ಲಕ್ಷ್ಮೀ ಸಂಪತ್ತಿನ ದೇವತೆ. ಅವಳಿಗೆ ‘ಶ್ರೀ’ ಎಂದೂ ಹೆಸರಿದೆ. ಧನ, ಧಾನ್ಯ, ಹಸು, ಹೊಲ, ಚಿನ್ನ, ಬೆಳ್ಳಿ ಮೊದಲಾದವು ಸಂಪತ್ತು. ಅದು ಯಾರಿಗೆ ಬೇಡ? ಲಕ್ಷ್ಮೀಯ ಅನುಗ್ರಹವಾದರೆ ಸಂಪತ್ತು ದೊರೆಯುತ್ತದೆ ಎಂದು ಎಲ್ಲರೂ ಲಕ್ಷ್ಮೀದೇವಿಯನ್ನು ಪೂಜಿಸುತ್ತಾರೆ.

ಬ್ರಹ್ಮ, ವಿಷ್ಣು, ಶಿವ ಇವರು ತ್ರಿಮೂರ್ತಿಗಳೆಂದು ಪ್ರಸಿದ್ಧರಾಗಿದ್ದಾರೆ. ಇವರಲ್ಲಿ ಬ್ರಹ್ಮನ ಪತ್ನಿ ಸರಸ್ವತಿ, ವಿಷ್ಣುವಿನ ಪತ್ನಿ ಲಕ್ಷ್ಮಿ, ಶಿವನ ಪತ್ನಿ ಪಾರ್ವತಿ. ಸರಸ್ವತಿ ವಿದ್ಯೆಯ ದೇವತೆ. ಪಾರ್ವತಿ ಶಕ್ತಿಯ ದೇವತೆ. ಲಕ್ಷ್ಮಿಯಾದರೋ ಸಂಪತ್ತಿನ ದೇವತೆ. ಮನುಷ್ಯನಿಗೆ ವಿದ್ಯೆ, ಶಕ್ತಿ, ಸಂಪತ್ತು ಇವು ಮೂರೂ ಬೇಕು.

ಲಕ್ಷ್ಮೀ ಸ್ತೋತ್ರ

ಶ್ರೀಸೂಕ್ತ ಎಂಬ ಒಂದು ವೇದಮಂತ್ರವಿದೆ. ಇದು ಲಕ್ಷ್ಮೀದೇವಿಯ ಸ್ತೋತ್ರ ಮತ್ತು ಪ್ರಾರ್ಥನೆಗಳನ್ನು ಒಳಗೊಂಡಿದೆ. ಪೂಜಾ ಕಾಲದಲ್ಲಿ ಇದನ್ನು ಪಠಿಸುತ್ತಾರೆ. ಶ್ರೀಸೂಕ್ತದ ಕೆಲವು ಮಾತುಗಳಿಗೆ ನಾವು ಅರ್ಥವನ್ನು ತಿಳಿದುಕೊಂಡರೆ, ಲಕ್ಷ್ಮಿಯ ರೂಪ, ಸ್ವಭಾವ, ಮಹಿಮೆ ಮೊದಲಾದವು ತಿಳಿಯುತ್ತವೆ.

ಹಿರಣ್ಯವರ್ಣಾಂ = ಲಕ್ಷ್ಮಿ ಚಿನ್ನದ ಬಣ್ಣದವಳು. ಪದ್ಮವರ್ಣಾಂ = ತಾವರೆಯ ಬಣ್ಣದವಳು. ಆದಿತ್ಯ ವರ್ಣೇ = ಸೂರ್ಯನಂತೆ ಹೊಳೆಯುವ ಬಣ್ಣದವಳು. ಪದ್ಮಾನನೇ = ಲಕ್ಷ್ಮಿಯ ಮುಖ ತಾವರೆಯಂತೆ ಸುಂದರವಾಗಿದೆ. ಪದ್ಮದಲಯಾತಾಕ್ಷೀ = ಅವಳಿಗೆ ತಾವರೆಯ ದಳದಂತೆ ವಿಶಾಲವಾದ ಮತ್ತು ಸುಂದರವಾದ ಕಣ್ಣುಗಳಿವೆ. ಪದ್ಮ ಮಾಲಿನೀಂ = ತಾವರೆ ಹೂಗಳ ಸರವನ್ನು ಧರಿಸಿದವಳು. ಸರಸಿಜನಿಲಯೇ = ತಾವರೆಯ ಹೂವಿನಲ್ಲಿ ನೆಲಸಿದವಳು. ಸರೋಜಹಸ್ತೇ = ಕೈಯಲ್ಲಿ ತಾವರೆಯನ್ನು ಹಿಡಿದವಳು.”

ಇದರಿಂದ ಲಕ್ಷ್ಮಿಗೆ ತಾವರೆ ಹೂವಿನಲ್ಲಿ ತುಂಬ ಪ್ರೀತಿಯೆಂದು ಗೊತ್ತಾಗುತ್ತದೆ. ಆದ್ದರಿಂದ ಪದ್ಮಪ್ರಿಯೇ (ಕಮಲವನ್ನು ಪ್ರೀತಿಸತಕ್ಕವಳೆ) ಎಂದು ಶ್ರೀ ಸೂಕ್ತದಲ್ಲಿ ಹೇಳಿದೆ. ಅವಳು, ಧವಲತರಾಂಶುಕ ಗಂಧಮಾಲ್ಯಶೋಭೇ (ಶುಭ್ರವಾದ ಬಿಳಿಯ ವಸ್ತ್ತವನ್ನುಟ್ಟು ಗಂಧ ಹೂಮಾಲೆಗಳಿಂದ ಶೋಭಿಸತಕ್ಕವಳು). ಲಕ್ಷ್ಮಿಯ ಮಹಿಮೆ ಏನು? ಅವಳು, ಪ್ರಜಾನಾಂಭವಸೀ ಮಾತಾ (ಜನರೆಲ್ಲರ ತಾಯಿ), ವಿಶ್ವಪ್ರಿಯೇ (ಜಗತ್ತನ್ನು ಪ್ರೀತಿಸತಕ್ಕವಳು). ಭಕ್ತನು ಅವಳಲ್ಲಿ ಹೀಗೆ ಬೇಡಿಕೊಳ್ಳುತ್ತಾನೆ: ಪ್ರಾದುರ್ಭೂತೋಸ್ಮಿ ರಾಷ್ಟ್ರೇಸ್ಮಿನ್‌ ಕೀರ್ತಿಮೃದ್ಧಿಂದದಾತು ಮೇ (ನಾನು ಈ ರಾಷ್ಟ್ರದಲ್ಲಿ ಹುಟ್ಟಿದ ಪ್ರಜೆಯಾಗಿದ್ದೇನೆ. ನನಗೆ ಕೀರ್ತಿಯನ್ನೂ ಸಂಪತ್ತನ್ನೂ ಕೊಡು), ‘ವಸಮೇ ಗೃಹೇ’ (ನನ್ನ ಮನೆಯಲ್ಲಿ ವಾಸಮಾಡು), ‘ಆಯುಷ್ಮಂತಂ ಕರೋತು ಮೇ’ (ನಾನು ದೀರ್ಘಕಾಲ ಬದುಕುವಂತೆ ಮಾಡು).

ಶ್ರೀಸೂಕ್ತವನ್ನು ಪಠಿಸಿ ಲಕ್ಷ್ಮೀದೇವಿಯ ಅನುಗ್ರಹವನ್ನು ಗಳಿಸಿಕೊಳ್ಳತಕ್ಕವರಿಗೆ ಆಗುವ ಪ್ರಯೋಜನವನ್ನು ಹೀಗೆ ಹೇಳಲಾಗಿದೆ. ‘ನಕ್ರೋಧೋ ನಚಮಾತ್ಸರ್ಯಂ ನಲೋಭೋ ನಾಶುಭಾಮತಿಃ” (ಅವರಿಗೆ ಕೋಪ ಬರುವುದಿಲ್ಲ. ಹೊಟ್ಟೆಕಿಚ್ಚು ಇರುವುದಿಲ್ಲ. ದುರಾಸೆಯಾಗುವುದಿಲ್ಲ.  ಅವರಿಗೆ ಕೆಟ್ಟಬುದ್ಧಿಯೇ ಬರುವುದಿಲ್ಲ). ಅಲ್ಲದೆ, ಲಕ್ಷ್ಮಿಯನ್ನು ಸ್ತುತಿಸತಕ್ಕವರಿಗೆ ಆಯುಸ್ಸು ಹೆಚ್ಚುವುದು. ಆರೋಗ್ಯ ಉತ್ತಮವಾಗಿರುವುದು. ಅವರು ಕೀರ್ತಿಶಾಲಿಗಳಾಗಿ ಬಾಳುತ್ತಾರೆ. ಇವೇ ಮೊದಲಾದ ಪ್ರಯೋಜನಗಳು ದೊರೆಯುತ್ತವೆಯೆಂದು ಹೇಳಿದೆ.

