Loading Events

« All Events

  • This event has passed.

ದಿನಕರ ದೇಸಾಯಿ

September 10, 2023

೧೦-೯-೧೯೦೯ ೬-೧೧-೧೯೮೨ ಚುಟಕು ಪದ್ಯಗಳಿಂದ, ಅಣಕು ಸಾಹಿತ್ಯದ ಮೂಲಕ ಜನ ಜಾಗೃತಿಯನ್ನುಂಟು ಮಾಡಿ, ಚುಟಕು ಬ್ರಹ್ಮರೆನಿಸಿದ್ದ ದಿನಕರ ದೇಸಾಯಿಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲ್ಲೂಕಿನ ಅಂತರವಳ್ಳಿ ಗ್ರಾಮದ ಹಂಡದೊಕ್ಕಲ ದೇಸಾಯರ ಮನೆತನದಲ್ಲಿ. ತಂದೆ ದತ್ತಾತ್ರೇಯ, ತಾಯಿ ಅಂಬಿಕೆ. ಪ್ರಾರಂಭಿಕ ಶಿಕ್ಷಣ ಕಾರವಾರಮತ್ತು ಅಂಕೋಲೆಯಲ್ಲಿ. ಮೈಸೂರು ಮಹಾರಾಜ ಕಾಲೇಜಿನಿಂದ ಪಡೆದ ಪದವಿ. ಮುಂಬಯಿ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಮತ್ತು ಕಾನೂನು ಪದವಿ ಪಡೆದು ಬೆಳಗಾವಿಯಲ್ಲಿ ವಕೀಲಿ ವೃತ್ತಿ ಪ್ರಾರಂಭ. ವಿದ್ಯಾರ್ಥಿ ದೆಸೆಯಲ್ಲಿಯೇ ಹುಟ್ಟಿದ ಸಾಹಿತ್ಯಾಭಿಲಾಷೆ. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಕುಮಟಾದಿಂದ ಪ್ರಕಟವಾಗುತ್ತಿದ್ದ ‘ಕಾನಡಾ ಧುರೀಣ’ ಪತ್ರಿಕೆಗೆ ಬರೆದ ಕವನಗಳನ್ನು ಸಂಪಾದಕರಾದ ಶ್ರೀರಾಮ ಗಣೇಶಯಾಜಿ ಪ್ರಕಟಿಸಿ ತೋರಿದ ಪ್ರೋತ್ಸಾಹ. ಮುಂದೆ ವಿ.ಸೀ., ಬಿ.ಎಂ.ಶ್ರೀ.ಯವರ ಮಾರ್ಗದರ್ಶನ. ಚುಟಕ ಬರೆಯುವ ಮುನ್ನ ಬರೆದ ಕವನಗಳ ಕವನ ಸಂಗ್ರಹ ‘ಹೂಗೊಂಚಲು’ ಎಂಬ ಹೆಸರಿನಿಂದ ಸಂಕಲನ ಪ್ರಕಟಿತ. ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಬರೆದ ಮಕ್ಕಳ ಕವನಗಳು. ಮಕ್ಕಳ ಪದ್ಯಗಳು ಮತ್ತು ಮಕ್ಕಳ ಗೀತೆಗಳ ಪ್ರಕಟಣೆ. ಇದರಲ್ಲಿದ್ದ ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ, ಅಕ್ಕನ ಬಂಡಿ, ಗಡಿಯಾರ ಮಕ್ಕಳ ಜನಪ್ರಿಯ ಪದ್ಯಗಳು. ಅಣಕು ಸಾಹಿತ್ಯದ ಮುಖಾಂತರ ಸಮಾಜದ ಪರಿವರ್ತನೆಗೆ ಶ್ರಮಿಸಿ ಬರೆದ ನೂರಾರು ಚುಟಕಗಳು. ಹೀಗೆ ಬರೆಯಲು ಸರ್ವಜ್ಞನ ತ್ರಿಪದಿಗಳು, ಆಂಗ್ಲ ಕವಿ ಬ್ಲೇಕನ್ ದ್ವಿಪದಿ ಮತ್ತು ಚೌಪದಿಗಳ ಪ್ರೇರಣೆ. ೨೦೦೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ‘ದಿನಕರ ಚೌಪದಿ’ಯ ೫೦೦ ಪುಟದ ಗ್ರಂಥವನ್ನು ಮರುಮುದ್ರಿಸಿ ತೋರಿದ ಗೌರವ. ಇಂಗ್ಲಿಷ್‌ನಲ್ಲಿ ಪ್ರೈಮರಿ ಎಜುಕೇಶನ್ ಇನ್ ಇಂಡಿಯಾ, ಮ್ಯಾರಿಟೈಮ್ ಲೇಬರ್ ಇನ್ ಇಂಡಿಯಾ, ಮಹಾಮಂಡಲೇಶ್ವರ ಅಂಡರ್ ದಿ ಚಾಲುಕ್ಯಾಸ್ ಕೃತಿ ರಚನೆ. ಪ್ರವಾಸಕಥನ-ನಾ ಕಂಡ ಪಡುವಣ. ಬಾಲ್ಯದಿಂದಲೇ ಬಡತನವನ್ನು ಕಂಡ ಬದುಕು. ಸಮಾಜದಲ್ಲಿ ನೊಂದವರಿಗೆ, ಬಡವರಿಗೆ ಆಸರೆಯಾಗಲು ಕೈಗೊಂಡ ಸಮಾಜ ಸೇವೆ. ಭಾರತ ಸೇವಾ ಸಮಾಜದ ಮೂಲಕ ಕಾರ್ಮಿಕ ಸಂಘಟನೆ. ಕೆನರಾ ವೆಲ್‌ಫೇರ್ ಟ್ರಸ್ಟ್ ಸ್ಥಾಪಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮಗ್ರ ಶಿಕ್ಷಣಕ್ಕಾಗಿ ಪಟ್ಟ ಶ್ರಮ. ಇದಕ್ಕಾಗಿ ಸ್ಥಾಪಿಸಿದ್ದು ಹೈಸ್ಕೂಲುಗಳು, ಹೈಯರ್ ಸೆಕೆಂಡರಿ ಶಾಲೆಗಳು, ಕಾಲೇಜುಗಳ ಸಂಖ್ಯೆಯೇ ೨೧, ಆರು ಸಮಾಜ ಸೇವಾ ಸಂಸ್ಥೆಗಳ ಸ್ಥಾಪನೆ. ಲೋಕಸಭಾ ಸದಸ್ಯರಾಗಿಯೂ ಸಲ್ಲಿಸಿದ ಸೇವೆ. ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಮುಂಬೈ ಸರಕಾರದ ಬಹುಮಾನ, ಶ್ರೇಷ್ಠ ಪತ್ರಿಕೋದ್ಯಮ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ. ೧೯೭೧ರಲ್ಲಿ ಅರ್ಪಿಸಿದ ಗೌರವ ಗ್ರಂಥ ‘ದಿನಕರ ದರ್ಶನ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಪಿ.ಆರ್. ರಾಮಯ್ಯ – ೧೮೯೪ ಪಿ.ಎಂ. ಮುತ್ತಯ್ಯ – ೧೯೨೬ ಆರ್. ರಾಚಪ್ಪ – ೧೯೩೫ ಬಿ.ಜಿ. ಸತ್ಯಮೂರ್ತಿ – ೧೯೩೭ ಕರೀಗೌಡ ಬೀಚನಹಳ್ಳಿ – ೧೯೫೧

Details

Date:
September 10, 2023
Event Category: