‘ದತ್ತ’ ಮತ್ತು ‘ಆತ್ರೇಯ’ ಎರಡು ಪದಗಳು ಸೇರಿ ದತ್ತಾತ್ರೇಯ  ಆಗಿದೆ. ಅಂದರೆ ದತ್ತನು ಅತ್ರಿಯ ಮಗ ಆತ್ರೇಯ. ದತ್ತ ಎಂದರೆ ಕೊಡುವುದು ಎಂದರ್ಥ. ಇಲ್ಲಿ ತನ್ನನ್ನು ತಾನೇ ಅತ್ರಿ-ಅನಸೂಯೆಯರಿಗೆ ಕೊಟ್ಟುಕೊಂಡು ‘ದತ್ತ’ನಾದನು.

ಅತ್ರಿ ಒಬ್ಬ ಋಷಿ. ಈತ ಬ್ರಹ್ಮನ ಏಳು ಮಕ್ಕಳಲ್ಲಿ ಒಬ್ಬ. ಈ ಜಗತ್ತಿನ ಸೃಷ್ಟಿಗಾಗಿ ತಪಸ್ಸು ಮಾಡುತ್ತಿದ್ದವನು. ಈತನ ಹೆಂಡತಿ ಅನಸೂಯೆ. ಈಕೆ ಮಹಾ ಪತಿವ್ರತೆ. ಪತಿವ್ರತೆ ಎಂದರೆ ತನ್ನ ಪತಿಯಲ್ಲಿ ನಿಷ್ಠೆ ಉಳ್ಳವಳು. ಗಂಡನಿಗೆ ಸುಖವಿರಬೇಕು, ಸಂತೋಷವಿರಬೇಕು ಎಂದೇ ಸದಾ ಯೋಚಿಸುವಳು, ಕೆಲಸ ಮಾಡುವಳು. ಇದೇ ಅವಳ ತಪಸ್ಸು. ಈ ತಪಸ್ಸೇ ಒಂದು ಮಹಾ ಶಕ್ತಿಯಾಗಿತ್ತು.

ಒಂದು ಸಂಜೆ

ಪ್ರತಿಷ್ಠಾನಗರ (ಈಗಿನ ಪೈಠಣ: ಮಹಾರಾಷ್ಟ್ರದಲ್ಲಿದೆ) ದಲ್ಲಿ ಇಂಥವಳೇ ಇನ್ನೊಬ್ಬ ಪತಿವ್ರತೆ ಇದ್ದಳು. ಅವಳ ಹೆಸರು ಸುಮತಿ. ಅವಳ ಗಂಡ ಕೌಶಿಕ. ಅವನು ತಪ್ಪುದಾರಿ ಹಿಡಿದ. ಸುಮತಿಯನ್ನು ಬಿಟ್ಟು ಹೊರಟುಹೋದ. ಅವನಿಗೆ ವಿಪರೀತ ಕಾಯಿಲೆ ಬಂದಿತು. ಮೈಯೆಲ್ಲಾ ಹುಣ್ಣಾಯಿತು. ಮತ್ತೆ ಸುಮತಿಯ ಬಳಿಗೇ ಬಂದ. ಅವಳು ತುಂಬ ಒಳ್ಳೆಯವಳು, ಕ್ಷಮಾಶೀಲೆ. ಅವನ ಹುಣ್ಣುಗಳನ್ನು ತೊಳೆದು ಔಷಧ ಹಾಕಿದಳು. ಒಳ್ಳೆಯ ಆಹಾರ ಕೊಟ್ಟಳು. ಅವನಿಗೆ ನಡೆಯಲು ಆಗುತ್ತಿರಲಿಲ್ಲ.

ಒಂದು ಸಂಜೆ ಸುಮತಿ ಅವನನ್ನು ತನ್ನ ಹೆಗಲ ಮೇಲೆ ಕುಳ್ಳಿರಿಸಿಕೊಂಡು ಹೊರಟಿದ್ದಳು.

ಇದೇ ಸಮಯದಲ್ಲಿ ಆ ನಗರದಲ್ಲಿ ಒಂದು ಘಟನೆ ನಡೆದಿತ್ತು. ದೊಡ್ಡ ಅಪರಾಧ ಮಾಡಿದವನೊಬ್ಬನಿಗೆ ಮರಣದಂಡನೆ ವಿಧಿಸಿದ್ದರು. ಆದರೆ ಅವನು ತಪ್ಪಿಸಿ ಕೊಂಡುಬಿಟ್ಟನು. ಅವನನ್ನು ರಾಜಭಟರು ಹುಡುಕಿಕೊಂಡು ಹೊರಟರು. ಒಂದು ಕಡೆ ಅಪರಾಧಿಯಂತೆ ಕಂಡ ಒಬ್ಬನನ್ನು ಹಿಡಿದು ತಂದರು. ರಾಜನು ವಿಚಾರ ಮಾಡದೆ ಅವನನ್ನು ಶೂಲಕ್ಕೆ ಏರಿಸುವಂತೆ ಅಪ್ಪಣೆ ಮಾಡಿದನು. ರಾಜಭಟರು ಕೂಡಲೇ ಅವನನ್ನು ಶೂಲಕ್ಕೆ ಹಾಕಿದರು. ಹೀಗೆ ಶಿಕ್ಷೆಗೆ ಒಳಗಾದವನು ನಿಜವಾಗಿ ಅಪರಾಧ ಮಾಡಿದವನಲ್ಲ , ಮಾಂಡವ್ಯನೆಂಭ ಋಷಿ . ಅವನು ತನ್ನ ಯೋಗಮಹಿಮೆಯಿಂದ ಶೂಲದ ಮೇಲಿದ್ದರೂ ಮರಣಕ್ಕೆ ತುತ್ತಾಗದೆ ನೇತಾಡುತ್ತಿದ್ದನು.

ಸೂರ್ಯನೆ, ಉದಯಿಸಬೇಡ

ಅದೇ ಮಾರ್ಗದಲ್ಲಿ ಪತಿಯನ್ನು  ಹೊತ್ತ ಸುಮತಿ ಬರುತ್ತಿದ್ದಳು. ಆಗ ಕತ್ತಲೋ ಕತ್ತಲೆ . ಒಬ್ಬರ ಮುಖ ಒಬ್ಬರಿಗೆ ಕಾಣಿಸದು. ಆಕೆ ಈ ಕತ್ತಲಲ್ಲಿ ನಡೆಯುತ್ತಿರುವಾಗ ಕೌಶಿಕನ ಕಾಲು ಶೂಲಕ್ಕೆ ತಾಗಿತು. ಅದರಿಂದ ಮಾಂಡವ್ಯನಿಗೆ ತುಂಬಾ ನೋವಾಯಿತು. ಋಷಿಗೆ ಕೋಪ ಬಂತು. ಅವನು ಕೂಡಲೇ “ಈ ಶೂಲಕ್ಕೆ ಕಾಲು ತಾಗಿಸಿದವನು ಸೂರ್ಯ ಹುಟ್ಟಿದೊಡನೆ ಸಾಯಲಿ” ಎಂದು ಶಾಪ ಕೊಟ್ಟನು.

ಇದು ಸುಮತಿಗೆ ಕೇಳಿಸಿತು. ಕಳವಳವಾಯಿತು. ಪತಿಯೇ ಸರ್ವಸ್ವ ಎಂದು ನಂಬಿದ ಪತಿವ್ರತೆಯಲ್ಲವೇ ಅವಳು? ಕೂಡಲೇ ಅವಳು “ಎಲೈ ಸೂರ್ಯನೇ, ನೀನು ಉದಯಿಸಬೇಡ. ನನ್ನ ಮಾತನ್ನು ಮೀರಿದರೆ ನೀನು ಸುಟ್ಟು ಬೀಳುವೆ” ಎಂದು ಶಾಪಕೊಟ್ಟಳು.

ಪತಿವ್ರತೆಯ ಶಕ್ತಿ ಮಹತ್ತಾದುದು. ಅವಳ ಶಾಪಕ್ಕೆ ಹೆದರಿ ಸೂರ್ಯ ಹುಟ್ಟಲೇ ಇಲ್ಲ. ಇದರಿಂದ ಜಗತ್ತೆಲ್ಲ ಕತ್ತಲಾಯಿತು. ಸಸ್ಯಗಳು ಬೆಳೆಯುವುದು ನಿಂತು ಹೋಯಿತು. ಎಲ್ಲ ಕೆಲಸಗಳೂ ನಿಂತುಹೋದವು.

ಅನಸೂಯೆಯೇ ಗತಿ

ಜನರ ಈ ಸಂಕಟವನ್ನು ನೋಡಿ ದೇವತೆಗಳಿಗೆ ಮರುಕ ಹುಟ್ಟಿತು. ಅವರು ಈ ಕಷ್ಟವನ್ನು ನಿವಾರಿಸೆಂದು ಬ್ರಹ್ಮನನ್ನು ಬೇಡಿದರು. ಬ್ರಹ್ಮನು “ಇದೆಲ್ಲ ಪತಿವ್ರತೆಯ ಶಾಪದ ಫಲ. ಇದನ್ನು  ಪರಿಹರಿಸಲು ಮಹಾಪತಿವ್ರತೆಯಾದ ಅನಸೂಯೆಯನ್ನೇ ಮೊರೆ ಹೋಗೋಣ” ಎಂದನು.

ಬ್ರಹ್ಮಾದಿ ದೇವತೆಗಳೆಲ್ಲ ಪ್ರತಿಷ್ಠಾನಗರದ ಬಳಿ ಇದ್ದ ಅತ್ರಿ ಋಷಿಯ ಆಶ್ರಮಕ್ಕೆ ಬಂದರು. ಅನಸೂಯಾದೇವಿಯನ್ನು ಕಂಡು ವಂದಿಸಿದರು. ಋಷಿ ದಂಪತಿಗಳಿಗೆ ಆಶ್ಚರ್ಯವೋ ಆಶ್ಚರ್ಯ. ಬ್ರಹ್ಮದೇವರು, ದೇವರಾಜ ಇಂದ್ರ ಮೊದಲಾದ ಎಲ್ಲ ದೇವತೆಗಳೂ ಇಳಿದು ಬಂದಿದ್ದಾರೆ! ಕಾರಣ ಕೇಳುವ ಮೊದಲೇ ದೇವತೆಗಳು ಹೇಳಿದರು : “ತಾಯಿ, ಕೌಶಿಕನ ಪತ್ನಿ ಸುಮತಿಯ ಶಾಪದಿಂದ ಸೂರ್ಯನು ಹುಟ್ಟದೆ ಮರೆಯಾಗಿದ್ದಾನೆ.  ಇದರಿಂದ ಲೋಕವೆಲ್ಲ ಅಸ್ತವ್ಯಸ್ತವಾಗಿದೆ. ಜನರು , ಪಶುಪಕ್ಷಿಗಳು ಹಾಹಾಕಾರ ಮಾಡುತ್ತಿವೆ. ಆದ್ದರಿಂದ ನೀನು ಪ್ರಸನ್ನಳಾಗಿ ಸುಮತಿಗೆ ತಿಳಿಯಹೇಳಬೇಕು. ಇದರಿಂದ ನಾವು ಉಪಕೃತರಾಗುವೆವು.

ಅತ್ರಿ-ಅನಸೂಯೆಯರು ದೇವತೆಗಳೊಡನೆ ಸುಮತಿಯ ಮನೆಗೆ ನಡೆದರು. ಸುಮತಿ ಅನಸೂಯೆಯನ್ನು ಆದರಿಸಿ, ಎಲ್ಲರನ್ನೂ ಸ್ವಾಗತಿಸಿದಳು. ಅನಸೂಯೆ ತಾನು ಬಂದುದೇಕೆ ಎಂಬುದನ್ನು ತಿಳಿಸಿದಳು. ಅನಸೂಯೆ ತಾನು ಬಂದುದೇಕೆ ಎಂಬುದನ್ನು ತಿಳಿಸಿದಳು. “ಇದು ದೇವಕಾರ್ಯ, ನೀನು ಮಾಡಿಕೊಡಬೇಕು. ಸೂರ್ಯನಿಗೆ ಕೊಟ್ಟ ಶಾಪ ಹಿಂತೆಗೆದುಕೊಂಡು ಲೋಕವನ್ನು ಉದ್ಧರಿಸು” ಎಂದಳು. “ನಿಜ. ಆದರೆ ಸೂರ್ಯನು ಉದಯಿಸಿದರೆ ನನ್ನ ಗಂಡನಿಗೆ ವಿಪತ್ತಲ್ಲವೆ? ಆತ ಹೋದರೆ ನನ್ನ ಸರ್ವಸ್ವವೂ ಹೋದಹಾಗೆ. ಶಾಪವನ್ನು ಹಿಂದಕ್ಕೆ ತೆಗೆದುಕೊಳ್ಳಲಾರೆ” ಎಂದುಬಿಟ್ಟಳು ಸುಮತಿ.

