೋಕಂಗಳಲ್ಲಿ ದಶದಿಕ್ಕುಗಳಲ್ಲಿ ಈ
ಹಿರಣ್ಯಕಶಿಪು ತನ್ನ ಜಯಭೇರಿ ಹೊಡೆದ
ಸರ್ವಲೋಕಪಾಲರ ತೇಜಃಸ್ಥಾನಗಳ ಅಪ –
ಹರಿಸಿ ತ್ರಿವಿಷ್ಟಪ ಭೋಗದಲಿ ಮನಸ್ಸಿಟ್ಟ ೧೧
ಅಜಿತೇಂದ್ರಿಯ ಹೇಯ ಭೋಗರತ ಅಹಂಕಾರಿ
ಮೂರ್ಜಗಾರಿಯು ಧರ್ಮ ಆಚಾರ ದ್ವೇಷಿ
ನಿರ್ಜರರು ಅವನಿಂದ ಹಿಂಸೆ ತಾಳದೆ ವಿಷ್ಣೋ
ತ್ರಿಜಗದೀಶನೇ ಮೊರೆ ಹೊಕ್ಕರು ನಿನ್ನಲ್ಲಿ ೧೨
ಹರಿ ಹೃಷಿಕೇಶ ಅಚ್ಯುತ ಈಶ್ವರ ನಿನ್ನ
ಭದ್ರವಾಣಿ ಅಭಯ ಹೊಂದಿ ಸುರವರರು
ನಿರೀಕ್ಷಿಸಿದರು ಪ್ರಶಾಂತ ಮಹಾತ್ಮಾ
ನಿರ್ವೈರ ಪ್ರಹ್ಲಾದ ಹುಟ್ಟುವ ಕಾಲವನು ೧೩
ಜಯತು ಜಯತು ವೇಧಪಿತ ಶ್ರೀ ಪ್ರಸನ್ನ ಶ್ರೀನಿವಾಸ ನರಸಿಂಹ
ಜಯ ಗುಣಾರ್ಣವ ಭೂಮಾನ್ ಲಕ್ಷ್ಮೀಸಮೇತ
ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ
ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ ೧೩

-ಇತಿ ದ್ವಿತೀಯ ಅಧ್ಯಾಯ ಸಂಪೂರ್ಣಂ –
ತೃತೀಯ ಅಧ್ಯಾಯ – ಬಾಲಕ ಪ್ರಹ್ಲಾದ
ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ
ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ
ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ
ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ
ಯುಕ್ತ ಕಾಲದಿ ಹೇಮಕಶಿಪುಗೆ ಐದು
ಮಕ್ಕಳು ಹುಟ್ಟಿದರು ನಾಲ್ವರು ಗಂಡು
ಮಕ್ಕಳು ನಾಲ್ವರಲ್ಲಿ ಪ್ರವರ ಪ್ರಹ್ಲಾದನು
ಅಕಳಂಕ ಗುಣಶ್ರೇಷ್ಠ ಮಹದುಪಾಸಕನು ೧
ಸತ್ಯಸಂಧನು ಶೀಲಸಂಪನ್ನ ಬ್ರಹ್ಮಣ್ಯ
ಜಿತೇಂದ್ರಿಯ ಸಮದರ್ಶಿ ಆರ್ಯರ ವಿಧೇಯ
ಸ್ನಿಗ್ಧರಿಗೆ ಭ್ರಾತೃವತ್ ಯಥಾದೇವೋ ತಥಾಗುರೋ
ಭೂತಪ್ರಿಯ ಸುಹೃತ್ತಮ ದೀನವತ್ಸಲನು ೨
ವಿಧ್ಯಾರ್ಥಿ ರೂಪಾದಿಗಳ ಗರ್ವ ಇವಗಿಲ್ಲ
ಶ್ರುತ ದೃಷ್ಟ ವಿಷಯದಲಿ ಗುಣಗ್ರಾಹಿಯು
ಶಾಂತನು ದಾಂತನು ಸಾಧುಗಳಲಿ ಪ್ರಿಯ
ಸದಾ ಸ್ವಭಾವದಿ ಶ್ರೀ ವಿಷ್ಣುಭಕ್ತಿ ೩
ಗೋವಿಂದ ಹರಿ ವಾಸುದೇವ ನಿನ್ನಲ್ಲೇ
ಸರ್ವದಾ ಮನವನು ನೆಲಸಿ ಈ ಬಾಲ
ಸರ್ವ ನಡೆನುಡಿ ಊಟ ಶಯನ ಪರ್ಯಟನ
ಸರ್ವಾವಸ್ಥೆಯಲೂ ನಿನ್ನ ಸ್ಮರಿಸುವನು ೪
ಅಂಬುಜೋದ್ಭವ ತ್ರ್ಯಿಂಬಕ ಮುಖ್ಯವಿನುತ ನಿನ್ನ
ಅಂಬುಜಾಂಘ್ರಿಗಳನ್ನ ಧ್ಯಾನಿಪ ಈ ಬಾಲಕನ
ಅಂಬಕದಿ ಸುಜ್ಞಾನ ಭಕ್ತಿ ಪುಳಕಾಂಬುವು
ತುಂಬಿ ತುಳುಕಾಡುವುದು ಕಂಡಿಹರು ಅಂದು ೫
ಒಮ್ಮೆ ನಗುವನು ಒಮ್ಮೆ ರೋದಿಸುವನು ಒಮ್ಮೆ
ಸುಮ್ಮನಿರುವ ಹರಿ ಪ್ರೇಮಾನಂದದಲಿ
ಅಮ್ಮಮ್ಮ ಭಕ್ತಿಯಲಿ ಕೂಗಿ ಕುಣಿವನು ಮಹಾನ್
ರಮೆಯರಸ ನಿನ್ನ ದಾಸಾಗ್ರಣಿಯು ಪ್ರಹ್ಲಾದ ೬
ಮಹಾತ್ಮನು ಮಹಾಭಾಗ ಮಹಾಭಾಗವತನು
ಮಹಾಕಾರುಣಿಕ ಪ್ರಹ್ಲಾದಗೆರಗುವೆನು
ಅಹರ್ನಿಶಿ ಧೃತಿಸ್ಥ ಹರಿ ನಿನ್ನಲ್ಲಿ ಭಕ್ತಿ
ಇಹಪರದಿ ಸೌಭಾಗ್ಯ ಎಮಗೀಯಲೆಂದು ೭
ಜಯ ಜಯತು ವೇಧಪಿತ ಶ್ರೀ ಪ್ರಸನ್ನ ಶ್ರೀನಿವಾಸ ನರಸಿಂಹ
ಜಯ ಗುಣಾರ್ಣವ ಭೂಮನ್ ಲಕ್ಷ್ಮೀಸಮೇತ
ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ
ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ ೮
– ಇತಿ ತೃತಿಯಾ ಅಧ್ಯಾಯ ಸಂಪೂರ್ಣಂ –

ಚತುರ್ಥ ಅಧ್ಯಾಯ
ಪ್ರಹ್ಲಾದರ ವಿಧ್ಯಾಭ್ಯಾಸ
ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ
ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ
ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ
ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ
ದೈತ್ಯರಾಜನು ಪ್ರಿಯಪುತ್ರ ಪ್ರಹ್ಲಾದನಿಗೆ
ವಿದ್ಯೆಕಲಿಸಲು ಶಂಡಾಮರ್ಕರು ಎಂಬ
ಬೋಧಕರ ಏರ್ಪಾಡು ಮಾಡಿಸಲು ಆ ಮಹಾನ್
ಇತರ ಬಾಲಕರೊಡೆ ಕೂಡಿ ಓದಿದನು ೧
ವಿದ್ಯೆ ಕಲಿಯುವಾಗ ಇತರ ಬಾಲರ ಮೀರಿ
ಪ್ರತಿಭೆ ತೋರಿಸಿದನು ಬಾಲಪ್ರಹ್ಲಾದ
ಒಂದಾನೊಂದು ದಿನ ಹಿರಣ್ಯಕನು ವತ್ಸನ
ಕೇಳ್ದ ಕಲಿತದೆÀ್ದಲ್ಲಿ ಸಾಧು ಹೇಳೆಂದು ೨
ಸಂಸಾರಿ ಜೀವರುಗಳು ಸದಾ ಐಹಿಕ
ನಿಸ್ಸಾರ ವಿಷಯಂಗಳಲ್ಲಿ ಮುಳುಗಿ
ತಮಃಸಿಲಿ ಬೀಳದಿರೆ ಸಾಧು ಜನಸಂಗ
ಶ್ರೀಶ ಹರಿ ಸರ್ವವಂದ್ಯನ ಆಶ್ರಯಿಪುದು ೩
ಹೀಗೆ ಪ್ರಹ್ಲಾದ ಪೇಳಲು ಹಿರಣ್ಯಕ ಕೇಳಿ
ನಕ್ಕು ಪರ ಬೋಧಿತನಾಗಿಹನೆಂದು ನೆನೆದು
ಶುಕ್ರ ಸುತರು ತಮ್ಮ ಮನೆಯಲ್ಲೇ ಇಟ್ಟುಕೊಂಡು
ತಕ್ಕ ವಿಧದಲಿ ಬುದ್ಧಿ ತಿದ್ದಿಸುವುದು ಎಂದ ೪
ಗುರುಗಳು ಮನೆಯಲ್ಲಿ ಒಳ್ಳೆಮಾತಿಂದಲಿ
ಪರಕೃತವೋ ಸ್ವತಃ ಕೃತವೋ ಈ ಹರಿಪಕ್ಷಬುದ್ದಿ
ಅನೃತವಾಡದೆ ಸತ್ಯ ಪೇಳೆಂದು ಕೇಳಿದರು
ಪರಮ ಭಾಗವತ ಪ್ರಹ್ಲಾದ ಬಾಲನ್ನ ೫
ಸತ್ತಾ ಪ್ರವೃತ್ತಿ ಪ್ರತೀತ್ಯಾದಿಪ್ರದ ಸರ್ವ –
ಕರ್ತನು ಸರ್ವವಶೀ ಚಕ್ರಧರ ವಿಷ್ಣು
ಸ್ವತಂತ್ರ ಹರಿ ವಿಧಿ ಶಿವಾದೀಡ್ಯನಲಿ ರತತಾನು
ಕಾಂತವು ಅಯಸ್ಸನ್ನು ಸೆಳೆವಂತೆ ಎಂದು ೬

ಶ್ರೀ ವಾಮನ ತ್ರಿವಿಕ್ರಮ
೧೮
ಜಯತು ವಾಮನನಿಗೆ ಜಯತು ತ್ರಿವಿಕ್ರಮಗೆ |
ಜಯತು ಕಂಚೀವಾಸ ವಿಭು ರಮಾಪತಿಗೆ || ಪ.
ಭೂಮಿ ದಾನವ ಕೇಳ್ದ ಬ್ರಹ್ಮಾಂಡ ದೊಡೆಯಗೆ
ಅಮಲೋರು ಗುಣಧಾಮ ಮಂಗಳಾತ್ಮ ಶರಣು ೧
ಕಮಲಭವ ಪೂಜಿತ ಪಾದ ಸುಂದರ ನಮೋ
ರಮೆಯರಸ ಮಂತವ್ಯ ತ್ರಿವಿಕ್ರಮ ವಿಶ್ವರೂಪ ೨
ಶಿವ ಶಿರೋದೃತ್ ಗಂಗಾಜನಕ ವಿಧಿ ತಾತನೇ
ಶಿವ ಶಿವದ ಶ್ರೀ ಪ್ರಸನ್ನ ಶ್ರೀನಿವಾಸ ಶರಣು ೩

ಶ್ರೀ ಹಯಗ್ರೀವ ಮಂತ್ರಸ್ತೋತ್ರ
೫೪
ಜ್ಞಾನ ಬಲಾನಂದಾದಿ ಸರ್ವಗುಣ ವಾರಿನಿಧಿ
ಅನಿಷ್ಟಹರ ಇಷ್ಟಪ್ರದ ಹಯಗ್ರೀವ ಅನಘ
ವನಜಭವ ಅನಲಾಕ್ಷಾದ್ಯಮರ ಸನ್ನುತ ಸೇವ್ಯ
ಘನ ದಯಾಂಬುಧೇ ನಮೋ ಗುರುಗ ಲಕ್ಷ್ಮೀಶ ಪ
ಕಮಲಾಸನ ಋಷಿಯು ಗಾಯತ್ರಿಛಂದಸ್ಸು
ಅಮಲಾಷ್ಟಾಕ್ಷರ ಮಂತ್ರ ದೇವತೆ ಹಯಾಸ್ಯ
ಸೋಮ ಮಂಡಲ ಸ್ಥಿತನು ಅಕಳಂಕ ಕಾಂತಿಮಾನ್
ಅಮೃತ ತನ್ನಯ ಸ್ವರೂಪ ಕಿರಣ ಸುರಿಸುವನು ೧
ನಾಶರಹಿತನು ಅವ್ಯಯ ನಿತ್ಯೋ ನಿತ್ಯಾನಾಮ
ಭಾಸಿಸುತಿಹ ಅಂಡ ಬಹಿರಂತರದಿ ಎಲ್ಲೂ
ಪುಸ್ತಕ ಚಿನ್ಮುದ್ರೆಯು ಶಂಖಾಕ್ಷ ಮಾಲಾಧರ
ಕಾಶಿಸುತಿಹ ತುರಗ ವದನ ಸರ್ವಜ್ಞ೨
ಪೂರ್ಣ ಜ್ಞಾನಾತ್ಮನು ಪೂರ್ಣ ಐಶ್ವರ್ಯಾತ್ಮ
ಪೂರ್ಣ ಪ್ರಭಾತ್ಮನು ಪೂರ್ಣ ತೇಜಾತ್ಮಾ
ಪೂರ್ಣಾನಾನಂದಾತ್ಮನು ಪೂರ್ಣ ಶಕ್ತ್ಯಾತ್ಮನು
ಪೂರ್ಣ ಗುಣನಿಧಿ ಸದಾ ನಿರ್ದೋಷ ಈಶ ೩
ಪ್ರತಿವಾದಿ ಜಯಪ್ರದನು ಸರ್ವ ವಿದ್ಯಾದಾತ
ಬುದ್ದಿ ಸ್ಥೈರ್ಯ ಸತ್ಜ್ಞಾನ ವರ್ಚಸ್ಸು ಈವ
ಮುಕ್ತ್ತಿಸಾಧನೆ ಅಪರೋಕ್ಷಜ್ಞಾನವನಿತ್ತು
ಸಾಧು ಅಧಿಕಾರಿಗಳ ಯೋಗಕ್ಷೇಮ ವಹಿಪ ೪
ಏಕದಶÀ ಶತÀ ಸಹಸ್ರಾನಂತ ರೂಪನೇ
ಸ್ವಗತ ಭೇದ ವಿಲ್ಲದ ಸುಪೂರ್ಣ ಸ್ವತಂತ್ರ
ಶ್ರೀಕದಶ ವಿಧಿಪಿತ ಪ್ರಸನ್ನ ಶ್ರೀನಿವಾಸ ನಮೋ
ವ್ಯಾಂ ಕಪಿಲದತ್ತÀ ವರಾಹಹಯಗ್ರೀವ ೫
ಶ್ರೀ ಮಧ್ವಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು

ಪ್ರಸನ್ನ ಶ್ರೀ ವೇದವ್ಯಾಸ
೩೦
ಪ್ರಥಮ ಆಧ್ಯಾಯ
ಪ್ರಾದುರ್ಭಾವಸಾರ
ಜ್ಞಾನ ಸುಖ ಬಲಪೂರ್ಣ ಅನಘ ವೇದವ್ಯಾಸ
ವನಜಜಾಂಡಾಂತರ್ ಬಹಿವ್ರ್ಯಾಪ್ತ ಶ್ರೀಶ
ಇನ ಸೋಮ ಕೋಟ್ಯಮಿತ ತೇಜ ಚಿನ್ಮಯಗಾತ್ರ
ಜ್ಞಾನಾದಿ ಸಂಪತ್‍ಪ್ರದ ಶರಣು ಪಾಹಿ ಪ
ನಾರಾಯಣ ಸರ್ವ ಉರು ಗುಣಾರ್ಣವ ನಮೋ
ಪಾರತಂತ್ರ್ಯಾದ್ಯಖಿಲ ದೋಷಾತಿ ದೂರ
ಪರ ಬ್ರಹ್ಮ ಶ್ರೀ ರಮಣ ವಿಷ್ಣು ಸರ್ವೋತ್ತಮನೇ
ಸೂರಿ ಜ್ಞಾನ ಪ್ರಾಪ್ಯ ನಿಗಮೈಕ ವೇದ್ಯ ೧
ನಾರಾಯಣ ವಾಸುದೇವ ವೈಕುಂಠ ನಮೋ
ತುರ್ಯ ಸಂಕರ್ಷಣ ಪ್ರದ್ಯುಮ್ನಾನಿರುದ್ಧ
ತುರಗಾಸ್ಯ ಕಾರ್ದಮ ನಾಭಿಜಾತ್ರೇಯನೇ
ಪರಮಾತ್ಮ ಉದ್ದಾಮ ಹರಿ ಶ್ರೀನಿವಾಸ ೨
ಮೀನ ಕೂರ್ಮ ಕ್ರೋಢ ನರಸಿಂಹ ವಾಮನ
ಮುನಿಜ ರಾಘವ ಕೃಷ್ಣ ವನಜ ಕಲ್ಕೀಶ
ಆನಂದ ಜ್ಞಾನಾದಿ ಗುಣಮಯ ರೂಪಗಳು
ಅನಂತವು ಅನುಪಮವು ಅಭಿನ್ನವು ನಿತ್ಯ ೩
ವಾರಿಜ ಭವಾಂಡವ ಸೃಜಿಸಿ ಅದರೊಳು ಪೊಕ್ಕು
ವಾರಿಜಜ ಈಶಾದ್ಯರೋಳಿದ್ದು ಕೃತಿ ನಡೆಸಿ
ಮೂರು ವಿಧ ಅಧಿಕಾರಿಗಳಿಗೆ ಗತಿ ಇತ್ತು
ಮೂರು ವಿಧ ಜೀವರಿಗೆ ಯೋಗ್ಯ ಫಲವೀವಿ ೪
ಯದಾ ಯದಾಹಿ ಸದ್ಧರ್ಮಕ್ಕೆ ಹಾನಿಯೋ
ಅಧರ್ಮಕ್ಕೆ ವೃದ್ಧಿಯೋ ಆದಾಗ ಅವತರಿಪಿ
ಸಾಧುಗಳ ಉದ್ಧಾರ ಪಾಪಿಗಳ ಪತನಕ್ಕೆ
ಸದ್ಧರ್ಮ ಸ್ಥಾಪನೆಗೆ ಶ್ರೀಶ ಮುಕುಂದ ೫
ಕಲಿಯ ಚಟುವಟಿಕೆಯಲಿ ವೈದಿಕ ಜ್ಞಾನ
ಇಳೆಯಲಿ ಸುಜನರಲಿ ಕಡಿಮೆ ಆಗಿ
ಶೀಲ ಗೌತಮ ಸಹ ನಿಧಾನ ತಪ್ಪಿ ಶಪಿಸೆ
ಬೆಳೆಯಿತು ಅಜ್ಞಾನ ಕಲಿ ವಿಷ ಏರಿತು ೬
ದೇವತೆಗಳಿದು ನಿನ್ನಲಿ ಪೇಳಿ ಪಾಥಿರ್üಸಲು
ದೇವ ದೇವೋತ್ತಮ ನೀ ಅಭಯವನಿತ್ತು
ಭುವಿಯಲಿ ಪರಾಶರ ಸತ್ಯವತಿ ಸುತನೆಂದು
ಅವತಾರ ಮಾಡಿದಿ ಸಜ್ಜನೋದ್ಧಾರ ೭
ವೃತತಿಜಾಸನ ಸುತ ವಸಿಷ್ಠ ಋಷಿಗಳ ಮಗ
ಶಕ್ತಿ ಋಷಿಗಳ ಪುತ್ರ ಪರಾಶರ ಋಷಿಯು
ಆ ತಪೋಧನ ನಿನ್ನ ಕುರಿತು ತಪಶ್ಚರಿಸಿದರು
ಶ್ರೀದ ಅಜ ನೀ ತನ್ನಲವತರಿಸು ಎಂದು ೮
ವೇದ ವೇದಾಂಗ ಕೋವಿದ ಪರಾಶರರ
ಶ್ರದ್ಧೆ ಶೀಲತ್ವವ ಮೆಚ್ಚಿ ನೀನು
ಪೇಳ್ದಿ ವಸುರಾಜನ ಸುತೆ ಸತ್ಯವತಿಯ
ಸುತನೆನಿಸಿ ಅವತಾರ ಮಾಡುವಿ ಎಂದು ೯
ವಸುರಾಜ ಅಡವಿಯಲಿ ಬೇಟೆಯಾಡುವಾಗ
ಇಚ್ಚೈಸಿ ಮಗ ತನ್ನ ರಾಣಿಯ ನೆನೆಯೇ
ವಿಸರ್ಜನೆ ಆಯಿತು ರೇತಸ್ಸು ಅದನ್ನ
ತನ್‍ಸತಿಗೆ ಕಳುಹಿಸಿದ ಪಕ್ಷಿ ಮೂಲಕ ೧೦
ಶೇನಪಕ್ಷಿ ಅದನ್ನ ಕುಂಡದಲಿ ಹಿಡಕೊಂಡು
ರಾಣಿಯ ಪಟ್ಟಣಕೆ ಹೋಗುವ ಮಾರ್ಗದಲಿ ಯ-
ಮುನಾ ನದಿಯ ಮೇಲೆ ಹಾರುವಾಗ ಮತ್ತೊಂದು
ಶೇನಪಕ್ಷಿ ತಡೆದು ಯುದ್ಧ ಮಾಡಿತು ೧೧
ಆಗ ವಸುರಾಜ ಕೊಟ್ಟ ಪೊಟ್ಟಣ ನೀರೊಳು ಬಿದ್ದು
ಬಿದ್ದ ವೇಗದಲಿ ಎರಡಾಗಿ ಆಗ ಗಂಗೆಮಾತೆಯು
ಪ್ರಸನ್ನಳಾಗಿ ಸಣ್ಣದರೋಳ್ ಆವಿಷ್ಟಳಾದಳು
ಅದನ್ನ ಹೆಣ್ಣು ಮೀನೊಂದು ನುಂಗಿ ಗರ್ಭ ಧರಿಸಿತು ೧೨
ಸರ್ವೋತ್ತಮನೇ ನಿನ್ನ ಅವತಾರ ಕಾಲದಲಿ ಗಂಗಾಧರಾದಿ
ದೇವತೆಗಳು ತಪಸ್ ಮಾಡಿ ವರಗಳ ಹೊಂದುವುದು
ಅನುಚಿತವೂ ಅಲ್ಲ ಆಶ್ಚರ್ಯವೂ ಅಲ್ಲ ಗಂಗಾಧರನೂ ತಪವಾಚರಿಸಿ
ನಿನ್ನನುಗ್ರಹದಿಂ ಪುತ್ರನಾದ ಶುಕನಾಗಿ ೧೩
ಮತ್ಸದ ಗರ್ಭವು ವರ್ಧಿಸಿತು ಆಗ
ಬೆಸ್ತರು ಆ ಮೀನ ಹಿಡಿದು ಸೀಳೆ
ಅದರ ಉದರದಿ ಎರಡು ಶಿಶುಗಳ ಕಂಡರು
ಒಂದು ಹೆಣ್ಣು ಮತ್ತೊಂದು ಮಗು ಗಂಡು ೧೪
ತಮ್ಮ ನಾಯಕ ದಾಸರಾಜನಲಿ ಪೋಗಿ
ಆ ಮೀನುಗಾರರು ಶಿಶುಗಳ ಕೊಡಲು
ಆ ಮತಿವಂತನು ವಸುರಾಜನಲಿ ಪೋಗಿ
ಸಮಸ್ತವ ಪೇಳಿ ಮಕ್ಕಳ ಮುಂದೆ ಇಟ್ಟ ೧೫
ವಸುರಾಜನು ವಿಷಯವ ಚೆನ್ನಾಗಿ ಅರಿತು
ಶಿಶುಗಳು ತನ್ನದೇ ಎಂದು ತಿಳಿದು
ಭಾಸ್ಕರೋಜ್ವಲ ಗಂಡು ತಾನು ಇಟ್ಟುಕೊಂಡು
ಶಶಿಕಾಂತಿಯ ಮಾತ್ಸೇಯ ದಾಸನಿಗೆ ಕೊಟ್ಟ ೧೬
ಶೀಲತ್ವ ಸುಗುಣತ್ವದಲಿ ಪ್ರಕಾಶಿಸುತ
ಬೆಳೆಯುತಿಹಳು ದಾಸರಾಜನ ಗೃಹದಿ
ಬಾಲೆ ಇವಳಿಗೆ ಸತ್ಯವತೀ ಎಂಬ ನಾಮವು
ಬಲು ಪುಣ್ಯವಂತಳು ಸುಶುಭ ಲಕ್ಷಣಳು ೧೭
ದಾಸನಾಯಕನ ಮನೆಯಲ್ಲಿ ಬೆಳೆವ ಕಾರಣ
ದಾಸನು ನಾವಿಗನು ಆದ್ದರಿಂದ
ಸುಶೀಲೆ ಈ ಸತ್ಯವತಿಯು ನಾವೆ ನಡೆಸುವಳು
ವಸುರಾಜಪುತ್ರಿ ಇವಳಿಗೆ ಗರ್ವವಿಲ್ಲ ೧೮
ಸಮುದ್ರ ಕುರಿತು ಪ್ರವಹಿಸುವ ಸೂರ್ಯಾತ್ಮಜ
ಯಮುನೆಯ ದಾಟಲು ಹಡಗಿನಲ್ಲಿ ಕುಳಿತ
ಆ ಮುನಿ ಪರಾಶರರಿಗೆ ಒದಗಿದಳು
ಆ ಮಹಾ ಸಮಯ ಬಹು ಅನುಕೂಲ ಕಾಲ ೧೯
ಶ್ರೀಶ ನಿನ್ನಯ ಮಾತು ನೆನೆದು ಪರಾಶರರು
ಆ ಸತ್ಯವತಿಯನ್ನ ಮದುವೆ ಆಗಲು ಒಪ್ಪಲು
ವಸಿಷ್ಠರು ಯಾಜ್ಞವಲ್ಕ್ಯಾದಿ ಮುನಿ ಸಭೆಯಲಿ
ವಸುರಾಜನು ಧಾರೆ ಎರೆದಿತ್ತ ಮಗಳ ೨೦
ನಾರದರ ವೀಣೆ ಸಂಗೀತ ಗಾಯನವು
ಸುರ ಗಂಧರ್ವರ ಸುಸ್ವರ ಗಾನ
ಸುರನಾರಿ ನರ್ತಕರ ಆನಂದ ನರ್ತನವು
ಸರಸಿಜಾಸನ ಮುಖ ಸುರರ ಸ್ತೋತ್ರಗಳು ೨೧
ನೀಲ ಮೇಘ ಶ್ಯಾಮ ಇಂದಿರಾಪತಿಯು
ಕಲಿ ವಿದಾರಕ ವಿಜ್ಞಾನ ಭೋದಕನು
ಇಳೆಯಲಿ ವ್ಯಾಸ ಅವತಾರ ಸಮಯವೆಂದು
ತಿಳಿದು ಮುದದಿ ಸುರರು ಕೂಡಿ ತುಂಬಿದರು ೨೨
ನಿಮೇರ್ಘ ಹಿಮ ಆಗಲಿ ದೇಶ ಪ್ರಕಾಶಿಸಿತು
ಮರಗದ ವರ್ಣದಲಿ ಜ್ವಲಿಸುವ ರೂಪ
ಉರು ಸ್ವಕಾಂತಿ ಸಹಸ್ರ ಲಕ್ಷ ಕೋಟ್ಯಮಿತ
ಸೂರ್ಯತೇಜಃ ಪುಂಜ ಅವತಾರ ಮಾಡಿದಿ ೨೩
ಶುಕ್ಲ ಶೋಣಿತ ಸಂಬಂಧ ಇಲ್ಲವೇ ಇಲ್ಲ
ನಿಷ್ಕಲ ಅಪ್ರಾಕೃತ ಚಿದಾನಂದ ಕಾಯ
ಚಿಕ್ಕ ಬಾಲಗೆ ಅಂದು ಒಲಿದು ಕಂಬದಿ ಬಂದ
ಶ್ರೀಕಾಂತ ನರಸಿಂಹ ಅವತಾರದಂತೆ ೨೪
ತಂದೆ ತಾಯಿಲ್ಲದೆ ಪುಂ ಸ್ತ್ರೀ ಕೂಡದೆ
ಅಂದು ಕಂಬದಿಂದ ಸ್ವೇಚ್ಛದಿ ಬಂದಿ
ಇಂದು ಸ್ವತಂತ್ರದಿ ಸತ್ಯವತಿ ಋಷಿ ಮುಂದೆ
ಬಂದು ಪ್ರಕಟಿಸಿದಿ ವ್ಯಾಸ ಅವತಾರ ೨೫
ಶುಕ್ಲ ಶೋಣಿತ ರಹಿತ ಅಲೌಕಿಕವಾದರೂ
ನೀ ಲೋಕ ರೀತಿಯಲಿ ಪುಟ್ಟಿದ ತೆರದಿ
ಕಲಿ ಕಲಿ ಪರಿವಾರ ದುರ್ಜನ ಮೋಹಕ್ಕೆ
ಮಾಲೋಲ ನೀ ವಿಡಂಬನ ಮಾಡಿ ತೋರ್ದಿ ೨೬
ಅಂಕುಶ ಅಬ್ಜ ಧ್ವಜ ಚಕ್ರ ರೇಖ ಪದಯುಗ ಪದ್ಮ
ಸುಖಜ್ಞಾನಮಯ ಜ್ಞಾನ ಸುಖದ ಧ್ಯಾನಿಪರ್ಗೆ
ಝಗಿ ಝಗಿಪ ತಟಿತ್ ಪ್ರಭಾ ಜಟಾಮಕುಟ ಶಿರವು
ಪ್ರಕಾಶಿಸುವ ಕಸ್ತೂರಿ ತಿಲಕ ಲಲಾಟ ೨೭
ಸೃಷ್ಟ್ಯಾದಿಕರ್ತ ನಿನ್ನ ಭೃ ಚೆಂದ ನಿಖಿಳ
ಇಷ್ಟಪ್ರದ ಅನಿಷ್ಟ ನಿವಾರಕ ನೋಟ
ತಟಿತ್ ಕೋಟಿ ನಿಭ ಕರ್ಣ ಕುಂಡಲದ್ವಯವು
ಶ್ರೇಷ್ಠತಮ ತುಳಸೀ ದಳಗಳು ಕಿವಿಯೋಳ್ ೨೮
ಸುಧಾರಸ ಸುರಿಸುವ ಶಶಿಕೋಟಿ ನಿಭ ಮುಖ
ಸಂದರ್ಶನ ಸುಖ ಸಂದೋಹ ಈವುದು
ಮಂದಹಾಸವು ನತಜನ ಶೋಕ ಕಳೆವುದು
ದಂತ ಪಂಕ್ತಿ ಶುಭ ಲೋಹಿತೋಷ್ಟ್ರಗಳು ೨೯
ಸುಂದರ ರೇಖಾತ್ರಯಯುತ ಕುಂಬುಗ್ರೀವದಿ
ಪದುಮ ಭವಗಾಶ್ರಯ ಕೌಸ್ತುಭ ಮಣಿಯು
ಶ್ರೀ ದೇವಿಗಾಶ್ರಯ ವಿಶಾಲ ವಕ್ಷ ಸ್ಥಳದಿ
ಚಿದ್ದಮಲ ಮೋದಮಯ ಶ್ರೀವತ್ಸ ಅಂಕ ೩೦
ಪೊಳೆವ ರತ್ನದ ಹಾರಗಳು ಉರದೇಶದಲಿ
ವಲಿತ್ರಯಾಂಕಿತ ಉಳ್ಳ ಉದರ ಸುಂದರವು
ಕೀಲಾಲಜ ಭವಾಂಡವ ಪಡೆದ ನಾಭಿಯು
ಬೆಳಗುತಿದೆ ಮೌಂಜಿಯು ಸುಪ್ರಕಾಶದಲಿ ೩೧
ಸುಪವಿತ್ರ ಜ್ಞಾನ ತೇಜ ಕೃಷ್ಣಾಜಿನವು
ಶ್ರೀಪ ನಿನ್ನಯ ದಿವ್ಯ ಯೋಗ ಅಸನವು
ಸುಸ್ಫುರದ್ ವಸನೋಜ್ವಲ ಯೋಗ ಹಟ್ಟಿಕಾ
ಉಪಮವಿಲ್ಲದ ಸುಂದರ ಕಟಿಜಾನು ೩೨
ಉರು ಜಂಘಾ ಗುಲ್ಫ ಪದ್ಮಾಂಘ್ರಿ ಸೌಂದಂಇÀರ್ಇ
ಉರು ಸುಶುಭ ಲಕ್ಷಣ ವರ್ಣಿಸಲಶಕ್ಯ
ವಜ್ರನಖಗಳ ದ್ಯುತಿ ಶಶಿ ಕೋಟ್ಯಮಿತವು
ಶುಭ್ರತಮ ಯಜÉ್ಞೂೀಪವೀತ ಧರಿಸಿರುವಿ ೩೩
ಅಜ್ಞಾನ ತಿಮಿರ ಮಾರ್ತಾಂಡ ನೀ ರವಿ ಕೋಟಿ
ವಿಜ್ಞಾನ ಮುಖ ಅಮೃತ ನೀ ಇಂದು ಕೋಟಿ
ಅತ್ಯಧಿಕ ತೇಜ ಈ ದಿವ್ಯ ಸುರೂಪದಿ
ಶ್ರೀಯಃಪತಿಯೇ ಪ್ರಾದುರ್ಭವಿಸಿದಿ ಸ್ವಾಮಿ ೩೪
ನೀ ಪ್ರಾರ್ದುರ್ಭವಿಸಿ ದಿನ ಏಳೊಳಗೆ ಉಪನಯನ
ರೂಪ ಪೂಜೆ ಪರಾಶರರು ಮಾಡಿದರು
ಉಪನಯನ ಸಂಸ್ಕಾರ ಲೀಲಾ ಮಾತ್ರವು ನಿನಗೆ
ಆ ಪರಾಶರ ಸತ್ಯವತಿಗೆ ಮುದಕರವು ೩೫
ಸತ್ಯವತೀ ಪರಾಶರರ ಸುತನೆಂದು ನೀ
ಕೀರ್ತಿ ಅವರಿಗೆ ಜಗತ್ತಲ್ಲಿ ಇತ್ತಿ
ಸಾತ್ಯವತೇಯ ಪರಾಶರ್ಯ ನಾಮದಿಂ
ಸತ್ ಸೃಷ್ಟಿ ಸುಖಜ್ಞಾನ ಪವಿತ್ರತ್ವಜÉ್ಞೀಯ ೩೬
ಯಾವ ಯಾವಾಗ ಸತ್ಯವತಿ ಪರಾಶರರು
ದೇವತಾ ಸಾರ್ವಭೌಮನೇ ವ್ಯಾಸ ನಿನ್ನ
ತಾವು ನೋಡಲು ಇಚ್ಛೈಸಿ ನೆನೆಯುವರೋ
ಆವಾಗ ತೋರುವಿ ಎಂದಿ ಮಾತೆಗೆ ೩೭
ವ್ಯಾಸ ಅವತಾರದ ಕಾರ್ಯೋನ್ಮುಖನಾಗಿ
ವಸುಧೆಯಲಿ ಉತ್ತಮ ನಗ ಮೇರುಗಿರಿಗೆ
ಬಿಸಜಭವ ಮೊದಲಾದ ದೇವರು ಹಿಂಬಾಲಿಸುತ
ಶ್ರೀಶ ನೀ ಹೊರಟೆ ಪ್ರಣತಾರ್ತಿಹರ ಅಜಿತ ೩೮
ಜ್ಞಾನ ಸುಖಪೂರ್ಣ ‘ಪ್ರಸನ್ನ ಶ್ರೀನಿವಾಸ’
ಪೂರ್ಣ ಪ್ರಜ್ಞರ ಹೃತ್‍ಸ್ಥ ವನಜ ಭವತಾತ
ಸ್ವರ್ಣಾಂಡ ಬಹಿರಂತವ್ರ್ಯಾಪ್ತ ತೇಜಃಪುಂಜ
ಆ ನಮಿಪೆ ಬದರೀಶ ಜ್ಞಾನಮುದ ಧನದ ೩೯

– ಇತಿ ಪ್ರಥಮಾದ್ಯಾಯ ಸಂಪೂರ್ಣಂ –
ದ್ವಿತೀಯ ಅಧ್ಯಾಯ
ಜ್ಞಾನ ವಿಜಯ ಸಾರ
ಜ್ಞಾನ ಸುಖ ಬಲಪೂರ್ಣ ಅನಘ ವೇದವ್ಯಾಸ
ವನಜಜಾಂಡಾಂತರ್ ಬಹಿವ್ರ್ಯಾಪ್ತ ಶ್ರೀಶ
ಇನ ಸೋಮ ಕೋಟ್ಯಮಿತ ತೇಜ ಚಿನ್ಮಯಗಾತ್ರ
ಜ್ಞಾನಾದಿ ಸಂಪತ್‍ಪ್ರದ ಶರಣು ಪಾಹಿ ಪ
ರಾಜ ರಾಜೇಶ್ವರನೇ ರಾಜೀವಾಲಯ ಪತೇ
ರಾಜೀವಭವ ಭವಾದ್ಯಮರ ವಿನುತ
ರಾಜೀವ ಪದಯುಗಗಳ್ಗೆ ಶರಣಾದೆ ನಿನ್ನಲಿ
ರಾಜೀವನಯನ ಔದಾರ್ಯ ಕರುಣಾಬ್ಧಿ ೧
ಸೃಷ್ಟಿ ಕಾಲದಲಿ ನೀ ಪರಮೇಷ್ಟಿರಾಯನಿಗೆ
ಶ್ರೇಷ್ಟ ನಿಗಮಾದಿಗಳ ಬೋಧಿಸಿದ ತೆರದಿ
ಕೃಷ್ಣ ದ್ವೈಪಾಯನನೆ ಸುರಮುನಿಗಳಿಗೆ ಈಗ
ಉತ್ರ‍ಕಷ್ಟ ಉಪದೇಶ ಮಾಡಿದಿ ಮೇರುವಿಲಿ ೨
ಸಮಸ್ತ ಶಾಸ್ತ್ರಾರ್ಥ ನಿದರ್ಶನಾತ್ಮಕವಾದ
ವಿಮಲ ಶಾಸ್ತ್ರೋತ್ತಮ ಮಹಾ ಭಾರತವನು
ಸುಮಹಾ ವೇದಾರ್ಥ ನಿರ್ಣಯಕವಾದ
ಬ್ರಹ್ಮ ಸೂತ್ರಂಗಳ ವಿರಚಿಸಿದಿ ವ್ಯಾಸ ೩
ಹರಿ ವ್ಯಾಸ ಕೃಷ್ಣದೈಪಾಯನ ನಿನ್ನ
ಶಾಸ್ತ್ರವೆಂಬುವ ಅಮಿತ ಬಲಯುತ ಶರದಿಂ
ರುದ್ರಾದಿಗಳ ಮನೋಗತವಾಗಿ ಇರುತ್ತಿದ್ದ
ಕ್ರೂರ ಕಲಿಮೃತನಾದವನಂತೆ ಆದ ೪
ಸಾತ್ಯವತೇ ವ್ಯಾಸ ನಿನ್ನಯ ಮುಖಾಂಬುಧಿಯಿಂದ
ಉದ್ಭೂತವಾದ ಉತ್ತಮ ಜ್ಞಾನ ರೂಪ
ಸುಧೆಯ ದೇವತೆಗಳು ಭುಂಜಿಸಲು ಆಗ
ವಿದೂರರಾದರು ಕಲಿಯ ಕಲ್ಮಷದಿಂದ ೫
ವಿಧಿ ವಾಯು ಎಂದೆಂದೂ ಕಲಿಕಲುಷ ವಿದೂರರು
ಬಂದ ರುದ್ರಾದಿಗಳು ಮುಂದೆ ಕುಳಿತು
ಶ್ರೀದ ನೀ ಬೋಧಿಸಿದ ಮಹಾಭಾರತ ಬ್ರಹ್ಮ-
ಸೂತ್ರಾದಿ ಅಮೃತವ ಪಾನ ಮಾಡಿದರು ೬
ಮನುಷ್ಯೋತ್ತಮರೊಳು ಇದ್ದ ಕಲಿ ಭಂಜನಕೆ
ದೀನ ದಯಾಳು ನೀ ದಿಗ್ವಿಜಯಗೈದಿ
ಮಂದಾಧಿಕಾರಿಗಳ ಉಪಕಾರಕಾಗಿ ನೀ
ಅಮ್ನಾಯ ನಿಗಮ ವಿಭಾಗ ಮಾಡಿದಿಯೋ ೭
ಯಾವ ಯಾವ ಸಜ್ಜನರು ಅಜ್ಞಾನ ಪೂರಿತರೋ
ಅವರು ವಾಸಿಸುವ ಸ್ಥಳಗಳಿಗೆ ಪೋಗಿ
ದಿವ್ಯ ಸಜ್ಞಾನವ ಬೋಧಿಸಿ ಕಲಿ ವಿಷ
ನಿವಾರಣ ಮಾಡಿದಿ ಕರುಣಾಂಬು ನಿಧಿಯೇ ೮
ಪರಮಾರ್ಥ ಭಾಷ್ಯಾರ್ಥ ಐಹಿಕಾಮುಷ್ಮಿಕ
ಸರ್ವಾರ್ಥ ಒದಗಿಸುವ ಮುಖ್ಯ ನಿಯಂತೃ
ಪರಮಾತ್ಮ ವ್ಯಾಸ ನೀ ದಿಗ್ವಿಜಯ ಮಾರ್ಗದಲಿ
ಮರವಟ್ಟ ಕ್ರಿಮಿಗೆ ಔದಾರ್ಯದಲಿ ಒಲಿದಿ ೯
ಹರಿಯ ಅಪರೋಕ್ಷ್ಯವು ಲಭಿಸಿದವರಿಗೂ ಸಹ
ಪ್ರಾರಬ್ಧ ಎನ್ನುವ ಕರ್ಮ ನಿಮಿತ್ತ
ನರ ನರೇತರ ಜನ್ಮ ಅಸಂಭವವು ಅಲ್ಲವು
ಈ ಕ್ರಿಮಿ ಜನ್ಮ ಸಹ ಪ್ರಾರಬ್ಧ ನಿಮಿತ್ತ ೧೦
ಶೂದ್ರನು ಲೋಭಿಯು ಪೂರ್ವ ಜನ್ಮದೀ ಕ್ರಿಮಿಯು
ಈ ದೇಹವ ಬಿಡು ರಾಜನಾಗಿ ಹುಟ್ಟಿಸುವೆ
ಎಂದು ನೀ ಪೇಳಲು ದೇಹದಾಶೆ ಪ್ರಕಟಿಸಿತು
ಆದರೂ ಆ ಕ್ರಿಮಿಗೆ ರಾಜಪದವಿತ್ತಿ ೧೧
ಆ ಕ್ರಿಮಿಯಿಂದ ನೀ ರಾಜ್ಯವ ಆಳಿಸಿ
ಜಗದೇಕ ಸ್ವಾಮಿಯು ಸ್ವತಂತ್ರ ಸಚ್ಛಕ್ತ
ಭಕ್ತೇಷ್ಟ ಸಿದ್ಧಿದ ಸತಾಂಗತಿ ನೀನೆಂದು
ಜಗತ್ತಿಗೆ ವ್ಯಕ್ತ ಮಾಡಿದಿ ದೇವ ದೇವ ೧೨
ಅಗಣಿತ ಗುಣಾರ್ಣವನೇ ವ್ಯಾಸ ಕೃಷ್ಣನೇ ನಿನ್ನ
ಮಗನೆಂದು ತಾ ಜನಿಸಿ ಸೇವಿಸಬೇಕೆಂದು
ಗಂಗಾಧರ ನಿನ್ನ ಕುರಿತು ಮಹತ್ತಪಸ್ ಮಾಡಿ
ಹಾಗೆ ನಿನ್ನಿಂದ ವರ ಪಡೆದು ಮಗನಾದ ೧೩
ಯಥಾರ್ಥ ಹೀಗಿರಲು ನೀನು ಸಹ ತಪಸ್ ಮಾಡಿ
ರುದ್ರಗೆ ವರವಿತ್ತು ಅಧಮರ ಮೋಹಿಸಿದಿ
ಒಂದೊಂ

