Loading Events

« All Events

  • This event has passed.

ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ

August 26, 2023

೨೬..೧೯೩೩ ಹಳಗನ್ನಡ ಭಾಷಾ ಸಾಹಿತ್ಯದ ಬಗ್ಗೆ, ಶಾಸ್ತ್ರವಿಚಾರಗಳಾದ ಛಂದಸ್ಸು, ವ್ಯಾಕರಣಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ವಿದ್ವಾಂಸರಲ್ಲಿ ಒಬ್ಬರೆನಿಸಿರುವ ವೆಂಕಟಾಚಲಶಾಸ್ತ್ರಿಗಳು ಹುಟ್ಟಿದ್ದು ಕನಕಪುರದಲ್ಲಿ ೧೯೩೩ರ ಆಗಸ್ಟ್‌ ೨೬ರಂದು. ತಂದೆ ತೋಗರೆ ಸುಬ್ಬಾಶಾಸ್ತ್ರಿ, ತಾಯಿ ಸುಬ್ಬಮ್ಮ. ಈಗಿನ ತಮಿಳುನಾಡಿಗೆ ಸೇರಿರುವ ಹೊಸೂರಿನ ಹತ್ತಿರವಿರುವ ಅಗ್ರಹಾರ ತೋಗರೆಯಿಂದ ಬಂದು ಕನಕಪುರದಲ್ಲಿ ನೆಲೆಗೊಂಡ ಕುಟುಂಬ. ಪ್ರಾರಂಭಿಕ ಶಿಕ್ಷಣ ಕನಕಪುರದಲ್ಲಿ. ಬಿ.ಎ. ಆನರ್ಸ್ ಹಾಗೂ ಎಂ.ಎ. ಪದವಿ ಪಡೆದದ್ದು ಮೈಸೂರು ಮಹಾರಾಜ ಕಾಲೇಜಿನಿಂದ. ಬೋಧನಾ ಕ್ಷೇತ್ರವನ್ನು ಆರಿಸಿಕೊಂಡು ಸೇರಿದ್ದು ಕನಕಪುರ ರೂರಲ್‌ ಕಾಲೇಜಿನಲ್ಲಿ ಅಧ್ಯಾಪಕರಾಗಿ. ನಂತರ ಬೆಂಗಳೂರಿನ ಸೇಂಟ್‌ ಜೋಸೆಫ್‌ ಕಾಲೇಜು, ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಸೇವೆ ಸಲ್ಲಿಸಿದ ನಂತರ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ (೧೯೬೮) ರೀಡರ್ ಆಗಿ, ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ, ಡೀನ್‌ ಆಗಿ ಕಾರ್ಯ ನಿರ್ವಹಿಸಿ ೧೯೯೪ ರ‍ಲ್ಲಿ ನಿವೃತ್ತಿ. ತಂದೆಯವರ ಪ್ರೋತ್ಸಾಹದಿಂದ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಬೆಳೆದು ಓದಿದ್ದು ಮಹಾಭಾರತ, ರಾಮಾಯಣ ಮತ್ತು ರಾಮಕೃಷ್ಣಾಶ್ರಮದ ಕೃತಿಗಳು. ಜೊತೆಗೆ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರುಗಳಾಗಿದ್ದ ರಾಘವೇಂದ್ರರಾವ್‌ ಮತ್ತು ಎಚ್‌.