ಆಗ ಅನಸೂಯೆ, “ತಂಗೀ, ಸೂರ್ಯ ಹುಟ್ಟಿದರೆ ನಿನ್ನ ಗಂಡ ಸಾಯುವನು, ನಿಜ. ಆದರೆ ಆತನನ್ನು ನನ್ನ ಶಕ್ತಿಯಿಂದ ಮತ್ತೆ ಜೀವಿಸುವಂತೆ ಮಾಡುವೆ. ಈ ಮಾತು ನಿಶ್ಚಯ, ನಂಬು. ಕೂಡಲೇ ದೇವಕಾರ್ಯವನ್ನು ನಡೆಸಿಕೊಡು” ಎಂದಳು.

ಸುಮತಿ ಸೂರ್ಯನಿಗೆ ತಾನು ಕೊಟ್ಟ ಶಾಪವನ್ನು ಹಿಂತೆಗೆದುಕೊಂಡಳು. ಕೂಡಲೇ ಸೂರ್ಯನು ಹುಟ್ಟಿ ಬಂದನು. ಲೋಕವೆಲ್ಲ ಉತ್ಸಾಹ, ಸಂತೋಷದಲ್ಲಿ ಮುಳುಗಿತು. ಆಗಲೇ ಕೌಶಿಕನ ಪ್ರಾಣ ಹಾರಿಹೋಗಿ, ಸುಮತಿಯ ಮುಖ ಬಾಡಿತು. ಆಗ ಅನಸೂಯೆ ಅವಳಿಗೆ ಧೈರ್ಯ ಕೊಟ್ಟಳು. ಆಕೆಯ ಪಾತಿವ್ರತ್ಯ ಪ್ರಭಾವದಿಂದ ಕೌಶಿಕನು ಆರೋಗ್ಯವಂತನಾಗಿ, ಒಳ್ಳೇ ಮನಸ್ಸಿನವನಾಗಿ ಮತ್ತೆ ಬದುಕಿಬಂದನು. ಎಲ್ಲರಿಗೂ ಸಂತೋಷವಾಯಿತು.

ಹರಿ, ಹರ , ಬ್ರಹ್ಮರು ಮಕ್ಕಳಾಗಲಿ

ದೇವತೆಗಳು ಅನಸೂಯೆಯನ್ನು ಹೊಗಳಿದರು. ಅವರು “ಮಾತೆ, ನೀನು ದೇವತಾಕಾರ್ಯವನ್ನು ಮಾಡಿಕೊಟ್ಟೆ. ನಾವು ಸಂತುಷ್ಟರಾಗಿರುವೆವು. ನಿನಗೆ ಬೇಕಾದ ವರವನ್ನು ಕೇಳು, ಕೊಡುವೆವು” ಎಂದರು.

ಅನಸೂಯೆ, “ಹರಿ, ಹರ , ಬ್ರಹ್ಮರು ನನ್ನ ಮಕ್ಕಳಾಗಲಿ” ಎಂದು ಬೇಡಿದಳು. ದೇವತೆಗಳು “ಹಾಗೇ ಆಗಲಿ”  ಎಂದರು.

ಅದರಂತೆ ಅನಸೂಯೆಯ ಹೊಟ್ಟೆಯಲ್ಲಿ ತ್ರಿಮೂರ್ತಿಗಳು ಹುಟ್ಟಿದರು. ಬ್ರಹ್ಮನ ಅಂಶದಿಂದ ಚಂದ್ರನೂ, ವಿಷ್ಣುವಿನ ಅಂಶದಿಂದ ದತ್ತನೂ, ಈಶ್ವರನ ಅಂಶದಿಂದ ದುರ್ವಾಸನೂ ಹುಟ್ಟಿದರು.

ಕನ್ಯಾಕುಮಾರಿಯ ಹೆಸರನ್ನು ಎಲ್ಲರೂ ಬಲ್ಲರು. ಅದು ನಮ್ಮ ಭಾರತ ಮಾತೆಯ ಪದತಲ. ಮೂರು ಸಮುದ್ರಗಳು ಸೇರುವ ಸ್ಥಳ ಇದೊಂದೇ. ಇಲ್ಲಿಂದ ಆರು ಮೈಲಿ ದೂರದಲ್ಲಿ ‘ಸುಚೀಂದ್ರ’ ಎಂಬ ಸ್ಥಳವಿದೆ. ಅಶುಚಿಯಾದ ಇಂದ್ರ ಇಲ್ಲಿನ ತೀರ್ಥದಲ್ಲಿ ಸ್ನಾನಮಾಡಿ ಶುಚಿಯಾದನಂತೆ. ಅದಕ್ಕೇ ಆ ಹೆಸರು. ಇದು ಅತ್ರಿ ಅನಸೂಯೆಯರ ಆಶ್ರಮವಿರುವ ಸ್ಥಾನ . ಇಲ್ಲಿನ ದೇವರು ‘ಸ್ಥಾಣುಮಾಲೈಯರ್’ ಅಂದರೆ ತ್ರಿಮೂರ್ತಿ ಸ್ವರೂಪನಾದ ದತ್ತಾತ್ರೇಯ.

ಅನಸೂಯಾದೇವಿ ತನ್ನ ಮೂರು ಮಕ್ಕಳನ್ನೂ ಲಾಲಿಸಿದಳು, ಪಾಲಿಸಿದಳು. ಮಕ್ಕಳು ಬೆಳೆದು ದೊಡ್ಡವರಾದರು. ಆಗ ತಂದೆತಾಯಿಯರ ಅಪ್ಪಣೆ ಪಡೆದು ಚಂದ್ರಮಂಡಲಕ್ಕೆ ಹೋದನು. ಅಲ್ಲಿಂದಲೇ ತಂದೆತಾಯಿಯರಿಗೆ ಕಾಣಿಸಿಕೊಳ್ಳುವನು. ದುರ್ವಾಸನು ತಪಸ್ಸಿಗೆ ಹೋದನು. ನೆನಸಿದಾಗ ಬರುವೆನೆಂದು ತಂದೆ-ತಾಯಿಯರಿಗೆ ಹೇಳಿ ಹೋದನು. ದತ್ತನು ತಂದೆತಾಯಿಯರ ಸೇವೆಯಲ್ಲೇ ಉಳಿದನು.

ದತ್ತಾವತಾರ

ಈ ದತ್ತನಲ್ಲೇ ಚಂದ್ರ, ದುರ್ವಾಸರ ಅಂಶವೂ ಒಳಗೊಂಡಿತ್ತು. ಅದರಿಂದಲೇ ಆತನಿಗೆ ಮೂರು ಮುಖ, ಆರು ಕೈ. ಕೆಳಗಿನ ಕೈಗಳಲ್ಲಿ ಮಾಲೆ, ಕಮಂಡಲ;  ಮಧ್ಯದ ಕೈಗಳಲ್ಲಿ  ಡಮರು, ತ್ರಿಶೂಲ; ಮೇಲಿನ ಕೈಗಳಲ್ಲಿ ಗದಾ, ಚಕ್ರ. ಕಾವಿಬಟ್ಟೆಯನ್ನು ತೊಟ್ಟು, ಜಟೆ, ವಿಭೂತಿಗಳಿಂದ ಅಲಂಕೃತನಾಗಿದ್ದನು. ಇದನ್ನೇ ಆತನ ಧ್ಯಾನಸ್ತೋತ್ರದಲ್ಲಿ ಕಾಣುವೆವು.

ದಿಗಂಬರಂ ಭಸ್ಮ ಸುಗಂಧ ಲೇಪನಂ|
ಚಕ್ರಂ ತ್ರಿಶೂಲಂ ಡಮರುಂ ಗದಾಂ ಚ|
ಪದ್ಮಾಸನಸ್ಥಂ ರವಿ ಸೋಮ ನೇತ್ರಂ|
ದತ್ತಾತ್ರೇಯ ಧ್ಯಾನಮಭೀಷ್ಟಸಿದ್ಧಿದಂ||

ಇದು ದತ್ತಾವತಾರ. ರಾಮ, ಕೃಷ್ಣ ಮೊದಲಾದ ಅವತಾರಗಳಿಗೂ ದತ್ತಾವತಾರಕ್ಕೂ ವ್ಯತ್ಯಾಸ ಉಂಟು. ರಾಮ, ಕೃಷ್ಣ ಮೊದಲಾದ ಅವತಾರಗಳು ಗೊತ್ತಾದ ಒಂದು ಉದ್ದೇಶ ಸಾಧನೆಗಾಗಿ ಆದವು. ಉದಾಹರಣೆಗೆ ಶ್ರೀರಾಮಾವತಾರ ರಾವಣನಂತಹ ರಾಕ್ಷಸನ ನಾಶಕ್ಕಾಗಿ ಆಯಿತು. ಶ್ರೀಕೃಷ್ಣಾವತಾರ ಕಂಸನಂತಹ ದುಷ್ಟನ ವಧೆಗಾಗಿ ಆಯಿತು. ಆದರೆ ಶ್ರೀದತ್ತಾವತಾರ ಅಂಥ ಒಂದು ನಿರ್ದಿಷ್ಟ ಕಾರಣಕ್ಕಾಗಿ ಆದುದಲ್ಲ. ಅದು ಭಕ್ತರನ್ನು ಸದಾ ಉದ್ಧರಿಸಲು ಆದ ಅವತಾರ.

ದತ್ತಾತ್ರೇಯ ಮತ್ತು ಆತನ ಅವತಾರ ರೂಪಗಳೆಲ್ಲ ಸಾಮಾನ್ಯವಾಗಿ ಸನ್ಯಾಸಿಗಳಾಗಿ ತೋರಿಕೊಂಡಿದ್ದಾರೆ. ಸನ್ಯಾಸಿ ಎಲ್ಲವನ್ನೂ ತ್ಯಾಗ ಮಾಡಿದವನು. ಹೀಗೆ ದತ್ತಾತ್ರೇಯ ದೇವರೂ ಹೌದು, ಗುರುವೂ ಹೌದು. ಆದ್ದರಿಂದಲೇ ಆತ ಗುರುದತ್ತ ಎನಿಸಿಕೊಳ್ಳುವನು. ಆತ ಸದಾ ಚಿರಂಜೀವಿಯಾಗಿರುವ ಶುಭಕರಮೂರ್ತಿ. ಆತ ಹುಟ್ಟಿದ್ದು ಮಾರ್ಗಶೀರ್ಷ ಮಾಸದ ಶುಕ್ಲಪಕ್ಷ ಚತುರ್ದಶಿ. ಅವತ್ತು ಬುಧವಾರ. ಆ ದಿನವೇ ಪ್ರತಿ ವರ್ಷ ‘ದತ್ತಜಯಂತಿ’ ಆಚರಿಸುವರು.

ದತ್ತಾತ್ರೇಯನ ಚಿತ್ರ ನೋಡಿದ್ದೀರಾ? ಮೇಲಿನ ಸ್ತ್ರೋತ್ರದಂತೆಯೇ ಇದೆಯಲ್ಲವೆ? ಅದರಲ್ಲಿ ಹಸುವೊಂದಿದೆ. ಅದೇ ಕಾಮಧೇನು, ಭಕ್ತರು ಕೇಳಲಿದ್ದನ್ನು ಕೊಡುವುದು. ಆತನ ಹಿಂದೆ ದೊಡ್ಡ ಮರವಿದೆ. ಅದೇ ಕಲ್ಪವೃಕ್ಷ. ಅದೂ ಬಯಸಿದುದನ್ನು ಕೊಡುವ ದೇವ ಲೋಕದ ಮರ. ಆತನ ಮುಂದೆ ನಾಲ್ಕು ನಾಯಿಗಳಿವೆ. ಅವೇ ನಾಲ್ಕು ವೇದಗಳು. ಹೀಗೆ ದತ್ತಾತ್ರೇಯನ ಮೂರ್ತಿ ತ್ಯಾಗ, ಭಕ್ತಿ, ಜ್ಞಾನ, ಅನುಕಂಪಗಳ ಸಾಕಾರಮೂರ್ತಿಯಾಗಿದೆ.

ಹೀಗೆ ಮಂಗಳಮಯವಾದ ದತ್ತಾತ್ರೇಯನು ಭಕ್ತರನ್ನು ಕಾಪಾಡಲು ಲೋಕದಲ್ಲಿ ಸದಾ ಸುತ್ತುತ್ತಿರುವನು ಎಂಬುದು ಭಕ್ತರ ನಂಬಿಕೆ. ನಮ್ಮ ದೇಶದ ನೈರುತ್ಯ ಭಾಗದಲ್ಲಿ, ಗುಜರಾತ್‌ ರಾಜ್ಯದಲ್ಲಿರುವ ಸಸ್ಯಗಿರಿ ಆತನ ವಾಸಸ್ಥಾನ. ಇದು ರಮ್ಯವಾದ ಬೆಟ್ಟ ಪ್ರದೇಶ, ಅನೇಕ ಗವಿಗಳು, ಕಂದರಗಳು ಅಲ್ಲಿವೆ. ಹೆಮ್ಮರಗಳು ಬೆಳೆದು ನಿಂತಿವೆ. ಜನಸಂಚಾರವಿಲ್ಲ. ಇಂಥ ಪ್ರಕೃತಿ ರಮ್ಯಸ್ಥಾನದಲ್ಲಿ ದತ್ತನ ಆಶ್ರಮ ಇದೆ. (ಇದನ್ನು ಈಗ ‘ಗಿರಿನಾರ್’ ಎಂದು ಕರೆಯುತ್ತಾರೆ. ಮುಂಬಯಿನಿಂದ ಅಹಮದಾಬಾದ್‌, ಅಲ್ಲಿಂದ ರಾಜಕೋಟೆ, ಅಲ್ಲಿಂದ ೬೩ ಮೈಲಿಯಲ್ಲಿ ಜುನಾಗಡ್‌ – ಹೀಗೆ ರೈಲಿನಲ್ಲಿ ಹೋಗಬಹುದು. ಜುನಾಗಡ್‌ ಹಿಂದೆ ನವಾಬರ ಸಂಸ್ಥಾನವಾಗಿತ್ತು. ಇದರ ಸಮೀಪವೇ ಉತ್ತುಂಗ ಶಿಖರದ ‘ಗಿರಿನಾರ್’ ಇದೆ . ಇದರ ಎತ್ತರ ೩೫೦೦ ಅಡಿಗಳು.)

ದತ್ತಾತ್ರೇಯನು ಅನೇಕ ಶಿಷ್ಯರನ್ನು ಅನುಗ್ರಹಿಸಿದನು. ಅವರಲ್ಲಿ ಕಾರ್ತವೀರ್ಯಾರ್ಜುನ, ಅಲರ್ಕ, ಆಯುರಾಜ, ಯದು, ಮುಖ್ಯರಾದವರು.

ಕಾರ್ತವೀರ್ಯ

ಕಾರ್ತವೀರ್ಯ ಸೋಮವಂಶದ ದೊರೆ. ಆತನು ಸಾಕ್ಷಾತ್‌ ದತ್ತಕೃಪೆಯಿಂದಲೇ ಹುಟ್ಟಿದವನು. ಆತನೂ ಸ್ವತಃ ದತ್ತನ ದೊಡ್ಡ ಭಕ್ತನಾಗಿದ್ದನು. ಆತನಿಗೆ ಸಾವಿರ ತೋಳುಗಳಿದ್ದವು. ಆತನು ತನ್ನ ರಾಜ್ಯದಲ್ಲಿ ಯಾವ ಅನ್ಯಾಯವೂ ನಡೆಯದಂತೆ ಸ್ವತಃ ನೋಡಿಕೊಳ್ಳುತ್ತಿದ್ದನು. ವಿಶೇಷವಾದ ಶಕ್ತಿಯಿಂದ ಎಲ್ಲೆಡೆ ಸಂಚರಿಸುತ್ತ ದುಷ್ಟರನ್ನು ಶಿಕ್ಷಿಸುತ್ತಿದ್ದನು. ಸಜ್ಜನರನ್ನು ರಕ್ಷಿಸುತ್ತಿದ್ದನು. ಅವನ ರಾಜ್ಯದಲ್ಲಿ ಚೆನ್ನಾಗಿ ಮಳೆ ಬೆಳೆಗಳು ಆಗುತ್ತಿದ್ದವು. ಜನರು ಸುಖವಾಗಿದ್ದರು.

ಹೀಗೆಯೇ ಅನೇಕ ವರ್ಷ ಕಾರ್ತವೀರ್ಯಾರ್ಜುನ ರಾಜ್ಯಭಾರ ಮಾಡಿದನು. ಕೊನೆಗೊಂದ ಉ ದಿನ ಆತನು ಜಮದ ಮಹರ್ಷಿಯ ಆಶ್ರಮಕ್ಕೆ ಬಂದನು. ಅಲ್ಲಿ ದೇವಲೋಕದ ಹಸು ಕಾಮಧೇನು ಇತ್ತು. ಅದರ ಬಲದಿಂದ ಜಮದಗ್ನಿಯು ಕಾರ್ತವೀರ್ಯನಿಗೂ ಆತನ ದೊಡ್ಡ ಸೈನ್ಯಕ್ಕೂ ಬೇಕುಬೇಕಾದ, ರುಚಿರುಚಿಯಾದ ಆಹಾರವನ್ನು ಕೊಟ್ಟು ತೃಪ್ತಿಗೊಳಿಸಿದನು. ಇದನ್ನು ನೋಡಿ ಧರ್ಮಿಷ್ಠನಾದ ಕಾರ್ತವೀರ್ಯನಲ್ಲೂ ಒಂದು ಆಸೆ ಹುಟ್ಟಿತು; “ಕೇಳಿದ್ದನ್ನು ಕೊಡುವ ಇಂಥ ಹಸು ರಾಜನಾದ ನನ್ನಲ್ಲಿರಬೇಕು. ಕಾಡಿನಲ್ಲಿರುವ ಈ ಋಷಿಗೇಕೆ ಇಂಥ ಅಪೂರ್ವ ವಸ್ತು ? ಇದರ ಬದಲು ಸಾವಿರ ಹಸುಗಳು, ಬೇಕಾದಷ್ಟು ಹಣ ಇವೆಲ್ಲ ಈ ಋಷಿಗೆ ಕೊಟ್ಟರಾಯಿತು.”

ಕಾರ್ತವೀರ್ಯ ತನ್ನ ಯೋಚನೆಯನ್ನು ಜಮದಗ್ನಿಗೆ ತಿಳಿಸಿದನು. ಜಮದಗ್ನಿ, “ಇದು ನಾನು ಪ್ರತಿದಿನ ಮಾಡುವ ಹೋಮಕ್ಕೆ ಬೇಕಾದ ಹಾಲನ್ನು ಕೊಡುವ ‘ಹೋಮದೇನು’, ಇದನ್ನು ನೀನು ಬಯಸಬಾರದು” ಎಂದನು.

ಅಹಂಕಾರ ತಂದ ಕೇಡು

ಕೆಡುವ ಕಾಲಕ್ಕೆ ಸಜ್ಜನರಿಗೂ ಕೆಟ್ಟಬುದ್ಧಿ ಬರುತ್ತದೆ. ಕಾರ್ತವೀರ್ಯನಿಗೂ ವಿವೇಕ ಬರಲಿಲ್ಲ. “ರಾಜ್ಯದಲ್ಲಿರುವ ಅಮೂಲ್ಯ ವಸ್ತುಗಳೆಲ್ಲ ರಾಜನಿಗೇ ಸೇರಿದ್ದು. ಆದ್ದರಿಂದ ಈ ಹಸುವಿನ ಮೇಲೂ ನನಗೆ ಅಧಿಕಾರವಿದೆ” ಎಂದು ತೀರ್ಮಾನಿಸಿಕೊಂಡುಬಿಟ್ಟನು. ಸಾವಿರ ಹಸುಗಳನ್ನೂ ಬೇಕಾದಷ್ಟು ಹಣವನ್ನೂ ಜಮದಗ್ನಿಯ ಮುಂದಿಟ್ಟು ಬಲವಂತದಿಂದ ಕಾಮಧೇನುವನ್ನು ಎಳೆದುಕೊಂಡು ಹೋದನು.

ಜಮದಗ್ನಿಗೆ ನಾಲ್ಕು ಜನ ಗಂಡು ಮಕ್ಕಳು. ಅವರಲ್ಲಿ ಕಡೆಯವನು ಪರಶುರಾಮ. ಯಾವಾಗಲೂ ಕೊಡಲಿಯನ್ನು ಹೆಗಲಿಗೇರಿಸಿ ಓಡಾಡುತ್ತಿದ್ದವನು. ಮಹಾಶೂರ. ಅವನು ಆಶ್ರಮಕ್ಕೆ ಬಂದಾಗ ಕಾರ್ತವೀರ್ಯ ಧೇನುವನ್ನು ಸೆಳೆದುಕೊಂಡು ಹೋದುದು ತಿಳಿಯಿತು. ಪರಶು ರಾಮನಿಗೆ ತುಂಬಾ ಸಿಟ್ಟು ಬಂತು. ಅವನು ಕೂಡಲೇ ತನ್ನ ಕೊಡಲಿಯನ್ನೆತ್ತಿಕೊಂಡು ಪಟ್ಟಣದ ಕಡೆಗೆ ಧಾವಿಸಿದನು.

ಅಲ್ಲಿ ಕಾರ್ತವೀರ್ಯನನ್ನು ಎದುರಿಸಿದನು. ಯುದ್ಧ ಮಾಡಿ ಅವನ ಸೈನ್ಯವನ್ನು ನಾಶಪಡಿಸಿದನು. ಅನಂತರ ಮಹಾಶೂರನಾದ ಕಾರ್ತವೀರ್ಯನನ್ನು ಕೊಂದನು. ಭಕ್ತನಾದ ಕಾರ್ತವೀಯನು ಗುರುವಾರ ದತ್ತನ ಸ್ಮರಣೆ ಮಾಡುತ್ತ, ದತ್ತನೇ ಪರಶುರಾಮನ ಅವತಾರದಲ್ಲಿ ಬಂದಿದ್ದಾನೆಂದು ನಂಬಿ ಪ್ರಾಣಬಿಟ್ಟನು. ಇದರಿಂದ ಅವನಿಗೆ ಸದ್ಗತಿಯಾಯಿತು.

ಪರಶುರಾಮನಿಗೆ ಉಪದೇಶ

ಕಾರ್ತವೀರ್ಯನಿಗೆ ನೂರು ಜನ ಮಕ್ಕಳು. ಅವರಿಗೆ ತಮ್ಮ ತಂದೆಯನ್ನು ಪರಶುರಾಮ ಕೊಂದುದು ಕೇಳಿ ದುಃಖವಾಯಿತು. ಅವರು, ತಮ್ಮ ತಂದೆಯನ್ನು ಯಾರು ಕೊಂದರೋ ಅವನ ತಂದೆಯನ್ನು ತಾವು ಕೊಲ್ಲಬೇಕೆಂದು ಜಮದಗ್ನಿಯ ಆಶ್ರಮಕ್ಕೆ ಬಂದರು. ಆ ಸಮಯದಲ್ಲಿ ಅಲ್ಲಿ ಪರಶುರಾಮನಿರಲಿಲ್ಲ. ಜಮದಗ್ನಿ ಧ್ಯಾನದಲ್ಲಿದ್ದನು. ಈ ರಾಜಪುತ್ರರು ಆತನನ್ನು ಕೊಲ್ಲಲು ಸುತ್ತುವರಿದರು. ಜಮದಗ್ನಿಯ ಹೆಂಡತಿ ರೇಣುಕೆ ಎಷ್ಟು ಬುದ್ಧಿ ಹೇಳಿದರೂ ಕೇಳಲಿಲ್ಲ.. ಅವರು ಆ ಋಷಿಯನ್ನು ಕೊಂದೇಬಿಟ್ಟರು.

ಕೆಲ ಹೊತ್ತಿನ ಮೇಲೆ ಬಂದ ಪರಶುರಾಮ ಆದುದನ್ನು ಕಂಡನು. ಆತನಿಗೆ ದುಃಖವೂ ರೋಷವೂ ಒಮ್ಮೆಲೆ ಉಂಟಾಯಿತು. “ಈ ಭೂಮಿಯ ಮೇಲಿರುವ ಅಹಂಕಾರದ,  ದರ್ಪದ ಕ್ಷತ್ರಿಯರನ್ನೆಲ್ಲ ನಾಶ ಮಾಡುವೆ”  ಎಂದು ಪಣತೊಟ್ಟನು. ನೆಟ್ಟಗೆ ಪಟ್ಟಣಕ್ಕೆ ಹೋದನು. ಕಾರ್ತವೀರ್ಯನ ಮಕ್ಕಳನ್ನೆಲ್ಲ ಎದುರಿಸಿ ಕೊಂದನು. ಅರಮನೆಯನ್ನೂ ರಾಜಧ್ವಜವನ್ನೂ ನೆಲಸಮ ಮಾಡಿದನು.

ಆಶ್ರಮಕ್ಕೆ ಹಿಂದಿರುಗಿದ ಪರಶುರಾಮ ತಾಯಿಯ ಅಪ್ಪಣೆಯಂತೆ, ತಂದೆಯ ದೇಹವನ್ನು  ತೆಗೆದುಕೊಂಡು ಆಕೆಯೊಡನೆ ಸಹ್ಯಗಿರಿಗೆ ಬಂದನು. ಅಲ್ಲಿ ದತ್ತಾತ್ರೇಯನ ದರ್ಶನ ಮಾಡಿದನು. ಸ್ತೋತ್ರದಿಂದ ಆತನ ಪ್ರೀತಿಯನ್ನು ಸಂಪಾದಿಸಿದನು. ದತ್ತನ ಮುಂದಾಳತ್ವದಲ್ಲಿ ತಂದೆಯ ಅಂತ್ಯಕ್ರಿಯೆಯನ್ನು ಮಾಡಿದನು. ತಾಯಿ ರೇಣುಕೆ ತಂದೆಯ  ಚಿತೆಯನ್ನು ಹತ್ತಿ ಸಹಗಮನ ಮಾಡಿದಳು. (‘ಸಹಗಮನ’ವೆಂದರೆ ಗಂಡನು ಸತ್ತರೆ ಆತನೊಡನೆ ಅವನ ಹೆಂಡತಿಯೂ ಜೀವಂತವಾಗಿ ಬೆಂಕಿಗೆ ಹಾರಿಕೊಂಡು ಪ್ರಾಣ ಬಿಡುವುದು.) ಗಿರಿನಾರ್ ಬಳಿಯ ಮಾತಾಪುರ ಎಂಬ ಸ್ಥಳ ರೇಣುಕೆ ಸಹಗಮನ ಮಾಡಿದ ಕ್ಷೇತ್ರ ಎಂದು ಇಂದಿಗೂ ಪ್ರಸಿದ್ಧವಾಗಿದೆ. ಅಲ್ಲಿರುವ ‘ಮಾತೃತೀರ್ಥ’ ಪರಶುರಾಮ ನಿರ್ಮಿಸಿದ್ದು , ಬಹಳ ಪವಿತ್ರವೆನಿಸಿದೆ. ಅಲ್ಲಿ ರೇಣುಕೆಯ ಮಂದಿರವಿದೆ. ಇಂದಿಗೂ ಈ ಪುಣ್ಯಸ್ಥಳವನ್ನು ಬಹು ಜನ ಸಂದರ್ಶಿಸುತ್ತಾರೆ.