ಪ್ರಸನ್ನ ಶ್ರೀ ಬುದ್ಧ
೨೮
ಜ್ಞಾನಸುಖ ಬಲಪೂರ್ಣ ಅನಘ ಲಕ್ಷ್ಮೀರಮಣ
ಅನುಪಮಾದ್ಭುತ ಶಿಶುರೂಪ ನಿರವಧಿಕ
ಆಮ್ನಾಯಕೂ ಅಮಿತ ಕಲ್ಯಾಣಗುಣಧಾಮ
ಜ್ಞಾನಮುದಪ್ರದ ಬುದ್ಧ ಶರಣು ಮಾಂಪಾಹಿ ಪ
ಕೇಶವ ನಾರಾಯಣ ಮಾಧವ ಗೋವಿಂದ
ಶ್ರೀಶ ವಿಷ್ಣೋ ಮಧುಸೂಧನ ತ್ರಿವಿಕ್ರಮ
ಈಶ ವಾಮನ ಶ್ರೀಧರ ಹೃಷಿಕೇಶ
ರಮೇಶ ಪದ್ಮನಾಭ ದಾಮೋದರ೧
ಸಂಕರುಷಣ ವಾಸುದೇವ ಪ್ರದ್ಯುಮ್ನ ನಮೋ
ಅಕಳಂಕ ಅನಿರುದ್ಧ ಪುರುಷೋತ್ತಮ
ನಿಷ್ಕಲ ಅಧೋಕ್ಷಜ ನರಸಿಂಹ ಅಚ್ಯುತ
ಶ್ರೀಕರ ಜನಾರ್ಧನ ಉಪೇಂದ್ರ ಹರಿ ಕೃಷ್ಣ ೨
ಈಜಿ ನಿಂತು ಪೊತ್ತು ಮಣ್ಣೆತ್ತಿ ಎಲ್ಲರನು
ಅಂಜಿಸಿ ಬೇಡಿ ಸುತ್ತಾಡಿ ಕಡಲ್‍ದಾಟಿ
ರಂಜಿಸಿ ಮೋಹಿಸಿ ಬೋಧಿಸಿದ ವಿಪ್ರಸುತ
ತ್ರಿಜಗದೀಶನೇ ಶ್ರೀಶ ಶರಣು ಮಾಂಪಾಹಿ ೩
ವಿಶ್ವ ವಿಷ್ಣು ವಷಟ್ಕಾರ ಈಶಾವಾಸ್ಯವು
ಸರ್ವ ಈ ಹದಿನಾಲ್ಕು ಭುವನಂಗಳು
ಶ್ರೀವರನೇ ನೀ ಪರಮ ಮುಖ್ಯ ನಿಯಾಮಕನು
ಸರ್ವದಾ ಅಚಿತ್ ವಸ್ತುಗಳಿಗೆ ೪
ಜೀವರುಗಳ ಸತ್ತಾ ಪ್ರವೃತ್ತಿ ಪ್ರತೀತಿಗಳು
ಸರ್ವೇಶ್ವರ ನಿನ್ನ ಅಧೀನವು ಸ್ವಾಮಿ
ಸರ್ವಪಾಲಕತ್ವ ಗುಣ ನಿನ್ನದೇ ಆದುದರಿಂದ
ಸರ್ವಜೀವರುಗಳ ಸ್ವರೂಪ ರಕ್ಷಿಸುತಿ ೫
ಜೀವನ ಸ್ವರೂಪಾನುಸಾರದಿ ಮೂರು ವಿಧವು
ಸರ್ವ ಹರಿಭಕ್ತರು ಮುಕ್ತಿಸುಖ ಯೋಗ್ಯರು
ಸರ್ವ ಹರಿದ್ವೇಷಿಗಳು ತಮೋ ದುಃಖ ಯೋಗ್ಯರು
ಸರ್ವದಾ ಸುಖದುಃಖ ಮಿಶ್ರ ಸಂಸಾರಿಗಳು ೬
ಬೇವಿನ ಬೀಜಕ್ಕೆ ಸಕ್ಕರೆ ಲೇಪಿಸಲು
ಬೇವು ದ್ರಾಕ್ಷಿಗೆ ಸಮ ಆಗುವುದು ಇಲ್ಲ
ಬೇವು ಬೀಜವ ಸಕ್ಕರೆ ಪಾತ್ರೆಯಲಿ ಕಂಡ
ಯಾವನೂ ಸ್ವೀಕರಿಸ ಎತ್ತಿ ಎಸೆವ ೭
ತ್ರಯೀಪುರ ಬೇವುಗಳು ಸತ್ಯಧರ್ಮ ಸಕ್ಕರೆ –
ಯೋಳೂ ಪೊಕ್ಕು ದ್ರಾಕ್ಷಿಯಾ ಪೋಲು ಇರೆ ಕಂಡು
ಶ್ರೀಪ ನಿನ್ನ ಪಾಲಸಾಗರತಟ ಬಂದು
ಶಂಭು ಶಿವ ಶಕ್ರಾದಿಗಳು ಪ್ರಾರ್ಥಿಸಿದರು ೮
ರುದ್ರದೇವನ ಪರಾಕ್ರಮ ವರ್ಣಿಸಲಳವೇ
ಅದ್ರಿ ಚಾಪವನಿತ್ತಿ ತ್ರಿಪುರವ ಸುಟ್ಟ
ಇಂದ್ರ ಸ್ಕಂದಾದಿಗಳಿಂದ ಸನ್ನುತ ಇವಗೆ
ನೀ ಪ್ರಭಂಜನ ಸಹ ಸಹಾಯ ಮಾಡಿದಿಯೋ ೯
ಅಂದು ಭಸ್ಮವು ಆದ ತ್ರಿಪುರ ದೈತ್ಯರುಗಳು
ಬಂದು ಪುನರ್‍ಜನಿಸಿ ವೈದಿಕ ಸದ್ಧರ್ಮದಲ್ಲಿ
ಮುಕ್ತಿ ಯೋಗ್ಯರು ತಿಳಿವ ಬ್ರಹ್ಮ ವಿದ್ಯೆಯ ಕಲಿಯೆ
ಯತ್ನಿಸುವುದು ಸುರರು ನಿನ್ನಲ್ಲಿ ಪೇಳಿದರು ೧೦
ಕಲಿಯುಗದಿ ಈ ತಮೋಯೋಗ್ಯ ದೈತ್ಯರಿಗೆ
ಬೆಳೆಯುವುದು ಮೋಹವು ದ್ವೇಷ ಪರಿಪಾಕ
ಮಿಳಿತವಾಗಲಿ ಕೂಡದು ಮುಕ್ತಿ ಯೋಗ್ಯರ ಸಹ
ಒಳ್ಳೇ ಮುತ್ತಿನ ಸರದೋಳ್ ಮುಳ್ಳ ಬೀಜಗಳೇ ? ೧೧
ಆ ತ್ರಿಪುರ ದೈತ್ಯರ ಪ್ರಮುಖನೂ ತಮೋಯೋಗ್ಯ
ಧಾತ್ರಿಯಲಿ ಸೌದ್ಧೋದನ ಜಿನನೆಂದು
ಪರಿವಾರ ಸಹ ಜನಿಸಿ ಮುಕ್ತಿಯೋಗ್ಯರ ತೆರದಿ
ಚರಿಸಿದರು ಸ್ವಸ್ವ ಯೋಗ್ಯತೆ ಅತಿಕ್ರಮಿಸಿ ೧೨
ದೇವವೃಂದದ ಪ್ರಾರ್ಥನೆ ಅರಿಕೆಯನು ಕೇಳಿ
ದೇವವರೇಣ್ಯ ನೀ ಅಭಯವನಿತ್ತಿ
ದಿವ್ಯ ಶಿಶುರೂಪವ ಪ್ರಕಟಿಸಿ ಆಗಲೇ
ತ್ವರಿತ ಪೋದೆಯೋ ಆ ಜಿನನ ಮಂದಿರಕೆ ೧೩
ಆಗಲೇ ಜಿನನಿಗೆ ಮಗು ಒಂದು ಹುಟ್ಟಿತ್ತು
ಪೋಗಿ ನೀ ಆ ಮಗುವ ಮರೆಯಾಗಿಸಲು
ಬೇಗನೆ ತೊಟ್ಟಿಲಲಿ ಮಲಗಿದಿಯೋ ವಿಭುವೇ
ಜಗನ್ಮೋಹನ ಶಿಶುರೂಪ ಚಿನ್ಮಾತ್ರ ೧೪
ಇದನ್ನರಿಯದೇ ಜಿನಾದಿಗಳು ನಿನ್ನನ್ನೇ
ಜಾತವಾದ ತಮ್ಮ ಮಗುವೆಂದು ನೆನೆದು
ಬಂಧು ಮಿತ್ರರ ಗುಂಪು ಸ್ತ್ರೀಯರೂ ಪುರುಷರೂ
ಮುದದಿ ಕೊಂಡಾಡಿದರು ಪುತ್ರೋತ್ಸವವ ೧೫
ಕದಳೀ ತೆಂಗು ಪೂಗಿ ಮಾವು ತೋರಣವು
ವಾದ್ಯಂಗಳ ಅರ್ಭಟ ವೇದ ಘೋಷಗಳು
ದೈತ್ಯ ವಿದ್ವಾಂಸರ ವಾದ ಮೀಮಾಂಸವು
ಸುಧ್ವನಿಯಲಿ ಪಕಪಕಾ ಎಂದು ನಕ್ಕಿ ನೀನು ೧೬
ಆಶ್ಚರ್ಯ ಏನಿದು ಹಸಿಮಗು ನಗುತಿದೆ
ಹೇ ಚಿನ್ನ ನೀನ್ಯಾಕೆ ನಗುತಿ ಎಂದು ಕೇಳೆ
ಅಚ್ಚ ವಿಜ್ಞಾನಮಯ ಬುದ್ಧ ನಿನ್ನ ಹೆಸರೆಂದು
ಮೆಚ್ಚಲಾರೆನು ವೈದಿಕಕರ್ಮ ಎಂದಿ ೧೭
ವೇದ ಅಪ್ರಾಮಣ್ಯ ಬೋಧಕವೆಂದು ತೋರುವ
ಬೌದ್ಧಮತ ಪೇಳಿದಿ ದೈತ್ಯರ ಮೋಹಿಸಲು
ಬೋಧಿಸಿದ ಮೋಹಕ ಮಾತು ಜಿನಾದಿಗಳು
ಅದರಿಸದಿರೆ ಹರೇ ನೀ ಸುರರನ್ನ ಕರೆದಿ ೧೮
ಪ್ರತ್ಯಗಾತ್ಮನೇ ಈಶ ಸರ್ವಪ್ರೇರಕ ನೀನು
ವೇದೋಕ್ತ ಸುರರನ್ನ ಸ್ಮರಿಸಿದಾಕ್ಷಣವೇ
ಬಂದರು ಆ ಜಿನಾದಿಗಳಿಗೆ ಕಾಣಿಸುತ
ಯುದ್ದಕ್ಕೆ ನಿಂತರು ನೀನು ಪ್ರೇರಿಸಲು ೧೯
ವೇದ ವಿರುದ್ಧ ಮಾತುಗಳಾಡುತ ನೀನು
ವೇದ ಅಪ್ರಾಮಣ್ಯ ವಾದಿಸುತ್ತಿ
ಸದೆದು ಹಾಕುವೆವು ಎಂದು ಕೂಗುತ್ತ
ಆಯುಧಗಳ ಪ್ರಯೋಗಿಸಿದರು ವಿಡಂಬನದಿ ೨೦
ಮೋದಮಯ ಶಿಶುರೂಪ ಅಚ್ಯುತನೇ ನೀನು
ಆ ದೇವತೆಗಳು ಪ್ರಯೋಗಿಸಿದ ಆಯುಧ
ಒಂದನ್ನೂ ಬಿಡದೇ ನುಂಗಿ ನಗುತ ಎಲ್ಲಿ
ಮಧುಸೂಧನ ವಿಷ್ಣು ಬರಲೀ ಅವ ಎಂದಿ ೨೧
ಲೀಲಾ ವಿನೋದದಿ ಮತ್ತೊಂದು ರೂಪದಿ ನೀ
ಪೊಳೆವ ಚಕ್ರವ ಪಿಡಿದು ಬಂದು ನಿಲ್ಲೆ
ಸೊಲ್ಲು ಹೆಚ್ಚಾಡದೆ ಚಕ್ರವ ಕಿತ್ತುಗೊಂಡು
ಒಳ್ಳೆ ಆಸನವೆಂದು ಅದರಮೇಲ್ ಕುಳಿತಿ೨೨
ಸ್ವತಂತ್ರ ಪರಮಾತ್ಮ ನೀ ಸ್ವಸ್ವಯೋಗ್ಯ ಸಾಧನ
ಪ್ರವರ್ತಕ ದೈತ್ಯರ ಮೋಹಕ್ಕೆ ಈ ಲೀಲೆ
ಸಾಧು ನೀ ಪೇಳಿದ ಶಾಸ್ತ್ರ ಎನ್ನುತ ನಮಿಸಿ
ಪೋದರು ಸುರರು ತಮ್ಮ ತಮ್ಮ ಸ್ಥಳಕೆ ೨೩
ಎಲ್ಲೂ ಕಂಡಿಲ್ಲವು ಇಂಥಾ ಮಹಾತ್ಮನ
ಎಲ್ಲ ದೇವತೆಗಳು ಸೋತು ಓಡಿ ಹೋದರು
ಬಲಿಷ್ಟ ತತ್ವವು ಶಿಶುರೂಪ ಬುದ್ಧನದೇ
ಎಲ್ಲ ದೈತ್ಯರು ಹೀಗೆ ನಿಶ್ಚೈಯಿಸಿಕೊಂಡರು ೨೪
ಅಭಾವ ಕ್ಷಣಿಕ ಶೂನ್ಯವಾದ ಮೋಹಿತರಾಗಿ
ಸ್ವಭಾವ ಯೋಗ್ಯತೆಯಂತೆ ವೈದಿಕವ ತೊರೆದು
ಹೇ ಬುದ್ಧ ಆ ಜಿನಾದಿ ದೈತ್ಯರ ಸಮೂಹವು
ತಬ್ಬಿಕೊಂಡರು ತಮಸ್ ಸಾಧನ ಮತಿಯ ೨೫
ಜಿನಾದಿ ದೈತ್ಯರು ಮೇಲ್ವಾರಿ ಅರ್ಥವ
ಮನದಲ್ಲಿ ನಿಶ್ಚಯಿಸಿ ಮೋಹ ವಶರಾಗೇ
ನಿನ್ನಲ್ಲಿ ಸ್ವರೂಪತಹ ಭಕ್ತಿಯುತ ಸುರರು
ಧನ್ಯರಾದರು ಕೇಳಿ ಯಥಾರ್ಥ ತಿಳಕೊಂಡು ೨೬
ಏನೆಂದು ವರ್ಣಿಪೆ ಪ್ರಶಾಂತ ವಿದ್ಯೆಯ ಸೊಬಗು
ಆನಂದ ಸೌಭಾಗ್ಯ ಸಮೃದ್ಧಿ ಸಿದ್ಧಿಪುದು
ಮನ ಪುಳಕವಾಗುತ್ತೆ ಜ್ಞಾನ ತೇಜಃಪುಂಜ
ನಿನ್ನ ದಯದಿಂದ ಸುಖ ಅನುಭವಕೆ ಸುಲಭ ೨೭
ಅದೋಷನು ನೀನು ದೋಷ ಅಭಾವವಾನ್
ಸದಾ ನೀನು ಭಿನ್ನನು ಜಡ ಜೀವರಿಂದ
ಮೋದಮಯ ಅನಂತಕಲ್ಯಾಣಗುಣಪೂರ್ಣ ನೀ
ಆದುದರಿಂ ಅ ಎಂದು ನೀನೇವೇ ಜ್ಞೀಯ ೨೮
ಭವ್ಯವಾಗಿರುವುದು ‘ಅ’ ಯಿಂದ ಜಗತ್ತು
ಭವ್ಯ ಎಂದರೆ ಉತ್ಪಾದ್ಯ ಎಂಬುವುದು
ಅ ಎಂಬ ನಿನ್ನಿಂದ ಉತ್ಪಾದ್ಯ ಜಗತ್ತನ್ನ
ಅಭಾವವೆಂದಿ ವಿಭುವೇ ಸತ್ಯಜ್ಞಾನ ೨೯
ಕ್ಷಣ ಕ್ಷಣಾದಿ ನಾಶವು ಕಾಲ ಅವಯವ ಕ್ಷಣಕ್ಕೆ
ಕ್ಷೋಣಿಯು ಸ್ಥಿರವಾಗಿ ಇರುತಿದೆ ಅದರೂ
ಕ್ಷಣ ಸ್ಥಾಯಿಯಾಗಿರುವ ಕ್ಷಣದ ಸಂ¨ಂಧದಿ ಜಗತ್
ಕ್ಷಣಿಕವು ಎಂದು ನೀ ಪೇಳಿದಿಯೋ ಧೀರ ೩೦
ಶಂ ಎಂದರೆ ಸುಖವು ಉ ಉತ್ತಮತ್ವವು
ಶಂ ಸಹ ಉ ಸೇರಿ ಶೂ ಆಯಿತು
ಶೂ ಎಂಬ ಸುಖರೂಪ ಅನುತ್ತಮೋತ್ತಮ ನೀನೇ
ಶೂ ವಾಚ್ಯ ನೀನೇವೇ ಅನ್ಯರು ಅಲ್ಲ ೩೧
ಸ್ವಾ ನೀಯತೇ ಇತಿ ಶೂನ್ಯ ಎಂಬುವರು
ಜ್ಞಾನವಂತರು ಹೀಗೆ ವಿಗ್ರಹ ಮಾಡುವರು
ಆನಂದಮಯನಾದ ಅನುತ್ತಮೋತ್ತಮ ನಿನ್ನ
ಅನುಗ್ರಹದಿಂದ ಜಗತ್ ರಕ್ಷಣೆ ನಿಯಮನವು ೩೨
ಕ್ಷಣಿಕ ಆಭಾವಾದಿ ಶಬ್ದಗಳಿಗೆ ಈ ರೀತಿ
ಜ್ಞಾನಪೂರಿತ ಅರ್ಥ ಪೇಳಿದ ನಿನಗೆ ನಮೋ
ಅನ್ಯ ವಸ್ತುಗಳಿಗಿಂತ ಅತ್ಯಂತ ಪ್ರಿಯತಮನೇ
ಜನ್ಮಾದಿಕರ್ತನೇ ಪೂಷ ಪೋಷಕನೇ ನಮಸ್ತೇ ೩೩
ದೇವವೃಂದಕ್ಕೆ ನೀ ಪ್ರಶಾಂತವಿದ್ಯೆಯ ಪೇಳಿ
ಅವರುಗಳ ಸಹ ನಿಂತು ಮತ್ತೊಂದು ರೂಪದಿಂದ
ದಿವಪರ ಸ್ವಸ್ಥಾನ ಸೇರಿದಿಯೋ ಸುಖಮಯನೇ
ಭಾವಕರು ಸ್ಮರಿಸೆ ಸರ್ವವಿಧದಲಿ ಒಲಿವಿ ೩೪
ಬುದ್ಧಾವತಾರ ಪರಮಾತ್ಮ ಚಿದಾನಂದಮಯ ಶ್ರೀಶ
ದೇವತಾ ವೃಂದಕ್ಕೆ ಸುಬೋಧ ಮಾಡಿದ್ದು ಸಾಕಲ್ಯ ತಿಳಿಯಲಸಖ್ಯ
ಶ್ರೀವೇದವ್ಯಾಸ ಶ್ರೀಶ ಶ್ರೀಮಧ್ವ ಆನಂದತೀರ್ಥರ ಅನುಗ್ರಹದಿಂದಲೇ
ಯಥಾಯೋಗ್ಯ ತಿಳುವಳಿಕೆ ಉಂಟಾಗುವುದು ೩೫
ವೇದಾರ್ಥ ನಿರ್ಣಾಯಕ ಸೂತ್ರಗಳ ಮಾಡಿ
ಇತಿಹಾಸ ಪುರಾಣಾದಿಗಳ ನಮಗಿತ್ತ
ವೇದವ್ಯಾಸ ಸುಹೃತ್ ಬುದ್ಧನು ನೀನೇವೇ
ಸತ್ಯಧರ್ಮರಿಗೆ ಸೌಭಾಗ್ಯ ಸುಖದಾತ ೩೬
ಜ್ಞಾನಭಕ್ತ ಆಯುರಾರೋಗ್ಯ ಐಶ್ವರ್ಯ ಶ್ರೀಮಧ್ವ ಹನುಮಸ್ಥ
ವನಜಭವ ಪಿತ ಶ್ರೀ ಪ್ರಸನ್ನ ಶ್ರೀನಿವಾಸ ನಮೋ
ಅನಿಮಿತ್ತ ಬಂಧು ಹರೇ ಕೃಷ್ಣ ರಾಮ ವೇದವ್ಯಾಸ
ಬುದ್ಧಾವತಾರ ಮೋದಮಯ ಕರುಣಾಳು ೩೭
-ಇತಿ ಶ್ರೀ ಬುಧ್ಧ ಪ್ರಾದುರ್ಭಾವ ಸಂಪೂರ್ಣಂ –

ಜ್ಞಾನಾನಂದ ಸ್ತುತಿ
೫೫
ಜ್ಞಾನಾನಂದ ಅನಂತರೂಪ –
ಆನಮೋ ನಮೋ ತ್ವಂಪಾಲಯಮಾಂ ಪ.
ವೇದೋದ್ಧಾರಕ ಮತ್ಸ್ಯ ಸುರೂಪ
ಮಂದರೋದ್ಧಾರ ಕಚ್ಛಪರೂಪ ೧
ಭೂಧರಕೋಲ ನರಹರಿರೂಪ
ಅದಿತೇಃ ಸೂೀನೋ – ಗಂಗಾಜನಕ ೨
ಕೃನೃಪಾಹರಿ ರಾಮಪರಶ್ವಿ
ಹನೂಮತೇವ್ಯ ರಮಸ್ತ ಸೀತಾ ೩
ದೇವಕಿಪುತ್ರ ಪಾಂಡವಬಂಧೋ
ದೇವ ಶ್ರೀಕೃಷ್ಣ ರುಕ್ಮಿಣೀನಾಥ ೪
ದೈತ್ಯವಿಮೋಹ ದೇವಸುಬೋಧ
ಬುಧ್ಧಸ್ವರೂಪ – ದೇಹಿಮೇ ಜ್ಞಾನಂ ೫
ದರ್ಜೇನ – ಹಂತಾಧರ್ಮಸ್ವರೂಪ
ಸಜ್ಜನಪಾಲ ದೇಹಿಮೇ ಭಕ್ತಿಂ ೬
ಪದ್ಮಜಿತಾತ ಪ್ರಸನ್ನ ಶ್ರೀನಿವಾಸ
ಪದ್ಮೇಶ ಶರಣಂ ಪಾಹಿ ೭

ಶ್ರೀ ಕೇತುದೇವ ಸ್ತೋತ್ರ
೯೧
ತ್ರಾತ ಹರಿ ಪದ್ಮಜರ ಅನುಗ್ರಹ ನಿಯಮನದಿ
ಕೇತುಗಳ ದೇವನೇ ಕೇತುವೇ ನಮಸ್ತೇ ಪ
ಕರಾಳ ದ್ಯುತಿ ಸಂಕಾಶ ರೌದ್ರನೇ ನಮೋ
ಘೋರ ಪಾಪ ಕಷ್ಟಂಗಳ ದೂರಮಾಡಿ ಸಲಹೆನ್ನ ೧
ಅನೇಕರೂಪ ವರ್ಣಾಶ್ಚ ಶತಶೋಥ ಸಹಸ್ರಶಃ
ಎನ್ನನ್ನ ಕೃಪದಿ ಸಂರಕ್ಷಿಸೋ ಸತ್ಜ್ಞಾನ ಕರ್ಮಜದೇವ ೨
ವೇಧಪಿತ ಶ್ರೀ ಪ್ರಸನ್ನ ಶ್ರೀನಿವಾಸ ಮುಕುಂದನ್ನ
ಸದಾ ದಯದಿ ಒಲಿಸೆನಗೆ ಪಾಹಿ ನಮೋ ಕೇತೋ ೩ ಪ

ದಾಸರು ಒಮ್ಮೆ ಆರ್ಥಿಕ ಮುಗ್ಗಟ್ಟಿನಲ್ಲಿದ್ದಾಗ
ಧನಪ್ರದ ಶ್ರೀಕರ ಕಾರುಣ್ಯ ಸ್ತೋತ್ರ
೪೮
ಧನಕೀರ್ತಿಗಳ ಹುಡುಕಿ ತಿರುಗಾಡಲಾರೆ
ಧನಕೀರ್ತಿಗಳ ಕೊಡುವಿ ನೀನಾಗಿ ನೀನೆ ಪ
ಶ್ರೀಕರನೇ ನೀನಾಗಿ ನೀನೇ ಸುಧಾಮನಿಗೆ
ಬೇಕಾದ ಸೌಭಾಗ್ಯ ಧನ ಧಾನ್ಯವಿತ್ತಿ
ಸಾಕಿ ಸಲಹುವ ಸ್ವಾಮಿ ನೀನಿರಲಿಕೆ ನಾನು
ಏಕೆ ತಿರುಗಾಡುವುದು ಕುಳಿತಲೆ ಕೊಡುವಿ ೧
ಭಾರತೀ ಪತಿ ಹೃಸ್ಥ ಶ್ರೀ ರಮಾಪತಿ ಸರ್ವ
ಪ್ರೇರಕಾಂತರ್ಯಾಮಿ ಆರ್ತಿಹರ ನೀನು
ವರಜ್ಞಾನ ಯೋಗಿವರ್ಯನು ರೈಕ್ವ ಕುಳಿತಲೆ
ಪೌತ್ರಾಯಣ ದ್ವಾರ ಭಾರಿ ಧನವಿತ್ತೆ ೨
ದೇವ ವೃಂದದಿ ಪ್ರವರ ಗುರು ವಾಯು ಪ್ರೇರಿಸಲು
ದೇವ ಶರ್ಮನು ಬಂದು ಏನೂ ಬೇಡದಲೆ
ನಿವ್ರ್ಯಾಜ ಭಕ್ತಿ ಆನಂದದಲಿ ಸ್ತುತಿಸಿದನು
ದ್ರವಿಣಾದಿ ಧನವಿತ್ತಿ ನೀನಾಗಿ ನೀನೇ ೩
ಸರ್ವದೊಳು ನೀನಿರುವಿ ಸರ್ವವಶಿ ನಿಸ್ಸಂಗ
ಸರ್ವಧಾರಕ ಶ್ರೀಶ ಸರ್ವಗುಣ ಪೂರ್ಣ
ಭೂಮಿಯಲಿ ಮಾರ್ಜಾಲ ತನ್ನ ಮರಿಯ ತಾನೇ ಎತ್ತಿ
ಕಾಯುವಂತೆ ನೀ ಎನ್ನ ಸರ್ವದಾ ಕಾಯುತಿ ಕೃಪೆಯಿಂದ ೪
ಶಂಖ ನಿಧಿ ಪದ್ಮನಿಧಿ ರವಿ ಸೋಮಕೈಗಳಲಿ
ಶಂಖಾರಿಧರ ದ್ರವ್ಯ ಕೊಡುವ ಹಸ್ತಗಳು
ಸ್ವಾಂಕಸ್ಥ ಲಕ್ಷ್ಮೀ ಸಮೇತ ಗರುಡಾ ರೂಢ
ಶ್ರೀಕರನೇ ಅಜಪಿತ ನಮೋ ಪ್ರಸನ್ನ ಶ್ರೀನಿವಾಸ ೫

ಬೆಂಗಳೂರಿನಿಂದ ಚೆನ್ನೈಗೆ ಹೋಗುವ
ಶ್ರೀ ತಾಂದೋಣಿ ವೆಂಕಟರಮಣ
೬೨
ಧನ್ಯನಾದೆನು ಇಂದು ವೆಂಕಟನ ಕಂಡು
ಅನ್ಯರೊಬ್ಬರು ಇವಗೆ ಸರಿಪರರು ಇಲ್ಲ ಪ
ಅಮರರಿಗು ಮನುಜರಿಗು ಸರ್ವ ಪ್ರಾಣಿಗಳಿಗು
ಸ್ವಾಮಿ ರಕ್ಷಕ ಸರ್ವ ಪ್ರೇರಕನು ದೇವ
ಅಮರಾವತಿ ಸರಿತತೀರ ಗಿರಿಯಲಿ ನಿಂತ
ಪ್ರೇಮದಿಂದಲಿ ಭಜಿಸೆ ಅಭಯ ವರವೀವ ೧
ಎನ್ನ ಕುಲದೇವನು ತಿರುಪತಿ ವೆಂಕಟನು
ತಾನೇವೆ ಭಕ್ತರಿಗೆ ಒಲಿಯೆ ಬಂದಿಹನು
ಅನಂತ ಗುಣಪರಿಪೂರ್ಣ ತನ್ನ ಸೇವಿಸುವರ
ಅನುಗಾಲ ರಕ್ಷಿಸುವ ಅನಿಮಿತ್ತಬಂಧು ೨
ಮಧ್ವಮುನಿ ಹೃತ್ಸದನ ದೇವದೇವೋತ್ತಮನು
ಮಧ್ವಮುನಿ ಗುರುಸ್ವಾಮಿ ವಿಧಿತಾತ ಶ್ರೀಶ
ಶುದ್ಧಕಾರುಣ್ಯನಿಧಿ ಪ್ರಸನ್ನ ಶ್ರೀನಿವಾಸ
ಉದ್ಧರಿಪ ಸಂಸ್ಮರಿಸೆ ಇಹಪರದಿ ಎಂದೂ ೩

ಶ್ರೀ ಸತ್ಯ ವಿಜಯತೀರ್ಥ ಚರಿತ್ರೆ
೧೨೫
ನಮೋ ಸತ್ಯ ವಿಜಯಾರ್ಯ ತೀರ್ಥರೇ
ಸುಮಹ ಕಾರುಣ್ಯದಿಂ ಎನ್ನ ಪಾಪಗಳ
ಮನ್ನಿಸಿ ವಿಮಲ ವಾಙ್ಮನೋಕಾಯದಲಿ ಶ್ರೀ
ರಾಮ ಯದುಪತಿ ಸ್ಮರಣೆ ಇತ್ತು ಪಾಲಿಪುದು ಪ
ಅಶೇಷ ಗುಣಗಣಾಧಾರ ವಿಭು ನಿರ್ದೋಷ
ಹಂಸ ಶ್ರೀಪತಿಯಿಂದುದಿತ ಗುರುಪರಂಪರೆಗೆ
ಬಿಸಜಭವ ಸನಕಾದಿ ದೂರ್ವಾಸ ಮೊದಲಾದ
ವಂಶಜರು ಸರ್ವರಿಗೂ ಶರಣು ಶರಣೆಂಬೆ ೧
ಪುರುಷೋತ್ತಮ ತೀರ್ಥ ಅಚ್ಯುತ ಪ್ರೇಕ್ಷರಿಗೂ
ಪರವಾಯು ಅವತಾರಾನಂದ ತೀರ್ಥರಿಗೂ
ಉತ್ರ‍ಕಷ್ಠ ಗುರುತಮ ಮಧ್ವ ಆನಂದ ಮುನಿಗಳ
ಕರಕಂಜಭವ ಸರ್ವ ಯತಿಗಳಿಗು ಶರಣು ೨
ಪದ್ಮನಾಭ ನರಹರಿ ಮಾಧವ ಅಕ್ಷೋಭ್ಯ
ಅದ್ವಿತೀಯ ಸುಸ್ಪಷ್ಟ ಟೀಕಾಗಳಿತ್ತ
ಮೇಧಾಪ್ರವೀಣ ಜಯತೀರ್ಥಾರ್ಯರಿಗೂ
ವಿದ್ಯಾಧಿರಾಜರಿಗೂ ನಮೋ ನಮೋ ಶರಣು ೩
ವಿದ್ಯಾಧಿರಾಜರ ಶಿಷ್ಯರು ಈರ್ವರಲಿ
ಮೊದಲನೆಯವರು ರಾಜೇಂದ್ರ ತೀರ್ಥರಿಗು
ನಂತರ ಕೋವಿದೋತ್ತಮ ಕವೀಂದ್ರರಿಗೂ
ತತ್ವಜ್ಞ ಶಿಷ್ಯವಾಗೀಶ ತೀರ್ಥರಿಗು ಶರಣು ೪
ವಾಗೀಶ ತೀರ್ಥರು ಕವೀಂದ್ರ ಕರಜರು
ವಾಗೀಶ ಕರಜರು ರಾಮಚಂದ್ರಾರಾರ್ಯರು
ಈ ಗುರುಗಳಿಗೆ ಈರ್ವರು ಶಿಪ್ಯರು ಇಹರು
ಬಾಗಿ ಶರಣಾದೆ ಈ ಈರ್ವರಿಗೂ ೫
ಮೊದಲನೆಯವರು ವಿಭುದೇಂದ್ರತೀರ್ಥಾರ್ಯರು
ವಿದ್ಯಾನಿಧಿ ತೀರ್ಥಾರ್ಯರ ಅನಂತರವು
ವಿದ್ಯಾನಿಧಿ ಸುತರು ರಘುನಾಥತೀರ್ಥರು
ವಂದಿಸಿ ಶರಣೆಂಬೆ ಇವರಿಗು ಇವರ ವಂಶಕ್ಕು ೬
ರಘುನಾಥ ಕರಕಮಲಜಾತರಘುವರ್ಯರಿಗೆ
ರಘೂತ್ತಮ ವೇದವ್ಯಾಸ ವಿದ್ಯಾಧೀಶ
ವೇದನಿಧಿ ಸತ್ಯವ್ರತ ಸತ್ಯನಿಧಿ ಸತ್ಯನಾಥ
ಸತ್ಯಭಿನವ ಸತ್ಯಪೂರ್ಣರಿಗೆ ನಮಿಪೆ ೭
ಸತ್ಯಾಭಿನವತೀರ್ಥರ ಮಹಿಮೆ ಬಹುಬಹುವು
ಸುತಪೋನಿಧಿಯು ಶ್ರೀನಿವಾಸನ್ನೊಲಿಸಿಕೊಂಡಿಹರು
ಸತ್ಯಪೂರ್ಣರಿಗೆ ಶಿಷ್ಯರು ಈರ್ವರು
ಸತ್ಯವರ್ಯರು ಸತ್ಯವಿಜಯರು ಎಂದು ೮
ಸತ್ಯ ಪೂರ್ಣಾರ್ಯರು ತಮ್ಮ ಗುರು ಸತ್ಯಾಭಿನವರ
ಪದ್ಧತಿ ಅನುಸರಿಸಿ ಶ್ರೀಮಠ ಆಳುತ್ತ
ಸತ್ಯವರ್ಯರನ್ನು ಗೋದಾವರಿ ಕ್ಷೇತ್ರ ವಿಜಯ ಮಾಡೆಂದು
ಸತ್ಯವಿಜಯರನ್ನ ಕಳುಹಿದರು ಪೂರ್ವದಿಸೆಗೆ ೯
ಸತ್ಯವರ್ಯರು ಗೋದಾವರಿ ಪಂಚವಟಿ ನಾಸಿಕ
ತ್ರಿಯಂಬಕಾದಿ ಕ್ಷೇತ್ರ ಸಮೀಪ ವಿಜಯಮಾಡೆ
ಸತ್ಯವಿಜಯರು ತೋಂಡದೇಶ ಚÉೂೀಳ
ಪಾಂಡ್ಯಾದಿ ನಾಡಲ್ಲಿ ವಿಜಯ ಮಾಡಿದರು ೧೦
ಸತ್ಯಪೂರ್ಣರು ಕರ್ನಾಟಕ ಪ್ರಾಂತ್ಯದಲಿ
ಜಯಶೀಲರಾಗಿ ದಿಗ್ವಿಜಯಮಾಡಿ
ತೋಯಜಾಕ್ಷನಪಾದಐದಿದರು ನಿಯಮೇನ
ಸತ್ಯವಿಜಯರು ಅಲಂಕರಿಸಿದರು ಪೀಠ ೧೧
ಸತ್ಯಾಭಿನವ ಆರ್ಯರ ಸತ್ಯಪೂರ್ಣ ಗುರುಗಳ
ಪದ್ಧತಿಯಲಿ ಸತ್ಯವಿಜಯಾರ್ಯರು
ವೇದಾಂತವಾಖ್ಯಾರ್ಥ ದುರ್ವಾದ ಖಂಡನ
ಅಧಿಕಾರಿಗಳಿಗು ಉಪದೇಶ ಮಾಡಿದರು ೧೨
ಸೇತುಯಾತ್ರೆ ಮಾಡಲು ದಿಗ್ವಿಜಯ ಕ್ರಮದಲಿ
ಬಂದರು ಆರಣಿಗೆ ತೋಂಡದೇಶದಲಿ
ಸಾಧುವೈಷ್ಣವ ವಿಪ್ರ ಆರಣಿ ರಾಜನು
ಸಂತಾನ ವೃದ್ಧಿಗೆ ಕೊರಗುತ್ತಿದ್ದ ೧೩
ಯುಕ್ತಮರ್ಯಾದೆಗಳ ವೈಭವದಿಂದಲಿ
ಸತ್ಯವಿಜಯರಿಗೆ ಮಾಡಿ ದೇವಾರ್ಚನೆ
ಭೂದೇವರಿಗೆ ಭೋಜನಮಾಡಿಸಿದ ರಾಜನು
ವೇದ್ಯವಾಯಿತು ಗುರುಗಳಿಗೆ ರಾಜನ ಕೊರತೆ ೧೪
ಸತ್ಯವಿಜಯತೀರ್ಥಾರ್ಯರ ಗುರುವರ್ಯರು
ಸಪ್ತದಶ ಅಕ್ಷರ ಮಂತ್ರ ಪ್ರತಿಪಾದ್ಯಹರಿದಯೆಯಿಂದ
ಒದಗಿಸುವ ವಂಶವೃದ್ಧಿ ಎಂದು ಅನುಗ್ರಹಿಸಿ
ಪೋದರು ದಿಗ್ವಿಜಯಕೆ ವರವು ಪೂರ್ಣವಾಯಿತು ೧೫
ಸೇತುಯಾತ್ರೆ ದಿಗ್ವಿಜಯ ಪೂರಯಿಸಿ ಆ ಗುರುಗಳು
ಮತ್ತು ಬಂದರು ಆರಣಿ ಕ್ಷೇತ್ರಕ್ಕೆ
ಕೃತಜ್ಞ ಆ ರಾಜನು ಎದುರುಗೊಂಡು ಗುರುಗಳ
ಪಾದದಲಿ ಶಿರವಿಟ್ಟು ಸ್ವಾಗತವನಿತ್ತ ೧೬
ಸಂಸ್ಥಾನ ಮೂರ್ತಿಸ್ಥ ಹರಿಪೂಜಾ ವೈಭವವು
ನಿತ್ಯ ಪ್ರವಚನ ಪಾಠಕೀರ್ತನೆ ಏನೆಂಬೆ
ಸತ್ಯವಿಜಯರನ್ನ ರಾಜ ಅಲ್ಲಿಯೇ ಇರಬೇಕು
ಎಂದು ಕೋರಿ ಒದಗಿಸಿದ ತಕ್ಕ ಸೌಕರ್ಯ ೧೭
ಸತ್ಯವಿಜಯಾರ್ಯರಿಗೆ ದೇಹ ಅಧಾರೂಢ್ಯ
ವೇದ್ಯವಾಯಿತು ಆರಣಿರಾಜನಿಗೆ
ಭಕ್ತಿಶ್ರದ್ಧೆಯಿಂದಲಿ ಉಪಚಾರ ಮಾಡಿದನು
ಮಾಧವಗೆ ಅರ್ಪಿಸುತಕೊಂಡರು ಗುರುಗಳು ೧೮
ಶ್ರೀ ಸತ್ಯವಿಜಯತೀರ್ಥರ ಮಹಿಮೆ ಬಹು ಉಂಟು
ಒಂದು ಮಾತ್ರ ಸ್ಥಾಲಿಪುಲಿಕನ್ಯಾಯದಲಿ
ಈ ದಿವ್ಯ ಸಣ್ಣ ನುಡಿಗಳಲಿ ಪೇಳಿಹುದು
ಮಾಧ್ವಯತಿ ಹರಿದಾಸ ಮಹಿಮೆಗಳಿಗೆ ಅಳವುಂಟೆ ೧೯
ತಮ್ಮ ತರುವಾಯ ಸಂಸ್ಥಾನ ಆಡಳಿತವ
ಶ್ರೀ ಮನೋಹರ ಹರಿ ಪ್ರಿಯರು ಸತ್ಯವರ್ಯ
ಸುಮನೋಹರ ಸತ್ಯಪ್ರಿಯ ತೀರ್ಥನಾಮದಲಿ
ರಮಾರಮಣಸೇವೆಗೆ ವಹಿಸಬೇಕೆಂದು ೨೦
ಭಕ್ತಿಮಾನ್ ಆರಣಿ ರಾಜನಿಗೆ ಹೇಳಿ
ಹಿತದಿ ಅನುಗ್ರಹಿಸಿ ಗುರುವರ್ಯ
ಸತ್ಯವಿಜಯರು ಧ್ಯಾನದಿಂ ಐದಿದರು ಹರಿಪುರ
ಚೈತ್ರ ಕೃಷ್ಣಪುಣ್ಯದಿನ ಏಕಾದಶಿ ದ್ವಾದಶಿಲಿ ೨೧
ಮತ್ತೊಂದು ಅಂಶದಲಿ ಸತ್ಯವಿಜಯ ನಗರಾಖ್ಯ
ಕ್ಷೇತ್ರ ಆರಣಿ ಸಮೀಪ ವೃಂದಾವನದೀ
ಇದ್ದು ಸೇವಿಸುವ ಸುಜನರಿಗೆ ವಾಂಛಿತ
ಒದಗಿಸುತ ಕುಳಿತಿಹರು ಹರಿಧ್ಯಾನ ಪರರು ೨೨
ಸತ್ಯಲೋಕೇಶಪಿತ ಶ್ರೀಪ್ರಸನ್ನ ಶ್ರೀನಿವಾಸ
ಪ್ರಿಯ ಸತ್ಯಾಭಿನವತೀರ್ಥ ಕರಕಂಜ ಜಾತ
ಸತ್ಯಪೂರ್ಣ ಕರ ಪದ್ಮಜಾತ ಸತ್ಯವಿಜಯಾರ್ಯರೇ
ಕಾಯವಾಙ್ಮನದಿ ನಮೋ ಶರಣು ಮಾಂಪಾಹಿ ೨೩

ಈ ಪರಿಕಲ್ ನರಸಿಂಹನು ತಮಿಳುನಾಡಿನ
ಶ್ರೀಪರಿಕಲ್ ನರಸಿಂಹ ಸ್ತೋತ್ರ
೧೩
ನರಸಿಂಹ ಪರಿಕಲ್ ನರಸಿಂಹ |
ನರಸಿಂಹ ಶರಣು ಲಕ್ಷ್ಮೀಶ
ಗೌರೀಶಾದ್ಯಮರರಿಗೀಶ | ಆಹ |
ಅಮಿತ ಪೌರುಷ ಸ್ವಜನತೇಷ್ಟಪ್ರದನೆ ನಮೋ
ಅಮಲೂರು ಗುಣಗಣಾರ್ಣವ ಜಯ ಜಯತು ಪ
ಸರ್ವೋರು ನಿಜ ಶಕ್ತಿಮಂತ | ಸದಾ
ಸರ್ವತ್ರವ್ಯಾಪ್ತ ಅನಂತ | ಜಗತ್
ಸೃಷ್ಟ್ಯಾದಿಗಳಿಗೇ ನೀ ಕರ್ತ | ವಿಷ್ಣು
ಸರ್ವತೋಮುಖ ಮೃತ್ಯುಹಂತ || ಆಹ ||
ಶ್ರೋತವ್ಯಮಂತವ್ಯ ಧ್ಯಾತವ್ಯವಿಭು ನೀನು
ವ್ಯಕ್ತನಾದಿಯೋ ಸ್ತಂಭದಲಿ ಭೃತ್ಯಗೋಲಿದು ೧
ಮೂಲಾಧಾರಾರಭ್ಯಲೂಧ್ರ್ವ | ವಾಗಿ
ತಲೆಯ ಪರ್ಯಂತದಿ ನಿಲುವ | ಬಲು
ಸುಲಲಿತಸ್ತಂಭದಂತಿರುವ | ನಾಡಿ
ಯಲ್ಲಿ ಉರದೇಶದಿ ಪೊಳೆವ ||ಆಹ||
ಜ್ಯೋತಿರ್ಮಯನೆ ಪಾಪತಿಮಿರಾರ್ಕ ನೀ ಎನ್ನ
ಪ್ರತಿಕ್ಷಣ ಪಾಲಿಸೋ ಶ್ರೀಲಕ್ಷ್ಮೀರಮಣ ೨
ವಿಧಿ ಭವೇಂದ್ರಾದಿಗಳಿಂದ | ಪ್ರಹ
ಲ್ಲಾದ ಶ್ರೀವ್ಯಾಸಮುನೀಂದ್ರ | ಮಂತ್ರಾ
ಸದ್ಮಸ್ಥ ಶ್ರೀ ರಾಘವೇಂದ್ರ | ದಾಸ
ವೃಂದ ಸುಜನರುಗಳಿಂದ ||ಆಹ ||
ಸೇವಿತ ಪೂಜಿತ ಸ್ತುತ್ಯ ಸಂಭಾವಿತ
ವಿಧಿಪಿತ ಶ್ರೀನೃಹರೇ ‘ಪ್ರಸನ್ನ ಶ್ರೀನಿವಾಸ’
||ಪಾಲಿಸೋ………. ೩

ಶ್ರೀ ನರಸಿಂಹ
೧೪
ನರಸಿಂಹ ಪಾಹಿ ಶ್ರೀಶ ಪೊರೆವರಾರಿಲ್ಲ ಬೇರೆ
ಕರವೆತ್ತಿ ಮುಗಿವೆ ನಿನಗೆ ಸುರಮುನಿ ಸುಖತೀರ್ಥ ಸೇವ್ಯ ಪ
ನಿಷಿದ್ಧ ಕರ್ಮಗಳ ಗೈದು ಅನಿರುದ್ಧ ನಾ ನಿನ್ನ ಮರೆತೆ
ಶುದ್ಧವೈಷ್ಣವತನವನೀಯೊ ಪ್ರಸಿದ್ಧಿ ಅದ್ಭುತಶಕ್ತ ವಿಭುವೆ ೧
ಸಾಧ್ಯಸಾಧನವನ್ನು ಬಿಟ್ಟು ಪ್ರದ್ಯುಮ್ನ ನಾ ನಿನ್ನ ಮರೆತೆ
ವಿದ್ಯುದೀಶನೆಸ್ವಾಮಿ ಸಲಹೊ ವೇದವೇದ್ಯಾನಂತ ಮಹಿಮ ೨
ಸಂಚಿಂತೆ ಸಂಸ್ಮರಣೆ ತೊರೆದು ಸಂಕರ್ಷಣ ನಿನ್ನ ಮರೆತೆ
ಸಂಸಾರತಾಪಗಳ ೧ ತೊರೆಯೊ ಶಂಕರ ಸುರ ಶಂಭು ಸೇವ್ಯ ೩
ವಸನ ಮನೆ ಹಣ ಹೆಣ್ಣು ಹುಡುಕಿ ವಾಸುದೇವನೆ ನಿನ್ನ ಮರೆತೆ
ಪಸು ಶಿಶುವಾದೆನ್ನ ಪೊರೆಯೊ ಶ್ರೀಶ ಮುಕ್ತೇಶ ಸರ್ವೇಶ ೪
ಅನಿಮಿತ್ತಬಂಧು ಮೂಲೇಶ ಅನ್ಯರ ನಾನರಿಯೆ ನಾರಾಯಣ
ವನರುಹಾಸನ ತಾತ ಪ್ರಸನ್ನ ಶ್ರೀನಿವಾಸನೆ ಕೃಷ್ಣವ್ಯಾಸ ೫

ಶ್ರೀ ಗೋಪಾಲದಾಸರು
೧೩೬
ನಿನ್ನ ದಯದಿಂದಲೇ ಎನ್ನ ಜೀವನವು
ಘನ್ನ ಗೋಪಾಲ ವಿಠ್ಠಲ ದಾಸರಾಯ ಪ
ತುಂಗೆ ಕೃಷ್ಣೆ ಮಧ್ಯರಂಗ ಕ್ಷೇತ್ರದಿ ಮುದದಿ
ತುಂಗ ವಿಜಯಾರ್ಯರ ಪದಂಗಳಿಗೆ ಎರಗಿ
ಗಂಗೆಪಿತ ಮಾತಂಗ ವರದನಾಮನ ಅಂತ
ರಂಗದಿ ನೋಡಿ ಗುಣಗಳನು ಪಾಡಿದೆಯೊ ೧
ಅನುಜರಿಗು ಅಚಲ ಮಾತೆಗು ಶರಣು ಸುಜನರಿಗು
ಮೌನಿ ಪಂಡಿತರಿಗೂ ಎನ್ನಂಥ ಪಾಮರಗು
ಜ್ಞಾನ ಸುತತ್ವ ಸನ್ಮಾರ್ಗ ಬೋಧಿಸಿ ಜಗ
ನ್ನಾಥನ ಮನಸಿನ ಅನುಭವಕೆ ತಂದೆ ೨
ಬೇಸರದಿ ನಾ ಸೀತಾಪತಿಪಲ್ಲಿಯಲಿ ಮಲಗೆ
ಏಸು ಕರುಣವೊ ದಾಸರಾಜ ನೀ ಬಂದು
ವ್ಯಾಸಮುನಿಮಠ ಗುರುಪೂಜೆಗೆ ಕರೆದೊಯ್ದು
ದಶಪ್ರಮತಿ ಭಾಷ್ಯಪಠನಾರ್ಚನೆಯ ತೋರಿಸಿದೆ ೩
ಗೋ ಎನಲು ಗರುಡವಾಹನ ಪೀಡೆ ಪರಿಹರಿಪ
ಪಾ ಎನಲು ಪರಮಪೂರುಷ ಪಾಲಿಸುವ
ಲ ಎನಲು ಲಕ್ಷ್ಮೀಶ ನಿಖಿಳೇಷ್ಟಗಳನೀವ
ಅನವರತ ಗೋಪಾಲದಾಸರಿಗೆ ಶರಣು ೪
ಆನಂದಮುನಿಹೃಸ್ಥ ವನಜಸಂಭವಪಿತ ಪ್ರ
ಸನ್ನ ಶ್ರೀನಿವಾಸ ಜಗನ್ನಾಥ ನಿನ್ನ
ನಿನ್ನವರ ಪಾದ ಸಂಸ್ಮರಿಸುವ ಸುಜನರನು
ಅನವರತ ಪಾಲಿಸುವ ಸಂದೇಹವಿಲ್ಲ ೫

ಇದೊಂದು ಸಪ್ತ ನುಡಿಗಳ
ಅಧೀನ ಸ್ತೋತ್ರ
೫೬
ನಿನ್ನಧೀನವು ಎಲ್ಲ ಘನ್ನ ಸುಮಹಿಮನೆ ಪ
ಬೊಮ್ಮನ ಪಿತ ನೀನು ಅಮ್ಮ ಲಕುಮಿಪತೆ
ಎಮ್ಮನು ಪೊರೆ ಶ್ರೀನಿವಾಸ ೧
ಬೃಹದಣುರೂಪನೆ ಮಹದಣು ಸರ್ವದಿ
ಬಹಿರಂತರದಿ ಇಹ ಮಹಾವಿಷ್ಣು ಪರಮಾತ್ಮ ೨
ಸಿರಿಯು ನಿನ್ನೊಡಗೂಡಿ ಚರಿಪಳು ಎಲ್ಲೆಲ್ಲೂ
ಸರಿ ಯಾರು ನಿನಗಿಲ್ಲ ಪರರುಂಟೆ ಸಿರಿಸೇವ್ಯ ೩
ನಿಜವರ್ಣ ಪ್ರತಿಪಾದ್ಯ ಅಜ ನರಹರೇ ನಮೋ
ಸೃಜಾಸೈಜ ಅಂಗಗಳೊಳ್ ಜ್ವಲಿಸುವೆ ಶಕ್ತೀಶ ೪
ಪೋಷ ಕಲುಷಹ ಶೇಷಗಿರೀಶನೆ
ದೋಷವೇನಿಲ್ಲದ ಹೃಷೀಕೇಶ ಕ್ಷೇತ್ರಜ್ಞ ೫
ಏಕಮಾದ್ವಿತೀಯ ಸರ್ವೋತ್ತಮ ಭೂಮನ್
ಸಾಕಲ್ಯ ನಿನ್ನ ತಿಳಿಯಲು ಅಶಕ್ಯ ೬
ಪ್ರಾರ್ಥಿಸಲರಿಯೆ ನಾ ದಯದಿ ನೀ ಸಲಹೆನ್ನ
ವೃತತಿಜಾಸನ ತಾತ ಪ್ರಸನ್ನ ಶ್ರೀನಿವಾಸ ೭

