Categories
ಕನ್ನಡ ಡಾ|| ಜಿ ಎಸ್ ಶಿವರುದ್ರಪ್ಪ ರಾಷ್ಟ್ರಕವಿ ಕೃತಿ ಸಂಚಯ ಸಮಗ್ರ ಗದ್ಯ 3

ಮಹಾಕಾವ್ಯ ಸ್ವರೂಪ

ಮಹಾಕಾವ್ಯವನ್ನು ಕುರಿತ ಸೂತ್ರಗಳು

ಸಾಹಿತ್ಯದ ವಿವಿಧ ರೂಪಗಳನ್ನು ಖಚಿತವಾಗಿ ವರ್ಗೀಕರಿಸಿ ತೋರಿಸುವುದು ಸುಲಭವಾದ ಕೆಲಸವಲ್ಲ; ಆದರೆ ಅವುಗಳಲ್ಲಿ ‘ಮಹಾಕಾವ್ಯ’ ಎಂಬ ರೂಪವನ್ನು ಗುರುತಿಸಿ ತೋರಿಸುವುದು ಅಂತಹ ಕಷ್ಟದ ಕೆಲಸವೇನಲ್ಲ. ಆನೆಯನ್ನು ಉಳಿದ ಭೂಚರ ಪ್ರಾಣಿಗಳಿಂದ ಪ್ರತ್ಯೇಕಿಸಿ ತೋರಿಸುವಷ್ಟು ಸುಲಭವಾಗಿ, ಅರಮನೆಯನ್ನು ಉಳಿದ ಮನೆಗಳಿಂದ ಬೇರೆಯೆಂದು ಗುರುತಿಸುವಷ್ಟು ಖಚಿತವಾಗಿ ‘ಮಹಾಕಾವ್ಯ’ವನ್ನು ಉಳಿದ ಸಾಹಿತ್ಯ ಪ್ರಕಾರಗಳಿಂದ ವರ್ಗೀಕರಿಸಿ ತೋರಿಸಬಹುದು. ಮಹಾಕಾವ್ಯ ಎಂಬ ಮಾತಿನಲ್ಲೆ ಇರುವ ‘ಮಹಾ’ ಎಂಬುದೇ ಅದರ ವಿಶೇಷತೆಯನ್ನು ಸೂಚಿಸುತ್ತದೆ. ‘ಮಹಾ’ ಎಂಬುದು ಅದರ ಗಾತ್ರವನ್ನೂ, ವಿಸ್ತಾರವನ್ನೂ ಆಂತರಿಕ ಸತ್ವಾತಿಶಯವನ್ನೂ ಒಟ್ಟಿಗೆ ಸೂಚಿಸುತ್ತದೆ. ನಾಟಕ, ಖಂಡ ಕಾವ್ಯ, ಭಾವಗೀತೆ ಇತ್ಯಾದಿ ಕಾವ್ಯ ಪ್ರಕಾರಗಳಿಂದ ಮಹಾಕಾವ್ಯ ಹೇಗೆ ಬೇರೆ ಎನ್ನುವುದಕ್ಕೆ ಅದರ ಕೇವಲ ಗಾತ್ರವೊಂದೆ ಸಾಕು. ಅಲ್ಲದೆ ಮಹಾಕಾವ್ಯ ಎನ್ನುವುದು, ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ವಿಶಿಷ್ಟವೂ, ತೀರ ವಿರಳವೂ ಆದ ಒಂದು ರೂಪ. ನಿಜವಾದ ಅರ್ಥದಲ್ಲಿ ಮಹಾಕಾವ್ಯಗಳೆಂಬ ಪ್ರಶಸ್ತಿಗೆ ಅರ್ಹವಾಗುವ ಕೃತಿಗಳು ಜಗತ್ತಿನ ಸಾಹಿತ್ಯದಲ್ಲಿಯೆ ಕೇವಲ ಬೆರಳೆಣಿಕೆಗೆ ಸಾಲುವಷ್ಟು ಸಂಖ್ಯೆಯಲ್ಲಿವೆ.