ಮಂಗಳ ದೇವತೆ

ಲಕ್ಷ್ಮಿಯು ಮಂಗಳದೇವತೆ. ಅವಳಲು ತನ್ನ ಪತಿಯಾದ ಶ್ರೀಮನ್ನಾನಾರಾಯಣನೊಡನೆ ಯಾವಾಗಲೂ ಇರುತ್ತಾಳೆ. ಅವಳು ಪತಿವ್ರತಾಶಿರೋಮಣಿ. ವಿಷ್ಣು ಬೇರೆಬೇರೆ ಅವತಾರಗಳನ್ನು ತಾಳಿದಾಗ ಅವಳೂ ಅವತರಿಸಿ ಆತನ ಪತ್ನಿಯಾಗಿರುತ್ತಾಳೆ. ಉದಾಹರಣೆಗೆ, ರಾಮಾವಾತಾರದಲ್ಲಿ ಲಕ್ಷ್ಮಿಯು ಸೀತೆಯಾಗಿಯೂ ಕೃಷ್ಣಾವತಾರದಲ್ಲಿ ರುಕ್ಮಿಣಿಯಾಗಿಯೂ ಅವತರಿಸಿದಳು. ಅವಳು ವಿಷ್ಣುವಿನ ಹೃದಯದಲ್ಲಿ ನೆಲೆಸಿದ್ದಾಳೆಂದು ಪುರಾಣಗಳಲ್ಲಿ ವರ್ಣನೆ ಇದೆ. ಆದ್ದರಿಂದ ವಿಷ್ಣುವಿಗೆ ಶ್ರೀನಿವಾಸನೆಂದು ಹೆಸರು. ಶ್ರೀ(ಲಕ್ಷ್ಮೀ)ಯು ಯಾರಲ್ಲಿ ನೆಲಸಿದ್ದಾಳೋ ಅವನು ಶ್ರೀನಿವಾಸ.

ಲಕ್ಷ್ಮಿಯನ್ನು ಮಹಾಲಕ್ಷ್ಮಿ, ವರಮಹಾಲಕ್ಷ್ಮಿ, ಧನಲಕ್ಷ್ಮಿ, ಅಮೃತಲಕ್ಷ್ಮಿ ಮುಂತಾದ ಹೆಸರುಗಳಿಂದ ವ್ರತಗಳನ್ನಾಚರಿಸಿ ಪೂಜಿಸುತ್ತಾರೆ. ಶುಕ್ರವಾರ ಲಕ್ಷ್ಮೀ ಪೂಜೆಗೆ ಶ್ರೇಷ್ಠವಾದ ದಿನ. ಅದರಲ್ಲಿಯೂ ಆಷಾಢಮಾಸದ ಶುಕ್ರವಾರ ಉತ್ತ ಮ.  ಶ್ರಾವಣಮಾಸದ ಶುಕ್ರವಾರ ವರಮಹಾಲಕ್ಷ್ಮೀವ್ರತ ಬರುತ್ತದೆ. ಮಾರ್ಗಶೀರ್ಷ ಮಾಸದ ಗುರುವಾರಗಳಲ್ಲಿಯೂ ಲಕ್ಷ್ಮೀವ್ರತವನ್ನು ಆಚರಿಸುವುದುಂಟು. ಆಶ್ವಯುಜ ಬಹುಳ ಅಮವಾಸ್ಯೆಯೆಂದು ಧನಲಕ್ಷ್ಮೀ ಪೂಜೆ ನಡೆಯುತ್ತದೆ.

ಲಕ್ಷ್ಮೀಯ ಅನುಗ್ರಹದಿಂದ ಬರುವ ರಾಜ್ಯ, ಧನ, ಕೀರ್ತಿ, ಮಂಗಳ ಮೊದಲಾದ ಸಂಪತ್ತು ಎಲ್ಲಿದೆಯೋ ಅಲ್ಲಿ ಲಕ್ಷ್ಮಿಯೇ ನೆಲಸಿದ್ದಾಳೆಂದು ವರ್ಣಿಸುವುದುಂಟು. ಲಕ್ಷ್ಮೀಯು ಒಲಿದು ನೀಡುವ ಸಂಪತ್ತನ್ನೇ ಲಕ್ಷ್ಮಿಯೆಂದು ಭಾವಿಸಿ ವರ್ಣಿಸಿರುವ ಅನೇಕ ಕಥೆಗಳು ಪುರಾಣಗಳಲ್ಲಿವೆ. ಅವಳು ಅನಾದಿಯಾಗಿ ವಿಷ್ಣುವಿನೊಡನೆ ಇರತಕ್ಕವಳಾದರೂ ಅವಳು ಹುಟ್ಟಿದಳೆಂದೂ, ಅವತರಿಸಿದಳೆಂದೂ ಹೇಳುವ ಅನೇಕ ಕಥೆಗಳುಂಟು. ಅವುಗಳಲ್ಲಿ ಕೆಲವು ಕಥೆಗಳನ್ನು ಪರಿಚಯಮಾಡಿಕೊಳ್ಳೋಣ.

ಭಾರ್ಗವಿ

ಭೃಗು ಮುನಿಗಳು ವಿಷ್ಣುವಿನ ಭಕ್ತರು. ಅವರು ಕರ್ದಮನ ಮಗಳಾದ ಖ್ಯಾತಿಯನ್ನು ಮದುವೆಯಾಗಿದ್ದರು. ಆ ದಂಪತಿಗಳ ಪ್ರಾರ್ಥನೆಯಂತೆ ಲಕ್ಷ್ಮಿಯು ಅವರಿಗೆ ಮಗಳಾಗಿ  ಹುಟ್ಟಿದಳು. ಭೃಗುವಿನ ಮಗಳಾದ್ದರಿಂದ ಲಕ್ಷ್ಮಿಗೆ ಭಾರ್ಗವಿ ಎಂದು ಹೆಸರು ಬಂದಿತು.

ಸಮುದ್ರತನಯೆ

ಲಕ್ಷ್ಮಿಯು ಕ್ಷೀರಸಮುದ್ರದಲ್ಲಿ ಹುಟ್ಟಿದ್ದರಿಂದ ಸಮುದ್ರತನಯೆ ಎಂದು ಹೆಸರು ಬಂದಿತು. ಈ ವಿಷಯವಾಗಿ ಕಥೆ ಹೀಗಿದೆ.

ದುರ್ವಾಸಮುನಿಗಳು ಮಹಾತಪಸ್ವಿಗಳು. ಒಮ್ಮೆ ಅವರು ಸಂತಾನಕ ಎಂಬ ಹೂವಿನ ಮಾಲೆಯನ್ನು ಕೈಯಲ್ಲಿ ಹಿಡಿದು ಬರುತ್ತಿದ್ದರು. ಎದುರಿಗೆ ಐರಾವತದ ಮೇಲೆ ಕುಳಿತು ಬರುತ್ತಿದ್ದ ದೇವೇಂದ್ರನು ಅವರನ್ನು ಅಲಕ್ಷ್ಯ ಮಾಡಿದನು. ಅವರು ಕೊಟ್ಟ ಮಾಲೆಯನ್ನು ಐರಾವತದ ಮೇಲೆ ಎಸೆದನು. ಆನೆ ಅದನ್ನು ಕೆಳಕ್ಕೆ ಹಾಕಿ ತುಳಿಯಿತು. ಕೋಪಗೊಂಡ ದುರ್ವಾಸರು, ‘ಐಶ್ವರ್ಯಮದ ನಿನ್ನ ನೆತ್ತಿಗೆ ಹತ್ತಿದೆ. ಲಕ್ಷ್ಮಿಯು ನಿನ್ನನ್ನು ಬಿಟ್ಟುಹೋಗಲಿ’ ಎಂದು ಶಾಪ ಕೊಟ್ಟರು. ಆಗ ಇಂದ್ರನಿಗೆ ಜ್ಞಾನೋದಯವಾಯಿತು. ದುರ್ವಾಸರಿಗೆ ವಂದಿಸಿ ತನ್ನನ್ನು ಕ್ಷಮಿಸಬೇಕೆಂದು ಕೇಳಿಕೊಂಡನು. ಅವರು ‘ಶ್ರೀವಿಷ್ಣು ನಿನಗೆ ಒಳ್ಳೆಯದನ್ನು ಮಾಡುವನು’ ಎಂದು ಹೇಳಿ ಹೊರಟು ಹೋದರು.