ಶ್ರೀಹರಿಯು ದಾಸರಿಗೆ ಒಲಿದ ಸ್ತೋತ್ರ
೫೩
ನೀನಾಗಿ ನೀಎನಗೆ ಒಲಿಯೋ ಸರ್ವೇಶ ಪ
ದೀನ ವತ್ಸಲ ವೇಧಪಿತ ಶ್ರೀದ ಶ್ರೀಶ ಅ.ಪ
ಕರಿಯಂತೆ ನಿನ್ನರಿತು ಕರೆಯಲರಿಯೆನು ನಾನು |
ನಾರಿಯಂತೆ ಸವಿದು ಕೊಡಲರಿಯೆ ಪಣ್ಣು ||
ತರುಗಳಂತೆ ತಪಸ್ಸು ಸಂಸ್ಮರಣೆ ನಾನರಿಯೆ
ಕರುಣಾಭ್ಧಿ ನೀನೇ ಪೊರೆ ಎನ್ನ ಶ್ರೀಹರಿಯೆ ೧
ಹೇಮ ಕಾಮಿನಿ ಭೂಮಿ ಸಾಧನಕ್ಕೊದಗಬೇಕು |
ಮಮ ಅಹಂಕಾರ ದುಷ್ಟದಿ ರತಿ ಸಾಕು ||
ಭೂಮನಿನಗೆ ಪ್ರಿಯ ಸೇವೆಯಾಗಲಿ ಸರ್ವ |
ವಾಙ್ಮನೋ ಕಾಯ ಕ್ರಿಯೆಗಳು ದೇವ ದೇವ ೨
ಎನ್ನ ಸರ್ವಾಭೀಷ್ಟಗಳು ಸಿಧ್ಧಿ ಆಗುವವು |
ನಿನ್ನ ಔದಾರ್ಯ ಕೃಪೆಯಿಂದ ಎಂದೆಂದೂ ||
ನಿನ್ನಧೀನವು ನಾನುರಕ್ಷಕನು ನೀ ಶ್ರೀಶ ||
ಎನ್ನುವದೊಂದೇ ಬಲ್ಲೆ ಪ್ರಸನ್ನ ಶ್ರೀನಿವಾಸ ೩

ಸರ್ವ ವಿಪತ್ ಪರಿಹಾರ ಸ್ತುತಿ
೫೭
ನ್ಯಗ್ರೋಧೋದುಂಬರನೆ ಕರ್ಮ ಫಲದಾತನು
ಅಘೃಣಿ ಅಲ್ಲ ಹರಿ ವೈಷಮ್ಯ ಶೂನ್ಯ ಪ
ಭೂಕಂಪ ಮಾರಿಕಾವ್ಯಾಧಿ ವಾಹನ ಪತನ
ಉಕ್ಕಿ ಪ್ರವಹಿಸುವ ನದಿ ಮೊದಲಾದ್ದರಿಂದ
ಏಕ ಕಾಲದಿ ಸಂಗ ಮರಣ ಸಂಭವಿಸುವುದು
ಏಕೆಂದು ಶಂಕಿಸುತಿ ಕೇಳು ಶ್ರದ್ಧಾಳು ೧
ಏಕ ಕಾಲದಿ ನಾನಾ ಜನರು ಸಂಗದಿ ಕೂಡಿ
ಸುಖಿಸುವರು ಮಂದ ಮಾರುತ ಪುಷ್ಪವನದಿ
ಶ್ರೀಕರ ಕಥಾ ಶ್ರವಣ ನಾಟಕ ಕೇಳಿಕೆಯು
ಹೀಗೆ ಜನ ಸಂಘದಲಿ ನಾನಾ ಸಂಭವವು ೨
ಒಂದೊಂದು ಮನುಜನಿಗು ಇಂಥಾ ಕಾಲದಿ ಇಂಥಾ
ರೀತಿಯಲಿ ಇಂಥಾ ಸ್ಥಳದಲ್ಲಿ ಇಂಥಾ
ಹಿತಕರವೊ ಅಹಿತವೊ ಕರ್ಮಗತಿ ಸಂಭವವು
ಶ್ರೀದ ನಿಯಮಿಸುವ ವೈಷಮ್ಯವಿಲ್ಲದಲೆ ೩
ಮಳೆ ಬಿಸಿಲುಭೂಕಂಪ ಚಂಡಮಾರುತ ಸುಳಿಸುಳಿದು
ಪ್ರವಹಿಸುವ ನದಿ ಹರಡುವ ದಾವಾಗ್ನಿ
ಎಲ್ಲ ಇಂಥಾ ಅಹಿತ ಸಂಭವದಿ ಸಿಲುಕುವರು
ಅಲ್ಲಲ್ಲಿ ಬಹುಜನರು ಕರ್ಮಗತಿಯಲ್ಲಿ ೪
ಘೋರ ಭೂಕಂಪದ ಪೀಡೆಗೆ ಯೋಗ್ಯರು
ಯಾರು ಯಾರೊ ಒಳ್ಳೆವರೋ ಕೆಟ್ಟವರೊ
ಹರಿಯು ಆ ಜನರನ್ನು ಕಂಪನಕೆ ಒಳಮಾಡಿ
ಮರಣಾಂಗ ಹೀನತೆಯು ರಕ್ಷಣೆಯು ಈವ ೫
ಭಿನ್ನ ಜೀವರು ಭಿನ್ನ ಕರ್ಮಗತಿ ಉಳ್ಳವರು
ಭಿನ್ನ ಫಲಯೋಗ್ಯರು ಆದ ಕಾರಣದಿ
ಕ್ಷೋಣಿ ಕಂಪನದಲ್ಲಿ ಮರಣ ಕೆಲವರಿಗೆ
ಅಂಗ ಹೀನತೆ ಕೆಲವರಿಗೆ ರಕ್ಷಣೆ ಕೆಲವರಿಗೆ ೬
ಘೃಣಿ ಹರಿಯು ಭೂಕಂಪ ಆಗುವ ಪೂರ್ವದಲೆ
ಜನರು ಕೆಲವರನ್ನು ಬೇರೆ ಊರಿಗೆ ಕಳುಹಿ
ಹಾನಿಗೊಳಿಸುವ ಕಂಪನಕೆ ಸಿಲುಕದಂತೆ
ಇನ್ನು ಕೆಲವರನ್ನು ಅಲ್ಲಿ ಬಾರದೇ ಮಾಳ್ಪ ೭
ಅಮಲ ಗುಣಗಣ ಸಿಂಧು ವಿಜ್ಞಾನಂದ ಹರಿಯೇ
ಕರ್ಮಾಧ್ಯಕ್ಷನು ಕರ್ಮಫಲದಾತ
ಕರ್ಮಜಡವಾದುದರಿಂ ಕರ್ಮ ಕೊಡದು ಫಲ
ಕರ್ಮಾಧ್ಯಕ್ಷ ಶ್ರೀಹರಿಯೇ ಫಲದಾತ ೮
ಸಂಘ ಸುಖ ಪ್ರಾಪ್ತಿಯು ಹ್ಯಾಗೆ ದೊರೆಯುವುದೊ
ಸಂಘ ದುಃಖ ಪ್ರಾಪ್ತಿಯು ಹಾಗೆ ಭವಿಸುವುದು
ಸುಖ ದುಃಖ ಐಹಿಕ ವಿಷಯಜವು ಉದಾನಿಸಿ
ಅಘದೂರ ಗುರುಗ ಶ್ರೀ ಹರಿಯ ಸ್ಮರಿಸು ೯
ನರಜನ್ಮ ಹೊಂದಿದವ ಹರಿನಾಮ ಸರ್ವದಾ
ಸ್ಮರಿಸುವುದು ಕರ್ತವ್ಯ ದೊರಕಿದ ಸ್ಥಳದಿ
ಹರಿನಾಮ ಭಕ್ತಿ ಪೂರ್ವಕದಿ ನುಡಿಯಲೇ ಬೇಕು
ನರಪಶÀು ಜಡಮತಿ ಮೂಢನು ನುಡಿಯ ೧೦
ಹರಿಯೇ ಸರ್ವೋತ್ತಮನು ಮುಖ್ಯಕಾರಣ ವಿಷ್ಣು
ಶ್ರೀರಮಾಪತಿಯೇ ಸ್ವತಂತ್ರ ಜಗನ್ನಾಥ
ಸರಸಿಜೋದ್ಭವ ಶಿವ ಶಕ್ರಾದಿ ಸರ್ವರಿಗೂ
ಪ್ರೇರಕನು ಸ್ವಾಮಿಯು ಚಿತ್ ಅಚಿತ್ ನಿಯಂತ ೧೧
ವಿಹಿತ ಸಾಧನಕ್ಕೊದಗೆ ನ್ಯಗ್ರೋಧೋದುಂಬರ ಹರಿ
ದೇಹ ಬೆಳಸುವ ಪೋಷಿಸುವ ರಕ್ಷಿಸುವನು
ಅಹರ್ನಿಶಿ ಪಾಲಿಸುವ ಭಕ್ತವಾತ್ಯಲ್ಯದಿ
ಮಹಾರ್ಹರ ರಕ್ಷಿಸಿದ ಪ್ರಹ್ಲಾದ ಗಜಪತಿಯ ೧೨
ಹರಿಯ ಪಾದಕೆ ಅಭಿಷೇಕ ಮಾಡಿದ ಬ್ರಹ್ಮ
ಹರನು ಕೈಲಾಸ ವಾಸನು ಆ ತೀರ್ಥ
ಸಹಸ್ರನಾಮ ಬೃಹತೀ ಸಹಸ್ರ ಸಹ ಪಠಿಸುತ್ತಾ
ಶಿರದಲ್ಲಿ ಧರಿಸಿ ಸತಿ ಪಾರ್ವತಿಗೆ ಎರೆದ ೧೩
ಹರಿನಾಮ ಸಂಸ್ಮರಣೆ ಪೂರ್ವಕದಿ ಈ ನುಡಿಯ
ಬರೆಯುವ ಪಠಿಸುವ ಕೇಳುವ ಭಕ್ತರನ್ನು
ಶ್ರೀರಮಾಯುತ ಹರಿ ಸುರವೃಂದ ಸಹ ಬಂದು
ಸಂರಕ್ಷಿಸುವ ಸರ್ವವಿಪತ್ ದೂರ ಮಾಡಿ ೧೪
ಸತ್ತಾ ಪ್ರವೃತ್ತಿ ಪ್ರತೀತಿ ಪ್ರದ ಶ್ರೀ ಪತೇ
ವೃತತಿಜಾಸನ ಪಿತ ವರಾಹ ನರಸಿಂಹ
ಭೂತಿದ ದಯಾಬ್ಧಿ ಶ್ರೀ ಪ್ರಸನ್ನ ಶ್ರೀನಿವಾಸ ನಮೋ
ಸದಾ ಶರಣು ಮಾಂಪಾಹಿ ಸಜ್ಜನರ ೧೫

ಈಕ್ಷೇತ್ರ ತಮಿಳುನಾಡಿನ
ಪಂಗು ಪುರವಾಸ ಶ್ರೀ ವೆಂಕಟೇಶ
೩೭
ಪಂಗು ಪುರವಾಸ ಶ್ರೀ ವೆಂಕಟೇಶ ನಿನ್ನ
ಪಂಕಜಂಘ್ರಿಗಳಲ್ಲಿ ಸತತ ಶರಣಾದೆ
ಪಂಕಜಾಲಯ ಪತಿಯೆ ಪಂಕಜೋದ್ಭವ ಪಿತ
ವೃಷಾಂಕ ಸಂಕ್ರದಾದಿ ಸುಠವಿನುತ ಈಶ ಪ
ಏಳು ತಗ್ಗಿದ ಗುಡ್ಡ ದಾಟಿ ನಿನ್ನಯ ಕ್ಷೇತ್ರ
ಹೇಳುವರು ಮೊಂಡಿಪಾಳಯ ಎಂದು ಅಲ್ಲಿ
ಮಾಲೋಲ ನಿನ್ನಾನುಗ್ರಹದಿ ಕಂಡೆ ನಿನ್ನ
ಚೆಲುವ ಲಿಂಗಾಕಾರ ಶ್ರೀ ವೆಂಕಟೇಶ೧
ಸರ್ವ ವೈದಿಕ ನಾಮಲಿಂಗಾತ್ಮಕ ಶಬ್ದ
ಸರ್ವೋತ್ತಮ ವಿಷ್ಣುವಿಗೇವೇ ಮುಖ್ಯದಲಿ
ಅನ್ವಯವು ಎಂಬುದನ್ನು ಸೂಚಿಸುವ ತೆರದಲ್ಲಿ
ದಿವ್ಯ ಲಿಂಗರೂಪ ತೋರಿಸುತಿ ೨
ಉತ್ಸವ ಮೂರ್ತಿಗಳೋಳ್ ಶ್ರೀ ಭೂ ಸಮೇತನೀ
ಜ್ಯೋರ್ತಿಮಯ ಜ್ವಲಿಸುತಿ ಅಪ್ರತಿಮಾಂತಸ್ಥ
ವೇಧ ಪಿತ ಶ್ರೀ ಪ್ರಸನ್ನ ಶ್ರೀನಿವಾಸನೇ ನಮೋ
ವಿಧಿ ಶೇಷ ದೂರ್ವಾಸ ಇಂದ್ರಾದಿ ವಂದ್ಯ ೩

ಶ್ರೀಪಂಚಮುಖ ಹನುಮಂತ ದೇವರ ಸ್ತೋತ್ರ
೬೬
ಪಂಚಮುಖ ಹನುಮತೇ ಶರಣುಮಾಂಪಾಹಿ ಪ
ಜ್ಞಾನ ಬಲ ರೂಪನೇ ಹನುಮ ಮುಖ್ಯಪ್ರಾಣ
ಅನಿಮಿಷವೃಂದದಲಿ ಪ್ರವರನೇ ಶರಣು
ಅನುಪಮಾನಂದಮಯ ಅನಘ ಸೀತಾಪತಿಯ
ಅನುಪಮ ಮಹಾದಾಸ ಹನುಮ ಪಾಲಯಮಾಂ ೧
ನಿರುಪಮಮಹಾತೇಜ ಸರ್ವತೋಮುಖ ಉಗ್ರ
ವೀರ ಭೀಕರ ಮೃತ್ಯುಮಾರಕ ಮಹಾವಿಷ್ಣು
ನರಸಿಂಹ ಶುಭಕರಗೆ ಪ್ರಿಯತಮನೆ ಶರಣಾದೆ
ಕರುಣದಿಂದಲಿ ಎನ್ನ ತ್ರುಟಿ ಬಿಡದೆ ಸಲಹೋ ೨
ಬಂಗಾರಮಯ ಸುಧಾ ಪೂರ್ಣ ಕುಂಭವುಕರದಿ
ಜಂಗಮದ ಸ್ಥಾವರದ ವಿಷಹರ ಅಭಯದ
ಖಗರಾಜನಿಗೆ ವರನೆ ತದ್ರೂಪಮುಖಧರನೆ
ಖಗಪ ಗಮನ ಶ್ರೀಕರನ ಒಲಿಸೆನಗೆ ೩
ಶ್ಯಾಮ ಅರಿ ಶಂಖಧರ ಅಭಯ ಸದ್ವರಹಸ್ತ
ಭೂಮಿಧರ ಸರ್ವವಾಂಛಿತ ಸಿದ್ಧಿದಾತ
ಭೂಮ ನಿರ್ಮಲ ಕೋಲ ರೂಪ ಸರ್ವೋತ್ತಮನು
ಮನ್ಮನದಿ ಪೊಳೆವಂತೆ ನೀದಯ ಮಾಡೋ ೪
ಜ್ಞಾನ ವಿದ್ಯಾಕಾಂತಿ ಪ್ರತಿ ವಾದಿಜಯದಾತ
ಮನಬುಧ್ಧಿದೇಹ ದಾರುಢ್ಯ ಸ್ಥೈರ್ಯ
ಘನ ಭಕ್ತಿ ಮುಕ್ತಿ ಸಾಧನ ವೀವ ಹಯಶೀರ್ಷ
ಪ್ರಸನ್ನ ಶ್ರೀನಿವಾಸನ ಒಲಿಸೆನಗೆ ಗುರುತಮನೇ ೫
|| ಶ್ರೀ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಕೃಷ್ಣಾರ್ಪಣಮಸ್ತು ||

ಶ್ರೀಪ್ರಸನ್ನ ಗೋಪೀವಲ್ಲಭ ಕೃಷ್ಣ
ಪ್ರಭವನಾಮ ಸಂವತ್ಸರ ಸ್ತೋತ್ರ
೧೪೫
ಪದ್ಮನಾಭ ಪದ್ಮೇಶ ಪದ್ಮಸಂಭವ ತಾತ ಮೋದಬಲ ಜ್ಞಾನಾದ್ಯಾಮಲ ಗುಣನಿಧಿಯೇ ಸತ್ಯಜಗತ್ ಸೃಷ್ಟಾದಿ ಕರ್ತನೀನೇ ಪ್ರಭವ ಸಂವತ್ಸರ ನಿಯಾಮಕನು ಸ್ವಾಮೀ ನಮಸ್ತೆ ಪ
ಈ ಪ್ರಭವನಾಮ ನಿನ್ನ ನಿಯಾಮನಿಂ ಸೋಮನು ಈ ಸಂವತ್ಸರರಾಜನು ಮಂಗಳನು ಮಂತ್ರಿಃ ಸಸ್ಯ ಸೈನ್ಯಾಧಿಪರು ಶುಕ್ರ ವಿಧುಧಾನ್ಯಪತಿ ಬುದನು ರಸಪ ರವಿ ನಿರಸಗುರು ಹೀಗೆ ನಾಯಕರು ನವರು ೧
ವಿಷ್ಣುನವ ಶ್ರೀನವ ನರವಾಯುನವ ಪತೀಶನವ ಶೇಷನವ ಈ ಬಗೆ ನವ ಮೂರ್ತಿ ಅಧಿಕಾರಿಗಳಿಂ ಸ್ಮರಣೀಯ ವರ್ಷನವನಾಯಕರೊಳೆ ವಾಯ್ವುಂತರ್ಗತನಾಗಿ ಶ್ರೀಸಹ ವಿಷ್ಣು ನೀನೆ ಇದ್ದು ಕೃತಿನಡೆಸಿ ಲೋಕವಕಾಯುತಿ ೨
ಸೋಮ ರಾಜನು ತನ್ನ ವಶದಿ ಸೈನ್ಯ ವೇಘಗಳಿಚ್ಚಿಹನು ಅಮಾತ್ಯತ್ಯ ಕುಜಗಿಹುದು ಶಿಷ್ಟಪಾಲನತಿದುಷ್ಟರ ತಿದ್ದುವುದಕ್ಕೆ ಅಮ್ಮಮ್ಮ ಏನೆಂಬೆ ಅಮೃತಕರ ಸೋಮದಿಯಲ್ಲಿದ್ದು ರಾಜ ರಾಜೇಶ್ವರ ನೀ ಕಮಲಾಸನಪಿತ ಪ್ರಸನ್ನ ಶ್ರೀನಿವಾಸ ಸಂತಾನಾದಿ ಭಾಗ್ಯ ವೀವಿ ಕರುಣಾಳು ೩

ಈ ದೇವರನಾಮ ಶ್ರೀಪ್ರಸನ್ನ ಶ್ರಿನಿವಾಸ
ಶ್ರೀಹರಿ ಸ್ತೋತ್ರ
೪೯
ಪಾಲಿಸೆನ್ನನು ಶ್ರೀ ಹರಿಯೆ ಸಿರಿದೇವಿ ಧೊರೆಯೇ |
ಸರಸಿಜಾಸನ ಪಿತನೇ|| ಪ
ಪಾರ್ಥಸೂತ ಪನ್ನಗಗಿರಿ ನಿಲಯ ಪವಮಾನ ವಂದ್ಯ |
ಶ್ರೀ ಭೂರಮಣನೇ ಸೃಷ್ಟಿಗೊಡೆಯನೆ |
ಆದಿ ಕಾರಣ ಅತುಳ ಮಹಿಮನೇ
ಭಜಿಪ ಭಕ್ತರ ಕ್ಲೇಶ ಕಳೆಯುವ
ಕೈಟಭಾರಿ ಕರುಣ ಶರಧಿಯೆ ಅ.ಪ
ಬ್ರಹ್ಮಾದಿ ಮನುಜಾಂತ ಶ್ರವಣ ಮನನ ಧ್ಯಾನ
ದಿಂದಲೇ ಕಾಂಬೋರು ನಿನ್ನ ರೂಪ ಯೋಗ್ಯತಾನುಸಾರ |
ನಿಯಮ ಭಂದ ಮೋಕ್ಷ ಕರ್ತನೆ |
ಶಾಂತಿ ಕೈತಿ ಜಯಾ ರಮಣನೀನೇ
ಮೋಕ್ಷದಾಯಕ ಮಾಯಾಪತಿಯೇ
ಸರ್ವ ಆಶ್ರಯ ಲಕ್ಷ್ಮೀ ರಮಣನೇ
ಸಮರು ಅಧಿಕರು ಇಲ್ಲದಂಥಾ |
ಸಾರ್ವಭೌಮನೇ ಆದಿಮೂಲನೆ ಅಪ್ರಮೇಯನೆ
ಅನಿಮಿಷೇಶನೇ ಅನಿರುದ್ಧ ಮಾರುತಿ |
ಎನ್ನ ಅಪವಳಿಗಳನೆ ತಂದು
ಚÉನ್ನವಾಗಿ ನಿನ್ನ ತೋರಿಸಿದ ೧
ಸದೋಷಿ ನಾನಹುದೋ ಸಂಕರ್ಷಣ
ಮದ್ದೋಷ ಪರಿಹರಿಸೋ
ನಿತ್ಯ ನಿರ್ಮಲ ನೀನು ನಿಗಮ ವೇದ್ಯನೆ ನಿನ್ನಧೀನವು ಎಲ್ಲಾ |
ವಿಶ್ವ ತೇಜಸ ಪ್ರಾಜ್ಞರೂಪನೇ
ಮೂರು ಸ್ಥಿತಿಯಲ್ಲಿ ಮುಖ್ಯ ಪ್ರವರ್ತಕ |
ಅನ್ನ ಅಂಡ ಪಿಂಡ ಬ್ರಹ್ಮಾಂಡದಲ್ಲಿ ಒಳ ಹೊರಗೆ ವ್ಯಾಪ್ತನೆ
ವಿಶ್ವತೋಮುಖ ವಿಧಿಭವ ನುತ ವಿಚಿತ್ರ ಮಹಿಮ ವಿಭೂತಿರೂಪನೇ
ವಾಸುದೇವನೇ ವಾರಿಜಾಸನ ವಂದ್ಯ ವರಾಹನೆ
ಕುಮತಿ ಕಡಿಯೋ ಕುಬ್ಜ ವರದನೇ ತಗಲಿ
ಇರುವ ತಾ¥ಟಿÀ ಹರಿದು ೨
ನಿರ್ಗುಣ ಗುಣ ಭರಿತಾ ನಿನ್ನ ಪರೋಕ್ಷ ಬೇಡುವೆ ಬಹುವಿಧದಿ
ಭವದ ಕ್ಲೇಶಗಳ ಬಿಡಿಸೋ ಭಕ್ತವತ್ಸಲ |
ಭವಾನಿ ಪತಿ ಸನ್ನುತ |
ಪರಮ ಹಂಸೋಪಸ್ಯ ತುರ್ಯನೆ ಆತ್ಮ ಅಂತರಾತ್ಮ |
ಪರಮ ಆತ್ಮ ಜ್ಞಾನಾತ್ಮ ನೀನೆ |
ಮೀನ ಕೂರ್ಮ ಕ್ರೋಢ ನರಹರಿ ಮಾಣವಕ |
ಭೃಗುರಾಮ ಕೃಷ್ಣನೇ ಮೋದ ಕೊಡುವ ಮುದ್ದು ಬುದ್ಧನೆ |
ಕಠಿಣ ಖಳರ ಕಡಿವ ಕಲ್ಕಿಯೆ
ಅನಂತ ಗುಣ ಕ್ರಿಯಾ ರೂಪದಲಿ ನೀ
ಸ್ವಗತ ಭೇದ ವಿವರ್ಜಿತಾತ್ಮನೇ |
ನಿತ್ಯ ನಿರಂಜನ ನಾರಾಯಣನೇ |
ವಿದ್ಯುತ ಪತಿ ಪ್ರಭಂಜನ ಪ್ರಿಯ ರಾಗರಹಿತ
ರಾಘವೇಂದ್ರ ಸಂಸೇವ್ಯ ನರಹರಿಯೆ |
ಅಜನ ತಾತ ಪ್ರಸನ್ನ ಶ್ರೀನಿವಾಸ ಲಕ್ಷ್ಮೀ ಈಶ ಹರಿಯೆ |
ಪ್ರಣತಾರ್ತಿಹರ ಪ್ರಮೋದಿ ನೀನೇ ೩

ಶ್ರೀವ್ಯಾಸರಾಜರು
೧೦೫
ಪಾಲಿಸೋ ಯತಿರಾಜ ಪಾಲಿಸೋ
ಪಾಲಿಸೋ ಮುನಿ ವ್ಯಾಸ ರಾಜ | ಜಗ –
ತ್ತಲ್ಲಿ ನಿನ್ಮಹಿಮೆ ಸುಭ್ರಾಜ | ಅಹ |
ಕಾಲಲ್ಲಿ ಶರಣಾದೆ ಶ್ರೀ ಲೋಲ ಪ್ರಿಯ ನಿನ್ನ
ಆಳೆಂದು ಗಣಿಸಿ ಪಾಲಿಪುದೆನ್ನ ಪ್ರತಿಕ್ಷಣ | ಪಾಲಿಸೋ | ಪ
ದಿನಪ ಸುತೇಜ ಬ್ರಹ್ಮಣ್ಯ | ತೀರ್ಥ
ಮುನಿಸಾರ್ವಭೌಮರ ದಿವ್ಯ | ಚಾರು
ವನರುಹ ಕರದಿಂದ ಉದಯ | ಇನ್ನು
ಏನೆಂಬೆ ನಿನ್ನ ಪ್ರಾಬಲ್ಯ | ಅಹ |
ದೀನ ವತ್ಸಲ ನಿನ್ನ ಶರಣು ಹೊಕ್ಕೆನು ನಾನು
ಎನ್ನ ಭಾಗ್ಯೋದಯ ತವ ಕಾರುಣ್ಯದಿ ಇನ್ನು ೧
ಕರುಣಿ ಸುಶಾಂತ ಸುವರ್ಣ | ವರ್ಣ
ತೀರುಥಕರ ಕಂಜೋತ್ಪನ್ನ | ಸು
ಸ್ಥಿರ ವರಭಕ್ತಿ ವಿಜ್ಞಾನ | ಸಂ –
ಪನ್ನ ಶ್ರೀ ಪಾದಾರ್ಯರನ್ನ | ಅಹ |
ಸೇರಿ ಸೇವಿಸಿ ವಾದಿ ಕರಿ ಪಂಚಾನನಾದ
ಸೂರಿ ಸಜ್ಜನನುತ ವ್ಯಾಸ ಮುನೀಂದ್ರ ೨
ಮಾಲೋಲ ಕೃಷ್ಣಸುಪ್ರಿಯರು | ನಿತ್ಯ
ಕಾಳೀಶ ನಿಮ್ಮೋಳ್ ಪ್ರಚುರರು | ಮತ್ತು
ವ್ಯಾಳೇಶ ಅಂಶ ಸಂಯುತರು | ಎಂದು
ಹೇಳೋರು ಹೀಗೆ ವಿಬುಧರು | ಅಹ |
ಕೀಳುವಿಷಯದಿ ಎನ್ ಮನ ಸೋಲದೇ ಹೊರ
ಒಳಗಿಪ್ಪ ಹರಿರೂಪ ವ್ಯಾಳೆ ವ್ಯಾಳೆಗೆ ತೋರು ೩
ದ್ವಾಸಪ್ತತಿ ಸºಸ್ರ | ನಾಡಿ
ತತ್ರಸ್ಥ ರೂಪ ಸಮೀರ | ಅವನ
ವಿಂಶತಿ ಮೇಲೇಳು ನೂರು | ಪ್ರತಿಮ
ನೀ ಸ್ಥಾಪಿಸದಿಯೋ ಹೇ ಧೀರ | ಅಹ
ಈ ಸಮಸ್ತ ಹನುಮರೂಪ ಒಂದೊಂದರೊಳ್
ಶತರೂಪ ಸ್ಮರಣೀಯ ಶ್ರೀಶ ಸಾಸಿರ ನಾಮ ೪
ಸಾತ್ಯವತೀಯ ವೇದಾರ್ಥ | ಅರಿತು
ಮಧ್ಯಗೇಹನು ವಿವರಿಸಿದ | ಆಗ
ಜಯರಾಯ ತತ್ ಟೀಕೆ ಬರೆದ | ಈಗ
ವ್ಯಾಸರಾಯನು ವಿವರಿಸಿದ | ಅಹ
ಮಿಥ್ಯಾ ತತ್ವವ ಪೇಳ್ದ ಮಾಯ್‍ಗಳ ಬಾಯ್ ಮುಚ್ಚಿ
ನಿತ್ಯ ಸುಖವನೀವ ತತ್ವ ಬೋಧಿಸಿದಿ ೫
ಮಾರ್ತಾಂಡ ಕತ್ತಲೆ ಕಳೆವ | ತರ್ಕ
ತಾಂಡವ ದುಸ್ತರ್ಕ ತರಿವ | ಬಂಡು
ಮಿಥ್ಯಾವಾದಿಗಳ ದುರ್ಮತವ | ತುಂಡು
ತುಂಡುಮಾಡಿದ ನ್ಯಾಯಾಮೃತವ | ಅಹ
ಕೊಂಡಾಡಳಲವೇ ಚಂದ್ರಿಕಾ ಈವ ಆಹ್ಲಾದವ
ಬ್ರಹ್ಮಾಂದೊಡೆಯನ ಅಮೃತ ಪ್ರಸಾದವ ೬
ಪ್ರಣವ ಮಂತ್ರದಿ ಲಕ್ಷ್ಮೀರಮಣ | ಎಂಟು
ವರ್ಣ ಮಂತ್ರದಿ ಶ್ರೀರಮಣ | ವಿಷ್ಣು
ಷಡ್ವರ್ಣದಲ್ಲಿ ಸತ್ಯಾರಮಣ ಹಾಗೂ
ವರ್ಣ ಸರ್ವದಿ ರಮಾ ರಮಣ | ಅಹ
ಧ್ವನಿ ವರ್ಣ ಪ್ರತಿಪಾದ್ಯ ಸತ್ತಾದಿ ದಾತ
ಅನುತ್ತಮ ಹರಿ ರೂಪ ಗುಣ ಕ್ರಿಯಾ ಹಾಡಿದಿ ೭
ಭೂಪನ ಹರಿಯಾಸನವ ನೀ ಏರ್ದಿ | ಏರಿ
ನೃಪವರನಪಮೃತ್ಯು ತರಿದಿ | ಯತಿ
ತಪಸ್ವಿಗಳಿಗೆ ಪಾಠ ಪೇಳ್ದಿ | ಸರ್ವ
ವಿಭುದರಿಂದಲಿ ಪೂಜ್ಯನಾದಿ | ಅಹ |
ಗೋಪಾಲ ಅಸುಪಾಲನ್ನೊಲುಮೆ ನಿನ್ನಲ್ಲೆಷ್ಟೋ
ಶ್ರೀಪನ ದಾಸವೃಂದಬ್ಜ ಕೂಟಕೆ ಸೂರ್ಯ ೮
ನರಸಿಂಹ ಗೋಪಾಲ ಕೃಷ್ಣ | ಯಜ್ಞ
ವರಾಹ ಪಟ್ಟಾಭಿರಾಮನ್ನ | ಬಹು
ಪರಾಶರ್ಯಾದಿ ರೂಪನ್ನ | ನಿತ್ಯ
ನಿರುತ ಸಂಪೂಜಿಪ ಘನ್ನ | ಅಹ
ವರಭಕ್ತಾಗ್ರಣಿ ನೀನು ಸರಸಿಜಾಸನ ಪಿತ
‘ಪ್ರಸನ್ನ ಶ್ರೀನಿವಾಸ’ ನ್ನೊಲಿಸೋ ಎನಗೆ ಜೀಯ ೯ ಪ
|| ಸಂಪೂರ್ಣಂ ||

ಶ್ರೀ ಶನೈಶ್ಚರ ಸ್ತೋತ್ರ
೯೬
ಪಾಹಿ ಶ್ರೀನರಸಿಂಹಪ್ರಿಯ ಶನೈಶ್ಚರನೆ ನಮೋ ಸಂತತ
ಪಾಹಿ ನಮೋ ಗ್ರಹರಾಜಶೌರಿ ಮಹೇಶ್ವರನೇ ಕೃಪಾಕರ ಪ
ಪೃಥ್ವಿ ತತ್ವಾಭಿಮಾನಿಯೇ ನಮೋ ಕರ್ಮಪನು ಎಂಬ ಪುಷ್ಕರ
ಮತ್ತು ಅಜಾನಜರು ಋಷಿಗಂಧರ್ವ ಮಹಾಸಮುದಾಯಕೆ
ಮೇದಿನೀ ರಾಜರು ಮನುಷ್ಯರು ಸರ್ವರಿಗೂ ಗುರು ಈಶ್ವರ
ನೀ ದಯದಿ ಹರಿದಾಸರನ್ನ ಸಲಹುತಿಯೋ ಶರಣೆಂಬೆನೋ ೧
ಸೂರ್ಯಛಾಯಸೂನು ಕಾಲರೂಪಿ ಮಹಾಗ್ರಹ ನಮೋ
ಕಾಯೊ ಜಟಿಲನೇ ವಜ್ರ ರೋಮನೇ ದಾನವರಿಗೆ ಭಯಂಕರ
ತ್ರ್ಯಯಂಬಕ ನಾರದರಿಗುಪದೇಶಿಸಿ ಕೊಂಡಾಡಿದ ನಿನ್ನನ್ನು
ಖ್ಯಾತ ರಘುವಂಶೋತ್ಥ ಅತಿ ವಿಖ್ಯಾತ ದಶರಥ ಕೀರ್ತಿತ ೨
ಜ್ಞಾನ ಚಕ್ಷುರ್ನಮಸ್ತೇಸ್ತು ಕಶ್ಯಪಾತ್ಮಜಸೂನವೇ
ತುಷ್ಟೋದದಾಸಿ ವೈರಾಜ್ಯಂ ರುಷ್ಟೋ ಹರಸಿ ತಕ್ಷಣಾತ್
ನಿನ್ನನು ದಶರಥನು ಸ್ತುತಿಸಿ ನಮಿಸೆ ವರಗಳನಿತ್ತು ನೀ
ಕ್ಷೋಣಿಜನ ಸಂರಕ್ಷಣೆಗೆ ಬಗೆ ಪಾದ್ಮ ಉಕ್ತದಿ ಅರುಹಿದಿ ೩
ಗಂಗಾ ಮಹಿಮ ರಕ್ಷೋ ಭುವನ ಪ್ರಸ್ಥಾನೋಕ್ತವು ತ್ವತ್‍ಕೃತ
ತುಂಗ ಮಹಿಮ ಶ್ರೀಲಕ್ಷ್ಮೀ ಭೂಮಾನಾರಸಿಂಹನ ಸ್ತೋತ್ರವು
ರಾಘವಕೃತ ತ್ವತ್‍ಕೃತ ಈ ನುಡಿಗಳ್ ಪಠಿಸಿ ಕೇಳ್ವರ್ಗೆ
ಶೋಕನೀಗಿ ಇಷ್ಟ ಲಭಿಸುವುದು ನೃಹರಿಪ್ರಿಯ ನೀ ಒದುಗುವಿ ೪
ವನರುಹಾಸನನ ತಾತ ಪ್ರಸನ್ನ ಶ್ರೀನಿವಾಸ ನೃಕೇಸರಿ
ಘನ್ನದಯದಿ ಪ್ರಸನ್ನನಾಗಿ ಒಲಿಯೆ ಸಾಧನವಾಗುವ
ಜ್ಞಾನ ಭಕ್ತಿ ವೈರಾಗ್ಯ ಸಂಪತ್ ಅಯುರಾರೋಗ್ಯ ಇತ್ತು ನೀ
ಎನ್ನ ತಪ್ಪುಗಳ ಮನ್ನಿಸಿ ಎನ್ನ ಪಾಹಿ ಸತತ ಶನೈಶ್ಚರ ೫

ಶ್ರೀ ಪ್ರಮಾದೀ ಸಂವತ್ಸರ ಹರಿಸ್ತೋತ್ರ
೧೫೩
ಪೂರ್ಣ ಗುಣನಿಧಿ ಅನಘ ಸರ್ವೋತ್ತಮ ಜ್ಞಾನ – ಆನಂದ ಮಯ ಕೃಷ್ಣ ವಾಮನ ಸರ್ವೇಶ ಜನುಮಾದಿ ಕರ್ತಾ ಪ್ರಮಾದೀ ಸಂವತ್ಸರ ಸುನಾಮನೇ ಅನಿಷ್ಟಹರ ಇಷ್ಟಪ್ರದ ಶರಣು ಪ
ತೇಜಸ್ಸಲಿಲ ಪೃಥಿವಿ ಶ್ರೀವಾಯುರುದ್ರರೊಳು ರಾಜರಾಜೇಶ್ವರ ತ್ರಿವೃತ್ ಪ್ರಮಾದೀ ರಾಜೀವ ಜಾಂಡ ಕಾರಣ ದೊರೆಯೆ ನೀನಿಂತು ಪ್ರಜೆಗಳ ರಕ್ಷಿಸುವಿ ನೀ ಪೂರ್ಣಕಾಮ ೧
ರಾಜರು ರಾಜ್ಯಾಧಿಕಾರಿಗಳು ಈ ವರುಷ ರಜಸ್ತಮೋನ್ನಾಹದಿ ಕ್ರೋಧ ಮತ್ಸರದಿಂ ರಾಜ್ಯ ಜನರ ಪೀಡಿಸದಂತೆ ನೀಮಾಡೋ ರಾಜೀವೇಷಣ ವೃಷ್ಟಿ ಸಸ್ಯವರ್ಧಿಸುವಿ ೨
ಉತ್ತಿಷ್ಠ ಶ್ರೀಕರ ಶ್ರೀಯಃ ಪತೆ ಜಗನ್ನಾಥ ಪದ್ಮಭವಪಿತ ಶ್ರೀ ಪ್ರಸನ್ನ ಶ್ರೀನಿವಾಸ ಸದಾನಮೋ ಸುಹೃತ್ ತ್ರಿವೃತ್ ಪ್ರಮಾದೀವಾಮನಕೃಷ್ಣ ಹೇ ಧಯಾನಿಧೇ ಶರಣು ಅನಿಮಿತ್ತ ಬಂಧು ೩

ಲೋಕಪಾಲಕರು
೯೬-೧
ಪೂರ್ಣ ಸುಗುಣಾಂಬೋಧಿ ಅನಘ ಲಕ್ಷ್ಮೀರಮಣ
ಜ್ಞಾನಾದಿ ನಿಖಿಳ ಸೌಭಾಗ್ಯದನೆ ಸ್ವಾಮಿ
ಅನವರತ ಸರ್ವ ದಿಕ್ಪಾಲಕರೊಳಿದ್ದು ನೀ
ಎನ್ನ ರಕ್ಷಿಪ ವಿಭುವೆ ಶರಣು ಮಾಂ ಪಾಹಿ ಪ
ಇಂದ್ರಾಗ್ನಿ ಯಮ ನಿಯಯತಿ ವರುಣ ವಾಯು
ಚಂದ್ರ ನಿಧಿಪತಿ ಈಶಾನ ಫಣಿ ಬ್ರಹ್ಮ
ಇಂದಿರಾಪತಿ ಸದಾ ನಿಮ್ಮೊಳು ನಿಂತು ಆ
ನಂದ ಸರ್ವೇಷ್ಟಗಳ ಈವ ಸ್ಮರಿಪರಿಗೆ ೧
ವಾಮ ಹಸ್ತದಿ ವಜ್ರಬಲ ಕರವು ಅಭಯದವು
ಹೇಮವರ್ಣನೆ ಸಹಸ್ರಾಕ್ಷ ಸುರರಾಜ
ಕಾಮಿತಾರ್ಥವನೀವೆ ಐರಾವತಾರೂಢ
ನಮೋ ಶಚೀಪತಿ ಇಂದ್ರ ಶ್ರೀಶಪ್ರಿಯತರನೆ ೨
ಹೇಮ ವರ್ಣಾಂಗನೆ ಸಪ್ತಕರ ಸಪ್ತಾರ್ಚಿ
ನಮೋ ಸ್ವಾಹಾಪತಿ ಅಗ್ನಿ ಮೇಷವಾಹನನೆ
ಕಾಮದನೆ ದುರಿತಹನೆ ಹರಿಣೀಶಪ್ರಿಯಕರನೆ
ನಮೋ ಶ್ರುವಾಶಕ್ತ್ಯಾದಿಧರ ಅಭಯಹಸ್ತ೩
ಜ್ಞಾನಸುಖಮಯ ವಿಷ್ಣುಯಜ್ಞನಿಗೆ ಪ್ರಿಯತರನೆ
ಕೃಷ್ಣವರ್ಣನೆ ಲೋಕಕರ್ಮಫಲಪ್ರದನೆ
ದಂಡಧರ ಅಭಯದನೆ ಮಹಿಷವಾಹನ ಯಮನೆ
ಎನ್ನ ಮನ್ನಿಸಿ ಪೊರೆ ಇಲಾಪತಿಯೆ ಶರಣು ೪
ಅಸುರರಿಗೆ ಭೀಕರ ಕರಾಲ ವಿರೂಪಾಕ್ಷನೆ
ಅಸಿಧರನೆ ಅಭಯದನೆ ಶರಣು ಮಾಂ ಪಾಹಿ
ನೃಸಿಂಹಪ್ರಿಯತರನೆ ಕಾಳಿಕಾಪತಿ ಊಧ್ರ್ವ
ಕೇಶ ನಿಋಋತಿ ನೀಲ ನರವಾಹ ನಮಸ್ತೆ ೫
ಮೀನ ವಡವ ಕಮಠ ಕ್ರೋಡನಿಗೆ ಪ್ರಿಯತರನೆ
ಸ್ವರ್ಣವರ್ಣನೆ ವರುಣ ಪದ್ಮಿನೀರಮಣ
ವನಪತಿಯೆ ಮಕರವಾಹನ ಹವಳಭೂಷಣನೆ
ನಿನಗೆ ನಮೋ ಪಾಶಧರ ಅಭಯದನೆ ಪಾಹಿ ೬
ನಿಯಮನ ಸುಕರ್ತಾ ಶ್ರೀ ಪುಂಡರೀಕಾಕ್ಷನಿಗೆ
ಪ್ರಿಯತರನೆ ಹರಿಣವಾಹನ ಮೋಹಿನೀಶ
ಶ್ಯಾಮವರ್ಣನೆ ವಾಯು ಜಗತ್ ಪ್ರಾಣರೂಪನೆ
ಕಾಯೆನ್ನ ದಯದಿ ಗದಾಪಾಣಿ ಅಭಯದನೆ ೭
ಸಾರಾತ್ಮ ಹಯಮುಖ ಧನ್ವಂತರಿ ಪ್ರಿಯತರನೆ
ಸೂರಿಜನ ಚಿಂತ್ಯ ನೀ ಸಿತಕಾಂತಿ ಕಾಯ
ಪೊರೆ ಎನ್ನ ಅಭಯದನೆ ರೋಹಿಣೀಪತಿ ಸೋಮ
ಪುರುಟಭೂಷಣ ಸುಖದ ಕುಮುದಸದ್ಮಸ್ಥ ೮
ಸೌಭಾಗ್ಯ ಸಾರಾತ್ಮ ಶ್ರೀಯಃಪತಿಗೆ ಪ್ರಿಯತರನೆ
ವಿಪರತ್ನನಿಭ ಯಕ್ಷ ವೈಶ್ರವಣ ಪಾಹಿ
ಕುಬೇರ ನಿಧಿಪತಿ ಧನಧಾನ್ಯಾಧಿಪತೇ ನಮೊ
ಸೌಭಾಗ್ಯ ಧನ ಧಾನ್ಯ ಸಮೃದ್ಧಿ ಎನಗೀಯೊ ೯
ಮನುಜವಾಹ್ಯವು ವರವಿಮಾನದಿ ಕುಳಿತಿಹೆ
ಅನಲಾಕ್ಷ ಶಂಖಗದಾಧರ ನಮೋ ಕಿರೀಟಿ
ಎನ್ನ ತಪ್ಪುಗಳನ್ನು ಮನ್ನಿಸಿ ಹರಿಭಕ್ತಿ
ಧನಧಾನ್ಯ ಆರೋಗ್ಯ ಸೌಂದರ್ಯವೀಯೊ ೧೦
ನಿರ್ದೋಷ ಸುಖಮಯ ಜಯೇಶನಿಗೆ ಪ್ರಿಯತರನೆ
ನೀ ದಯದಿ ಸಲಹೆನ್ನ ಈಶಾನ ಶೂಲಿ
ಸದಾಶಿವನೆ ಭಕ್ತರಿಂ ಅಚ್ಛಿನ್ನ ಸೇವ್ಯನೆ
ಸದಾ ಅಭಯ ಎನಗಿತ್ತು ಪೊರೆಯೊ ಗೌರೀಶ ೧೧
ಆನಂದರೂಪ ಸಂಕರ್ಷಣ ಅನಂತನಿಗೆ
ಅನಂತ ನೀ ಪ್ರಿಯತರನು ಶುಕ್ಲವರ್ಣ
ನಿನ್ನ ಸತಿ ವಾರುಣೀಸಮೇತ ಅಭಯದನಾಗಿ
ಎನ್ನ ಪೊರೆ ಕೃಷ್ಟಿಧರ ನಮೋ ನೀಲವಾಸ ೧೨
ಜಗದೀಶ ಭೂರಮಣ ಕೇಶವ ಸುಪ್ರಿಯತಮನೆ
ಜಗದಾದ್ಯ ಬ್ರಹ್ಮ ಸರಸ್ವತೀಸಮೇತ
ಖಡ್ಗಧರ ಅಭಯದನೆ ನಮೋ ರಕ್ತವರ್ಣನೆ
ಮುಗಿದು ಕರ ಶರಣಾದೆ ಪೊರೆ ಪಿತಾಮಹನೆ ೧೩
ಐಶ್ವರ್ಯ ಆಯುಷ್ಯ ನೀತಿ ಜಯ ಅಪಿಪಾಸ
ಪಾವಿತ್ರ್ಯ ಸುಖ ವಿತ್ತ ಜ್ಞಾನ ವಿಜ್ಞಾನ
ಈವೋರು ಇವು ಸರ್ವ ಶ್ರವಣ ಪಠಣವ ಮಾಡೆ
ವಿಶ್ರವ ಕಾಶ್ಯಪ ಲೋಕಪಾಲಕರು ದಯದಿ ೧೪
ಇಂದ್ರಾಗ್ನಿ ಯಮ ನಿಋಋತಿ ವರುಣ ಪ್ರವಹಸ್ಥ
ಚಂದ್ರ ವೈಶ್ರವಣ ಈಶಾನ ಅನಂತಸ್ಥ
ಮಂದಜಾಸನಪಿತ ಪ್ರಸನ್ನ ಶ್ರೀನಿವಾಸನು
ಕುಂದದ ಸೌಭಾಗ್ಯವನು ಈವ ಕರುಣಾಳು ೧೫

ಈ ಕೀರ್ತನೆಯು, ದಾಸರು ರಚಿಸಿದ
ಶ್ರೀ ಆನಂದಮಯ ಸ್ತೋತ್ರ
೪೦
ಪೂರ್ಣ ಸುಗುಣಾರ್ಣವನೆ ಅನಘ ಪರಮೇಶ್ವರನೆ
ಆ ನಮಿಪೆ ಶ್ರೀರಮಣ ಆನಂದಮಯ ವಿಷ್ಣು ಪ
ನಿನ್ನಯ ಸುಮಹಿಮೆಗಳ ನಿನ್ನಿಚ್ಛೆಯಿಂದಲೇ
ಚೆನ್ನಾಗಿ ತಿಳಿಸಿ ಅಚ್ಛಿನ್ನ ಭಕ್ತಿಯನೀಯೊ ಅಪ
ಸುಖರೂಪ ಪಾಲನಾಲಯಕರ್ತ ಲಕ್ಷ್ಮೀಶ
ನಿಷ್ಕಳನು ನೀ ಸದಾ ಕೈವಲ್ಯ ಸುಖದ
ಆಗಮ ಸುಶಾಸ್ತ್ರೈಕ ವಿಜÉ್ಞೀಯ ಪರಬ್ರಹ್ಮ
ಅಂಗಾಂಗ್ಯಭಿನ್ನ ಆನಂದ ಸಂಪೂರ್ಣ ೧
ಬ್ರಹ್ಮಶಬ್ದದಿ ಮುಖ್ಯವಾಚ್ಯ ಬಹು ಆವರ್ತಿ
ಬ್ರಹ್ಮ ಆನಂದಮಯ ನೀ ಇತರರಲ್ಲ
ಬ್ರಹ್ಮಪರಿಪೂರ್ಣ ಹರಿ ಸರ್ವನಾಮದಿ ನೀನೆ
ಬಹುರೂಪ ಸರ್ವಸ್ಥ ಈಶ್ವರ ಆನಂದಮಯ ೨
ಚಿತ್ಪ್ರಕೃತಿ ನಾಲ್ಮೊಗನು ಅಷ್ಟಮೂರುತಿ ಎಂಬ
ರುದ್ರನು ದೇವೇಂದ್ರ ಸುರಗುರು ವಿಪ್ರ
ಇಂಥ ಯಾರೂ ವಸ್ತು ಯಾವುದೊ ಅಲ್ಲವು
ಆನಂದಮಯ ನೀನು ವಿಷ್ಣು ಪರಬ್ರಹ್ಮ ೩
ಪ್ರಕೃತಿ ಪ್ರಜಾಪತಿ ಸದಾನಂದ ದಶಪ್ರಮತಿ
ರುದ್ರಾಷ್ಟಮೂರ್ತ್ಯಾದಿ ಸರ್ವ ಶಬ್ದಂಗಳು
ಪರನೆ ಬ್ರಹ್ಮನೆ ವಿಷ್ಣು ಮುಖ್ಯ ವಾಚಕ ನಿನಗೆ
ಇರುವ ಈ ಸರ್ವರೊಳು ಸುಖಪೂರ್ಣ ಸ್ವಾಮಿ ೪
ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ
ಆನಂದಮಯ ಎಂಬ ಐದು ಶಬ್ದಂಗಳು ೧
ಆನಂದಮಯ ಶಬ್ದದಿಂದ ಗ್ರಹಿಸಲುಬೇಕು
ಆನಂದಮಯ ಬ್ರಹ್ಮ ನೀನೆ ಇತರರು ಅಲ್ಲ ೫
ಶಿರ ಬಾಹುದ್ವಯ ಮಧ್ಯ ಚರಣ ಅಂಗಾಂಗಗಳು
ಪೂರ್ಣ ಆನಂದಮಯ ಎಂದೂ ಅಭಿನ್ನ
ಉರು ಸುಗುಣ ಪರಿಪೂರ್ಣ ವಿಷ್ಣು ಆತ್ಮನು ಬ್ರಹ್ಮ
ಶೃತಿಯು ಬಹುಸಾರುತಿದೆ ಸುಖಮಯನು ಎಂದು ೬
ಅನ್ನಮಯ ಅನಿರುದ್ಧ ಪ್ರಾಣಮಯ ಪ್ರದ್ಯುಮ್ನ
ಮನೋಮಯ ಸಂಕರ್ಷಣನು ವಿಜ್ಞಾನಮಯನು
ಅನಘ ಮಾಯಾರಮಣ ಪರವಾಸುದೇವ ನೀ
ಆನಂದಮಯ ಶ್ರೀಶ ನಾರಾಯಣ ಬ್ರಹ್ಮ ೭
ಪಂಚ ಕೋಶಂಗಳಲಿ ತನ್ನಾಮ ತದ್ಭಿನ್ನ
ಕಿಂಚಿತ್ತು ಲೇಪವಿಲ್ಲದೆ ಇದ್ದು ನಿಯಮಿಸುವೆ
ಪಂಚ ಸುಖರೂಪದಿಂ ಪಂಚವರ್ಣದಿ ಜ್ವಲಿಪೆ
ಸಂಚಿಂತಿಪರ್ಗೆ ಸುಖವೀವೆ ಸುಖಮಯ ಬ್ರಹ್ಮ ೮
ಅಧಿಕಾರಿ ಆನಂದ ಪ್ರಚುರ ಬಹುರೂಪ ನೀ
ಸರ್ವರೂ ನಿನ್ನಿಂದ ಉಪಜೀವ್ಯರೊ ಸ್ವಾಮಿ
ಸರ್ವರಿಗು ಪ್ರೇರಕನು ಸತ್ತಾಪ್ರವೃತ್ತಿದನು
ಸರ್ವೇಶ ಸುಖಪೂರ್ಣ ಸರ್ವವ್ಯಾಪಿಯೆ ದೇವ ೯
ಆನಂದಮಯ ನೀನೆ ಆನಂದೋದ್ರೇಕದಿಂ
ಪ್ರಾಣಿಗಳ ಧರ್ಮಗಳ ಪ್ರವೃತ್ತಿ ಮಾಡುವೆಯೊ
ಆನಂದೋದ್ರೇಕದಿಂ ಸರ್ವತ್ರವ್ಯಾಪ್ತ ನೀ
ಆನಂದಮಯ ಇತರ ಲೋಕಚೇಷ್ಟಕರಿಲ್ಲ ೧೦
ಅಂಗಾಂಗಿತ್ವದಿ ಭಗವಂತ ನೀ ಕ್ರೀಡಿಸುವೆ
ರಂಗ ನೀ ಸತ್ಯಂ ಜ್ಞಾನಮನಂತಂ ಬ್ರಹ್ಮನೆಂದು
ಹೊಗಳುತಿದೆ ಶೃತಿಯು ಸುಖಸಾರಾತ್ಮ ಚಿನ್ಮಾತ್ರ
ಚಾರ್ವಾಂಗ ನಿನ್ನ ತಿಳಿಯದೆ ಬೇರೆ ಗತಿಯಿಲ್ಲ ೧೧
ಸತ್ಯ ಸತ್ರ‍ಸಷ್ಟಿಕರ್ತ ಜೀವನಪ್ರದನು
ಸರ್ವ ಪ್ರವರ್ತಕನು ಸಂಹಾರಕರ್ತ
ಅಶೇಷಸಾಮಾನ್ಯ ವಿಶೇಷಜ್ಞಾನವು ಜ್ಞಾನ
ದೇಶಾದಿಪರಿಚ್ಛೇದ ಶೂನ್ಯವು ಆನಂತ ೧೨
ಅನ್ನಮಯದಿಂ ಸೃಷ್ಟಿ ಸಂಹಾರಜೀವನವು
ಪ್ರಾಣಮಯ ಶಬ್ದ ಸಹ ಜೀವನಪ್ರದವು
ಮನೋಮಯ ಶಬ್ದದಿಂ ಸಾಮಾನ್ಯಜ್ಞಾನವು
ವಿಜ್ಞಾನಮಯ ಶಬ್ದದಿ ವಿಶೇಷಜ್ಞಾನ ೧೩
ಆನಂದಮಯ ಶಬ್ದದಿಂದಲಿ ಜÉ್ಞೀಯವು
ಆನಂದಾದ್ಯಖಿಳಗುಣ ಅಪರಿಚ್ಛಿನ್ಮತ್ವ
ಅನ್ನಮಯ ಪ್ರಾಣಮಯ ಸತ್ಯಂ ಬ್ರಹ್ಮ
ಮನೋಮಯ ವಿಜ್ಞಾನಮಯ ಜ್ಞಾನಂ ಬ್ರಹ್ಮ ೧೪
ಆನಂದಮಯ ಆನಂತಂ ಬ್ರಹ್ಮ ಎಂದೀ ರೀತಿ
ಮಂತ್ರವರ್ಣೋಕ್ತ ಶಬ್ದಗಳಿಗೇಕಾರ್ಥ
ಆನಂದಮಯ ಮೊದಲಾದ ಶಬ್ದಗಳಿಂದ
ಆನಂದಪರಿಪೂರ್ಣ ವಿಷ್ಣು ನೀನೇ ವಾಚ್ಯ ೧೫
ಆತ್ಮ ನೀ ಆನಂದಮಯ ಇತರರು ಅಲ್ಲ
ಆನಾತ್ಮರು ಸಂಪೂರ್ಣಸ್ವತಂತ್ರರು ಅವರು
ಚೇತನಾಚೇತನದ ಸತ್ತಾ ನಿನ್ನಿಂದಲೇ
ಆನಂತ ನೀ ಸರ್ವಗನು ಆಸಮ ಪ್ರಭು ಐರ೧೬
ಬ್ರಹ್ಮ ವಿದಾಪ್ನೋತಿ ಪರಂ ಎಂದು ಉಪನಿಷದ್ವಾಕ್ಯ
ಬ್ರಹ್ಮಾಪರೋಕ್ಷವೇ ಮೋಕ್ಷಕ್ಕೆ ಕಾರಣ
ಬ್ರಹ್ಮೇತರ ವಿರಿಂಚಾದಿ ಜೀವರ ಜ್ಞಾನ
ಮೋಕ್ಷಕೊಡಲು ಎಂದು ಶೃತಿಯು ಪೇಳುತಿದೆ ೧೭
ತಮೇವಂ ವಿದ್ವಾನಮೃತ ಇಹಭವತಿ
ನಾನ್ಯಃ ಪಂಥಾ ಅಯನಾಯ ವಿದ್ಯತಾ
ಎಂಬ ಶೃತ್ಯನುಸಾರ ನಿನ್ನಾಪರೋಕ್ಷ ವಿನಾ
ಮುಕ್ತಿಯು ಲಭಿಸದು ಅನ್ಯಜ್ಞಾನದಿ ಎಂದೂ ೧೮
ಆನಂದಪ್ರಚುರ ಪೂರ್ಣಾನಂದಮಯ ನೀನೆ
ಆನಂದ ತರತಮದಿ ಜೀವರಲಿ ಉಂಟು
ಅತ್ಯಂತ ಭೇದವು ನಿನಗೂ ಜೀವರಿಗೂ
ಅನಂತ ಅಪರಿಮಿತ ಆನಂದಿ ನೀನೆ ೧೯
ರುದ್ರನ ಶತಗುಣಿತ ಆನಂದ ನಾಲ್ಮೊಗನ
ಒಂದು ಆನಂದವು ಎಂಬುವುದು ಶೃತಿಯು
ಆನಂದ ಪರಿಮಿತವು ಜೀವರಿಗೆ ಈ ರೀತಿ
ಆನಂದ ಅಪರಿಮಿತ ನಿನ್ನಯ ಸ್ವರೂಪ ೨೦
ಸುಖಮಯ ನಿನ್ನಪರಿಮಿತಾನಂದಾದಿಗಳನು
ಸಾಕಲ್ಯ ತಿಳಿದವರು ಇಲ್ಲವೇ ಇಲ್ಲ
ಸಾಕಲ್ಯ ಶಬ್ದಗಳು ಪೊಗಳಲರಿಯವು ನಿನ್ನ
ಏಕಸುಖಮಯ ನೀನು ಜೀವರಿಗೆ ಭಿನ್ನ ೨೧
ತತ್ವಮಸ್ಯ ಹರಿಬ್ರಹ್ಮಾಸ್ಮಿ ಪುರುಷಯೇ ವೇದಂ
ಸರ್ವಂ ಎಂಬಂಥಾ ಇಂಥ ಶೃತಿ ಮಾತುಗಳು
ಜೀವೇಶ ಐಕ್ಯವನು ಬೋಧಿಸುವವಲ್ಲವು
ಸರುವಿಚಾರ ನಿರ್ಣಯದಿ ಭೇದಬೋಧಕವೆ ೨೨
ಜೀವರಿಗೆ ಜನ್ಮಜೀವನ ಸತ್ತಾ ದಾತನು
ಸರ್ವಾಶ್ರಯ ಸರ್ವನಿಯಾಮಕನು ಆತ್ಮ
ಜೀವರು ಪರಬ್ರಹ್ಮಜ್ಞಾನದಿಂ ಪೊಂದುವ
ಸೋಚಿತಪೂರ್ಣತ್ವ ಕೊಡುವ ನೀ ಬ್ರಹ್ಮ ೨೩
ಸರ್ವಕ್ಕೂ ಭಿನ್ನ ನೀ ಸರ್ವತ್ರ ಸರ್ವದಾ
ಸರ್ವದೊಳು ಇರುವಂಥ ಸರ್ವೇಶ್ವರ
ಸರ್ವ ಸತ್ತಾದಿ ಪ್ರದತ್ವ ಸ್ವಾಮಿತ್ವದಿಂ
ಸರ್ವ ನೀನೆಂದೆನಿಸಿಕೊಂಬೆಯೊ ದೇವ ೨೪
ಸರ್ವವಂದ್ಯನು ವಿಷ್ಣು ಸರ್ವಾಂತರ್ಯಾಮಿಯು
ಸ್ವತಂತ್ರ ಈಶನು ಸರ್ವಜೀವರಿಗೆ ಭಿನ್ನ
ಸರ್ವಸ್ವಾಮಿಯು ನೀನು ಎಂದರಿತು ಭಜಿಪರಿಗೆ
ಸರ್ವಶೋಕವ ಬಿಡಿಸಿ ಮೋಕ್ಷಸುಖವೀವೆ ೨೫
ಸರ್ವಜಡ ಚೇತನದಿ ಅಂತರ್ನಿಯಾಮಕನು
ಸರ್ವಜಗದಾಧಾರ ಏಕ ಬಹುರೂಪ
ತ್ವಂ ಅಸೌ ಅಹಮೆಂದು ಸರ್ವನಾಮದಿ ವಾಚ್ಯ
ಸರ್ವಜಡ ಚೇತನಕೆ ವಿಲಕ್ಷಣನು ಸ್ವಾಮಿ ೨೬
ಅತೀಂದ್ರಿಯವು ಬ್ರಹ್ಮವಿಷಯಕ ಜ್ಞಾನ
ಶೃತ್ಯನುಸಾರವಿಲ್ಲದ ಅನುಮಾನ
ದುಸ್ತರ್ಕದಿಂದಲಿ ಲಭಿಸದು ಯಾರಿಗೂ
ಮೋದಮಯ ಶ್ರೀ ವಿಷ್ಣು ಜೀವರಿಂ ಭಿನ್ನ ೨೭
ಬದ್ಧರೊಳು ಮುಕ್ತರೊಳು ಇದ್ದು ನೀ ನಿಯಮಿಸುವೆ
ಬದ್ಧರಂತೇ ಮುಕ್ತಜೀವರಿಗೂ ಭಿನ್ನ
ಮುಕ್ತರಿಗೆ ಅವರವರ ಆನಂದ ಅನುಭವವು
ಅಧೀನ ನಿನ್ನಲ್ಲಿ ಆನಂದಮಯ ಶ್ರೀಶ ೨೮
ಸದಮಲ ಬ್ರಹ್ಮ ನಿನ್ನ ಪರೋಕ್ಷಜ್ಞಾನಿಗೆ
ಪದುಮಸಂಭವ ಸಹ ನೀನು ಸಹ ಇದ್ದು
ಒದಗಿಸುವೆ ಸೋಚಿತ ಮೋಕ್ಷಸುಖ ಅವರಿಗೆ
ಹೇ ದಯಾನಿಧೇ ನಮೋ ಆನಂದಪೂರ್ಣ ೨೯
ಅನ್ನ ಪ್ರಾಣ ಮನೋವಿಜ್ಞಾನ ಆನಂದಮಯ
ಪರಿಣಾಮ ಅಭಿಮಾನರಹಿತ ಅಧಿಕಾರಿ
ಆನಂದ ಪ್ರಚುರನೇ ಲೋಕಚೇಷ್ಟಕ ನೀನೆ
ಮಂತ್ರವರ್ಣೋಕ್ತ ಮಹಾಮಹಿಮ ಸುಖಪೂರ್ಣ ೩೦
ವನಜಾಸನಾದಿಗಳು ಆನಂದಮಯರಲ್ಲ
ನಿನ್ನಿಂದ ಉಪಜೀವ್ಯ ಭಿನ್ನರು ಅವರು
ಆಮ್ನಾಯದಿಂ ವೇದ ದುಸ್ತರ್ಕಕತಿ ದೂರ
ಆನಂದಮಯ ವಿಷ್ಣು ಮುಕ್ತರಿಗೂ ಆಶ್ರಯನು ೩೧
ಜ್ಞಾನಸುಖಪೂರ್ಣ ಪ್ರಸನ್ನ ಶ್ರೀನಿವಾಸ
ಪೂರ್ಣಪ್ರಜ್ಞರ ಹೃತ್‍ಸ್ಥ ಜನ್ಮಾದಿಕರ್ತ
ಎನ್ನ ೧ಒಳಹೊರಗಿದ್ದು ನೀನೆ ನುಡಿದೀ ಗ್ರಂಥ
ನಿನಗೆ ಅರ್ಪಣೆ ಸುಹೃದ ನಿತ್ಯ ಸಂತೃಪ್ತ ೩೨

ಹಿನ್ನಲೆ: ಶ್ರೀ ಹರಿ ಪ್ರೀತ್ಯರ್ಥನಾಗಿ ಶ್ರೀ ಗೋಪಾಲ
ಶ್ರೀ ಕೃಷ್ಣ ಪ್ರಾದುರ್ಭಾವ ಸ್ತುತಿ
೨೩*
ಪೂರ್ಣ ಸುಗುಣಾರ್ಣವನೇ ಅನಘ ಮಾಯಾ ರಮಣ
ಆ ನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥ
ಜ್ಞಾನ ಸುಖ ಬಲ ಚೇಷ್ಟರೂಪ ದೇವಕೀ ತನಯ
ಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪ.
ಅನುಪಮಾದ್ಭುತ ಬಾಲಕನು ಅಂಬುಜೇಕ್ಷಣ
ರತ್ನ ಕಿರೀಟ ಪೊಳೆವ ಕೌಸ್ತುಭ
ಮಣಿ ಉರದಿ ಶ್ರೀವತ್ಸ ಚತುರ್ಭುಜನೇ | ಪಾಂಚ
ಜನ್ಯ ಕೌಮೋದಕೀ ಸುದರ್ಶನ ಸರೋಜ ೧
ಉದ್ದಾಮ ಕಾಂಚನಾಂಗದ ಕಂಕಣಾದಿಗಳ್
ಪೀತಾಂಬರ ಪಾದನೂಪುರ | ಪೂರ್ಣೇಂದು
ಮುದ್ದು ಮುಖ ಮುಗುಳ ನಗೆ ಸುಳಿಗೊರಳು ಶುಭನೋಟ |
ಮೋದ | ಚಿನ್ಮಯ ಹೀಗೆ ಪ್ರಾದುರ್ಭವಿಸಿದೆಯೋ ೨
ಈ ರೂಪ ವಸುದೇವ ನೋಡಿ ಸ್ತುತಿಸಿದ ನಿನ್ನ
ಅರಿಯೆ ನಾ ವರ್ಣಿಸಲು ನಿನ್ನ ಗುಣರೂಪ
ಶರಣು ಆತ್ಮನೇ ಪರನೇ ಉದ್ದಾಮ ಹರಿಕೃಷ್ಣ
ಶರಣು ಸರ್ವಾಶ್ರಯನೇ ಶ್ರೀಶ ಮಾಂ ಪಾಹಿ ೩
ಜಯತು ದೇವಕೀ ತನಯ ಸತ್ಯಾ ರುಕ್ಮಿಣೀ ಕಾಂತ
ಜಯತು ಪೂರ್ಣಪ್ರಜ್ಞ ಹೃತ್ ಪದ್ಮ ಸಂಸ್ಥ
ಜಯತು ಜಗತ್ ಜನ್ಮಾದಿಕರ್ತ ಜಗನ್ನಾಥ
ಜಯತು ಜಗತ್ ಜನ್ಮಾದಿಕರ್ತ ಜಗನ್ನಾಥ
ಜಯತು ವಿಧಿತಾತ ‘ಪ್ರಸನ್ನ ಶ್ರೀನಿವಾಸ’ ಪ