ತಂದೆ ತಾಯಿಗಳಿಬ್ಬರನ್ನೂ ಕಳೆದುಕೊಂಡು, ತಬ್ಬಲಿಯಾದ ಪರಶುರಾಮನಿಗೆ ದತ್ತಾತ್ರೇಯನು ಅಭಯ ಕೊಟ್ಟನು, ಜ್ಞಾನದ ಉಪದೇಶ ಮಾಡಿದನು. ಆತನಿಗೆ ಮಾಡಿದ ಅಮೂಲ್ಯವಾದ ಉಪದೇಶ ‘ತ್ರಿಪುರಾ ರಹಸ್ಯ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

ಭೂಮಿಯ ಮೇಲಿದ್ದ ಕ್ಷತ್ರಿಯರನ್ನೆಲ್ಲ ನಿರ್ಮೂಲ ಮಾಡಿದ ಪರಶುರಾಮ, ದತ್ತಾತ್ರೇಯನ ಅಪ್ಪಣೆಯಂತೆ ದೊಡ್ಡ ಯಜ್ಞ ಮಾಡಿದನು. ಭೂಮಿಯನ್ನು ಆಳುತ್ತಿದ್ದ ಕ್ಷತ್ರಿಯರನ್ನೆಲ್ಲ ಕೊಂದದ್ದರಿಂದ ಭೂಮಿಯೆಲ್ಲ ಅವನಿಗೇ ಸೇರಿತು. ಹೀಗೆ ತಾನು ಗೆದ್ದ ಭೂಮಿಯನ್ನೆಲ್ಲ ಕಶ್ಯಪ ಋಷಿಗೆ ದಾನ ಮಾಡಿಬಿಟ್ಟನು. ಅನಂತರ ತಾನು ಇಂದಿನ ಕರ್ನಾಟಕ ರಾಜ್ಯದ ಪಶ್ಚಿಮ ಕರಾವಳಿಯಲ್ಲಿರುವ ಕೊಂಕಣ ಪಟ್ಟಿಯಲ್ಲಿ ತಪೋನಿರತನಾದನು.

ಪರಶುರಾಮನಿಗೆ ಶ್ರೀ ದತ್ತಾತ್ರೇಯನು ಜ್ಞಾನದ ಉಪದೇಶ ಮಾಡಿದನು.

ಋತುಧ್ವಜಮದಾಲಸೆ

 

ಸೋಮವಂಶದ ಇನ್ನೊಬ್ಬ ದೊರೆ ಶತ್ರುಜಿತ. ಆತನ ಮಗ ಋತುಧ್ವಜ. ಇವನು ಒಳ್ಳೇ ವಿದ್ವಾಂಸನೂ ಪರಾಕ್ರಮಿಯೂ ಆಗಿದ್ದನು. ಇವನು ಚಿಕ್ಕವನಿದ್ದಾಗ ಗಾವಲ ಎಂಬ ಋಷಿಗಳ ಅಪೇಕ್ಷೆಯಂತೆ ಅವರ ಯಾಗವನ್ನು ಕಾಯಲು ಹೋದನು. ಅವರ ಯಾಗ ಕೆಡಿಸಲು ಸದಾ ಬರುತ್ತಿದ್ದ ರಾಕ್ಷಸರಲ್ಲಿ ಒಬ್ಬ ಪಾತಾಲಕೇತು. ಆ ರಾಕ್ಷಸನನ್ನು ಋತುಧ್ವಜ ಬಾಣ ಬಿಟ್ಟು ಓಡಿಸಿಕೊಂಡು ಹೋದನು. ಆ ರಾಕ್ಷಸನು ಒಂದು ಗವಿಯನ್ನು ಹೊಕ್ಕನು. ಋತುಧ್ವಜ ಅವನ ಹಿಂದೆಯೇ ಹೋದನು.

ಸ್ವಲ್ಪ ದೂರ ಹೋದ ಮೇಲೆ ಅ ಗವಿಯಲ್ಲಿ ಒಂದು ಸುಂದರ ಅರಮನೆ ಕಾಣಿಸಿತು. ಅಲ್ಲಿ ಇಬ್ಬರು ಹೆಂಗಸರು ದುಃಖಿತರಾಗಿ ಕುಳಿತಿದ್ದರು. ಅವರಲ್ಲಿ ತಪಸ್ವಿಯ ಮಗಳಾದ ಕುಂಡಲೆ ಎಂಬುವಳು ಒಬ್ಬಳು. ಅವಳ ಸ್ನೇಹಿತೆ ವಿಶ್ವಾಸು ಎಂಬ ಗಂಧರ್ವರಾಜನ ಮಗಳು, ಮದಾಲಸೆ ಇನ್ನೊಬ್ಬಳು. ಮದಾಲಸೆಯನ್ನು ಆ ರಾಕ್ಷಸ ಪಾತಾಲಕೇತು ಹೊತ್ತು ತಂದಿದ್ದನು. ಆಗ ಅವಳ ಜತೆಯಲ್ಲೇ ಅವಳ ರಕ್ಷಣೆಗಾಗಿ ಸ್ನೇಹದಿಂದ ಬಂದಿದ್ದಳು ಕುಂಡಲೆ.

ಅನಸೂಯೆ, ‘ಹರಿ, ಹರ, ಬ್ರಹ್ಮರು ನನ್ನ ಮಕ್ಕಳಾಗಲಿ’ ಎಂದು ಬೇಡಿದಳು.

ಋತುಧ್ವಜವನ್ನು ನೋಡಿ ಮದಾಲಸೆಗೆ ಅವನಲ್ಲಿ ಪ್ರೀತಿ ಉಂಟಾಯಿತು. ಕುಂಡಲೆಯ ಸೂಚನೆಯಂತೆ ಋತುಧ್ವಜ ಅವರಿಬ್ಬರನ್ನೂ ಅಲ್ಲಿಂದ ಬಿಡಿಸಿಕೊಂಡು ಬಂದನು. ಕುಂಡಲೆ ಮದಾಲಸೆಯನ್ನು ಋತುಧ್ವಜನಿಗೆ ಒಪ್ಪಿಸಿ, ತಂದೆಯ ಬಳಿಗೆ ಹೊರಟುಹೋದಳು. ಋತುಧ್ವಜ ಮದಾಲಸೆಯರು ಗಾವಲರ ಆಶ್ರಮಕ್ಕೆ ಹೊರಟರು. ದಾರಿಯಲ್ಲಿ ಪಾತಾಲಕೇತು ಮತ್ತೆ ಋತುಧ್ವಜನಿಗೆ ಎದುರಾದನು. ಇಬ್ಬರಿಗೂ ಯುದ್ಧವಾಯಿತು. ಪಾತಾಲಕೇತು ಸತ್ತುಹೋದನು.

ಗಾವಲ ಋಷಿಗಳ ಆಶೀರ್ವಾದ ಪಡೆದು ಋತುಧ್ವಜ ಮದಾಲಸೆಯರು ಪಟ್ಟಣಕ್ಕೆ ಬಂದರು. ಶತ್ರುಜಿತನಿಗೆ ಮಗ, ಸೊಸೆಯರನ್ನು ಕಂಡು ಸಂತೋಷವಾಯಿತು. ಕೆಲವು ದಿನ ಎಲ್ಲರೂ ಸುಖವಾಗಿದ್ದರು.

ಕಪಟ ಋಷಿ

ಒಂದು ದಿನ ಋತುಧ್ವಜ ಬೇಟೆಗಾಗಿ ಕಾಡಿಗೆ ಹೋದನು.  ಬೇಟೆಯಾಡುತ್ತ ಈತನು ತನ್ನ ಗುಂಪಿನಿಂದ ಬೇರೆಯಾದನು. ಈತನು ಬರುವ ಮಾರ್ಗದಲ್ಲಿ ಒಂದು ಆಶ್ರಮ ಕಾಣಿಸಿತು. ಇದು ಪಾತಾಲಕೇತುವಿನ ತಮ್ಮ ತಾಲಕೇತು ಎಂಬ ರಾಕ್ಷಸ ತನ್ನ ಮಾಯೆಯಿಂದ ಮಾಡಿಕೊಂಡಿದ್ದು. ತನ್ನ ಅಣ್ಣನನ್ನು ಕೊಂದವನ ಮೇಲೆ ಸೇಡು ತೀರಿಸಿಕೊಳ್ಳಲು ಅವನು ಹೀಗೆ ಮಾಡಿ, ಆ ಆಶ್ರಮದಲ್ಲಿ ತಾನೇ ಋಷಿಯ ವೇಷದಿಂದ ಕುಳಿತಿದ್ದನು.

ಆಗಿನ ಕಾಲದಲ್ಲಿ ರಾಜರುಗಳು ಋಷಿಗಳು, ದೊಡ್ಡವರನ್ನು ಕಂಡರೆ ಗೌರವಿಸುವುದು, ಅವರಿಗೆ ಬೇಕಾದುದನ್ನು ಕೊಡುವುದು ಪದ್ಧತಿ. ಋತುಧ್ವಜ ಈ ಋಷಿವೇಷದವನಿಗೆ ನಮಸ್ಕರಿಸಿ ಕುಳಿತನು. ಆಗ ಆ ಕಪಟ ಋಷಿ ತಾನೊಂದು ಯಜ್ಞ ಮಾಡುವುದಾಗಿಯೂ ಅದಕ್ಕೆ ಸಹಾಯ ಮಾಡಬೇಕೆಂದೂ ಹೇಳಿದನು. ಋತುಧ್ವಜ ಆಗಲೆಂದು ಒಪ್ಪಿದನು. ಆಗ ಆ ಮೋಸಗಾರನು, “ರಾಜಾ, ನಿನ್ನ ಕತ್ತಿನಲ್ಲಿರುವ ಕಂಠೀಹಾರವನ್ನು ಕೊಡು. ಅಷ್ಟೇ ನನಗೆ ಸಾಕು” ಎಂದನು. ಋತುಧ್ವಜ ತಕ್ಷಣ ತನ್ನ ಕಂಠೀಹಾರವನ್ನು ತೆಗೆದುಕೊಟ್ಟನು. ಆಗ ಆ ಋಷಿವೇಷದವನು “ರಾಜಾ ನೀನು ಇಲ್ಲೇ ಕುಳಿತಿರು. ನಾನು ನನಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಬೇಗ ಬಂದು ಬಿಡುವೆ” ಎಂದು ಹೇಳಿ, ಋತುಧ್ವಜನನ್ನು ಆಶ್ರಮದಲ್ಲಿ ಕೂರಿಸಿ, ಹೊರಟುಹೋದನು.

ಆ ವೇಷಧಾರಿ ರಾಕ್ಷಸನು ನೆಟ್ಟಗೆ ಶತ್ರುಚಿತನ ಅರಮನೆಗೆ ಬಂದನು. ಅಲ್ಲಿ ಋತುಧ್ವಜನ ಕಂಠೀಹಾರವನ್ನು ತೋರಿಸಿ, “ಕಾಡಿನಲ್ಲಿ ತಾಲಕೇತು ಋತುಧ್ವಜವನ್ನು ಕೊಂದುಹಾಕಿದ, ಪ್ರಾಣ ಹೋಗುವಾಗ ಈ ಹಾರವನ್ನು ಋತುದ್ವಜ ನನಗೆ ಕೊಟ್ಟು, ವಿಷಯವನ್ನು ನಿಮಗೆ ತಿಳಿಸಲು ಹೇಳಿದ” ಎಂದು ಸುಳ್ಳು ನುಡಿದ. ಈ ವಾರ್ತೆಯಿಂದ ಶತ್ರುಜಿತನು ನಡುಗಿಹೋದನು. ಮದಾಲಸೆ ತಾಳಲಾರದೆ, ಬೆಂಕಿಗೆ ಹಾರಿಕೊಂಡಳು. ಸತ್ತುಹೋದಳು.

ತಾಲಕೇತು ಆಶ್ರಮಕ್ಕೆ ಹಿಂದಿರುಗಿದನು. ಋತು ಧ್ವಜನನ್ನು ಬೀಳ್ಕೊಟ್ಟನು. ಋತುಧ್ವಜ ಬೇಗನೆ ತನ್ನ ನಗರಕ್ಕೆ ಬಂದನು. ಮದಾಲಸೆ ಸತ್ತುಹೋದಳು ಎಂದು ಕೇಳಿ ದುಃಖಿತನಾದನು . ರಾಜ್ಯಕೋಶಗಳನ್ನು ತೊರೆದು, ಕಾಡಿಗೆ ಹೋಗಿಬಿಟ್ಟನು.

ಅಲ್ಲಿ ನಾಗಪುತ್ರನೊಬ್ಬನ ಸ್ನೇಹವಾಯಿತು. ಅವನ ಸಾಹಸದಿಂದ ಋತುಧ್ವಜನಿಗೆ ಶಿವನ ಕೃಪೆಯಾಯಿತು. ಮತ್ತೆ ಮದಾಲಸೆಯನ್ನು ಪಡೆದನು.

ಶತ್ರುಜಿತನಿಗೆ ಆಶ್ಚರ್ಯ, ಸಂತೋಷ! ಋತುಧ್ವಜನಿಗೆ ಪಟ್ಟ ಕಟ್ಟಿ ಅವನು ಕಾಡಿಗೆ ಹೋದನು, ಋತುಧ್ವಜ ಮದಾಲಸೆಯರು ಸುಖವಾಗಿದ್ದರು.

ಶಿವಪ್ರಸಾದದಿಂದ ಮದಾಲಸೆ ಒಳ್ಳೇ ಜ್ಞಾನಿಯಾಗಿದ್ದಳು. ದೈವಭಕ್ತೆಯಾಗಿದ್ದಳು. ಆಕೆಗೆ ಒಬ್ಬ ಮಗ ಹುಟ್ಟಿದನು.  ಕೂಡಲೇ ಆಕೆಯು ಆ ಮಗುವಿಗೆ ದಿವ್ಯಜ್ಞಾನವನ್ನು ಬೋಧಿಸಿದಳು; “ಈ ದೇಹ ಎಂದೆಂದಿಗೂ ಇರುವುದಿಲ್ಲ. ಪ್ರಪಂಚದ ಸುಖದಲ್ಲಿ ನಿಜವಾದ ಸುಖ ಇಲ್ಲ. ನಿನ್ನ ನಿಜವಾದ ಸ್ವರೂಪ ತಿಳಿದುಕೋ. ಅದರಲ್ಲೇ ಸುಖವಿದೆ.”

ಇದರಿಂದ ಆ ಮಗನು ಲೋಕದ ವಿಷಯದಲ್ಲಿ ಉದಾಸೀನನಾಗಿಬಿಟ್ಟನು. ಮುಂದೆ ಆದ ಇಬ್ಬರು ಮಕ್ಕಳಿಗೂ ಆಕೆ ಇದೇ ಬೋಧಿಸಿದಳು. ಆದ್ದರಿಂದ ರಾಜನು ತನ್ನ ನಾಲ್ಕನೇ ಮಗನಾದರೂ ತನ್ನಂತೆ ಆಗಬೇಕೆಂದು ಬಯಸಿದನು. ಮದಾಲಸೆ ಅವನಿಗೆ ಬೋಧಿಸಲಿಲ್ಲ. ಅವನೇ ಅಲರ್ಕ. ಅವನು ರಾಜನ ಮಗನಂತೆ ಬೆಳೆದನು.

ತಾಯಿಯ ಉಡುಗೊರೆ

ಅಲರ್ಕ ರಾಜವಿದ್ಯೆಯನ್ನೆಲ್ಲ ಕಲಿತು ದೊಡ್ಡವನಾದನು. ಋತುಧ್ವಜ ಅವನಿಗೆ ರಾಜ್ಯಭಾರ ವಹಿಸಿಕೊಟ್ಟು, ಮದಾಲಸೆಯೊಡನೆ ಕಾಡಿಗೆ ಹೊರಟುಹೋದನು. ಆಗ ಮದಾಲಸೆ ಒಂದು ಪೆಟ್ಟಿಗೆಯನ್ನು ಅಲರ್ಕನಿಗೆ ಕೊಟ್ಟಳು. ಅತಿ ದೊಡ್ಡ ಕಷ್ಟ ಬಂದಾಗ ಅದನ್ನು ತೆಗೆದು ನೋಡು ಎಂದು ಹೇಳಿದಳು. ಇವರಿಗೆ ಮೊದಲೇ ಇವರ ಮೂವರು ಮಕ್ಕಳು ಕಾಡಿಗೆ ಹೊರಟುಹೋಗಿದ್ದರು.

ಅಲರ್ಕ ತನ್ನ ರಾಜ್ಯವನ್ನು ವಿಸ್ತರಿಸಿದ. ಸದಾ ಸುಖಪಟ್ಟುಕೊಂಡಿದ್ದು ಐಶ್ವರ್ಯದಲ್ಲಿ ಮುಳುಗಿದ್ದ. ಇದನ್ನು ತಿಳಿದು ಅವನ ಅಣ್ಣಂದಿರಲ್ಲಿ ಒಬ್ಬನಾದ ಸುಬಾಹುವಿಗೆ ಮರುಕ ಉಂಟಾಯಿತು. ಮದಾಲಸೆಯ ಮಗನಾಗಿ, ನನ್ನ ಸೋದರನಾಗಿ ಅಲರ್ಕನಿಗೆ ಈ ಜಗತ್ತಿನ ವಿಷಯದಲ್ಲಿ ಆಸಕ್ತಿ ಕುಗ್ಗಲಿಲ್ಲವಲ್ಲ ಎಂದು ಚಿಂತೆಯಾಯಿತು. ಹೇಗಾದರೂ ಇವನಿಗೆ ಒಳ್ಳೆಯದನ್ನು ಮಾಡಬೇಕೆಂದು ಸು ಬಾಹು ಅಲರ್ಕನಲ್ಲಿಗೆ ಹೋದ.  ತನ್ನ ಭಾಗದ ರಾಜ್ಯವನ್ನು ಕೊಡುವಂತೆ ಕೇಳಿದ. ಅಲರ್ಕ ದರ್ಪದಿಂದ ಅವನನ್ನು ತಿರಸ್ಕರಿಸಿ, ಹೊರಗಟ್ಟಿದ. ಆಗ ಸುಬಾಹು ಕಾಶಿರಾಜನೊಡನೆ ಕೂಡಿಕೊಂಡು ಅಲರ್ಕನ ಮೇಲೆ ಯುದ್ಧ ಮಾಡಿ, ಗೆದ್ದ.

ಸೋತ ಅಲರ್ಕ ಕಾಡಿಗೆ ಓಡಿಹೋದ. ತುಂಬಾ ದುಃಖಪಟ್ಟ. ಸಹಿಸಲಾರದಷ್ಟು ಯಾತನೆಪಟ್ಟ.  ಆಗ ತಾಯಿಯ ಮಾತು ನೆನಪಾಯಿತು. ಆ ಪೆಟ್ಟಿಗೆ ತೆಗೆದ. ಅದರಲ್ಲಿ ಹೀಗೆ ಬರೆದ ಒಂದು ಕಾಗದವಿತ್ತು: “ಸದಾ ಸಂಗವಿಲ್ಲದವನಾಗು. ಆದಾಗದಿದ್ದರೆ ಸಾಧುಗಳ ಸಂಗದಲ್ಲಿರು. ಹೀಗಾದರೆ ನಿನ್ನ ದುಃಖ ನಾಶವಾಗುವುದು. ”

ಇಂಥ ಸಾಧುಗಳು ಎಲ್ಲಿದ್ದಾರೆ? ಅಲ್ಲಿ ಇಲ್ಲಿ ಹುಡುಕಿದಾಗ ಒಬ್ಬ ಸಾಧು ಸಿಕ್ಕಿದರು. ಅವರು ದತ್ತಾಶ್ರಮದ ದಾರಿಯನ್ನು ತೋರಿಸಿದರು.

ಅಲರ್ಕ ಸಹ್ಯಗಿರಿಗೆ ಬಂದ. ದತ್ತಾತ್ರೇಯನ ದರ್ಶನ ಮಾಡಿದ. ಆತನ ಸೇವೆ ಮಾಡಿದ. ಸಂತುಷ್ಟನಾದ ದತ್ತಗುರು ಅಲರ್ಕನಿಗೆ ಉತ್ತಮ ಜ್ಞಾನವನ್ನು ಉಪದೇಶಿಸಿದ. ಇದರಿಂದ ಅಲರ್ಕನಿಗೆ ಹರ್ಷವಾಯಿತು.  ಪ್ರಪಂಚದ ವಸ್ತುಗಳಲ್ಲಿ ಆಸಕ್ತಿ ಕುಗ್ಗಿ, ದೇವರ ಆನಂದದಲ್ಲಿ ಒಂದಾದ.

ಗಂಡಾಂತರದಿಂದ ಪಾರಾದ ಮಗು

ಪೂರೂರವ ಎಂಬ ಬಲಿಷ್ಠ ಚಕ್ರವರ್ತಿಯ ಮಗ ಆಯುರಾಜ . ತಂದೆಯಂತೆ ಈತನೂ ಪರಾಕ್ರಮಿ. ಗುರುಗಳು, ದೊಡ್ಡವರಲ್ಲಿ ಭಕ್ತಿ ಇಟ್ಟಿದ್ದ. ತಪ್ಪು ಮಾಡಿದವರನ್ನು ಶಿಕ್ಷಿಸುತ್ತಿದ್ದ. ಧರ್ಮಪರನಾದ ಇವನಿಗೆ ಎಲ್ಲ ಐಶ್ವರ್ಯಗಳೂ ಕೈ ಸೇರಿದ್ದುವು. ಆದರೆ ಈತನಿಗೆ ಮಕ್ಕಳಿರಲಿಲ್ಲ. ದೊಡ್ಡವರ ಉಪದೇಶದಂತೆ ಈತನು ದತ್ತಾತ್ರೇಯನನ್ನು ಸೇವಿಸಿ, ಆತನ ಪ್ರೀತಿ ಸಂಪಾದಿಸಿದ. ದತ್ತಾತ್ರೇಯನು “ನಿನಗೆ ಶೂರನೂ, ಧಾರ್ಮಿಕನೂ ಆದ ಮಗ ಹುಟ್ಟುವನು” ಎಂದು ವರ ಕೊಟ್ಟ.

ಅದರಂತೆ ಆಯುರಾಜನಿಗೆ ಗಂಡುಮಗುವಾಯಿತು. ರಾಜನು ಸಂಭ್ರಮದಿಂದ ಪುತ್ರೋತ್ಸವವನ್ನು ಆಚರಿಸಿದ.

ಇದೇ ಸಮಯದಲ್ಲಿ ಹುಂಡಾಸುರನೆಂಬ ರಾಕ್ಷಸ ಲೋಕವನ್ನೆಲ್ಲ ಹೆದರಿಸುತ್ತಿದ್ದ. ಒಳ್ಳೆಯವರನ್ನು ಗೋಳಾಡಿಸುತ್ತಿದ್ದ. ಆತನಿಗೆ ಎದುರಾಗಿ ನಿಲ್ಲುವಂಥ ಧೀರರೇ ಇರಲಿಲ್ಲ. ಆದ್ದರಿಂದ ಮಹಾವಿಷ್ಣು ಆಯುರಾಜನಿಗೆ ಇಂಥಾ ಶೂರ ಮಗನಾಗುವಂತೆ ವರಕೊಟ್ಟಿದ್ದ. ಈ ವಿಷಯ ಹುಂಡಾಸುರನಿಗೆ ಗೊತ್ತಾಯಿತು. ಅವನು ಹುಟ್ಟಿದ ಮಗುವನ್ನು ಅಪಹರಿಸಿದ.  ಅದನ್ನು ತನ್ನ ಹೆಂಡತಿಯ ಕೈಯಲ್ಲಿ ಕೊಟ್ಟು ಕತ್ತರಿಸಿ ಅಡುಗೆ ಮಾಡಲು ಹೇಳಿದ. ಅವಳು ಅದನ್ನು ಅಡುಗೆಯವನಿಗೆ ಕೊಟ್ಟಳು. ಅಡುಗೆಯವನು ನೋಡಿದ.  ಬಹು ಮುದ್ದಾದ ಮಗು. ಅದನ್ನು ಕೊಲ್ಲಲು ಮನಸ್ಸು ಬರಲಿಲ್ಲ. ಬೇರೆ ಪ್ರಾಣಿಯ ಮಾಂಸವನ್ನು ಅಡುಗೆ ಮಾಡಿದ. ಅದನ್ನೇ ಆ ಮಗುವಿನ ಮಾಂಸವೆಂದು ರಾಕ್ಷಸನಿಗೆ ಬಡಿಸಿದ. ಬುದ್ಧಿಹೀನನಾದ ಹುಂಡಾಸುರ ಅದನ್ನು ನಂಬಿ, ನಿಶ್ಚಿಂತನಾದ.

ಅಡುಗೆಯವನು ಆ ಮಗುವನ್ನು ವಸಿಷ್ಠ ಋಷಿಗಳ ಆಶ್ರಮದ ಬಾಗಿಲಲ್ಲಿ ಬಿಟ್ಟುಹೋದ. ಬೆಳಿಗ್ಗೆ ಎದ್ದ ವಸಿಷ್ಠರು ಜ್ಞಾನದೃಷ್ಟಿಯಿಂದ ಎಲ್ಲ ಅರಿತರು. ಆ ಮಗುವಿಗೆ ನಹುಷ ಎಂದು ಹೆಸರಿಟ್ಟು ಸಾಕಲಾರಂಭಿಸಿದರು.

ದತ್ತಾತ್ರೇಯನ ಕರುಣೆ

ಆಯುರಾಜನ ಅರಮನೆಯಲ್ಲಿ ಅಪೂರ್ವ ರತ್ನವಾಗಿ ಹುಟ್ಟಿದ ಮಗು ಕಾಣೆಯಾದುದು ದುಃಖಕ್ಕೆ ಎಡೆಕೊಟ್ಟಿತು. ಅನೇಕ ವರ್ಷ ಮಕ್ಕಳಿಲ್ಲದೆ, ಕೊನೆಗೆ ದತ್ತ ಕೃಪೆಯಿಂದ ಹುಟ್ಟಿದ ಮಗ ಇವನು. ರಾಜರಾಣಿಯರು ಗೋಳಾಡುತ್ತ ದತ್ತಾತ್ರೇಯನನ್ನೇ ಪ್ರಾರ್ಥಿಸಿದರು.

ಇವರ ಸಂಕಟವನ್ನು ಕಂಡು ದತ್ತಾತ್ರೇಯನಿಗೆ ಕರುಣೆಯುಂಟಾಯಿತು. ಅವನು ನಾರದ ಮಹರ್ಷಿಯನ್ನು ಕರೆದು, “ಆಯುರಾಜ ಮತ್ತು ಅವನ ಹೆಂಡತಿಗೆ ಸಮಧಾನ ಹೇಳು. ಅವರ ಮಗ ಬದುಕಿದ್ದಾನೆ ಎಂದು ಧೈರ್ಯ ಕೊಡು” ಎಂದು ಕಳುಹಿಸಿದನು.

ನಾರದರು ರಾಜನಿಗೆ ತತ್ವೋಪದೇಶ ಮಾಡಿ, “ನಿನ್ನ ಮಗ ಒಬ್ಬ ಮುನಿಯ ಬಳಿ ಸುಖವಾಗಿ ಬೆಳೆಯುತ್ತಿರುವನು. ಅವನು ಹುಂಡಾಸುರನನ್ನ ಸಂಹರಿಸುವನು. ಒಬ್ಬ ಕನ್ಯೆಯನ್ನು ವರಿಸುವನು. ಆಗ ನಿಮ್ಮನ್ನು ಕಂಡು ರಾಜ್ಯಾಭಿಷಿಕ್ತನಾಗುವನು. ಚಿಂತೆ ಪಡಬೇಡಿ” ಎಂದು ಹೇಳಿದರು. ರಾಜ ರಾಣಿಯರು ಸಮಧಾನ ಹೊಂದಿದರು.

ವಸಿಷ್ಠ ಮುನಿಗಳಿಂದ ನಹುಷನು ಎಲ್ಲ ವಿದ್ಯೆಗಳನ್ನು ಕಲಿತು ಪ್ರತಿಭಾಶಾಲಿಯಾದನು. ಒಂದು ದಿನ ನಹುಷನು ಕಾಡಿನಲ್ಲಿ ಬೇಟೆಯಾಡುತ್ತಿದ್ದನು. ಆಗ ಆಕಾಶದಿಂದ ದೇವತೆಗಳ ಮಾತು ಕೇಳಿಸಿತು; “ನಹುಷಾ! ನೀನು ದತ್ತಾತ್ರೇಯನ ವರಪ್ರಸಾದದಿಂದ ಆಯುರಾಜನ ಮಗನಾಗಿ ಹುಟ್ಟಿದೆ. ಈಗ ದತ್ತಪ್ರಸಾದ ನಿನ್ನಲ್ಲೂ ಪೂರ್ಣವಾಗಿದೆ. ಕೂಡಲೇ ಹೊರಟು ದುಷ್ಟ ಹುಂಡಾಸುರನನ್ನು ಕೊಂದು, ನಿನ್ನನ್ನೇ ಕಾಯುತ್ತಿರುವ ಅಶೋಕ ಸುಂದರಿ ಎಂಬ ಕನ್ಯೆಯೊಡನೆ ನಿನ್ನ ತಂದೆತಾಯಿಗಳನ್ನು ಸಂದರ್ಶಿಸು ”  ಅದುವರೆಗೆ ನಹುಷ ತಾನು ವಸಿಷ್ಠ ಋಷಿಯ ಮಗನೇ ಎಂದು ತಿಳಿದುಕೊಂಡಿದ್ದನು. ಈಗ ಈ ಆಕಾಶವಾಣಿ ಅವನನ್ನು ಗೊಂದಲಕ್ಕೆ ಸಿಕ್ಕಿಸಿತು. ಅವನು ಆಶ್ರಮಕ್ಕೆಕ ಹಿಂದಿರುಗಿದನು. ವಸಿಷ್ಠರಿಗೆ ತಾನು ಕೇಳಿದ ವಾಣಿಯನ್ನು ತಿಳಿಸಿದನು.

ಆಗ ವಸಿಷ್ಠರು, “ನಹುಷಾ, ನೀನು ದತ್ತಪ್ರಸಾದ ಪಡೆದ ಆಯುರಾಜ – ಇಂದುಮತಿಯರ ಮಗನೇ” ಎಂದು ಹೇಳಿ ಅವನು ಹುಟ್ಟಿದಂದಿನಿಂದ ನಡೆದ ಸಂಗತಿಗಳನ್ನು ವಿವರಿಸಿದರು. “ಇನ್ನು ನೀನು ಹುಂಡಾಸುರನನ್ನು ವಧಿಸು. ನಿನಗಾಗಿ ಹುಂಡಾಸುರನ ಸೆರೆಯಲ್ಲಿ ತಪಿಸುತ್ತಿರುವ ಅಶೋಕ ಸುಂದರಿಯನ್ನು ಇಲ್ಲಿಗೆ ಕರೆ ತಂದು ನಮ್ಮೆಲ್ಲರ ಎದುರಿಗೆ ಮದುವೆಯಾಗು. ಅನಂತರ ನೀವಿಬ್ಬರೂ ನಿನ್ನ ತಂದೆ ತಾಯಿಯರನ್ನು ಕಾಣುವಿರಂತೆ. ನಿನಗೆ ದತ್ತಾತ್ರೇಯರ ಅನುಗ್ರಹವಿದೆ. ನಿನಗೆ ವಿಜಯವಾಗಲಿ” ಎಂದು ಹರಸಿದರು.

ಶ್ರೀ ದತ್ತಾತ್ರೇಯನು ನಾರದನಿಗೆ “ಆಯುರಾಜ ಮತ್ತು ಅವನ ಹೆಂಡತಿಗೆ ಸಮಾಧಾನ ಹೇಳು’ ಎಂದನು.

ನಹುಷನು ವಸಿಷ್ಠರ ಅಪ್ಪಣೆ ಪಡೆದು ಹೊರಟನು. ಇಂದ್ರನು ಅವನಿಗೆ ತನ್ನ ರಥವನ್ನೂ ಸಾರಥಿಯನ್ನೂ ಕಳಿಸಿಕೊಟ್ಟನು. ದೇವತೆಗಳು ಅವನ ಸೈನಿಕರಾಗಿ ಜೊತೆಯಲ್ಲಿ ನಡೆದರು.

ಭೀಕರ ಕದನ ನಡೆಯಿತು. ಹುಂಡಾಸುರನನ್ನು ನಹುಷನು ಚೂರುಚೂರಾಗಿ ಕತ್ತರಿಸಿ ಕೊಂದನು.

ಅನಂತರ ನಹುಷನು ಸೆರೆಯಲ್ಲಿದ್ದ ಅಶೋಕ ಸುಂದರಿಯನ್ನು ಬಿಡಿಸಿ ವಸಿಷ್ಢಾಶ್ರಮಕ್ಕೆ ತಂದನು. ಅಲ್ಲಿ ವಸಿಷ್ಠ-ಅರುಂಧತಿಯರ ಸಮ್ಮುಖದಲ್ಲಿ ಅವರ ವಿವಾಹವಾಯಿತು. ಅನಂತರ ಆತನು ತನ್ನ ರಾಜ್ಯಕ್ಕೆ ಬಂದು ತನ್ನ ತಂದೆತಾಯಿಯರನ್ನು ಸಂದರ್ಶಿಸಿದನು. ಮುದುಕರಾಗಿದ್ದ ಆಯುರಾಜ-ಇಂದುಮತಿಯರಿಗೆ ತುಂಬಾ ಆನಂದವಾಯಿತು. ಅವರು ಈಗ ಮಗ ಸೊಸೆಯರನ್ನು ಹರಸಿದರು. ಮಗನಿಗೆ ರಾಜ್ಯಾಭಿಷೇಕ ಮಾಡಿದರು. ನಹುಷನು ತಂದೆಯಂತೆ ಸದಾ ದತ್ತಪಾದದಲ್ಲಿ ಮನಸ್ಸಿಟ್ಟು ಬಹುಕಾಲ ಧರ್ಮದಿಂದ ರಾಜ್ಯಭಾರ ಮಾಡಿದನು.

ಯದುವಿಗೆ ಕೃಪೆ

ಶುಕ್ರಾಚಾರ್ಯನು ರಾಕ್ಷಸರ ಗುರು. ದೇವಯಾನಿ ಆತನ ಮಗಳು. ಅವಳ ಸ್ನೇಹಿತೆ ಶರ್ಮಿಷ್ಠೆ, ರಾಕ್ಷಸ ರಾಜ ವೃಷಪರ್ವನ ಮಗಳು. ಇವರಿಬ್ಬರೂ ಒಂದು ದಿನ ಸರೋವರವೊಂದರಲ್ಲಿ ಸ್ನಾನ ಮಾಡುತ್ತಿದ್ದರು. ಆಗ ಯಾರೋ ಬರುವ ಶಬ್ದ ಕೇಳಿ ಬಟ್ಟೆ ಹಾಕಿಕೊಳ್ಳಲು ಬೇಗೆ ಬೇಗ ದಡಕ್ಕೆ ಬಂದರು. ಮೊದಲು ಬಂದ ಶರ್ಮಿಷ್ಠ ದೇವಯಾನಿಯ ಬಟ್ಟೆಗಳನ್ನು ಉಟ್ಟುಕೊಂಡುಬಿಟ್ಟಳು. ಇದರಿಂದ ದೇವಯಾನಿಗೆ ಕೋಪ ಬಂತು. ಅವಳು ಶರ್ಮಿಷ್ಠೆಯನ್ನು ಎತ್ತಿಕೊಂಡು ಹೋಗಿ ಒಂದು ಹಾಳು ಬಾವಿಯಲ್ಲಿ ಹಾಕಿಬಿಟ್ಟಳು.

ದೇವಯಾನಿ ಬಾವಿಯಲ್ಲಿ ನಿಂತು ಅಳುತ್ತಿದ್ದಳು. ಆಗ ಅಲ್ಲೇ ಹಾದು ಹೋಗುತ್ತಿದ್ದ ನಹುಷನ ಮಗನಾದ ಯಯಾತಿ ರಾಜನು, ಕೈ ನೀಡಿ ಅವಳನ್ನು ಮೇಲಕ್ಕೆ ಎತ್ತಿದನು. ಕೈ ಹಿಡಿದವನನ್ನು ಮದುವೆಯಾಗುವುದು ಅಂದಿ ಪದ್ಧತಿ. ಅದರಂತೆ ಶುಕ್ರಾಚಾರ್ಯ ಅವರಿಬ್ಬರಿಗೂ ಮದುವೆ ಮಾಡಿದನು. ಶರ್ಮಿಷ್ಠೆ ಮಾಡಿದ ತಪ್ಪಿಗೆ ಅವಳು ಬದುಕಿರುವವರೆಗೂ ದೇವಯಾನಿಯ ದಾಸಿಯಾಗಿರಬೇಕೆಂದು ತೀರ್ಮಾನವಾಯಿತು.

ಯಯಾತಿ-ದೇವಯಾನಿಯರಿಗೆ ಯದು ಮತ್ತು ತುರ್ವಸು ಎಂಬ ಇಬ್ಬರು ಮಕ್ಕಳಾದರು. ಶರ್ಮಿಷ್ಠೆಯಿಂದ ಯಯಾತಿಗೆ ಮೂವರು ಮಕ್ಕಳಾದರು. ಅವರಲ್ಲಿ ಪುರು ಎಂಬುವನು ತಂದೆಯಲ್ಲಿ ಬಹಳ ಭಕ್ತಿಯಿಟ್ಟಿದ್ದನು.

ಒಮ್ಮೆ ಶುಕ್ರಾಚಾರ್ಯನಿಗೆ ಯಯಾತಿಯ ಮೇಲೆ ಕೋಪ ಬಂತು. ಅವನು ತನ್ನ ಅಳಿಯ ಎನ್ನುವುದನ್ನೂ ಮರೆತು ಶುಕ್ರಾಚಾರ್ಯನು “ನಿನಗೆ ಮುಪ್ಪು ಬರಲಿ” ಎಂದು ಶಾಪಕೊಟ್ಟನು. ಕೂಡಲೇ ಯಯಾತಿ ಮುದುಕನಾದನು. ಕೈಕಾಲು, ತಲೆ ನಡುಗಲಾರಂಭವಾಯಿತು. ಅವನು ಮತ್ತೆ ಯುವಕನಾಗಬೇಕೆಂದು ಬಯಸಿ ತನ್ನ ಐದು ಮಕ್ಕಳನ್ನೂ ಕರೆದನು. ತನ್ನ ಮುಪ್ಪು ತೆಗೆದುಕೊಂಡು ಅವರ ಯೌವನ ಕೊಡಬೇಕೆಂದು ಕೇಳಿದನು. ನಾಲ್ವರು ಒಪ್ಪಲಿಲ್ಲ. ಪುರು ಒಪ್ಪಿ ತಂದೆಯ ಮುಪ್ಪನ್ನು ತೆಗೆದುಕೊಂಡು, ತನ್ನ ಎಳೆತನವನ್ನು ಅವನಿಗೆ ಕೊಟ್ಟನು. ಇದರಿಂದ ಯಯಾತಿಗೆ ಅವನ ಮೇಲೆ ಪ್ರೀತಿ ಹೆಚ್ಚಾಯಿತು.

ಕೆಲ ಕಾಲದನಂತರ ಯಯಾತಿ ಯೌವನವನ್ನು ಪುರುವಿಗೆ ಹಿಂದಿರುಗಿಸಿ, ಮುಪ್ಪನ್ನು ಪಡೆದನು. ಆಗ ತನ್ನ ಐಶ್ವರ್ಯವನ್ನೆಲ್ಲ ಐದು ಮಕ್ಕಳಿಗೂ ಹಂಚಿಕೊಟ್ಟನು. ಆದರೆ ರಾಜ್ಯದ ಪಟ್ಟವನ್ನು ಪುರುವಿಗೆ ಒಪ್ಪಿಸಿ, ಕಾಡಿಗೆ ಹೊರಟು ಹೋದನು.

ಆಗಿನ ಪದ್ಧತಿಯಂತೆ ರಾಜನ ಹಿರಿಯ ಮಗನೇ ರಾಜನಾಗಬೇಕಾಗಿತ್ತು. ಇಲ್ಲಿ ಆ ಪದ್ಧತಿ ವ್ಯತ್ಯಾಸವಾಗಿ ಕಿರಿಯನಾದ ಪುರು ರಾಜನಾದನು. ಇದರಿಂದ ಹಿರಿಯನಾದ ಯದುವಿಗೆ ರಾಜ್ಯ, ಐಶ್ವರ್ಯಗಳಲ್ಲಿ ಜಿಗುಪ್ಸೆ ಹುಟ್ಟಿತು. ಅವನು ವೈರಾಗ್ಯದಿಂದ ಎಲ್ಲವನ್ನೂ ಬಿಟ್ಟು ಕಾಡಿಗೆ ಹೊರಟುಹೋದನು. ಅವನು ದತ್ತಾತ್ರೇಯನ ಭಕ್ತನಾಗಿದ್ದನು. ಒಂದೇ ಮನಸ್ಸಿನಿಂದ ದತ್ತ ಗುರುವನ್ನು ಸ್ಮರಿಸುತ್ತ, ಜನರ ಓಡಾಟವಿಲ್ಲದ ದಟ್ಟವಾದ ಕಾಡಿನಲ್ಲಿ ಇದ್ದುಬಿಟ್ಟನು.

ಇವನ ಭಕ್ತಿಗೆ ಮೆಚ್ಚಿ, ಇವನನ್ನು ಉದ್ಧಾರ ಮಾಡಬೇಕೆಂದು ದತ್ತಾತ್ರೇಯನು ಅಲ್ಲಿ ಕಾಣಿಸಿಕೊಂಡನು. ಕೃಪೆಯಿಂದ ಬಂದ ಆತನನ್ನು ನೋಡಿದ ಕೂಡಲೇ ಯದುವಿಗೆ ತುಂಬಾ ಸಂತೋಷವಾಯಿತು. ಜ್ಞಾನವೇ ಒಂದು ರೂಪ ಪಡೆದು ಬಂದಿದೆಯೋ ಎನ್ನುವಂತಿದ್ದ ದತ್ತನಿಗೆ ಯದು ಭಕ್ತಿಯಿಂದ ನಮಸ್ಕರಿಸಿದನು. ದತ್ತಾತ್ರೇಯನು ಕೃಪೆಯಿಂದ ಉತ್ತಮವಾದ ಜ್ಞಾನತತ್ವವನ್ನು ಯದುವಿಗೆ ಉಪದೇಶಿಸಿದನು. ಈ ಉಪದೇಶ ಇಂದಿಗೂ ಸಾಧಕರಿಗೆ ಮಾರ್ಗದರ್ಶಿಯಾಗಿದೆ. ಇದರಿಂದ ಯದುವು ಮೋಕ್ಷವನ್ನು ಪಡೆದನು.

ಇವರಲ್ಲದೆ ಪ್ರಹ್ಲಾದ, ರಂತಿದೇವ ಇವರನ್ನೂ ದತ್ತಾತ್ರೇಯನು ಉದ್ಧರಿಸಿದನು. ಹೀಗೆ ದತ್ತಾತ್ರೇಯನನ್ನು ಕುರಿತು ಅನೇಕ ಕಥೆಗಳಿವೆ. ಇವೆಲ್ಲಾ ದತ್ತಾತ್ರೇಯನ ಕರುಣೆಯನ್ನು ತೋರಿಸುತ್ತವೆ. ಸದಾ ಭಕ್ತರನ್ನು ಉದ್ಧಾರ ಮಾಡುತ್ತಿರುವ ದತ್ತಾತ್ರೇಯನು ಪದೇ ಪದೇ ಬೇರೆಬೇರೆ ರೂಪಗಳಿಂದ ತೋರಿಸಿಕೊಳ್ಳುವನು, ಜನರಲ್ಲಿ ಧರ್ಮ ಬುದ್ಧಿಯನ್ನು ಬೆಳೆಸುವನು, ಭಕ್ತರನ್ನು ಕಷ್ಟಗಳಿಂದ ಕಾಪಾಡುವವನು, ಯಾವಾಗಲೂ ಜಗತ್ತಿನ ಕಲ್ಯಾಣವನ್ನೇ ಮಾಡುತ್ತಿರುವವನು ಎಂಬುದು ಅವನ ಭಕ್ತರ ಗಾಢವಾದ ನಂಬಿಕೆ.

ಹೊಸ ರೂಪಗಳಲ್ಲಿ

ಇದುವರೆಗೆ ಪುರಾಣಕಾಲದಲ್ಲಿ ದತ್ತಾತ್ರೇಯನು ಮಾಡಿದ ಕಲ್ಯಾಣಗಳನ್ನು ನೋಡಿದೆವು. ಚಾರಿತ್ರಿಕ ಕಾಲದಲ್ಲಿಯೂ ದತ್ತಾತ್ರೇಯನು ಹೊಸ ರೂಪಗಳಲ್ಲಿ ಮತ್ತೆ ಕಾಣಿಸಿಕೊಂಡು, ಜನರಿಗೆ ಒಳ್ಳೆಯ ದಾರಿ ತೋರಿಸಿದ್ದಾನೆ, ಕರುಣೆಯಿಂದ ನೆರವಾಗಿದ್ದಾನೆ ಎಂಬ ನಂಬಿಕೆ ಅವನ ಭಕ್ತರಲ್ಲಿದೆ.

ಗಂಗಾಧರ ಸರಸ್ವತಿ ಎಂಬಾತನು ಕನ್ನಡಿಗ, ದತ್ತಾತ್ರೇಯನ ದೊಡ್ಡ ಭಕ್ತ. ದತ್ತಾತ್ರೇಯನು ಆತನನ್ನು ಪ್ರೇರೇಪಿಸಿ, ತನ್ನ ಇತ್ತೀಚಿನ ಸ್ವರೂಪಗಳಾದ ಶ್ರೀಪಾದ ಶ್ರೀವಲ್ಲಭ, ಶ್ರೀ ನೃಸಿಂಹಸರಸ್ವತಿ – ಈ ರೂಪಗಳಲ್ಲಿ ನಡೆಸಿದ ಕಾರ್ಯಕಲ್ಯಾಣಗಳನ್ನು ಬರೆಸಿದ್ದಾನೆ. ಎಂದು ಅವನು ಬರೆದ ‘ಗುರು ಚರಿತ್ರೆ’ಯನ್ನು ಭಕ್ತರು ಭಕ್ತಿಯಿಂದ, ಶ್ರದ್ಧೆಯಿಂದ ಓದುತ್ತಾರೆ. ಅದು ಮರಾಠಿ ಭಾಷೆಯಲ್ಲಿದೆ. ಅದರ ಅನುವಾದಗಳು ಕನ್ನಡ, ತೆಲುಗು ಮತ್ತು ಅನೇಕ ಭಾಷೆಗಳಲ್ಲಿವೆ.

ಶ್ರೀಪಾದ ಶ್ರೀವಲ್ಲಭ

ಗುರುಚರಿತ್ರೆಯಲ್ಲಿ ವರ್ಣಿಸಿದ ದತ್ತಾತ್ರೇಯರ ಮೊದಲ ರೂಪ ಶ್ರೀಪಾದ ಶ್ರೀವಲ್ಲಭರದು. ಪೀಠಾಪುರ ಎಂಬ ಊರು (ಈಗಿನ ಆಂಧ್ರಪ್ರದೇಶದಲ್ಲಿದೆ). ಅಲ್ಲಿ ಅಪಳರಾಜ ಎಂಬ ಬ್ರಾಹ್ಮಣನಿದ್ದ. ಸುಮತಿ ಎಂಬುವಳು ಆತನ ಹೆಂಡತಿ. ಈಕೆ ದತ್ತಾತ್ರೇಯನ ಭಕ್ತಳು. ಬಂದ ಅತಿಥಿಗಳನ್ನೆಲ್ಲ ದತ್ತನೆಂದೇ ಸೇವಿಸುತ್ತಿದ್ದಳು.

ಒಂದು ಅಮಾವಾಸ್ಯೆ. ಮನೆಯಲ್ಲಿ ಪಿತೃಕಾರ್ಯ ನಡೆಯುವುದಿತ್ತು. ಆ ದಿನ ದತ್ತನು ಸಾಮಾನ್ಯ ಮನುಷ್ಯನಂತೆ ಭಿಕ್ಷೆಗೆ ಬಂದನು. ಸುಮತಿಯು ಪಿತೃಕಾರ್ಯವನ್ನೂ ಮರೆತು, ಒಳ್ಳೆಯ ಭಾವನೆಯಿಂದ ಭಿಕ್ಷೆ ನೀಡಿದಳು. ಸಂತುಷ್ಠನಾದ ದತ್ತುಗುರು, “ತಾಯಿಯೇ, ನಿನ್ನ ಭಿಕ್ಷೆಯಿಂದ ಸಂತೋಷಿತನಾದೆ. ನಿನಗೆ ಬೇಕಾದ ವರವನ್ನು ಬೇಡಿಕೋ” ಎಂದನು. ಆಗ ಸುಮತಿ “ನೀನು ತಾಯಿಯೇ ಎಂದೆಯಲ್ಲವೆ? ಅದನ್ನೇ ನಿಜ ಮಾಡು. ನೀನು ನನ್ನ ಮಗನಾಗು” ಎಂದಳು. ದತ್ತನು ಹಾಗೇ ಆಗಲಿ ಎಂದನು.