ದುರ್ವಾಸರ ಶಾಪದ ಮಹಿಮೆಯಿಂದ ಲಕ್ಷ್ಮಿಯು ಇಂದ್ರನನ್ನಗಲಿ ಹೊರಟುಹೋದಳು. ಸತ್ತ್ವಗುಣ, ಧೈರ್ಯ, ಉತ್ಸಾಹ, ಕಾಂತಿಗಳ ದೇವತೆಯಾದ ಲಕ್ಷ್ಮಿ ಅಗಲಿದ್ದರಿಂದ ದೇವೇಂದ್ರನ ಪಾಡು ತುಂಬ ಕಷ್ಟಕ್ಕೆ ಒಳಗಾಯಿತು. ಇದೇ ಸಮಯವನ್ನು ಕಾಯುತ್ತಿದ್ದ ರಾಕ್ಷಸರು ದೇವಲೋಕದ ಮೇಲೆ ಮುತ್ತಿಗೆಯನ್ನು ಹಾಕಿ, ಇಂದ್ರನನ್ನೂ ದೇವತೆಗಳನ್ನೂ ಯುದ್ಧದಲ್ಲಿ ಸೋಲಿಸಿ ದೇವಲೋಕವನ್ನು ವಶಪಡಿಸಿಕೊಂಡರು. ಇಂದ್ರನು ರಾಜ್ಯಭ್ರಷ್ಟನಾಗಿ ರಾಕ್ಷಸರ ಕಣ್ಣಿಗೆ ಬೀಳದಂತೆ ಅಡಗಿದನು.

ಸಮುದ್ರವನ್ನು ಕಡೆಯಿರಿ

ಕೆಲವು ವರ್ಷಗಳು ಕಳೆದವು. ಇಂದ್ರನ ಗುರುವಾದ ಬೃಹಸ್ಪತಿಯು ಇಂದ್ರನ ಕಷ್ಟಕ್ಕೆ ಪರಿಹಾರವೇನೆಂದು ಆಲೋಚಿಸಿದನು. ಅವನು ದೇವತೆಗಳೊಡನೆ ಬ್ರಹ್ಮನ ಬಳಿಗೆ ಹೋಗಿ ಈ ವೃತ್ತಾಂತವೆಲ್ಲವನ್ನು ತಿಳಿಸಿದನು. ಬ್ರಹ್ಮನು ಇವರೆಲ್ಲರೊಡನೆ ವಿಷ್ಣುವಿನ ಬಳಿಗೆ ಹೋಗಿ ದೇವತೆಗಳ ಮೊರೆಯನ್ನು ನಿವೇದಿಸಿದನು. ಆಗ ವಿಷ್ಣು “ಹೆದರಬೇಡಿರಿ,  ಇದಕ್ಕೆ ಒಂದು ಉಪಾಯವನ್ನು ಹೇಳುತ್ತೇನೆ. ಕ್ಷೀರಸಮುದ್ರವನ್ನು ಕಡೆಯಬೇಕು. ಇದು ಕಠಿಣವಾದ ಕಾರ್ಯ, ಆದ್ದರಿಂದ ರಾಕ್ಷಸರೊಡನೆ ಸ್ನೇಹವನ್ನು ಬೆಳೆಸಿ ಅವರ ಸಹಾಯವನ್ನು ಪಡೆಯಿರಿ. ಮಂದರಪರ್ವತವನ್ನು ಕಡೆಗೋಲಿನಂತೆಯೂ ವಾಸುಕಿಯೆಂಬ ಸರ್ಪರಾಜನನ್ನು ಹಗ್ಗದಂತೆಯೂ ಬಳಸಿರಿ. ನಾನು ಸಮಯವರಿತು ನಿಮಗೆ ಸಹಾಯಮಾಡುತ್ತೇನೆ. ಸಮುದ್ರವನ್ನು ಕಡೆದಾಗ ಅಮೃತ ಹುಟ್ಟುತ್ತದೆ. ಅದನ್ನು ಕುಡಿದು ದೇವತೆಗಳು ಅಮರರಾಗಲಿ. ಅದರಿಂದ ದಿವ್ಯವಾದ ಶಕ್ತಿ ಬರುತ್ತದೆ. ಆಗ ನೀವು ರಾಕ್ಷಸರನ್ನು ಜಯಿಸಲು ಸಾಧ್ಯವಾಗುತ್ತದೆ. ಸಮುದ್ರವನ್ನು ಮಥಿಸಿದಾಗ ಈಗ ಅದೃಶ್ಯಳಾಗಿರುವ ಲಕ್ಷ್ಮಿ ಮತ್ತೆ ಗೋಚರಿಸುವಳು. ಅವಳ ಅನುಗ್ರಹ ನಿಮಗೆ ಲಭಿಸುವುದು” ಎಂದು ಹೇಳಿದನು. ದೇವತೆಗಳನ್ನು ಸಮಾಧಾನಪಡಿಸಿ, ಸಮುದ್ರಮಥನ ಮಾಡುವಂತೆ ಏರ್ಪಡಿಸಿದನು.

ಅಡ್ಡಿಗಳು

ಬೃಹಸ್ಪತಿ ಬಹಳ ಬುದ್ಧಿಶಾಲಿ. ಅವನು ರಾಕ್ಷಸರನ್ನು ಕಂಡು ಅವರಿಗೂ ದೇವತೆಗಳಿಗೂ ಉಪಾಯದಿಂದ ಸ್ನೇಹವನ್ನು ಮಾಡಿಸಿ ಕ್ಷೀರಸಮುದ್ರವನ್ನು ಕಡೆಯುವಂತೆ ಸನ್ನಾಹ ಮಾಡಿದನು. ಅಮೃತವೂ ಐಶ್ವರ್ಯವೂ ದೊರೆಯುವುದೆಂಬ ಆಸೆಯಿಂದ ರಾಕ್ಷಸರು ಅದಕ್ಕೆ ಒಪ್ಪಿದರು. ಎಲ್ಲರೂ ಸೇರಿ ಮಂದರಪರ್ವತವನ್ನು ಹೊತ್ತುತಂದು ಕ್ಷೀರಸಮುದ್ರದಲ್ಲಿಟ್ಟರು. ಸರ್ಪರಾಜನಾದ ವಾಸುಕಿಯನ್ನು ಹಗ್ಗವಾಗಿ ಕಟ್ಟಿದರು. ಒಂದು ಕಡೆ ರಾಕ್ಷಸರೂ ಇನ್ನೊಂದು ಕಡೆ ದೇವತೆಗಳೂ ವಾಸುಕಿಯನ್ನು ಹಿಡಿದು ಸಮುದ್ರವನ್ನು ಕಡೆಯಲು ಆರಂಭಿಸಿದರು. ಆ ಸಮಯದಲ್ಲಿ ಮಂದರ ಪರ್ವತವು ಸಮುದ್ರದಲ್ಲಿ  ಮುಳುಗಿಹೋಯಿತು. ಆಗ ನಾರಾಯಣನು ಕೂರ್ಮಾವತಾರವನ್ನು ಧರಿಸಿ, ಸಮುದ್ರ ತಳದಲ್ಲಿದ್ದ ಪರ್ವತವನ್ನು ಮೇಲೆತ್ತಿದನು. ಕೂರ್ಮದ ಬೆನ್ನಿನ ಮೇಲೆ ಮಂದರವು ಮುಳುಗದೆ ನಿಂತಿತ್ತು. ಹಾಗೆ ಕಡೆಯುತ್ತಿರುವಾಗ ಮೊದಲು ಕಾಲಕೂಟವೆಂಬ ಭಯಂಕರವಾದ ವಿಷಯ ಹುಟ್ಟಿತು. ಅದರ ಉಗ್ರತೆಯಿಂದ ಎಲ್ಲರೂ ತಲ್ಲಣಗೊಂಡರು. ಆಗ ದೇವತೆಗಳ ಪ್ರಾರ್ಥನೆಯಂತೆ ಶಿವನು ಪ್ರಸನ್ನನಾಗಿ ಆ ವಿಷವನ್ನು ಕುಡಿದುಬಿಟ್ಟನು. ವಿಷದ ಕಪ್ಪುಬಣ್ಣ ಶಿವನ ಕಂಠದಲ್ಲಿ ಉಳಿಯಿತು. ಆದ್ದರಿಂದ ಶಿವನಿಗೆ ನೀಲಕಂಠನೆಂದು ಹೆಸರಾಯಿತು.