ಪಿ. ಶಿವರಾಮಯ್ಯನವರು ಹಾಕಿದ ಭದ್ರಬುನಾದಿ. ಕಾಲೇಜು ಸೇರಿದ ನಂತರ ಕುವೆಂಪು, ಡಿಎಲ್‌ಎನ್‌, ರಾಳ್ಲಪಲ್ಲಿ ಅನಂತಕೃಷ್ಣಶರ್ಮ ಮುಂತಾದವರುಗಳ ಶಿಷ್ಯರಾದ ಅದೃಷ್ಟ. ‘ಕನ್ನಡ ನೇಮಿನಾಥ್‌ ಪುರಾಣಗಳ ತೌಲನಿಕ ಅಧ್ಯಯನ’ ಎಂಬ ಪ್ರೌಢ ಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ (೧೯೭೨) ಶಾಸ್ತ್ರ ಸಾಹಿತ್ಯದ ನಿರಂತರ ಅಧ್ಯಯನ, ಬೋಧನೆ, ಸಂಶೋಧನೆಗಳಿಗೆ ಸಮಯವನ್ನೂ ಮೀಸಲಾಗಿಟ್ಟವರು. ಇವರ ವಿಶೇಷಾಸಕ್ತಿ ಕ್ಷೇತ್ರಗಳೆಂದರೆ ಭಾಷಾಶಾಸ್ತ್ರ, ಛಂದಸ್ಸು, ಗ್ರಂಥ ಸಂಪಾದನೆ, ನಿಘಂಟು ರಚನೆ, ಅಲಂಕಾರಶಾಸ್ತ್ರ, ಹಳಗನ್ನಡ ಸಾಹಿತ್ಯ, ಶಾಸನ ಸಾಹಿತ್ಯ, ಕನ್ನಡ ಸಾಹಿತ್ಯ ಚರಿತ್ರೆ, ಅರುಣೋದಯ ಕಾಲದ ಹೊಸಗನ್ನಡ ಸಾಹಿತ್ಯ ಮತ್ತು ಸಾಹಿತಿಗಳು- ಹೀಗೆ ವೈವಿಧ್ಯಮಯ ಅಧ್ಯಯನ ಮತ್ತು ಅಧ್ಯಾಪನ ಕಾರ್ಯ. ಕೇಶರಾಜನ ಶಬ್ದಮಣಿದರ್ಪಣದ ವಿದ್ವದಾವೃತ್ತಿಯ ವಸ್ತು ವಿವರಣೆ ನೀಡುವ ‘ದರ್ಪಣ ವಿವರಣ’ ಮತ್ತು ಕನ್ನಡ ಪ್ರಥಮ ವ್ಯಾಕರಣ ಎಂಬ ಪ್ರತ್ಯೇಕ ಕೃತಿಗಳು; ಛಂದಸ್ಸಿಗೆ ಸಂಬಂದಿಸಿದಂತೆ ‘ಕನ್ನಡ ಛಂದಸ್ಸು’, ‘ಕನ್ನಡ ಛಂದಃ ಸ್ವರೂಪ’, ‘ಕನ್ನಡ ಛಂದೋ ವಿಹಾರ’, ‘ಕನ್ನಡ ಛಂದೋ ಮೀಮಾಂಸೆ’ ಮತ್ತು ಛಂದೋಂಬುಧಿ’ ಎಂಬ ಐದು ಕೃತಿಗಳು; ಶಾಸ್ತ್ರ ವಿಷಯಕ ವಿದ್ವತ್ತಿಗೆ ಕಳಶವಿಟ್ಟಂತೆ ‘ಕನ್ನಡ ಚಿತ್ರಕಾವ್ಯ’ ಎಂಬ ಸಂಶೋಧನ ಗ್ರಂಥವನ್ನೂ ಪ್ರಕಟಿಸಿದ್ದಾರೆ. ಸಂಸ್ಕೃತ ಸಾಹಿತ್ಯದಲ್ಲಿ ಸಮೃದ್ಧವಾಗಿರುವ ಹಳಗನ್ನಡ ಕವಿಗಳನ್ನು ಸಾಕಷ್ಟು ಆಕರ್ಷಿಸಿರುವ ಒಂದು ಕಾವ್ಯಪ್ರಕಾರ. ಶಾಸ್ತ್ರಿಗಳು ಇದನ್ನೂ ಒಂಬತ್ತು ಅಧ್ಯಾಯಗಳಲ್ಲಿ ಸೆರೆಹಿಡಿದು ವಿವರಿಸಿ ವಿಶ್ಲೇಷಿಸಿರುವ ಕೃತಿ ‘ಕನ್ನಡ ಚಿತ್ರಕಾವ್ಯ’. ಇದು ಶಾಸ್ತ್ರೀಯವರ ಆಚಾರ್ಯ ಕೃತಿಯೂ ಹೌದು. ಶಾಸ್ತ್ರಿಗಳ ಪ್ರೀತಿಯ ಮತ್ತೊಂದು ಕ್ಷೇತ್ರವೆಂದರೆ ನಿಘಂಟು ರಚನೆ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟು ಸಂಪಾದಕ ಮಂಡಲಿಯ ಸದಸ್ಯರಾಗಿ, ಪರಿಷತ್ತು ಪ್ರಕಟಿಸಿರುವ ಜೇಬಿನಾಕಾರದ ಕನ್ನಡ ರತ್ನಕೋಶದ ಸಹ ಸಂಪಾದಕರಾಗಿದ್ದಲ್ಲದೆ, ಗಜಶಾಸ್ತ್ರ ಶಬ್ದಕೋಶ ಮತ್ತು ಶ್ರೀವತ್ಸ ನಿಘಂಟು ಇವರ ಮತ್ತೆರಡು ಮಹತ್ವದ ನಿಘಂಟು ಶಾಸ್ತ್ರಕ್ಕೆ ಕೊಡುಗೆಗಳು. ಕನ್ನಡ ಸಾಹಿತ್ಯ ಇವರ ಮತ್ತೊಂದು ಕೊಡುಗೆ ಎಂದರೆ ಕನ್ನಡ ಸಾಹಿತ್ಯ ಚರಿತ್ರೆ. ಸ್ವರೂಪ, ಸಮೀಕ್ಷೆ, ನಾಡು-ನುಡಿಯಿಂದ ಹಿಡಿದು ಕವಿಕಾವ್ಯ ವಿಚಾರವಾಗಿ (೧೪ನೇ ಶತಮಾನದ ಕವಿ ಭಾಸ್ಕರನವರೆಗೆ) ಐದು ಸಂಪುಟಗಳಲ್ಲಿ ಹಾ.ಮಾ. ನಾಯಕರೊಡನೆ ಸಂಪಾದಿಸಿರುವ ಕನ್ನಡ ಸಾಹಿತ್ಯ ಚರಿತ್ರೆ, ಸಾಹಿತ್ಯಾಭ್ಯಾಸಿಗಳ ಮಾರ್ಗದರ್ಶಕ ಕೃತಿ. ಒಂದು ಜನ ಸಮುದಾಯದ ಸಂಸ್ಕೃತಿ-ಉಪಸಂಸ್ಕೃತಿಗಳ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಮಾದರಿಯಾಗಬಲ್ಲಂತಹ ಸಾಂಸ್ಕೃತಿಕ ಮಹತ್ವದ ಕೃತಿ ‘ಮೂಲಕನಾಡು ಬ್ರಾಹ್ಮಣರು’, ಇದಲ್ಲದೆ ವ್ಯಕ್ತಿ ಚಿತ್ರಗಳು, ಆತ್ಮಕಥೆಗಳು-ಜೀವನ ಚರಿತ್ರೆಗಳಿಂದಾಯ್ದ ಉದಾತ್ತ ಮಾನವೀಯ ಮೌಲ್ಯಗಳಿಂದ ಕೂಡಿದ ಘಟನೆಗಳ ‘ಉದಾರ ಚರಿತರು-ಉದಾತ್ತ ಪ್ರಸಂಗಗಳು’, ಎ.ಆರ್. ಕೃಷ್ಣಶಾಸ್ತ್ರಿ, ಸರ್. ಎಂ.ವಿ, ಸಾಹಿತ್ಯಶಿಲ್ಪಿಗಳು, ಡಾ.ಎ. ವೆಂಕಟಸುಬ್ಬಯ್ಯ, ಎಂ. ಶಾಮರಾಯರು, ಡಾ.ಆರ್, ಶಾಮಾಶಾಸ್ತ್ರಿ ಮುಂತಾದವರುಗಳ ವ್ಯಕ್ತಿ ಚಿತ್ರ ಕೃತಿಗಳು; ಚಿಂತನ ಬರಹಗಳ ಸಂಕಲನ ‘ಮೆಲುಗಾಳಿಯ ಮಾತುಗಳು’ವಿನೋದ ಪ್ರಸಂಗಗಳ ಸಂಕಲನ ಸದ್ದೆಂತೆಂಬರ ಗಂಡ, ಕಾವ್ಯ ಚಿತ್ರಗಳು, ಸ್ವತಂತ್ರ ನಾಟಕ ಕೃತಿ ‘ಕಂಸ’, ಹಳಗನ್ನಡ ರೂಪಾಂತರ ವಾದ ಮಿತ್ರವಿಂದ ಗೋವಿಂದ, ಗ್ರೀಕ್‌ ಪ್ರಹಸನಗಳ ಅನುವಾದದ ಟ್ರಾಕಿಯ ಪೆಣ್ಗಳ್‌ ಮತ್ತು ಬದ್ಧ ಪ್ರಮಿತ್ಯೂಸ್‌ ಮುಂತಾದ ಕೃತಿಗಳಲ್ಲದೆ ಸಪ್ನಬುಕ್‌ಹೌಸ್‌ಗಾಗಿ ಶಬ್ದಾರ್ಥವಿಚಾರ, ಗ್ರಂಥಸಂಪಾದನೆ, ವ್ಯಾಕರಣ, ವಿಮರ್ಶೆ, ವ್ಯಕ್ತಿ ಚಿತ್ರಗಳು, ಲೇಖನಗಳು, ಭಾಷಣಗಳು ಮುಂತಾದವುಗಳ ೮ ಸಂಪುಟಗಳು, ಪಂಪ, ನಮ್ಮ ಕರ್ನಾಟಕ, ಹಳೆಯಹೊನ್ನು ಸೇರಿ ಸುಮಾರು ೧೦೦ ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಹೀಗೆ ನಿರಂತರವಾಗಿ ಸಂಶೋಧನೆಯಲ್ಲಿ ನಿರತರಾಗಿದ್ದು, ನೂರಾರು ಲೇಖನಗಳನ್ನು ಬರೆದು, ಶಾಸ್ತ್ರ ಸಂಬಂಧಿ ಗ್ರಂಥಗಳ ಪ್ರಕಟಣೆಯಲ್ಲಿ ತೊಡಗಿದ್ದು, ಹಲವಾರು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂಪಾದಕ, ಸಮಾಲೋಚಕ,ಸಮಿತಿಯ ಸದಸ್ಯರಾಗಿರುವುದರ ಜೊತೆಗೆ ಹಲವಾರು ವಿದೇಶಿ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳೊಡನೆ ಸಂಪರ್ಕ ಹೊಂದಿರುವ ಶಾಸ್ತ್ರಿಯವರಿಗೆ ಕನ್ನಡ ಛಂದಃ ಸ್ವರೂಪಕೃತಿಗೆ ತಮ್ಮಣ್ಣರಾವ ಅಮ್ಮಿನ ಭಾವಿ ಸ್ಮಾರಕ ಪ್ರಶಸ್ತಿ (೧೯೭೮), ವನಮಾಲಿ ಪ್ರಶಸ್ತಿ, ಚಿತ್ರಕಾವ್ಯಕೃತಿಗೆ ಗ್ರಂಥ ಲೋಕದ ವರ್ಷದ ಲೇಖಕ ಪ್ರಶಸ್ತಿ (೧೯೮೭), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೮), ಕನ್ನಡ ಛಂದಸ್ಸು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ (೧೯೯೬), ಶ್ರವಣ ಬೆಳಗೊಳದ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ (೧೯೯೬), ಸೇಡಿಯಾವು ಕೃಷ್ಣಭಟ್ಟ ಪ್ರಶಸ್ತಿ (೧೯೯೮), ಚಿದಾನಂದ ಪ್ರಶಸ್ತಿ (೨೦೦೧), ಕೇಂದ್ರ ಸಾಹಿತ್ಯ ಅಕಾಡಮಿ ಭಾಷಾ ಸನ್ಮಾನ ಪ್ರಶಸ್ತಿ (೨೦೦೧), ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಸ್ಥಾಪಿಸಿರುವ ಚಾವುಂಡರಾಯ ಪ್ರಶಸ್ತಿ (೨೦೦೩), ಆಳ್ವಾಸ್‌ ನುಡಿಸಿರಿ ಪ್ರಶಸ್ತಿ (೨೦೦೫), ಆರ್ಯಭಟ ಪ್ರಶಸ್ತಿ (೨೦೦೬), ಮಾಸ್ತಿ ಪ್ರಶಸ್ತಿ (೨೦೦೭), ಪಂಪ ಪ್ರಶಸ್ತಿ (೨೦೦೮) ಮುಂತಾದ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದು; ಸ್ನೇಹಿತರು, ಅಭಿಮಾನಿಗಳು, ಶಿಷ್ಯರು ಸೇರಿ ‘ಶ್ರೀಮುಖ’ (೧೯೯೭), ‘ಕನ್ನಡದ ಮೇರು’ (೨೦೦೮) ಮತ್ತು ‘ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರಿಯವರ ಬದುಕು-ಬರೆಹ’ (೨೦೦೮) ಎಂಬ ಮೂರು ಅಭಿನಂದನ ಗ್ರಂಥಗಳನ್ನು ಅರ್ಪಿಸಿ ಶತಮಾನದ ಬಹುದೊಡ್ಡ ವಿದ್ವಾಂಸರೆಂದು ಕನ್ನಡಿಗರು ಗೌರವಿಸಿದ್ದಾರೆ.

Details

Date:
August 26, 2023
Event Category: