ಅನುಬಂಧ – ೨

ಮಹಾಕಾವ್ಯಕ್ಕೆ ಸಂಬಂಧಿಯಾದ ಕೆಲವು ಪ್ರಕಾರಗಳು

ಬ್ಯಾಲೆಡ್ (Ballad)[1]

ಬ್ಯಾಲೆಡ್ ಎಂಬ ಶಬ್ದವು ನೃತ್ಯಗೀತ ಎಂಬ ಅರ್ಥವಿರುವ ಲ್ಯಾಟಿನ್ನಿನ Ballare ಎಂಬ ಶಬ್ದದಿಂದ ಹುಟ್ಟಿದೆ. ಆದರೆ ಇದಕ್ಕೆ ಈಗ “ಕಥನಗೀತ” ಎಂಬ ಅರ್ಥವೇ ಹೆಚ್ಚು ಬಳಕೆಯಲ್ಲಿದೆ. ಬ್ಯಾಲೆಡ್‌ಗಳ ಹುಟ್ಟು ಮತ್ತು ಪ್ರಾಚೀನತೆಯ ಬಗ್ಗೆ ವಿದ್ವಾಂಸರಲ್ಲಿ   ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಪ್ರಾಚೀನ ಸಮಾಜದಲ್ಲಿ ನೃತ್ಯ ಸಂದರ್ಭದಲ್ಲಿ ಆಶು ಸ್ವರೂಪದಲ್ಲಿ ಹುಟ್ಟಿದವೆಂದು ಒಂದು ಪಂಗಡ ಹೇಳಿದರೆ, ಬ್ಯಾಲೆಡ್‌ಗಳು ಮಧ್ಯಯುಗದಲ್ಲಿ ಸೃಷ್ಟಿಯಾದವೆಂದು ಇನ್ನೊಂದು ವಿದ್ವಾಂಸರ ಪಂಗಡ ಹೇಳುತ್ತದೆ. ಒಬ್ಬ ಕವಿಯ ರಚನೆಯಾದರೂ ಅಥವಾ ಸಂಚಾರಿ ಗಾಯಕರ ಸೃಷ್ಟಿಯಾದರೂ, ಅವು ಜನಾಂಗದ ಮೌಖಿಕ ಸಂಪ್ರದಾಯದಲ್ಲಿ ಬೆರೆತು ಹಾಡುವ ಚಾಲ್ತಿಗೆ ಬಂದಾಗ ಮಾತ್ರ ಅವನ್ನು ಬ್ಯಾಲೆಡ್ ಎಂದು ಕರೆಯಬಹುದು. ಈ ಬ್ಯಾಲೆಡ್‌ಗಳ ಸೃಷ್ಟಿಯ ಹಿಂದೆ ಭೌಗೋಳಿಕ ವಿಶೇಷತೆ, ಸಾಮಾಜಿಕ ಶ್ರೇಣೀಕರಣ, ಧಾರ್ಮಿಕ ಚೌಕಟ್ಟು ಮುಂತಾದ ಅಂಶಗಳು ಪ್ರಧಾನ ಪಾತ್ರ ವಹಿಸುತ್ತವೆ. ಮಹಾಕಾವ್ಯ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಬ್ಯಾಲೆಡ್‌ಗಳೆ ಮೂಲ ಚೌಕಟ್ಟನ್ನು ಒದಗಿಸುತ್ತವೆ ಎಂದು ಹೇಳಲಾಗಿದೆ.

ಈ ಬ್ಯಾಲೆಡ್‌ಗಳ ಗಾತ್ರ-ಪ್ರಮಾಣ ಕೂಡ ವೈವಿಧ್ಯತೆಯಿಂದ ಕೂಡಿದೆ. ಕೆಲವೇ ಕೆಲವು ಗಂಟೆಗಳ ಅವಧಿಯಲ್ಲಿ ಹಾಡಬಹುದಾದ ಬ್ಯಾಲೆಡ್‌ಗಳಿಂದ ಹಿಡಿದು ತಿಂಗಳುಗಟ್ಟಲೆ ಹಾಡಬಹುದಾದ ವಿಸ್ತಾರವಾದ ಬ್ಯಾಲೆಡ್ ಸಮೂಹಗಳು ಕೂಡಾ ಇವೆ. ಈ ಥರದ ತಿಂಗಳುಗಟ್ಟಲೆ ಹಾಡಬಹುದಾದ ಬ್ಯಾಲೆಡ್‌ಗಳ ಸಮೂಹ ಒಂದಕ್ಕೊಂದು ವಸ್ತು ನಿರಂತರತೆಯನ್ನು ಹೊಂದಿರುತ್ತವೆ. ‘ಬ್ಯಾಲೆಡ್ ಸೈಕಲ್’ ಎಂದು ಕರೆಯುವುದು ಇವುಗಳನ್ನೇ. ವಸ್ತು ನಿರಂತರತೆಯನ್ನು ಹೊಂದಿರುವ ಅನೇಕ ಬಿಡಿಬಿಡಿ ಲಾವಣಿಗಳು ‘ಬ್ಯಾಲೆಡ್ ಸೈಕಲ್’ಗಳಾಗಿ ಒಂದುಗೂಡುತ್ತವೆ. (ಲಾವಣಿ ಚಕ್ರ ಅಥವಾ ವೀರಗಾಥಾ ಚಕ್ರ). ಇವು ಸಾಮಾನ್ಯವಾಗಿ ವೀರನೊಬ್ಬನ ಕಾರ್ಯವನ್ನು ಕುರಿತದ್ದೋ, ಕುಲದೇವತೆಯ ಮಹಿಮೆಯನ್ನು ಕುರಿತದ್ದೋ ಆಗಿರುತ್ತವೆ. ಇದಕ್ಕೆ ಉದಾಹರಣೆಯಾಗಿ ‘ಬ್ಯಾಲೆಡ್ ಸೈಕಲ್’ಗಳ ಸರ್ವ ಲಕ್ಷಣಗಳನ್ನುಳ್ಳ ತೆಲುಗಿನ ‘ಪಲ್ನಾಟಿ ವೀರಕಥಾ ಚಕ್ರ,’ ಎಂಟು ಕಥೆಗಳ ‘ಎಲ್ಲಮ್ಮ ಕಥಾಚಕ್ರ’ ಇವನ್ನು ಉಲ್ಲೇಖಿಸಬಹುದು. ‘ಪಲ್ನಾಟಿ ವೀರಕಥಾ ಚಕ್ರ’ವನ್ನು ಅನುಸರಿಸಿ ಮುದಿಗೊಂಡ ವೀರಭದ್ರ ಎಂಬುವನು ‘ವೀರಭಾಗವತಮು’ ಎಂಬ ಪದ್ಯಕಾವ್ಯವನ್ನು ಕೂಡಾ ರಚಿಸಿದ್ದಾನೆ. ಹೀಗೆ ವಸ್ತು ಸಮೃದ್ಧತೆಯುಳ್ಳ ಬ್ಯಾಲೆಡ್ ಸೈಕಲ್‌ಗಳೇ ಕವಿಯೊಬ್ಬನ ಪ್ರಜ್ಞಾಪೂರ್ವಕ ಸೃಷ್ಟಿಯಿಂದ ಮಹಾಕಾವ್ಯವಾಗಿ ರೂಪುಗೊಳ್ಳುತ್ತವೆ. ಹೀಗೆ ಸೃಷ್ಟಿಯಾದ ಮಹಾಕಾವ್ಯಗಳನ್ನು ‘ವಿಕಾಸಶೀಲ’ ಮಹಾಕಾವ್ಯ ಎನ್ನುತ್ತಾರೆ. ಇಂಗ್ಲೆಂಡಿನ ‘ಬೀವುಲ್ಫ್’, ಫಿನ್ಲೆಂಡಿನ ‘ಕಾಲೇವಾಲ’ ಮಹಾಕಾವ್ಯಗಳು ಮೇಲೆ ಹೇಳಿದ ಪ್ರಕ್ರಿಯೆಗೆ ಸುಪ್ರಸಿದ್ಧ ನಿದರ್ಶನಗಳು. ನಮ್ಮ ಮಹಾಭಾರತ ಕೂಡಾ ‘ಜಯ’ ಎಂಬ ಬ್ಯಾಲೆಡ್‌ನಿಂದಲೇ ರೂಪುಗೊಂಡಿದೆ ಎನ್ನುತ್ತಾರೆ. ಮಹಾಕಾವ್ಯದ ಒಳ ರಚನೆಯಲ್ಲಿ ಕೂಡಾ ಬ್ಯಾಲೆಡ್‌ನ ಅನೇಕ ವೈಶಿಷ್ಟ್ಯಗಳನ್ನು ಕಾಣುವುದು ಈ ಕಾರಣದಿಂದಲೇ.

ಬ್ಯಾಲೆಡ್‌ಗಳನ್ನು ಮುಖ್ಯವಾಗಿ ಎರಡು ರೀತಿಯಲ್ಲಿ ವರ್ಗೀಕರಿಸುತ್ತಾರೆ :

೧. ಸಾಂಪ್ರದಾಯಿಕ ಅಥವಾ ಜನಪ್ರಿಯ ಬ್ಯಾಲೆಡ್‌ಗಳು.

೨. ಸಾಹಿತ್ಯಿಕ ಬ್ಯಾಲೆಡ್‌ಗಳು.

ಜನಾಂಗದ ಮೌಕಿಕ ಸಂಪ್ರದಾಯದಲ್ಲಿ ಸೃಷ್ಟಿಯಾದ ಜನಪ್ರಿಯ ಬ್ಯಾಲೆಡ್‌ಗಳ ಅನುಕರಣ ರೂಪದಲ್ಲಿ ಪ್ರತ್ಯೇಕ ಕವಿಗಳಿಂದ ರಚಿಸಲ್ಪಟ್ಟ ಬ್ಯಾಲೆಡ್‌ಗಳನ್ನೇ ಸಾಹಿತ್ಯಿಕ ಬ್ಯಾಲೆಡ್‌ಗಳೆಂದು ಕರೆಯುತ್ತಾರೆ. ಇವೆರಡರ ಬಂಧದಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ. ದುರಂತ ಪ್ರೇಮ, ವೀರನೊಬ್ಬನ ಸಾಹಸಗಳು, ಭೂತ, ಪ್ರೇತ, ಕುಲದೇವತೆಯ ಮಹಿಮೆ ಮುಂತಾದ ವಸ್ತುಗಳನ್ನು ಆಧರಿಸಿಯೇ ಬಹುಪಾಲು ರಚಿತವಾಗಿರುತ್ತವೆ. ವಸ್ತುವಿನ ಭಿನ್ನತೆ ಏನೇ ಇದ್ದರೂ ಸಾಮಾನ್ಯ ಲಕ್ಷಣಗಳು ಈ ರೀತಿ ಇವೆ :

೧. ಬ್ಯಾಲೆಡ್‌ಗಳು ಗೀತ ಸ್ವರೂಪದಲ್ಲಿರುತ್ತವೆ. ಸರಳವಾದ ಛಂದಸ್ಸು, ಗಾನಯೋಗ್ಯತೆ – ಈ ಅಂಶಗಳು ಬ್ಯಾಲೆಡ್‌ನ ಪ್ರಮುಖ ಲಕ್ಷಣಗಳೆನ್ನಬಹುದು.

೨. ಕಥನ ನಿರೂಪಣೆಯ ಪ್ರಾಮುಖ್ಯತೆ

೩. ಮೌಖಿಕ ಪ್ರಸರಣದಿಂದ ನಾಡಿನಾದ್ಯಂತ ವ್ಯಾಪಿಸಿ, ಮೌಖಿಕ ಸಂಪ್ರದಾಯದಿಂದ ತಲೆಮಾರಿನಿಂದ ತಲೆಮಾರಿಗೆ ಸಾಗುತ್ತವೆ. ಇದರಿಂದ ಉಂಟಾಗುವ, ಸ್ಥಿತ್ಯಂತರಗಳನ್ನು ಗುರುತಿಸಲು ಸಾಧ್ಯ.

೪. ಸರಳಬಂಧ ಹೊಂದಿರುವ ಬ್ಯಾಲೆಡ್‌ಗಳಲ್ಲಿ, ವಸ್ತುನಿಷ್ಠ ಭಾವ ಪ್ರಕಟಣೆ ಮುಖ್ಯವಾದದ್ದು. ಈ ಕಾರಣದಿಂದಲೇ ಬ್ಯಾಲೆಡ್‌ಗಳು ವ್ಯಕ್ತಿಗತ ರಸಾನಂದವನ್ನು ಕೊಡುವುದು ಕಡಿಮೆ.

೫. ಕೆಲವು ಪದಗುಚ್ಛಗಳು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತವೆ. ಇದರಿಂದ ಶೈಲಿಯಲ್ಲಿ ಸರಳತೆ ಉಂಟಾಗುವುದು ಸಹಜ.

೬. ಇಲ್ಲಿಯ ಬಂಧ ಮತ್ತು ಶೈಲಿಯ ವೈಶಿಷ್ಟ ತೆಗಳು ಮೌಖಿಕ ಸಂಪ್ರದಾಯದ ಕೆಲವು ಅನಿವಾರ್ಯಗಳಿಂದ ರೂಪುಗೊಂಡಂಥವು.

ಗಾಥಾಕಾರರು (Minstrels) ಹಾಡುವ ಈ ಬ್ಯಾಲೆಡ್‌ಗಳ ಭಾಷೆ ಸಮುದಾಯದ ಆಡುನುಡಿ. ಅದು ತನ್ನೆಲ್ಲಾ ಶಕ್ತಿಸಾಮರ್ಥ್ಯ ಸಹಜ ಗೇಯತೆಗಳೊಂದಿಗೆ ಪ್ರಕಟವಾಗುತ್ತದೆ.

ಬ್ಯಾಲೆಡ್‌ಗಳು ಎಲ್ಲಾ ದೇಶದ ಸಾಹಿತ್ಯಗಳ ಪ್ರಧಾನ ಸಂಪತ್ತು. ಇದನ್ನು ಜನಪದ ಸಾಹಿತ್ಯದಲ್ಲಿಯೇ ಸೇರಿಸುತ್ತಾರಾದರೂ, ಬೇರೆ ಪ್ರಕಾರವಾಗಿ ವಿಂಗಡಿಸಬಹುದಾದಷ್ಟು ವಿಸ್ತಾರ ಇದಕ್ಕಿದೆ. ಒಂದು ನಾಡಿನ ಬ್ಯಾಲೆಡ್‌ಗಳು ಅಲ್ಲಿಯ ಸಂಸ್ಕೃತಿಯ ವೈಶಿಷ್ಟ್ಯ ವಿಷಮತೆಗಳನ್ನು  ಪ್ರಕಟಿಸುತ್ತವೆ. ಸಮಷ್ಠಿಯ ಅಭಿವ್ಯಕ್ತಿಯಾಗಿರುವ ಈ ಪ್ರಕಾರ, ಸಂಘಟನೆಯ ಮಾಂತ್ರಿಕ ಶಕ್ತಿಯನ್ನು ಹೊಂದಿದೆ. ಕೈಗಾರಿಕೀಕೃತ ಸಮಾಜ ಬ್ಯಾಲೆಡ್‌ಗಳ ಹುಟ್ಟಿಗೆ ಮಾರಕ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಆದರೂ ಬ್ಯಾಲೆಡ್‌ಗಳ ಸಾಹಿತ್ಯಕ ವೈಶಿಷ್ಟ್ಯ, ಗೇಯ ಸ್ವರೂಪ ಎರಡನ್ನೂ ಉಳಿಸಿಕೊಳ್ಳುವುದು ಸಾಧ್ಯವಿದೆ.[2]

ಲೇ : (Lay)

ಮೂಲತಃ ಜರ್ಮನ್ ಪದವಾದ ಇದರ ಅರ್ಥ ‘ಹಾಡು’ ಎಂದು. ಇದು ಮೊದಲು ಭಾವಗೀತೆ ಅಥವಾ ನಿರೂಪಣಾತ್ಮಕ ಪದ್ಯದ ಸ್ವರೂಪದಲ್ಲಿದ್ದು ಇದನ್ನು ಹಾಡಲಾಗುತ್ತಿತ್ತು. ನಂತರ ಇದರ ವ್ಯಾಪ್ತಿ ವಿಸ್ತಾರವಾಗಿ ಚಾರಿತ್ರಿಕ ಘಟನೆಗಳು ಮತ್ತು ರೊಮಾನ್ಸ್‌ಗಳನ್ನು ಸಹ ಒಳಗೊಂಡಿತು.

ಬಿಡಿ ಬಿಡಿಯಾದ ‘ಲೇ’ ಗಳೇ ನಂತರ ಸಂಕಲಿತವಾಗಿ ಮಹಾಕಾವ್ಯವಾಗುತ್ತವೆ ಎಂಬ ಅಭಿಪ್ರಾಯ ಇದೆ. ಲಾವಣಿ ಪ್ರಕಾರದ ಮೂಲ ಸಹ ಲೇ ಗಳಿಂದಲೇ ಎಂದು ವಿದ್ವಾಂಸರು ಹೇಳುತ್ತಾರೆ.

ಕೆಲವು ಪ್ರಸಿದ್ಧ ಲೇ ಗಳು

೧. ಲೇಸ್ ಆಫ್ ಏನ್ಷಂಟ್ ರೋಮ್ : ರೋಮಿನ ಚರಿತ್ರೆಯ ಮೂಲ ಆಧಾರ ಎಂದು ಹೇಳಲಾಗುತ್ತಿದ್ದ ಪ್ರಾಚೀನ ರೋಮಿನ ಲೇಗಳನ್ನು ೧೮೪೨ರಲ್ಲಿ ಮೆಕಾಲೆ ಎನ್ನುವವನು ಸಂಗ್ರಹಿಸಿದ ಅಲ್ಲಿ ಬರುವ ಕೆಲವು ಕಥೆಗಳ ವಸ್ತು ಹೀಗಿವೆ :

ಹೊರೆಷಿಯಸ್ : ಟಸ್ಕನ್ ದಳದ ವಿರುದ್ಧ ರೋಮಿನ ಸೇತುವೆಯನ್ನು ಕಾಪಾಡಿದ ಹೊರೆಷಿಯಸ್‌ನ ಸಾಹಸ ಇದರ ವಸ್ತು.

ಬ್ಯಾಟಲ್ ಆಫ್ ಲೇಕ್ ರೀಗಲ್ಲ್ಯಸ್ : ರೋಮನ್ನರು ದೇವತೆಗಳ ಸಹಾಯದಿಂದ ಲ್ಯಾಟಿನ್ನರನ್ನು ಸೋಲಿಸಿದ ಕಥೆ.

ವರ್ಜಿನೀಯ : (Verginia) ಕಾಮುಕನಾದ ಕ್ಲಾಡಿಯಸ್ ಎಂಬುವನಿಂದ ಮಗಳನ್ನು ಉಳಿಸಲು ತಂದೆಯಾದ ವರ್ಜಿನೀಯಸ್ ಮಗಳನ್ನೇ ಇರಿದು ಕೊಂದ ಕಥೆ.

೨. ಲೇ ಆಫ್ ದಿ ಲಾಸ್ಟ್ ಮಿನಿಸ್ಟ್ರಲ್ (Lay of the last minstrel)

ಇಂಗ್ಲಿಷಿನ ಪ್ರಸಿದ್ಧ ಸಾಹಿತಿ ವಾಲ್ಟರ್‌ಸ್ಕಾಟನ ರಚನೆ ಇದು. ಜನಪದ ವಸ್ತು, ನಿಗೂಢ ದಂತಕಥೆಗಳು ಮತ್ತು ರೋಮಾನ್ಸ್‌ಗಳಿಂದ ‘ಲೇ’ ತನ್ನ ವಸ್ತುವನ್ನು ಪಡೆಯುತ್ತದೆ.

ಅಣುಕು ವೀರ ಮಹಾಕಾವ್ಯ (Mock Heroic Epic)

ಇಲ್ಲಿ ಲಘುವಾದ ಮತ್ತು ಕ್ಷುಲ್ಲಕವಾದ  ವಸ್ತುವನ್ನು ಮಹಾಕಾವ್ಯದ ಉನ್ನತ ಮತ್ತು ಆಡಂಬರದ ಶೈಲಿಯಲ್ಲಿ ಅಭಿವ್ಯಕ್ತಿಸಲಾಗಿರುತ್ತದೆ. ಅಣುಕು ವೀರ ಮಹಾಕಾವ್ಯದಲ್ಲಿ ಸಾಧಾರಣ ಪಾತ್ರ ಮತ್ತು ಘಟನೆಗಳನ್ನು ವೀರೋಚಿತವಾದ ಭಾಷೆ ಮತ್ತು ಉದಾತ್ತ ಘಟನೆಗಳಿಗೆ ಮೀಸಲಾದ ಶೈಲಿಯಲ್ಲಿ ವರ್ಣಿಸಲಾಗಿರುತ್ತದೆ. ಇಲ್ಲಿ ಹಾಸ್ಯ ಮತ್ತು ವಿಡಂಬನೆಯೇ ಪ್ರಧಾನವಾದದ್ದು. ವಾಸ್ತವವಾಗಿ ಅಣುಕು ಮಹಾಕಾವ್ಯ ಎನ್ನುವುದು ಶೈಲಿಗೆ ಸಂಬಂಧಿಸಿದ್ದೇ ಹೊರತು ಬಂಧಕ್ಕಲ್ಲ.

ಕೆಲವು ಅಣಕು ಮಹಾಕಾವ್ಯಗಳು :

೧. ಗ್ರೇ ಕವಿಯ : ಓಡ್ ದಿ ಡೆತ್ ಆಫ್ ಎ ಫೇವರಿಟ್ ಕ್ಯಾಟ್

(ode on the dealth of a favourite cat)

೨. ಅಲೆಗ್ಸಾಂಡರ್ ಪೋಪ್ : ರೇಪ್ ಆಫ್ ದಿ ಲಾಕ್

(Rape of the Lock)

 

ಗ್ರಂಥಋಣ

L. Abercrombie : The Idea of great poetry

R. M. Alden : An Introduction to poetry

Sri Aurobindo : Letters of Aurobindo II series.

C. M. Bowra : Heroic poetry

C. M. Bowra : From vergil to Milton.

A. C. Bradley : Oxford Lectures on poetry

Maud Bodkin : Architypal patterns in poetry.

Cassell’s Encyclopaedia of literature : Ed: S. H. Steinberg

John Drinkwater : The Lyric

Encyclopaedia Britanika : Volume  viii

T. S. Eliot : What is a classic

T. S. Eliot : Three voices of poetry

Norman Hepple : Lyrical Forms in English

E. Washburn Hopkins : Great Epic of India.

W. H. Hudson : An Introduction to the study of       Literature

C. C. Jung : Modern Man in search of a soul

W. P. Ker : Epic and Romance

W. P. Ker : Form and style in poetry

P. G. Lalye : Studies in Devi Bhagavatha

C. R. Levy : The Sword and the Rock

Paul Merchant : The Epic

I. T. Myres : The study in Epic development

A. D. Pusalkar : Studies in Epic and Puranas of        India

K. R. Sreenivasa Iyengar : The adventure of criticisum

K. R. Sreenivasa Iyengar : Introduction to the Study of English Literature

E. M. W. Tillyard : The English epic and its background.

J. A. K. Thompson : Classical Influences of English poetry.

J. A. K. Thompson : Classical background of English Literature.

ಟಿ. ವಿ. ವೆಂಕಟಾಚಾಲ ಶಾಸ್ತ್ರೀ : ಮಹಾಕಾವ್ಯ ಲಕ್ಷಣ

ತೀ. ನಂ. ಶ್ರೀಕಂಠಯ್ಯ : ಭಾರತೀಯ ಕಾವ್ಯಮೀಮಾಂಸೆ.

ಟಿ. ಎಸ್. ವೆಂಕಣ್ಣಯ್ಯ : (ಅನು) ಪ್ರಾಚೀನ ಸಾಹಿತ್ಯ ಮೂಲ : ರವೀಂದ್ರನಾಥ ಟ್ಯಾಗೂರ್.

ಎ. ಆರ್. ಕೃಷ್ಣಶಾಸ್ತ್ರಿ : ವಚನ ಭಾರತ

ಮಾಸ್ತಿ ವೆಂಕಟೇಶ ಅಯ್ಯಂಗಾರ್ : ಆದಿಕವಿ ವಾಲ್ಮೀಕಿ

ಎ. ಎನ್. ನರಸಿಂಹಯ್ಯ : (ಅನು) ಸಾಹಿತ್ಯ. ಮೂಲ ರವೀಂದ್ರನಾಥ ಟ್ಯಾಗೂರ್

ಎಸ್. ಆರ್. ರಾಮಸ್ವಾಮಿ : ಮಹಾಭಾರತದ ಬೆಳವಣಿಗೆ.

ಪ್ರಭುಶಂಕರ : ಭಾವಗೀತೆ.

ಕುವೆಂಪು : ತಪೋನಂದನ

ಎನ್. ಬಾಲಸುಬ್ರಮಣ್ಯ : ಅರಿಸ್ಟಾಟಲನ ಕಾವ್ಯಮೀಮಾಂಸೆ.

ಎಲ್. ಎಸ್. ಶೇಷಗಿರಿರಾವ್        :         ಇಲಿಯಡ್

ಯುಗಯಾತ್ರೀ ಭಾರತೀಯ ಸಂಸ್ಕೃತಿ : (ಎರಡನೆಯ ಸಂಪುಟ) ಪ್ರ : ನಿರ್ದೇಶಕರು ಪ್ರಸಾರಾಂಗ. ಮಾನಸಗಂಗೋತ್ರಿ. ಮೈಸೂರು

ಡಾ. ಕೆ. ಕೃಷ್ಣಮೂರ್ತಿ : ಕನ್ನಡ ಕಾವ್ಯಾಲಂಕಾರ

ಡಾ. ಕೆ. ಕೃಷ್ಣಮೂರ್ತಿ : ಕನ್ನಡ ಧ್ವನ್ಯಾಲೋಕ ಮತ್ತು ಲೋಚನಸಾರ.

ಡಾ. ಕೆ. ಕೃಷ್ಣಮೂರ್ತಿ : ಕನ್ನಡ ಕಾವ್ಯಮೀಮಾಂಸೆ.

ಶ್ರೀಮದ್‌ವಾಲ್ಮೀಕಿ ರಾಮಾಯಣಂ : ಬಾಲಕಾಂಡ

ಕಾಳಿದಾಸ : ರಘುವಂಶ

ಪಂಪ : ವಿಕ್ರಮಾರ್ಜುನ ವಿಜಯ

ಬಾಣ : ಕಾದಂಬರಿ

ರನ್ನ : ಗದಾಯುದ್ಧ

ನಾಗಚಂದ್ರ : ರಾಮಚಂದ್ರ ಚರಿತ ಪುರಾಣ.

ಮಲ್ಲಿಕಾರ್ಜುನ : ಸೂಕ್ತಿಸುಧಾರ್ಣವ.

ರಾಘವಾಂಕ : ಸಿದ್ಧರಾಮ ಚರಿತ ಪುರಾಣ.

ಕುಮಾರವ್ಯಾಸ : ಕರ್ಣಾಟ ಭಾರತ ಕಥಾಮಂಜರಿ.

ಕುವೆಂಪು : ಶ್ರೀ ರಾಮಾಯಣ ದರ್ಶನಂ.

Homer : Illiad.

Homer : Odyssey

Vergil : Anied

Dante : Divine Comedy

Milton : Paradise Lost

The readers companion to World Literature.

General Editor : Calvin S. Brown


[1] ‘ಬ್ಯಾಲೆಡ್’ ಎಂಬುದಕ್ಕೆ ಸಮಾನಾರ್ಥದಲ್ಲಿ ‘ಲಾವಣಿ’ ಎಂಬ ಪದ ಕನ್ನಡದಲ್ಲಿ ಬಳಕೆಯಲ್ಲಿದೆ.

[2] ಈ ಬರಹದ ಬಹುಪಾಲು ಮಾಹಿತಿಗಳನ್ನು  ಡಾ. ತಂಗಿರಾಲ ವೆಂಕಟಸುಬ್ಬಾರಾವು ಅವರ ‘ತೆಲುಗು ವೀರಗಾಥೆಗಳು’ (ಸಾಧನೆ – ಸಂಪುಟ ೧, ಸಂಚಿಕೆ ೩, ೪) ಎಂಬ ಲೇಖನದಿಂದ ತೆಗೆದುಕೊಳ್ಳಲಾಗಿದೆ.