ಲಕ್ಷ್ಮಿ ಪ್ರತ್ಯಕ್ಷಳಾದಳು

ಅನಂತರ ವಿಷ್ಣುವಿನ ಪ್ರೋತ್ಸಾಹದಿಂದ ದೇವಾಸುರರು ಸಮುದ್ರಮಥನವನ್ನು ಮುಂದುವರೆಸಿದರು. ಆಮೇಲೆ ಕ್ಷೀರಸಮುರದಿಂದ ಉಚ್ಚೈಶ್ರವಸ್ಸೆಂಬ ಕುದುರೆ, ನೆನಸಿದ್ದನ್ನು ಕೊಡುವ ಕಲ್ಪವೃಕ್ಷ, ಕಾಮಧೇನು ಮೊದಲಾದ ದಿವ್ಯವಸ್ತುಗಳು ಹುಟ್ಟಿದವು. ಹಾಗೆಯೇ ಸಮುದ್ರವನ್ನು ಕಡೆಯುತ್ತಿರಲಾಗಿ ಅಪ್ಸರೆಯರು ಹುಟ್ಟಿದರು. ಅನಂತರ ಒಂದು ಆಶ್ಚರ್ಯಕರವಾದ ದೃಶ್ಯವು ಕಾಣಿಸಿತು. ಕ್ಷೀರಸಾಗರದ ತೆರೆಗಳ ನಡುವೆ ದಿವ್ಯರೂಪವನ್ನು ಧರಿಸಿದ ಒಬ್ಬ ದೇವತೆ ಕಂಗೊಳಿಸಿದಳು. ಅವಳು ಅರಳಿದ ಕಮಲದ ಮೇಲೆ ನಿಂತಿದ್ದಳು. ಕೊರಳಲ್ಲಿ ಕಮಲದ ಮಾಲೆಯನ್ನು ಧರಿಸಿ, ಕೈಯಲ್ಲಿ ಕಮಲವನ್ನು ಹಿಡಿದಿದ್ದಳು. ಅವಳ ರೂಪ ದಿವ್ಯ ಸೌಂದಯ್ದಿಂದ ಒಪ್ಪುತ್ತಿತ್ತು. ಮುಗುಳ್ನಗೆ ಬೀರುತ್ತ ನಿಂತಿದ್ದ ಆಕೆ ಸಾಕ್ಷಾತ್‌ ಲಕ್ಷ್ಮೀದೇವಿಯಾಗಿದ್ದಳು. ಋಷಿಗಳು ಶ್ರೀಸೂಕ್ತವನ್ನು ಪಠಿಸತೊಡಗಿದರು. ಗಂಧರ್ವರು ಹಾಡಿದರು. ಅಪ್ಸರೆಯರು ನೃತ್ಯ ಮಾಡಿದರು. ದಿಗ್ಗಜಗಳು ಎರಡು ಪಾರ್ಶ್ವಗಳಲ್ಲಿ ನಿಂತು ಗಂಗಾದಿಪವಿತ್ರ ಜಲವನ್ನು ದೇವಿಯ ಮೇಲೆ ಸುರಿಸಿ ಅಭಿಷೇಕ ಮಾಡಿದವು. ಹೀಗೆ ಗಜಗಳು (ಆನೆಗಳು) ನಿಂತು ಅಭಿಷೇಕ ಮಾಡಿದ್ದರಿಂದ ದೇವಿಗೆ ಗಜಲಕ್ಷ್ಮಿ ಎಂದು ಹೆಸರಾಯಿತು. ಕ್ಷೀರಸಮುದ್ರದಲ್ಲಿ ಜನಿಸಿದ್ದರಿಂದ ಸಮುದ್ರತನೆಯ ಎಂದು ಕರೆದರು. ಸಮುದ್ರರಾಜನು ತನ್ನ ನಿಜರೂಪವನ್ನು ಧರಿಸಿ ಬಂದು, ಲಕ್ಷ್ಮಿಯು ತನ್ನ ಮಗಳೆಂದು ಆದರಿಸಿದನು. ಅವಳಿಗೆ ಉತ್ತಮವಾದ ವಸ್ತ್ರಗಳನ್ನೂ ಆಭರಣಗಳನ್ನೂ ಕೊಟ್ಟನು. ಅವಳ ಕೈಗೆ ಒಂದು ಪದ್ಮಮಾಲೆಯನ್ನಿತ್ತನು. ಎಲ್ಲರೂ ಅಚ್ಚರಿಯಿಂದ ನೋಡುತ್ತಿರುವಾಗ, ಲಕ್ಷ್ಮಿಯು ಆ ಮಾಲೆಯನ್ನು ವಿಷ್ಣುವಿನ ಕೊರಳಿಗೆ ಹಾಕಿ ಅವನ ವಕ್ಷಸ್ಥಳದಲ್ಲಿ ನೆಲೆಸಿದಳು. ಅವಳು ಕರುಣೆಯಿಂದ ಇಂದ್ರನನ್ನು ನೋಡಲಾಗಿ, ಅವನಿಗೆ ಅದ್ಭುತವಾದ ಒಂದು ತೇಜಸ್ಸು ಬಂದಿತು.

ತೆರೆಗಳ ನಡುವೆ ಒಬ್ಬ ದೇವತೆ ಕಂಗೊಳಿಸಿದಳು.

ಆಮೇಲೆ ಸಮುದ್ರದಿಂದ ಧನ್ವಂತರಿ ಹುಟ್ಟಿದನು. ಧನ್ವಂತರಿ ವೈದ್ಯರ ದೇವತೆ. ಅವನ ಕೈಯಲ್ಲಿ ಒಂದು ಕಮಂಡಲ ಇತ್ತು. ಅದರಲ್ಲಿ ಅಮೃತವಿತ್ತು. ಅದು ಗೊತ್ತಾದೊಡನೆ ರಾಕ್ಷಸರು ಓಡಿಬಂದು ಅಮೃತವನ್ನು ಕಿತ್ತುಕೊಂಡರು. ಆಗ ದೇವತೆಗಳಿಗೂ ರಾಕ್ಷಸರಿಗೂ ಜಗಳವಾಯಿತು. ಆ ಸಮಯದಲ್ಲಿ ವಿಷ್ಣು ಮೋಹಿನಿಯು ರೂಪವನ್ನು ತಾಳಿ ಎದುರಿಗೆ ಬಂದನು. ಅವಳ ಸೌಂದರ್ಯವನ್ನು ಕಂಡು ರಾಕ್ಷಸರು ಅಚ್ಚರಿಪಡುತ್ತ ನಿಂತರು. ಮೋಹಿನಿಯ ಸಮೀಪಕ್ಕೆ ಬಂದು “ಎಲೈ ರಾಕ್ಷಸರೆ, ದೇವತೆಗಳೆ, ಅಮೃತಕ್ಕಾಗಿ ಜಗಳವಾಡಬೇಡಿರಿ. ನೀವು ಒಪ್ಪುವುದಾದರೆ ನಾನು ಅಮೃತವನ್ನು ಬಡಿಸುತ್ತೇನೆ. ನೀವು ಎರಡು ಸಾಲುಗಳಲ್ಲಿ ಕುಳಿತುಕೊಳ್ಳಿರಿ” ಎಂದಳು. ಎಲ್ಲರೂ ಒಪ್ಪಿದರು. ರಾಕ್ಷಸರು ಒಂದು ಸಾಲಿನಲ್ಲಿಯೂ ದೇವತೆಗಳು ಇನ್ನೊಂದು ಸಾಲಿನಲ್ಲಿಯೂ ಕುಳಿತರು. ಮೋಹಿನಿಯು ತನ್ನ ಕೈಚಳಕದಿಂದ ರಾಕ್ಷಸರಿಗೆ ಮದ್ಯವನ್ನೂ ದೇವತೆಗಳಿಗೆ ಅಮೃತವನ್ನೂ ಬಡಿಸಿದಳು. ಅವಳ ರೂಪಕ್ಕೆ ಮೋಹಗೊಂಡಿದ್ದ ರಾಕ್ಷಸರು ಅದನ್ನು ಗಮನಿಸಲಿಲ್ಲ. ದೇವತೆಗಳು ಅಮೃತವನ್ನು ಕುಡಿದು ಅಮರರಾದರು. ಅವರಿಗೆ ಮರಣದ ಭಯ ತಪ್ಪಿತು. ತಮಗೆ ಮೋಸವಾಯಿತೆಂದು ರಾಕ್ಷಸರಿಗೆ ಆಮೇಲೆ ತಿಳಿಯಿತು. ಅವರು ಯುದ್ಧಕ್ಕೆ ನಿಂತರು. ಅಮೃತದ ಬಲದಿಂದ ಪ್ರಬಲರಾದ ದೇವತೆಗಳು ರಾಕ್ಷಸರನ್ನು ಸೋಲಿಸಿ ಓಡಿಸಿದರು.