ಅದರಂತೆ ಕೆಲ ಕಾಲವಾದ ಮೇಲೆ ದತ್ತನು ಸುಮತಿಯ ಹೊಟ್ಟೆಯಲ್ಲಿ ಹುಟ್ಟಿದನು. ಆತನಿಗೆ ಶ್ರೀಪಾದ ಶ್ರೀವಲ್ಲಭನೆಂದು ಹೆಸರಿಸಲಾಯಿತು. ಈತ ಹುಟ್ಟಿದ್ದು ೧೩೨೦ ರಲ್ಲಿ. (೧೨೫೦ ರವರೆಗೆ ಭಕ್ತರಿಗೆ ಕಾಣಿಸಿಕೊಳ್ಳುತ್ತಿದ್ದ.) ಏಳು ವರ್ಷಕ್ಕೆ ಆತನಿಗೆ ಉಪನಯನವಾಯಿತು. ಆತನಿಗೆ ಹದಿನಾರು ವರ್ಷವಾದಾಗ ತಾಯಿಗೆ ಹೀಗೆ ಹೇಳಿದನು; “ಅಮ್ಮಾ, ನಾನು ಉತ್ತರ ದೇಶಕ್ಕೆ ಹೋಗಬೇಕಾಗಿದೆ. ಅಪ್ಪಣೆ ಕೊಡು.” ಆತನ ಇಬ್ಬರು ಅಣ್ಣಂದಿರು ಅಂಗವಿಕಲರಾಗಿದ್ದರು. ಅವರನ್ನು ತನ್ನ ಕೃಪಾ ದೃಷ್ಟಿಯಿಂದ ಸರಿಪಡಿಸಿ, ತಂದೆತಾಯಿಗಳ ಸೇವೆಗೆ ಅವರನ್ನು ಬಿಟ್ಟು , ಹೊರಟುಹೋದನು. ಕಾಶಿ, ಬದರಿ ಮೊದಲಾದ ಕ್ಷೇತ್ರಗಳನ್ನೆಲ್ಲ ಸಂದರ್ಶಿಸಿದನು. ಅನೇಕ ಸಾಧುಗಳಿಗೆ ಉಪದೇಶ ಮಾಡಿದನು. ಅನಂತರ ಗೋಕರ್ಣಕ್ಕೆ ಬಂದು, ಮೂರು ವರ್ಷ ಇದ್ದು ಎಷ್ಟೋ ಭಕ್ತರನ್ನು ಉದ್ಧಾರ ಮಾಡಿದನು.

ಅಲ್ಲಿಂದ ಕುರುವಪುರಕ್ಕೆ ಬಂದನು. ಇದು ಕೃಷ್ಣಾ ನದಿಯಲ್ಲಿರುವ ಒಂದು ನಡುಗಡ್ಡೆ. ಇದಕ್ಕೆ ಕುರುಗಡ್ಡೆ ಎಂದೂ ಹೇಳುವರು. (ಪೂನಾ ಮತ್ತು ರಾಯಚೂರುಗಳ ಮಧ್ಯೆ ಕೃಷ್ಣಾ ಎಂಬ ರೈಲ್ವೆ ನಿಲ್ದಾಣದಿಂದ ೧೬ ಮೈಲಿ ದೂರದಲ್ಲಿ ಕುರುಗಡ್ಡೆ ಇದೆ. ಸುಂದರವಾದ ಸ್ಥಳ. ಅನೇಕ ಗುಹೆಗಳು, ದೇವಾಲಯ ಇವೆ.)

ಇಲ್ಲಿ ವಿದ್ವಾಂಸನಾದ ಒಬ್ಬ ಬ್ರಾಹ್ಮಣನಿದ್ದ. ಅಂಬಿಕೆ ಆತನ ಹೆಂಡತಿ. ಅವರಿಗೆ ಅನೇಕ ಮಕ್ಕಳು ಹುಟ್ಟಿ ಸತ್ತರು. ಅನಂತರ ದೇವರನ್ನು ಬೇಡಿ ಪಡೆದ ಒಬ್ಬ ಮಗ ಬದುಕಿದ. ಆದರೆ ಅವನು ತೀರಾ ದಡ್ಡನಾಗಿದ್ದ. .ಬ್ರಾಹ್ಮಣ ಸತ್ತು ಹೋದ ಮೇಲೆ ಅಂಬಿಕೆ ಭಿಕ್ಷೆ ಬೇಡಬೇಕಾಯಿತು. ಆ ಹುಡುಗನು ಜಿಗುಪ್ಸೆಯಿಂದ ಪ್ರಾಣ ಬಿಡಲು ನಿರ್ಧರಿಸಿದ. ಅಂಬಿಕೆಯೂ ಅವನೊಡನೆ ನದಿಗೆ ಹೊರಟಳು. ಅಲ್ಲಿ ಶ್ರೀ ಗುರುವನ್ನು ಕಂಡು ನಮಸ್ಕರಿಸಿದಳು. “ಈಗ ನಾನೂ ನನ್ನ ಮಗನೂ ಆತ್ಮಹತ್ಯೆ ಮಾಡಿಕೊಳ್ಳುವೆವು. ನಮಗೆ ಸದ್ಗತಿ ದೊರೆಯುವಂತೆ ಅನುಗ್ರಹಿಸು. ಮುಂದಿನ ಜನ್ಮದಲ್ಲಿ ನಿನ್ನಂಥಾ ಜ್ಞಾನಿಯಾದ ಮಗ ಹುಟ್ಟುವಂತೆ ಹರಸು” ಎಂದು ಬೇಡಿದಳು.

ಶ್ರೀಪಾದ ಶ್ರೀವಲ್ಲಭರು “ಆತ್ಮಹತ್ಯೆ ತುಂಬಾ ದೊಡ್ಡ ಪಾಪಕಾರ್ಯ. ಅದನ್ನು ಯಾರೂ ಮಾಡಬಾರದು. ನೀನು ಸಂಜೆಯ ಹೊತ್ತು ಶಿವನ ಪೂಜೆ ಮಾಡು. ಮುಂದಿನ ಜನ್ಮದಲ್ಲಿ ನನ್ನಂಥಾ ಮಗನೇ ಹುಟ್ಟುವನು” ಎಂದು ತಿಳಿಸಿದರು. ಅಲ್ಲದೆ ಆಕೆಯ ಮಗನನ್ನು ಕೃಪೆಯಿಂದ ನೋಡಿದರು. ಕೂಡಲೇ ಆ ಹುಡುಗನು ಪಂಡಿತನಾದನು. ಅಂಬಿಕೆ ಶ್ರೀಗುರುವನ್ನೇ ಶಿವನೆಂದು ಭಾವಿಸಿ, ಪ್ರತಿ ಸಂಜೆ ಆತನನ್ನೇ ಪೂಜೆ ಮಾಡುತ್ತ ಸುಖವಾಗಿದ್ದಳು.

ಹೀಗೆ ಅನೇಕ ಭಕ್ತರನ್ನು ಉದ್ಧರಿಸಿ ಶ್ರೀಗುರುವು ಅಲ್ಲೇ ಗುಪ್ತನಾದನು, ಅಂದರೆ ಕಾಣದಾದನು.

ಶ್ರೀ ನೃಸಿಂಹಸರಸ್ವತಿ

ಅಂಬಿಕೆಯ ಮಗನಾಗುವೆನೆಂದು ದತ್ತಾತ್ರೇಯ ಮಾತುಕೊಟ್ಟಿದ್ದನಲ್ಲವೆ? ಅಂಬಿಕೆ ಮುಂದಿನ ಜನ್ಮದಲ್ಲಿ ಕರಂಜನಗರದಲ್ಲಿ ಹುಟ್ಟಿದಳು. ದೊಡ್ಡವಳಾದಾಗ ಮಾಧವ ಎಂಬುವನನ್ನು ಮದುವೆಯಾದಳು. ೧೩೮೦ ರಲ್ಲಿ ಆಕೆಗೆ ಒಬ್ಬ ಮಗ ಹುಟ್ಟಿದ. ಅವನನ್ನು ನರಹರಿ ಎಂದು ಕರೆದರು. ಏಳು ವಯಸ್ಸಿನವರೆಗೆ ಅವನು ಮಾತಾಡಲೇ ಇಲ್ಲ. ಎಲ್ಲರೂ ಅವನನ್ನು ಮೂಕನೆಂದೇ ಭಾವಿಸಿದರು.

ನರಹರಿಗೆ ಏಳು ವರ್ಷ. ತಂದೆ ಆತನಿಗೆ ಉಪನಯನ ಮಾಡಿದನು. ಅಲ್ಲಿ ಈ ಮೂಕ ಮಗ ಗಾಯತ್ರಿ ಹೇಗೆ ಹೇಳುವನೋ ನೋಡೋಣವೆಂದು ಊರ ಜನರೆಲ್ಲ ಸೇರಿದ್ದರು. ನರಹರಿಯು ತಾಯಿ ಭಿಕ್ಷೆ ಹಾಕಲು ಬಂದಾಗ, ಒಂದೊಂದು ಭಿಕ್ಷೆಗೂ ಒಂದೊಂದು ವೇದವನ್ನೇ ಘೋಷಿಸದನು. ಬಂದವರಿಗೆಲ್ಲ ಆಶ್ಚರ್ಯವಾಯಿತು.

ನರಹರಿ ತನ್ನ ತಾಯಿಗೆ ಹಿಂದಿನ ಜ್ಞಾನದ ಜ್ಞಾಪಕ ಬರುವಂತೆ ಮಾಡಿದನು. ಆಕೆಗೆ ಇನ್ನಿಬ್ಬರು ಮಕ್ಕಳಾದ ಮೇಲೆ, ತಾಯಿತಂದೆಯರ ಅಪ್ಪಣೆ ಪಡೆದು ನರಹರಿ ಕಾಶಿ ಕ್ಷೇತ್ರಕ್ಕೆ ಹೊರಟುಹೋದನು. ಅಲ್ಲಿ ವೃದ್ಧ ಕೃಷ್ಣ ಸರಸ್ವತಿ ಅವರಿಂದ ಸನ್ಯಾಸ ಪಡೆದು ನೃಸಿಂಹಸರಸ್ವತಿ ಎಂದು ಕರೆಯಲ್ಪಟ್ಟನು. ಅನಂತರ ಉತ್ತರ ಪ್ರದೇಶವನ್ನೆಲ್ಲ ಸಂಚರಿಸಿದರು. ಅನೇಕ ಶಿಷ್ಯರನ್ನು ಪಡೆದರು. ಕಷ್ಟದಲ್ಲಿದ್ದ ಅನೇಕರಿಗೆ ಸಹಾಯ ಮಾಡಿದರು ಎಂದು  ಭಕ್ತರು ಭಾವಿಸುತ್ತಾರೆ.

ಅನಂತರ ಶ್ರೀ ಗುರುವು ಗಾಣಗಾಪುರ ಎಂಬ ಕ್ಷೇತ್ರಕ್ಕೆ ಬಂದರು. (ಈ ಸ್ಥಳ ಕರ್ನಾಟಕ ರಾಜ್ಯದ ಗುಲ್ಬರ್ಗಾದಿಂದ ಒಂದು ಮೈಲಿ ದೂರದಲ್ಲಿದೆ) ಇಲ್ಲಿ ಇಪ್ಪತ್ತು ವರ್ಷಕಾಲ ವಾಸವಾಗಿದ್ದರು.

ಶ್ರೀ ಗುರುವಿನ ಕರುಣೆಯನ್ನು ತೋರಿಸುವ ಅನೇಕ ಕಥೆಗಳನ್ನು ಹೇಳುತ್ತಾರೆ. ಕೆಳಗಿನ ಜಾತಿಯವನು ಎನ್ನಿಸಿಕೊಂಡಿದ್ದ ಒಬ್ಬನಲ್ಲಿ ಗುರು ಕೃಪೆ ತೋರಿಸಿದರು. ಎಲ್ಲರೂ ಆತನನ್ನು ಕೀಳು ಜಾತಿಯವನು, ಏನೂ ತಿಳಿಯದವನು ಎಂದು ತಿರಸ್ಕಾರದಿಂದ ಕಾಣುತ್ತಿದ್ದರು. ಗುರು ಅವನು ವೇದವನ್ನು ಹೇಳುವಂತೆ ಕೃಪೆ ಮಾಡಿದರು. ಕುಷ್ಠರೋಗದಿಂದ ಒಬ್ಬಾತ ತುಂಬ ಕಷ್ಟಪಡುತ್ತಿದ್ದ. ಗುರು ಆತನಿಗೆ ಗುಣ ಮಾಡಿದರು.

ಶ್ರೀಗುರುವು ಶ್ರೀಶೈಲದಲ್ಲಿ ಗುಪ್ತವಾದರು. (ಇದು ನಡೆದುದು ಕ್ರಿ.ಶ. ೧೪೫೯ರಲ್ಲಿ). ಹಾಗೆ ಹೋಗುವಾಗ ಗಾಣಗಾಪುರದಲ್ಲಿ ತಮ್ಮ ನಿರ್ಗುಣ ಪಾದುಕೆಗಳನ್ನು ಬಿಟ್ಟು ಹೋದರು ಎಂದು ಹೇಳುತ್ತಾರೆ. ಈಗಲೂ ಈ ಪಾದುಕೆಗಳಲ್ಲಿ ಸಾಕ್ಷಾತ್‌ ದತ್ತಾತ್ರೇಯನ ಆವಾಸವಿದೆ ಎಂದು ಭಕ್ತರು ಪೂಜಿಸುತ್ತಾರೆ.

ದತ್ತಾತ್ರೇಯರನ್ನು ಕುರಿತು ಭಕ್ತರು ಅನೇಕ ಕಥೆಗಳನ್ನು ಹೇಳುತ್ತಾರೆ. ಎಲ್ಲ ಕಥೆಗಳೂ ದತ್ತಾತ್ರೇಯರ ಕರುಣೆಯನ್ನು ಎತ್ತಿ ತೋರಿಸುತ್ತವೆ. ಅಲ್ಲದೆ ಧರ್ಮದಿಂದ, ನ್ಯಾಯದಿಂಧ ಬಾಳುವವರನ್ನು ಕಂಡರೆ ಅವರಿಗೆ ಮಮತೆ ಎಂಬುದನ್ನೂ ಸಾರುತ್ತವೆ.