ಪ್ರಸನ್ನ ಶ್ರೀ ರುಕ್ಮಿಣೀಶ ಕಲ್ಯಾಣ
೨೪
ಪ್ರಥಮ ಅಧ್ಯಾಯ
ಪ್ರಾದುರ್ಭಾವ ಸಾರ
ಪೂರ್ಣ ಸುಗುಣಾರ್ಣವನೇ ಅನಘ ಮಾಯಾರಮಣ
ಆ ನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥ
ಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯ
ಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪ
ಆಲದೆಲೆ ಮೇಲ್ ಮಲಗಿ ಅದ್ವಿತೀಯನೇ ನೀನು
ಲೀಲೆಯಿಂ ನಿನ್ನೋಳ್ ನಿನ್‍ಅನಂತ ರೂಪಗಳ
ನಿಲ್ಲಿರಿಸಿ ಉದರದೊಳ್ ಜಗವನ್ನೆಲ್ಲವ ಧರಿಸಿ
ನೀ ಲಯಾಬ್ಧಿ ಸುಖವ ರಮೆಗಿತ್ತಿ ಸ್ವರತ ೧
ಗುಣಕಾಲ ದೇಶ ಅಪರಿಚ್ಛಿನ್ನ ನಿನ್ನನ್ನು
ಗುಣತ್ರಯಮಾನಿ ಮಾ ಅನಘ ಸಂಸ್ತುತಿಸಿ
ಆನಂದಮಯ ನೀನು ಆನಂದ ಲೀಲೆಯಿಂ
ಸ್ವರ್ಣಾಂಡ ಪಡೆದು ಅದರೊಳ್ ಪೊಕ್ಕಿ ೨
ಪದುಮನಾಭನೇ ನಿನ್ನ ನಾಭಿ ಕಮಲೋದ್ಭೂತ
ವಿಧಿಯ ಪ್ರತಿ ದಿನದಲ್ಲಿ ಅವತಾರ ಮಾಡಿ
ಸಾಧು ಸಾತ್ವಿಕರಿಗೆ ಅಭಯ ಸದ್ಗತಿ ಇತ್ತು
ಅಧಮ ಅಸುರರ ಸದೆದು ಭೂಭಾರ ಕಳೆದಿ ೩
ಮೂಲಾವತಾರಂತರ್ಯಾಮಿ ವ್ಯಾಪ್ತಾಂಗಗಳು
ಎಲ್ಲವೂ ಪೂರ್ಣವು ನಿತ್ಯವು ಅಭಿನ್ನ
ಳಾಳುಕನೇ ನಿನ್ನಮಲ ರೂಪವಿಶೇಷವ
ಲೀಲೆಯಿಂದಲಿ ಪ್ರಕಟಮಾಡುವಿ ಆಗಾಗ ೪
ವೇದ ಉದ್ಧಾರನೇ ಮತ್ಸ್ಯರೂಪನೇ ನಮೋ
ಮಧುಕೈಟಭಹಾರಿ ಹಯಗ್ರೀವ ಶರಣು
ಮಂಡಲಾದ್ರಿಯ ಪೊತ್ತ ಕೂರ್ಮ ಧನ್ವಂತರಿ
ಸುಧೆ ಸುರರಿಗುಣಸಿದ ಸ್ತ್ರೀರೂಪ ಪಾಹಿ ೫
ಸುರಪಕ್ಷ ಅಜ ಅಜಿತ ಸಿಂಧುಜಾಪತಿ ಧರೋ –
ದ್ಧಾರ ವರಾಹ ನಮೋ ಪುರುಟಾಕ್ಷಹಾರಿ
ಶರಣು ತ್ರಯತ್ರಿಂಶದಕ್ಷರ ಮನುಗ ಶ್ರೀದ
ವರಚಕ್ರಧರಾ ಅಭಯ ಭೂಧರ ಶಾಮ ೬
ಪ್ರೋದ್ಯಾರ್ಕ ನಿಭ ವರ್ತುಲ ನೇತ್ರತ್ರಯವು
ಹಸ್ತದ್ವಯ ಅಜಾನುದರಾರಿಧರ ಕೋಟಿ
ಆದಿತ್ಯಾಮಿತ ತೇಜ ಮಾಲಕ್ಷ್ಮೀಯುತ ವೀರ
ಉತ್ರ‍ಕಷ್ಟಬಲ ವಿಷ್ಣೋ ನರಸಿಂಹ ಶರಣು ೭
ದ್ವಾತ್ರಿಂಶದಕ್ಷರ ಸುಮಂತ್ರ ಪ್ರತಿಪಾದ್ಯನೇ
ಹಿರಣ್ಯ ಕಶಿಪುವ ಸೀಳ್ದಿ ಪ್ರಹ್ಲಾದಪಾಲ
ಮೂರಡಿಯ ಕೇಳ್ದ ವಾಮನ ಬಲಿ ಬಂಧಕ
ಶರಣು ಶ್ರೀತ್ರಿವಿಕ್ರಮನೇ ಧೂರ್ಜನಕ ಪಾಹಿ ೮
ದುಷ್ಟ ನೃಪರನ್ನಳಿದು ಭೂಭಾರ ಇಳಿಸಿದಿ
ಕೋಟಿ ಸೂರ್ಯಮಿತೋಜ್ವಲ ಪರಶುರಾಮ
ಸಾಟಿ ಇಲ್ಲದ ಹನುಮತ್ ಸೇವ್ಯ ಸೀತಾರಮಣ
ಪಟ್ಟಾಭಿರಾಮನಮೋ ರಾವಣ ಧ್ವಂಸೀ ೯
ಭಜಿಸುವೆ ನರಸೇವ್ಯ ನಾರಾಯಣ ವ್ಯಾಸ
ಸ್ವಜನತೇಷ್ಟಪ್ರದನೇ ಪಾಹಿಮಾಂ ಶ್ರೀಶ
ಕುಜನಮೋಹಕ ನಮೋ ಸುರ ಸುಬೋಧಕ ಬುದ್ಧ
ದುರ್ಜನ ಸಂಹಾರಿ ನಮೋ ಶಿಷ್ಟೇಷ್ಟ ಕಲ್ಕಿ ೧೦
ಕ್ರೂರ ದೈತ್ಯರ ಭಾರಿ ಭಾರ ಧರಿಯಿಂದಿಳಿಸಿದೆ
ವಾರಿಜಾಸನ ಶಿವಾದ್ಯಮರರ ಮೊರೆ ಕೇಳಿ
ಕ್ಷೀರಸಾಗರಶಯ್ಯ ಪುರುಷಸೂಕ್ತದಿ ಸ್ತುತ್ಯ
ಪರಮ ಪೂರುಷ ಶ್ರೀಶ ಪ್ರಾದುರ್ಭವಿಸಿದೆಯೋ ೧೧
ವಸುದೇವ ದೇವಕೀಸುತನೆಂದು ತೋರಿದ
ವಾಸುದೇವನೇ ನಿನ್ನ ಸುಚರಿತ್ರೆ ಕೇಳೆ
ಶ್ರೀಶ ನಿನ್ನಯ ದಯದಿ ಕಲುಷ ಪರಿಹಾರವು
ಸುಶುಭ ಪಾವನಕರವು ಸರ್ವಭಕ್ತರಿಗೂ ೧೨
ಕಲಿ ಕಲಿಪರಿವಾರ ದೈತ್ಯ ದುರ್ಜನರು
ಖಳರು ಇಳೆಯಲ್ಲಿ ನಾನಾ ರೂಪದಲಿ ಜನಿಸಿ
ಶೀಲ ಹರಿಭಕ್ತರ ಕಂಡು ಸಹಿಸದೇ ಬಹು
ಬಲಕಾರ್ಯ ವಂಚನೆಯಿಂದ ಪೀಡಿಸಿದರು ೧೩
ಎಂಟನೇ ಮಗು ತನ್ನ ಮೃತ್ಯುವಾಗುವುದೆಂದು
ದುಷ್ಟ ಕಂಸನು ತಂಗಿ ಸಪತಿ ದೇವಕಿಯ
ಇಟ್ಟ ಸೆರೆಮನೆಯಲ್ಲಿ ಆರು ಮಕ್ಕಳ ಕೊಂದ
ಎಂಟ ನಿರೀಕ್ಷಿಸಿದ ಭಯ ದ್ವೇಷದಿಂದ ೧೪
ಏಳನೇ ಗರ್ಭವು ವ್ಯಾಳದೇವನ ಅಂಶ
ಸ್ವಲ್ಪ ಕಾಲದಲೇ ಆ ಕ್ಷೇತ್ರದಿಂ ಹೊರಟು
ಚೆಲ್ವ ಗೋಕುಲದಲ್ಲಿ ರೋಹಿಣಿ ಉದರದಿಂ-
ದಲ್ಲಿ ಪುಟ್ಟಿದನು ನಿನ್ನ ನಿಯಮನದಿಂದ ೧೫
ಸಾರಾತ್ಮಾ ನಿನ್ನಲ್ಲಿ ಪ್ರೇಮಾತಿಶಯದಿಂದ
ಸುರರು ಸೇವಿಸುವುದಕೆ ನಿನ್ನಿಚ್ಛೆ ದಯದಿ
ಧರೆಯಲ್ಲಿ ನೃಪಮುನಿಗೋಪ ಗೋಪಿಯರಾಗಿ
ಪರಿ ಪರಿ ವಿಧದಲ್ಲಿ ಕೃತ ಕೃತ್ಯರಾದರು ೧೬
ದೇವಿ ಮಾಯಾದುರ್ಗೆ ನಿನ್ನಯ ಪ್ರಶಾಸನದಿ
ಅವತಾರಕ್ಕನುಸರಿಸಿ ಬಂದು ತೆರಳಿದಳು
ದೇವ ನಿನ್ನ ಕಲಾ ಸಂಯುಕ್ತ ಶೇಷನು
ಭವಿಸಿದನು ನಿನ್ನಣ್ಣ ಬಲರಾಮನೆಂದು ೧೭
ನಿರ್ದೋಷ ನೀ ಸರ್ವ ಜಗನ್ನಿವಾಸನು ದೇವ –
ಕೀ ದೇವಿಯೋಳ್ ನಿವಸಿಸಿ ಪೊಳೆಯುವಾಗ
ವಿಧಿ ಭವಾದಿಗಳೆಲ್ಲ ಬಂದು ಸಂಸ್ತುತಿಸಿದರು
ಸತ್ಯಜ್ಞಾನಾನಂತ ಗುಣಪೂರ್ಣ ನಿನ್ನ ೧೮
ಯಾವನು ಸರ್ವದಾ ಸರ್ವ ಬಹಿರಂತಸ್ಥ
ಯಾವನು ಸರ್ವ ಹೃತ್ ಯೋಮದೊಳು ಇರುವ
ಯಾವನಲ್ಲಿ ಸರ್ವವೂ ಸಮಾಹಿತವೋ
ಅವನೇವೇ ನೀ ಹರಿ ವಿಷ್ಣು ಕೃಷ್ಣ ಅವತಾರ ೧೯
ಪ್ರಾಕೃತ ಶರೀರ ವಿಕಾರಗಳು ನಿನಗಿಲ್ಲ
ಪ್ರಾಕೃತ ಕಲಾವಿಲ್ಲ ಭಿನ್ನಾಂಶನಲ್ಲ
ಏಕಪ್ರಕಾರ ಅಕ್ಷರ ಪೂರ್ಣ ಅಜ ನಿನ್ನ
ಅಜ್ಞಾನದಲಿ ನರರು ಜನಿಸಿದಿ ಎಂಬುವರು ೨೦
ಅನುಪಮಾದ್ಭುತ ಬಾಲಕನು ಅಂಬುಜೇಕ್ಷಣ
ರತ್ನ ಕಿರೀಟ ಕುಂಡಲ ಪೊಳೆವ ಕೌಸ್ತುಭ
ಮಣಿ ಉರದಿ ಶ್ರೀವತ್ಸ ಚತುರ್ಭುಜವು ಪಾಂಚಜನ್ಯ
ಕೌಮೋದಕೀ ಸುದರ್ಶನ ಸರೋಜ ೨೧
ಉದ್ದಾಮ ಕಾಂಚಂಗದ ಕಂಕಣಾದಿಗಳ
ಪೀತಾಂಬರ ಪಾದನೂಪುರ ಪೂರ್ಣೇಂದು
ಮುದ್ದು ಮುಖ ಮುಗುಳುನಗೆ ಸುಳಿಗೊರಳು ಶುಭನೋಟ
ಮೋದ ಚಿನ್ಮಯ ಹೀಗೆ ಪ್ರಾದುರ್ಭವಿಸಿದಿಯೋ ೨೨
ಈ ರೂಪ ವಾಸುದೇವ ನೋಡಿ ಸ್ತುತಿಸಿದನು ನಿನ್ನ
ಅರಿಯೇ ನಾ ವರ್ಣಿಸಲು ನಿನ್ನ ಗುಣರೂಪ
ಶರಣು ಆತ್ಮನೇ ಪರನೇ ಉದ್ದಾಮ ಹರಿಕೃಷ್ಣ
ಶರಣು ಸರ್ವಾಶ್ರಯನೇ ಶ್ರೀಶ ಮಾಂಪಾಹಿ ೨೩
ನಿನ್ನ ಮಹಾ ಪುರುಷ ಲಕ್ಷಣವ ದೇವಕಿಯು
ಕಾಣುತ್ತಾ ನರಲೋಕ ವಿಡಂಬನಕ್ಕಾಗಿ
ತನ್ನ ಗರ್ಭಗನಾದಿ ಎಂದರಿತು ಭಕ್ತಿಯಿಂ
ಸನ್ನತಿಯ ಮಾಡಿದಳು ಆ ಪೂರ್ವಪೃಷ್ಣಿ ೨೪
ದೇವಕಿಯ ಸ್ತುತಿ ಕೇಳಿ ಯುಕ್ತ ಮಾತುಗಳಾಡಿ
ದೇವ ನಿನ್ನೀಚ್ಛಾ ಶಕ್ತಿಯಿಂದಲೇವೇ
ಪವಡಿಸೆ ನರಶಿಶುಪೋಲ್ ಪಿತ ನಿನ್ನ ಎತ್ತಿಕೊಂಡು
ತೀವ್ರ ಹೊರಟನು ವೈಜಕೆ ನೀ ಪೇಳಿದಂತೆ ೨೫
ಶೇಷದೇವನು ಹೆಡೆಯ ಕೊಡೆಯಂತೆ ಪಿಡಿಯಲು
ಆಶ್ಚರ್ಯವಲ್ಲ ನದಿ ಮಾರ್ಗ ಬಿಟ್ಟಿದ್ದು
ಯಶೋದೆ ಸುಪ್ತಿಯಲಿರೆ ಮಗ್ಗುಲಲಿ ಮಲಗಿಸಿ
ವಸುದೇವ ಎತ್ತಿಪೋದನು ಅವಳ ಮಗಳ ೨೬
ಯಶೋದೆಯ ಹೆಣ್ಣುಮಗು ಶಿಶುರೂಪ ದುರ್ಗೆಯ
ವಸುದೇವ ತಂದು ದೇವಕಿ ಬದಿ ಇಡಲು
ಪ್ರಸವ ಸುದ್ದಿಯ ಕೇಳಿ ಕಂಸ ಆರ್ಭಟದಿಂದ
ಶಿಶುವು ಹೆಣ್ಣಾದರೂ ಎತ್ತಿ ಶಿಲೆಯ ಹೊಡೆದ ೨೭
ಅಂಬರದಿ ದಿವ್ಯ ರತ್ನಾಭರಣ ಭೂಷಿತೆ
ಕಂಬು ಚಕ್ರಾದಿಧರೆ ಅಷ್ಟ ಮಹಾಭುಜೆಯು
ಅಂಬಾ ಮಹಾದುರ್ಗಾ ಭಗವತೀ ಮಯಾದೇವಿ
ಅಂಭ್ರಣೀ ನಿಂತಳು ದೇವಗಾಯಕರು ಸುತ್ತಿಸೇ ೨೮
ಕಂಸನ್ನ ಎಚ್ಚರಿಸಿ ಭಗವತಿ ತೆರಳಲು
ಕಂಸನು ಪರಮ ವಿಸ್ಮಿತನಾಗಿ ಬೇಗ
ವಸುದೇವ ದೇವಕಿಯ ನಿಗೂಢ ಬಂಧನ ಬಿಡಿಸಿ
ಅಸುರ ಮಂತ್ರಿಗಳೊಡೆ ಆಲೋಚಿಸಿದನು ೨೯
ನಂದ ಯಶೋದೆಯು ತಮ್ಮ ಶಿಶು ನೀನೆಂದು
ನಂದ ಆನಂದದಿ ವಿಪ್ರ ವೈದಿಕರ ಕರೆದು
ಅಂದದಿ ಪಿತೃ ದೇವತಾರ್ಚನೆಗಳ ಮಾಡಿಸಿ
ಚೆಂದದಿ ಅಲಂಕೃತ ಧೇನುಗಳ ಕೊಟ್ಟ ೩೦
ಜಯತು ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತ
ಜಯತು ಪೂರ್ಣಪ್ರಜ್ಞ ಹೃತ್ ಪದ್ಮ ಸಂಸ್ಥ
ಜಯತು ಜಗಜ್ಜನ್ಮಾದಿಕರ್ತ ಜಗನ್ನಾಥ
ಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ ೩೧
-ಇತಿ ಪ್ರಥಮಾಧ್ಯಾಯ ಸಂಪೂರ್ಣಂ –

ದ್ವಿತೀಯ ಅಧ್ಯಾಯ
ಬಾಲಲೀಲಾಸಾರ
ಪೂರ್ಣ ಸುಗುಣಾರ್ಣವನೇ ಅನಘ ಮಾಯಾರಮಣ
ಆನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥ
ಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯ
ಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪ
ಸಣ್ಣ ಶಿಶುರೂಪ ನೀ ಪೂತನೀ ಶಕಟ
ತೃಣಾವರ್ತರ ಕೊಂದಿ ನಮೋ ಅಮಿತಶೌರಿ
ನಿನ್ನ ಸುಂದರ ಮುಖದಿ ಪ್ರಪಂಚ ಗಗನಾದಿಗಳ
ಕಾಣಿಸಿದಿ ಮಾತೆಗೆ ನಮೋ ವಿಶ್ವ ವಿಷ್ಣೋ ೧
ಗರ್ಗಾದಿ ವಿಬುಧರು ಯೋಗ್ಯ ಸಜ್ಜನರೆಲ್ಲ
ಅಗಣಿತ ಮಹಿಮ ಶ್ರೀ ವಿಷ್ಣು ನೀ ಎಂದು
ಭಕುತಿಯಿಂದಲಿ ನಿನ್ನ ಬಾಲಲೀಲೆ ನೋಡೆ
ಕಾಕು ದುರ್ಮತಿಗಳು ದ್ವೇಷ ಬೆಳೆಸಿದರು ೨
ಕಂಸ ಜರಾಸಂಧ ಕಾಲಯವನ ಕಲಿಯ
ಅಸುರ ಭೃತ್ಯರು ಬಂದು ನಿನ್ನ ನಿನ್ನವರನ್ನ
ಹಿಂಸಿಸಬೇಕೆಂದು ಆಗಾಗ ಯತ್ನಿಸಲು
ದ್ವಂಸ ಮಾಡಿದಿ ಅವರನ್ನ ಸಜ್ಜನ ಪೊರೆದಿ ೩
ವತ್ಸ ಬಕ ಅಘ ಧೇನುಕ ಪ್ರಲಂಬಾರಿಷ್ಟ
ಕೇಶಿ ಕಮಲಯ ಪೀಡಾ ಮುಷ್ಟಿಕ ಚಾಣೂರ
ಕಂಸಾದಿ ಅಸುರರ ಸದೆದು ಮುದ್ದೆಯ ಮಾಡಿ
ವಸುಮತಿಯ ಸಾಧುಗಳ ಭಯ ನಿವಾರಿಸಿದಿ ೪
ಬಲವಂತ ರಾಮ ಸಹ ಅಮಿತ ಪೌರುಷ ನೀನು
ಬಲಿಷ್ಠ ಅಸುರರ ಅಳಿದು ಭೂಭಾರ ಇಳಿಸಿ
ಶೀಲ ಭಕ್ತರಿಹಪರಸುಖ ಒದಗಿಸಿದಿ
ಬಲರಾಮ ಕೃಷ್ಣ ನಮೋ ಫಣಿಪ ವಿಷ್ಣೋ ೫
ಯಮಳಾರ್ಜುನೋದ್ಧಾರ ದಾವಾಗ್ನಿಯಿಂದ ನೀ
ಸಂರಕ್ಷಿಸಿದಿ ವೃಜಗೋಪ ಜನರ
ನಿನ್ನ ಮಹಿಮೆ ಏನೆಂಬೆ ವರುಣನಾಲಯದಿಂದ
ಸಮ್ಮುದದಿ ನಂದನ್ನ ಕರತಂದಿ ಅಜಿತ ೬
ನಾಗ ಪತ್ನೀಯರು ಬಂದು ನಮಸ್ತುಭ್ಯಂ
ಭಗವತೇ ಪೂರುಷಾಯ ಮಹಾತ್ಮನೇ ಎಂದು
ಅಗುಣ ಅವಿಕಾರ ನಿನ್ನನ್ನು ಭಕ್ತಿಯಿಂ ಸ್ತುತಿಸೆ
ನಾಗನೂ ಸಹ ಸ್ತುತಿಸೆ ಅನುಗ್ರಹ ಮಾಡಿದಿಯೋ ೭
ಶ್ರೀಧರನೇ ನಿನ್ನಯ ವೇಣುನಾದದ ಸುಧೆಯ
ಮಾಧುರ್ಯ ರಸವನ್ನು ವರ್ಣಿಸಲಶಕ್ಯ
ಶ್ರೀದೇವಿ ಕೊಳಲೂಳು ಪ್ರವೇಶಿಸಿ ನಿನ್ನ ಅರ-
ವಿಂದ ಮುಖದ ಆನಂದ ಸವಿದು ಸುಖಿಸುವಳು ೮
ಪಾಲು ಬೆಣ್ಣೆ ಪ್ರಿಯ ಕಳ್ಳ ಮುದ್ದು ಕೃಷ್ಣ
ಗೊಲ್ಲತಿಯರ ಸಹ ಸಲ್ಲಾಪಿಸುವ ಎಂಬ
ಸೊಲ್ಲಿನ ತತ್ವವ ಬಲ್ಲವರೇ ಬಲ್ಲರು
ಫಲಿ ನಮೋ ಪಾಲ್ಬೆಣ್ಣೆ ಗೋಪಿಜನ ಪ್ರಿಯ ೯
ಅತ್ಯಲ್ಪ ಅಸುರ ಆವೇಶ ಸುರರಿಗೆ ಎಂದು
ಮುಖ್ಯ ವಾಯು ಅಖನರ್ಮ ಸಮಗಿಲ್ಲ
ಹೊಯ್ಯಿಸೆ ಮಳೆ ಶಕ್ರ ನೀ ಲೀಲೆಯಂ ಗೌರಿ ಎತ್ತಿ
ಕಾಯ್ದಿ ಗೋಜನಗಳ ಅನ್ನದ ಅನ್ನಾದ ೧೦
ಭಕ್ತಿ ಉಕ್ಕಿ ನಿನ್ನಲ್ಲಿ ಕೂಡಿ ಕ್ರೀಡಿಸುವ
ಸದ್ಧರ್ಮವರ್ತಿಗಳ ಸ್ವಸ್ವಯೋಗ್ಯತೆಯಿಂ
ರಾಧಾದಿ ಗೋಪಿಗಳ ಅನಂದ ಉಕ್ಕಿಸಿ ಸ್ವರತ
ಇಂದಿರಾಪತಿ ಗೋವಿಂದ ಗೋ ಕಾಯ್ದ ೧೧
ಅಧಿಕಾರಿ ತ್ರಿವಿಧರಲಿ ತಾರತಮ್ಯ ಉಂಟು
ಅದರಂತೆ ಭಕ್ತಿಯಲಿ ಅವರೋಚ್ಯ ಉಂಟು
ಭಕ್ತಿ ಸಾಧನದಂತೆ ಯೋಗ್ಯ ಸುಖ ಓದಗಿಸಿದಿ
ಮಂದಗಮನೆಯರಿಗೆ ರಾಸಕ್ರೀಡೆಯಲಿ ೧೨
ನಂದ ವ್ರಜ ಗೋಕುಲ ಮಥುರೆ ಬೃಂದಾವನ
ಚಂದ್ರ ಯಮುನೆ ವನ ಲತೆ ಪುಷ್ಪ ವೃಕ್ಷ
ಸಿಂಧು ದ್ವಾರಕೆ ವಂಶಯಷ್ಠಿ ಗೋ ಸರ್ವರಿಗೂ
ವಂದಿಸುವೆ ಕೃಷ್ಣ ಸಂಬಂಧಿಗಳು ಎಂದು ೧೩
ವಿದ್ಯಾಧರ ಸುದರ್ಶನನು ಶಾಪದಿ ಅಹಿಯು
ನಂದನ್ನ ಕಾಯ್ದಿ ಆ ಅಹಿಯ ಬಾಯಿಂದ
ಪಾದ ಸ್ಪರ್ಶವ ಕೊಟ್ಟು ಶಾಪ ವಿಮೋಚನೆ ಮಾಡಿ
ಸ್ತುತಿಸಿ ಕೊಂಡಿಯೋ ಮಹಾಪೂರುಷ ಸತ್ಪತಿಯೇ ೧೪
ಅಕ್ರೂರ ಕುಬ್ಜ ಉದ್ಧವಗೆ ಅನುಗ್ರಹಿಸಿ
ದುರುಳ ವ್ರಜನ ಶಿರವ ಕತ್ತರಿಸಿ ಬಿಸುಟು
ವಿಪ್ರ ನಾರಿಯರ ಅನ್ನ ಉಂಡು ಒಲಿದಂತೆ
ಕ್ಷಿಪ್ರ ವಾಯಕ ಗೊಲಿದಿ ಮಾಲಾಕಾರನಿಗೂ ೧೫
ಬಲಿಷ್ಠ ಮಲ್ಲಾದಿಗಳ ಕುಟ್ಟಿ ಹೊಡೆದು ಕೊಂದು
ಖಳ ದುಷ್ಟ ಕಂಸನ್ನ ದ್ವಂಸ ಮಾಡಿದಿಯೋ
ಒಳ್ಳೇ ಮಾತಿಂದ ಮಾತಾಪಿತರ ಆಶ್ವಾಸಿದಿ
ಬಲರಾಮ ಕೃಷ್ಣ ನಮೋ ಪಾಹಿ ಸಜ್ಜನರ ೧೬
ಉಗ್ರಸೇನಗೆ ರಾಜ್ಯವನು ಒಪ್ಪಿಸಿ ನೀನು
ಗುರುವಿನ ಮೃತ ಪುತ್ರನ್ನ ಕರೆತಂದಿ
ಜರಾಸುತನ ಸಹ ಯುದ್ಧ ಮಾಡಿ ಬೇಗನೇ ನೀನು
ನಿರ್ಮಾಣಿಸಿದಿ ದ್ವಾರಕೆಯ ಕಡಲ ಮಧ್ಯ ೧೭
ಈರಾರು ಯೋಜನವು ದ್ವಾರಕಾ ದುರ್ಗವು
ಸ್ಫುರಧೃಮ ಲತೋದ್ಯಾನ ವಿಚಿತ್ರೋಪ ವನಗಳ್
ಪುರಟ ಶೃಂಗೋನ್ನತ ಸ್ಫಟಿಕಾ ಅಟ್ಟಾಳಗಳ್ ಗೋ –
ಪುರಗಳು ನವರತ್ನ ಸ್ವರ್ಣಮಯ ಗೃಹಗಳು ೧೮
ಮುಚುಕುಂದ ಶಯನಿಸಿದ ಗುಹೆಯೋಳ್ ನೀ ಪೋಗೆ
ನೀಚ ದುರ್ಮತಿ ಕಾಲಯವನ ಹಿಂಬಾಲಿಸಿ
ಮುಚುಕುಂದನ್ನ ನೋಡಿ ನೀನೇವೇ ಎಂದು ಹೊಡಿಯೇ
ಭಸ್ಮವಾದನು ಅಲ್ಲೇ ರಾಜ ಕಣ್ತೆರೆದು ೧೯
ನೃಪನು ನಿನ್ನ ಸ್ತುತಿಸಿ ಅನುಗ್ರಹ ಪಡೆದು
ಸುಪವಿತ್ರ ನರನಾರಾಯಣ ಕ್ಷೇತ್ರಯೈದೇ
ಉಪಾಯದಿಂದಲಿ ಮಾಗಧನ ಸಮ್ಮೋಹಿಸಿ
ನೀ ಬಲರಾಮ ಸಹ ಸ್ವಪುರ ಸೇರಿದಿಯೋ ೨೦
ವನಜಸಂಭವ ಪ್ರೇರಿಸಲು ರೇವತರಾಜ
ಅನರ್ತ ದೇಶಾಧಿಪತಿಯು ಶ್ರೀಮಂತ
ತನ್ನ ಸುತೆ ರೇವತಿಯು ನಮ್ಮ ಬಲರಾಮನಿಗೆ
ಧನ್ಯ ಮನದಲಿ ಕೊಟ್ಟು ಮದುವೆ ಮಾಡಿದನು ೨೧
ಸುಧಾ ಕಲಶವ ಗರುಡ ಕಿತ್ತಿ ತಂದಂತೆ