ಸರ್ವಲೋಕ ಜನನಿ

ವಿಷ್ಣು ಪುರಾಣ ಮೊದಲಾದ ಗ್ರಂಥಗಳಲ್ಲಿ ಲಕ್ಷ್ಮಿಯ ಮಹಿಮೆ ಬಹಳ ಚೆನ್ನಾಗಿ ವರ್ಣಿತವಾಗಿದೆ. ವಿಷ್ಣುವಿನ ಪತ್ನಿಯಾದ ಅವಳು ವೈಷ್ಣವೀ ಶಕ್ತಿಯೆನಿಸಿದ್ದಾಳೆ. ಜಗತ್ತಿನಲ್ಲಿರುವ ಶ್ರೇಷ್ಠವಾದ ವಸ್ತುಗಳೂ, ಗುಣಗಳೂ ಲಕ್ಷ್ಮೀನಾರಾಯಣರ ನಿವಾಸಸ್ಥಾನಗಳೆಂದು ಹೇಳಿದ್ದಾರೆ. ದೇವೇಂದ್ರನು ಲಕ್ಷ್ಮಿಯನ್ನು ಹೀಗೆ ಸ್ತುತಿಸಿದ್ದಾನೆ:

“ಓ ದೇವಿ, ಸರ್ವಲೋಕಗಳಿಗೂ ಜನನಿಯಾದ ನಿನಗೆ ನಮಸ್ಕಾರ. ಸಕಲ ಕಾರ್ಯಗಳೂ ಸಿದ್ಧಿಸುವುದಕ್ಕೆ ನೀನು ಕಾರಣಳಾಗಿದ್ದೀಯೆ. ನೀನು ಲೋಕಪಾವನಿ. ಐಶ್ವರ್ಯ ಮತ್ತು ಬುದ್ಧಿಶಕ್ತಿ ನಿನ್ನಿಂದ ದೊರೆಯುತ್ತವೆ. ಸಕಲ ವಿದ್ಯಾಸ್ವರೂಪಿಣಿಯಾದ ಸರಸ್ವತಿಯೂ ನೀನೇ. ಮುಕ್ತಿದಾಯಿನಿಯಾದ ಆತ್ಮವಿದ್ಯೆ ನೀನು, ಹೇ ಮಹಾದೇವಿ, ಮಡದಿ, ಮಕ್ಕಳು, ಮನೆ, ಮಿತ್ರ, ಧನ, ಧಾನ್ಯಗಳೆಲ್ಲವೂ ನಿನ್ನ ನೋಟದಿಂದಲೇ ಭಕ್ತರಿಗೆ ಲಭಿಸುತ್ತವೆ. ಓ ತಾಯಿ, ನೀನೂ ನಿನ್ನ ಪತಿಯಾದ ನಾರಾಯಣನೂ ಈ ವಿಶ್ವವನ್ನೇ ವ್ಯಾಪಿಸಿ ನಿಂತಿದ್ದೀರಿ. ದೇಹದ ಆರೋಗ್ಯವೂ ಸೌಖ್ಯವೂ ನಿನ್ನ ಕರುಣೆಯಿಂದ ಜನರಿಗೆ ಲಭಿಸುತ್ತವೆ. ನೀನು ಈ ಲೋಕದ ತಾಯಿ, ವಿಷ್ಣು ಈ ಲೋಕದ ತಂದೆ . ದೇವಿ, ನಿನ್ನ ದಯೆಯಿಲ್ಲದಿದ್ದರೆ ಜನರಲ್ಲಿ ಸತ್ತ್ವ, ಶೌಚ, ಶೀಲ ಮೊದಲಾದ ಸದ್ಗುಣಗಳೆಲ್ಲವೂ ದೂರವಾಗುತ್ತವೆ. ನಿನ್ನ ದಯೆಯಿಂದ ಇವೆಲ್ಲವೂ ದೊರೆಯುತ್ತದೆ. ತಾಯಿ, ನಮ್ಮನ್ನು ಎಂದಿಗೂ ತ್ಯಜಿಸಬೇಡ.”

ಆಗ ಲಕ್ಷ್ಮಿಯು “ಇಂದ್ರ, ನಿನ್ನ ಭಕ್ತಿಗೆ ಪ್ರಸನ್ನಳಾಗಿದ್ದೇನೆ, ನಿನಗೆ ಬೇಕಾದ ವರಗಳನ್ನು ಕೇಳಿಕೊ” ಎಂದಳು. ಇಂದ್ರನು ‘ದೇವಿ, ನಾನು ನಿನ್ನ ದಯೆಗೆ ಪಾತ್ರನಾಗಿದ್ದರೆ ನನ್ನನ್ನು ತ್ಯಜಿಸಿ ಹೋಗಬೇಡ. ಅಲ್ಲದೆ ಯಾರು ಪ್ರತಿದಿನವೂ ನಾನು ಹೇಳಿದ ಸ್ತೋತ್ರವನ್ನು ಭಕ್ತಿಯಿಂದ ಪಠಿಸುವರೋ ಅವರನ್ನು ಅನುಗ್ರಹಿಸು” ಎಂದನು. ಲಕ್ಷ್ಮೀದೇವಿಯು “ಹಾಗೆಯೇ ಆಗಲಿ” ಎಂದು ಹೇಳಿ ಅಂತರ್ಧಾನ ಹೊಂದಿದಳು. ಇಂದ್ರನು ಹೇಳಿದ ಸ್ತೋತ್ರವು ವಿಷ್ಣುಪುರಾಣದ ಸಮುದ್ರಮಥನ ಕಥೆಯಲ್ಲಿ ಬಂದಿದೆ.

ಲಕ್ಷ್ಮಿಯ ಮಹಿಮೆ ವಿಸ್ತಾರವಾದುದು. ವಾಣಿ (ಮಾತು), ನೀತಿ, ಬುದ್ಧಿ, ಸಂತುಷ್ಟಿ, ಸಾಮಗಾನ, ಸ್ವಾಹಾ, ಕಾಂತಿ, ಐಶ್ವರ್ಯ, ಶಕ್ತಿ, ಬಳ್ಳಿ, ನದಿ, ಗೋವು – ಇವೆಲ್ಲ ಲಕ್ಷ್ಮಿಯ ಅಂಶಗಳು. ಜಗತ್ತಿನಲ್ಲಿ ಇರುವ ಎಲ್ಲ ಸ್ತ್ರೀಯರೂ ಲಕ್ಷ್ಮೀಸ್ವರೂಪರೆಂದು ಪುರಾಣಗಳಲ್ಲಿ ಹೇಳಿದೆ. ಮದುವೆಯ ಕಾಲದಲ್ಲಿ ವಧೂವರರನ್ನು ಲಕ್ಷ್ಮೀನಾರಾಯಣ ಸ್ವರೂಪರೆಂದು ನಮ್ಮವರು ಗೌರವಿಸುತ್ತಾರೆ.

ಲಕ್ಷ್ಮೀನೃಸಿಂಹ

ನೃಸಿಂಹ ಅಥವಾ ನರಸಿಂಹನ ಜೊತೆಗೆ ಲಕ್ಷ್ಮೀ ಶಬ್ದವನ್ನು ಸೇರಿಸಲು ಕಾರಣವೇನು? ಇದಕ್ಕೆ ಒಂದು ಕಥೆ ಇದೆ.

ಪ್ರಹ್ಲಾದನ ಚರಿತ್ರೆ ಪ್ರಸಿದ್ಧವಾಗಿದೆ. ಪ್ರಹ್ಲಾದನು ಹಿರಣ್ಯಕಶಿಪುವಿನ ಮಗ. ಹಿರಣ್ಯಕಶಿಪು ಬಹಳ ದುಷ್ಟನೂ ಕ್ರೂರಿಯೂ ಆಗಿದ್ದನು. ಅವನು ವಿಷ್ಣುವನ್ನು ದ್ವೇಷಿಸುತ್ತಿದ್ದನು. ತಾನೇ ದೇವರೆಂದು ಹೇಳಿಕೊಂಡು ಮೆರೆಯುತ್ತಿದ್ದನು. ಪ್ರಹ್ಲಾದನಾದರೋ ಶಾಂತಸ್ವಭಾವದವನು. ವಿಷ್ಣುಭಕ್ತ ಹಿರಣ್ಯಕಶಿಪು ಬಾಲಕನಾದ ಪ್ರಹ್ಲಾದನ ವಿಷ್ಣು ಭಕ್ತಿಯನ್ನು ಕಂಡು ಸಹಿಸಲಾರದೆ ಅವನನ್ನು ಉಗ್ರವಾಗಿ ದಂಡಿಸಲು ಪ್ರಯತ್ನಿಸಿದ. ಆಗ ಭಕ್ತನಾದ ಪ್ರಹ್ಲಾದನನ್ನು ರಕ್ಷಿಸುವುದಕ್ಕಾಗಿ ವಿಷ್ಣು ಕಂಭವನ್ನು ಸೀಳಿ ಉಗ್ರನರಸಿಂಹ ಅವತಾರವನ್ನು ತಾಳಿ ಹೊರಗೆ ಬಂದು ಹಿರಣ್ಯಕಶಿಪುವನ್ನು ಸಂಹರಿಸಿದನು. ಭಕ್ತನಾದ ಪ್ರಹ್ಲಾದನಿಗೆ ನಾನಾ ಕಷ್ಟಗಳನ್ನು ಕೊಟ್ಟನೆಂದು ಹಿರಣ್ಯಕಶಿಪುವಿನ ಮೇಲೆ ನರಸಿಂಹನಿಗೆ ಭಾರಿ ಕೋಪ ಉಂಟಾಗಿತ್ತು. ಅವನನ್ನು ಕೊಂದ ಮೇಲೆಯೂ ನರಸಿಂಹನ ಕೋಪ ತಣಿಯಲಿಲ್ಲ. ದೇವತೆಗಳು ಕಂಗಾಲಾದರು. ಬಗೆಬಗೆಯಲ್ಲಿ ಆತನನ್ನು ಸ್ತುತಿಸಿದರು. ಪ್ರಯೋಜನವಾಗಲಿಲ್ಲ. ಅವರು ಲಕ್ಷ್ಮೀದೇವಿಯನ್ನು ಕುರಿತು ‘ತಾಯಿ, ನರಸಿಂಹನ ಈ ಉಗ್ರಕೋಪವನ್ನು ನೀನೇ ಶಮನ ಮಾಡಬೇಕು” ಎಂದು ಬೇಡಿಕೊಂಡರು. ಆಗ ಲಕ್ಷ್ಮಿಯು ನರಸಿಂಹನ ಎದುರಿಗೆ ಬಂದು “ಸ್ವಾಮಿ, ಇಷ್ಟು ಕೋಪವೇಕೆ? ಹಿರಣ್ಯಕಶಿಪುವನ್ನು ಸಂಹರಿಸಿದ್ದಾಯಿತು, ನಿನ್ನ ಭಕ್ತನಾದ ಪ್ರಹ್ಲಾದನು ಈಗ ಕ್ಷೇಮವಾಗಿದ್ದಾನೆ. ನಿನ್ನ ಕೋಪವು ಶಾಂತವಾಗಲಿ” ಎಂದು ಪ್ರಾರ್ಥಿಸಿದಳು. ಆಗ ನರಸಿಂಹನ ಕೋಪ ಇಳಿಯಿತು. ಅವನು ಲಕ್ಷ್ಮೀಸಹಿತನಾಗಿ ವಿರಾಜಿಸಿದನು. ಉಗ್ರನೃಸಿಂಹನ ರೂಪ ಲಕ್ಷ್ಮೀಸಹಿತನಾದಾಗ ಸೌಮ್ಯವಾಯಿತು. ಹೀಗೆ ಸೌಮ್ಯಸ್ವಭಾವದ ನೃಸಿಂಹನನ್ನು ಸೂಚಿಸುವುದಕ್ಕಾಗಿ ಲಕ್ಷ್ಮೀನರಸಿಂಹ ಎಂಬ ಹೆಸರು ರೂಢಿಗೆ ಬಂದಿತು.

ಶೀಲ, ಧರ್ಮ, ಸತ್ಯ ಇದ್ದಲ್ಲಿ ಲಕ್ಷ್ಮಿ

ಪ್ರಹ್ಲಾದನು ಧರ್ಮಿಷ್ಠನೂ ಶೀಲವಂತನೂ ಆಗಿದ್ದನು. ಶೀಲವೆಂದರೆ ಒಳ್ಳೆಯ ಚಾರಿತ್ಯ್ರ-ಒಳ್ಳೆಯ ನಡತೆ. ಶೀಲದ ಬಲದಿಂದ ಅವನಿಗೆ ಮೂರು ಲೋಕಗಳೂ ವಶವಾದವು. ಇಂದ್ರನೂ ಸಹ ಅವನಿಗೆ ಅಧೀನನಾದನು. ಸ್ವರ್ಗವು ಪ್ರಹ್ಲಾದನ ವಶಕ್ಕೆ ಬಂದಿತು. ಇಂದ್ರನು ಚಿಂತಾಕ್ರಾಂತನಾಗಿ ತನ್ನ ಗುರುವಾದ ಬೃಹಸ್ಪತಿಯ ಬಳಿಗೆ ಹೋಗಿ ತನ್ನ ಕಷ್ಟವನ್ನು ತೋಡಿಕೊಂಡನು. ಬೃಹಸ್ಪತಿಯು “ಇಂದ್ರ, ಎಲ್ಲಿ ಶೀಲವಿರುವುದೋ ಅಲ್ಲಿ ರಾಜ್ಯಲಕ್ಷ್ಮಿ ನೆಲೆಸುವಳು. ನೀನು ಶೀಲವನ್ನು ಸರಿಯಾಗಿ ಪಾಲಿಸಲಿಲ್ಲ. ಪ್ರಹ್ಲಾದನು ಶೀಲವಂತ. ಆದ್ದರಿಂದ ಸ್ವರ್ಗವು ಅವನಿಗೆ ವಶವಾಯಿತು” ಎಂದನು. “ಹಾಗಾದರೆ ಶೀಲದ ಸ್ವರೂಪವನ್ನು ನನಗೆ ಹೇಳಿಕೊಡಿ” ಎಂದು ಇಂದ್ರನು ಪ್ರಾರ್ಥಿಸಿದನು. ಬೃಹಸ್ಪತಿಯು ಕೆಲವು ವಿಚಾರಗಳನ್ನು ತಿಳಿಸಿ, ಇದಕ್ಕಿಂತ ಹೆಚ್ಚಾಗಿ ತಿಳಿಯಬೇಕಾದರೆ ಶುಕ್ರಾಚಾರ್ಯರ ಬಳಿಗೆ ಹೋಗಬೇಕು ಎಂದು ಹೇಳಿದನು.

“ನಾನು ‘ಲಕ್ಷ್ಮೀದೇವಿ’ ಶೀಲ, ಧರ್ಮ, ಸತ್ಯ ಎಲ್ಲಿ ನೆಲೆಸಿರುತ್ತವೆಯೋ ಅಲ್ಲಿ ನಾನಿರುತ್ತೇನೆ”.

ಇಂದ್ರನು ಶುಕ್ರಾಚಾರ್ಯರ ಸಮೀಪಕ್ಕೆ ಹೋಗಿ ಶೀಲದ ವಿಚಾರವನ್ನು ತಿಳಿಸಬೇಕೆಂದು ಬೇಡಿದನು.  ಶುಕ್ರಾಚಾರ್ಯರು ಆ ವಿಚಾರವಾಗಿ ಕೆಲವು ವಿಷಯಗಳನ್ನು ತಿಳಿಸಿ ‘ಅಯ್ಯಾ ಇಂದ್ರ, ಶೀಲದ ನಿಜವಾದ ಸ್ವರೂಪವು ಪ್ರಹ್ಲಾದನಿಗೆ ಚೆನ್ನಾಗಿ ಗೊತ್ತಿದೆ. ಅವನು ಅದನ್ನು ತಿಳಿದು ಆಚರಿಸುತ್ತಿದ್ದಾನೆ. ಅವನನ್ನೇ ಕೇಳು” ಎಂದು ನುಡಿದನು.

ಇಂದ್ರನು ಬ್ರಾಹ್ಮಣ ವೇಷದಿಂದ ಪ್ರಹ್ಲಾದನಲ್ಲಿಗೆ ಹೋದನು. ತನಗೆ ಶೀಲದ ಸ್ವರೂಪವನ್ನು ತಿಳಿಸಿ ಕೊಡಬೇಕೆಂದು ಬೇಡಿದನು. ಪ್ರಹ್ಲಾದನು ತನ್ನ ಗುರುವೆಂದು ತಿಳಿದು ಅವನ ಸೇವೆ ಮಾಡುತ್ತ ಇದ್ದನು. ಕೆಲವು ಕಾಳದ ಮೇಲೆ ಪ್ರಹ್ಲಾದನು ಸಂತುಷ್ಟನಾಗಿ ಆತನಿಗೆ ಶೀಲದ ಸ್ವರೂಪವನ್ನು ಪೂರ್ತಿಯಾಗಿ ವಿವರಿಸಿ ಹೇಳಿದನು. ಪ್ರಹ್ಲಾದನು ಇಂದ್ರಿಯಗಳನ್ನು ನಿಗ್ರಹಿಸಿ ಕೋಪವನ್ನು ಗೆದ್ದು ಸದಾಚಾರದಲ್ಲಿ ನಡೆಯುತ್ತಿದ್ದನು. ಅದರ ಬಲದಿಂದಲೇ ಅವನಿಗೆ ಸ್ವರ್ಗದ ಒಡೆತನ ದೊರಕಿತೆಂದು ಇಂದ್ರನಿಗೆ ಮನದಟ್ಟಾಯಿತು. ಸನ್ಮಾರ್ಗದಲ್ಲಿ ನಡೆಯುವ ಆತನನ್ನು ಶೀಲದಿಂದ ತಪ್ಪಿಸಿದ ಹೊರತು ತನಗೆ ಸ್ವರ್ಗದ ಒಡೆತನ ಸಿಗುವುದಿಲ್ಲವೆಂದು ಇಂದ್ರನು ನಿಶ್ಚಯಿಸಿಕೊಂಡನು.

ಒಂದು ದಿನ ಇಂದ್ರನ ಶ್ರದ್ಧಾಭಕ್ತಿಗಳಿಗೆ ಮೆಚ್ಚಿದ ಪ್ರಹ್ಲಾದನು ‘ಅಯ್ಯಾ ಬ್ರಾಹ್ಮಣ, ನಿನ್ನ ಭಕ್ತಿಗೆ ಮೆಚ್ಚಿದೆನು. ನಿನಗೆ ಏನು ಬೇಕು? ಕೇಳಿಕೋ, ಕೊಡುತ್ತೇನೆ” ಎಂದು ತಿಳಿಸಿದನು. ಅದಕ್ಕಾಗಿಯೇ ಕಾದಿದ್ದ ಇಂದ್ರನು “ಮಹಾರಾಜ, ನಾನು ಕೇಳಿದ್ದನ್ನು ಕೊಡುವೆಯಾ?” ಎಂದನು. ಪ್ರಹ್ಲಾದನು “ಖಂಡಿತವಾಗಿಯೂ ಕೊಡುತ್ತೇನೆ. ನಾನು ಎಂದಿಗೂ ಅಸತ್ಯವನ್ನು ನುಡಿದವನಲ್ಲ” ಎಂದನು. ಅಗ ಇಂದ್ರನು ಮಹಾರಾಜ, ನಿನ್ನ ಶೀಲವನ್ನು ನನಗೆ ದಾನಮಾಡು’ ’ ಎಂದು ವರವನ್ನು ಕೇಳಿದನು. ಪ್ರಹ್ಲಾದನು ಕೊಟ್ಟ ಮಾತಿಗೆ ಬದ್ಧನಾಗಿ “ಆಗಲಿ: ಶೀಲವನ್ನು ನಿನಗೆ ಕೊಟ್ಟಿದ್ದೇನೆ” ಎಂದು ಹೇಳಿಬಿಟ್ಟನು.

ಇಲ್ಲಿ ಶೀಲವನ್ನು ದಾನಮಾಡುವುದು ಹೇಗೆ? ಎಂಬ ಪ್ರಶ್ನೆ ಹುಟ್ಟುತ್ತದೆ. ಪ್ರಹ್ಲಾದನು ಶೀಲವನ್ನು ದಾನ ಮಾಡಿದನೆಂಬುದರ ಅಭಿಪ್ರಾಯವೇನೆಂದರೆ: ಇಂದ್ರನು ಯಾವಾಗಲೂ ಶೀಲವಂತನಾಗಿರಲೆಂದು ಗುರುವಾದ ಪ್ರಹ್ಲಾದನು ಆಶೀರ್ವದಿಸುವುದು ಮತ್ತು ಪ್ರಹ್ಲಾದನು ಯಾವಾಗಲೂ ಧರ್ಮಮಾರ್ಗಕ್ಕೆ ಕಟ್ಟುಬೀಳದೆ, ಸಮಯ ಬಂದಾಗ ಅಧರ್ಮ ಮಾರ್ಗದಲ್ಲಿ ನಡೆಯಲು ಹಿಂಜರಿಯುವುದಿಲ್ಲ ಎಂದು ಒಪ್ಪಿಕೊಳ್ಳುವುದು. ಒಟ್ಟಿನಲ್ಲಿ ಶೀಲದ ವಿಷಯವಾಗಿ ತನ್ನ ದೃಢತೆಯನ್ನು ಸಡಿಲಗೊಳಿಸುವುದು.

ಇಂದ್ರನು ಸಂತೋಷದಿಂದ ಹೊರಟುಹೋದನು. ಇತ್ತ ಪ್ರಹ್ಲಾದನಿಗೆ ಬಹಳ ಚಿಂತೆಯೂ ಭಯವೂ ಹುಟ್ಟಿದವು. “ಬಹು ಕಾಲದಿಂದ ನಾನು ಶೀಲವಂತನಾಗಿ ಧರ್ಮಮಾರ್ಗದಲ್ಲಿ ನಡೆದುಕೊಂಡು ಬಂದಿದ್ದೇನೆ. ಅದರಲ್ಲಿ ಅವಿಶ್ವಾಸವನ್ನು ತೋರಿಸಿದೆನಲ್ಲ” ಎಂದು ವ್ಯಥೆಪಟ್ಟನು. ಅಷ್ಟರಲ್ಲಿ ಒಂದು ಮಹಾತೇಜಸ್ಸು ಅವನ ದೇಹದಿಂದ ಹೊರಬಿದ್ದು ಶರೀರಧಾರಿಯಾಗಿ ಕಾಣಿಸಿಕೊಂಡಿತು. ಪ್ರಹ್ಲಾದನು “ನೀನು ಯಾರು?” ಎಂದು ಕೇಳಿದನು. ಅದಕ್ಕೆ ತೇಜೋಮಯನಾದ ಆ ಪುರುಷನು “ನಾನು ಶೀಲದೇವತೆ. ನೀನು ನನ್ನನ್ನು ಪರಿತ್ಯಜಿಸಿದೆ. ನನ್ನನ್ನು ಆ ಬ್ರಾಹ್ಮಣನಿಗೆ ದಾನ ಮಾಡಿದ್ದೀಯೆ. ಇನ್ನು ಮೇಲೆ ನಾನು ಆ ಬ್ರಾಹ್ಮಣನಲ್ಲಿ ನೆಲೆಸುತ್ತೇನೆ” ಎಂದು ನುಡಿದು ಅದೃಶ್ಯನಾದನು. ಹೀಗೆಯೇ ಧರ್ಮವೂ, ಸತ್ಯವೂ ಪುರುಷರೂಪದಿಂದ ಅವನನ್ನು ಬಿಟ್ಟುಹೋದವು. ಅನಂತರ ಪ್ರಹ್ಲಾದನ ದೇಹದಿಂದ ಪ್ರಭೆಯ ರಾಶಿಯೊಂದು ಹೊರಗೆ ಹರಿದಂತಾಯಿತು.  ಎದುರಿಗೆ ಒಬ್ಬ ಸ್ತ್ರೀದೇವತೆ ಕಾಣಿಸಿದಳು. ಪ್ರಹ್ಲಾದನು “ನೀನು ಯಾರು?” ಎಂದು ಕೇಳಲಾಗಿ ಆ ದೇವತೆ “ಪ್ರಹ್ಲಾದ, ನಾನು ಲಕ್ಷ್ಮೀದೇವಿ, ಶೀಲ, ಧರ್ಮ, ಸತ್ಯ -ಇವು ಎಲ್ಲಿ ನೆಲೆಸಿರುತ್ತವೆಯೋ ಅಲ್ಲಿ ನಾನಿರುತ್ತೇನೆ” ಎಂದು ಹೇಳಿದಳು. ಆಗ ಪ್ರಹ್ಲಾದನು “ದೇವಿ, ನೀನು ಲೋಕೇಶ್ವರಿಯಾದ ಲಕ್ಷ್ಮಿಯಾಗಿದ್ದೀಯೆ. ನನ್ನನ್ನು ಬಿಟ್ಟು ಹೋಗುವುದಾದರು ಏಕೆ? ನನ್ನ ಸೇವೆ ಮಾಡಿಕೊಂಡಿದ್ದ ಆ ಬ್ರಾಹ್ಮಣನು ಯಾರು?” ಎಂದು ಕೇಳಿದನು. ಲಕ್ಷ್ಮಿಯು ಇಂದ್ರನೇ ಬ್ರಾಹ್ಮಣ ವೇಷದಿಂದ ಬಂದಿದ್ದನೆಂದು ತಿಳಿಸಿ ಹೊರಟುಹೋದಳು. ಕೆಲವು ದಿನಗಳಲ್ಲಿಯೆ ಪ್ರಹ್ಲಾದನನ್ನು ಇಂದ್ರನು ಯುದ್ಧದಲ್ಲಿ ಜಯಿಸಿದನು. ಪ್ರಹ್ಲಾದನು ಸ್ವರ್ಗರಾಜ್ಯವನ್ನು ಕಳೆದುಕೊಂಡನು. ಲಕ್ಷ್ಮಿಯ ಅನುಗ್ರಹದಿಂದ ಇಂದ್ರನು ಮತ್ತೆ ಸ್ವರ್ಗಕ್ಕೆ ಒಡೆಯನಾದನು.

ಈ ಕಥೆಯಿಂದ ತಿಳಿದುಬರುವ ನೀತಿ ಇದು – ಶೀಲ, ಧರ್ಮ, ಸತ್ಯಗಳನ್ನು ಪಾಲಿಸತಕ್ಕವನಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಯಾವನು ಒಳ್ಳೆಯ ನಡೆತೆಯನ್ನು ಬಿಡುವನೋ ಅವನನ್ನು ಲಕ್ಷ್ಮಿ ಬಿಟ್ಟು ಹೋಗುವಳು.. ಇದೇ ಬಗೆಯ ಇನ್ನೊಂದು ಕಥೆಯುಂಟು: ಪ್ರಹ್ಲಾದನ ಮಗ ವಿರೋಚನ. ಅವನ ಮಗ ಬಲಿ ಚಕ್ರವರ್ತಿ. ಆತನು ಮಹಾವೀರನಾಗಿದ್ದು ದೇವೇಂದ್ರನನ್ನು ಸೋಲಿಸಿ ಸ್ವರ್ಗವನ್ನು ತನ್ನವಶಕ್ಕೆ ತೆಗೆದುಕೊಂಡಿದ್ದನು. ಹಿಂದೆ ಹೇಳಿದಂತೆ ಸಮುದ್ರಮಥನದಲ್ಲಿ ಹುಟ್ಟಿದ ಅಮೃತವನ್ನು ಕುಡಿದು ದೇವತೆಗಳು ಬಲಿಷ್ಠರಾದರು. ಆಗ ಇಂದ್ರನು ಬಲಿ ಚಕ್ರವರ್ತಿಯನ್ನು ಸೋಲಿಸಿ ಸ್ವರ್ಗವನ್ನು ಮತ್ತೆ ತನ್ನ ಸ್ವಾಧೀನ ಮಾಡಿಕೊಂಡನು. ಬಲಿಯು ತಲೆ ಮರೆಸಿಕೊಂಡನು.

ಒಂದು ಸಲ ದೇವೇಂದ್ರನು ಗಂಗಾತೀರಕ್ಕೆ ಬಂದಾಗ, ಅಲ್ಲಿಗೆ ನಾರದಮುನಿಗಳು ಬಂದಿರುವುದು ಕಾಣಿಸಿತು. ಇಂದ್ರನು ಸಮೀಪಕ್ಕೆ ಹೋಗಿ ನಾರದರಿಗೆ ವಂದಿಸಿದನು. ಇಬ್ಬರೂ ಕುಶಲ ಪ್ರಶ್ನೆಗಳನ್ನಾಡಿದ ಮೇಲೆ, ಪ್ರಾತಃಕಾಲವಾದ್ದರಿಂದ ಸಂಧ್ಯಾವಂದನೆ ಮಾಡಿದರು. ಅಷ್ಟರಲ್ಲಿ ಸೂರ್ಯ ಮಂಡಲವು ಬೆಳಗುತ್ತ ಪೂರ್ವದಿಕ್ಕಿನಲ್ಲಿ ಮೇಲೆದ್ದಿತು. ಇಂದ್ರ ನಾರದರಿಬ್ಬರೂ ಸೂರ್ಯ ಮಂಡಲವನ್ನು ನೋಡುತ್ತ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದರು. ಆಗ ಆಕಾಶದಲ್ಲಿ ತೇಜೋಮಯಿಯಾದ ಒಬ್ಬ ದೇವತೆ ಗೋಚರಿಸಿದಳು. ಅವಳು ಮುಕ್ತಹಾರದಿಂದ ಶೋಭಿಸುತ್ತ ಕೈಯಲ್ಲಿ ಕಮಲವನ್ನು ಹಿಡಿದಿದ್ದಳು. ಇಂದ್ರನೂ ನಾರದಮುನಿಗಳೂ ಬೆರಗಾಗಿ ನೋಡುತ್ತಿರಲು ಆ ದೇವತೆ ಅವರಿಬ್ಬರ ಹತ್ತಿರಕ್ಕೆ ಆಕಾಶದಿಂದ ಇಳಿದು ಬಂದಳು. ದೇವೇಂದ್ರ, ನಾರದರು ಅವಳಿಗೆ ನಮಸ್ಕರಿಸಿ ಸ್ತೋತ್ರ ಮಾಡಿದರು. ಇಂದ್ರನು ಅವಳನ್ನು ಕುರಿತು, “ಓ ದೇವಿ, ನೀನು ಯಾರು? ಇಲ್ಲಿಗೆ ಆಗಮಿಸಲು ಕಾರಣವೇನು?” ಎಂದು ಕೇಳಿದನು. ಅವಳು “ಇಂದ್ರ, ನಾನು ಧನಲಕ್ಷ್ಮಿ. ಈ ಜಗತ್ತಿನಲ್ಲಿ ಸಕಲ ಜನರೂ ನನ್ನ ಕೃಪೆಯನ್ನು ಪಡೆಯಲು ಯತ್ನಿಸುತ್ತಾರೆ. ಧರ್ಮಾತ್ಮರಲ್ಲಿ ನಾನು ವಾಸಮಾಡುತ್ತೇನೆ. ದಾನವರು ಇದುವರೆಗೆ ಧರ್ಮಮಾರ್ಗದಲ್ಲಿದ್ದರು. ಅವರ ರಾಜನಾದ ಬಲಿಯು ಶೀಲವಂತನಾಗಿದ್ದನು. ನಾನು ಅವನಲ್ಲಿ ವಾಸಮಾಡುತ್ತಿದ್ದೆ. ಈಗ ಅವರೆಲ್ಲರೂ ಅಧರ್ಮ ಮಾರ್ಗಕ್ಕಿಳಿದು ದುಃಶೀಲರಾದ್ದರಿಂದ ಅವರನ್ನು ಪರಿತ್ಯಜಿಸಿ ನಿನ್ನಲ್ಲಿ ವಾಸಮಾಡಲು ಬಂದಿದ್ದೇನೆ” ಎಂದಳು. ಇಂದ್ರನು ಭಕ್ತಿಯಿಂದ ಅವಳಿಗೆ ಕೈ ಮುಗಿದು “ಓ ತಾಯಿ, ನೀನು ಎಲ್ಲೆಲ್ಲಿ ನೆಲಸುತ್ತೀಯೆ ಎಂಬುದನ್ನು ಕೃಪೆಯಿಟ್ಟು ವಿವರಿಸಿ ಹೇಳು” ಎಂದು ಬೇಡಿದನು.

ಆಗ ಲಕ್ಷ್ಮಿಯು, “ನಾನು ಧೈರ್ಯವಂತರಲ್ಲಿ, ಹಿಡಿದ ಕೆಲಸ ಸಾಧಿಸಬೇಕೆಂಬ ಸಾಹಸಿಗಳಲ್ಲಿ ಅಭಿಮಾನವಿಡುತ್ತೇನೆ . ಗುರುಸೇವೆ ಮಾಡುತ್ತ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡುವವರು, ದೈವಭಕ್ತರು ಇವರ ಮನೆಗಳಲ್ಲಿ ಇರುತ್ತೇನೆ. ಕೋಪವರು ಗೆದ್ದವರು, ಅಸೂಯೆ ಇಲ್ಲದವರು, ಇತರರ ಕಷ್ಟಗಳಿಗೆ ಮರುಗಿ ಸಹಾಯ ಮಾಡುವವರು ಇವರಿಗೆ ಕೃಪೆಮಾಡುತ್ತೇನೆ. ಸೋಮಾರಿಗಳು, ಮುಂಗೋಪಿಗಳು, ಮಹತ್ವಾಕಾಂಕ್ಷೆ ಇಲ್ಲವದವರು ಇವರ ಬಳಿ ಸುಳಿಯುವುದಿಲ್ಲ. ಯಾರ ಮನೆ ಚೊಕ್ಕಟವಾಗಿರುವುದಿಲ್ಲವೊ ಯಾರು ಸೋಮರಿಗಳೊ ಅವರಿಂದ ನಾನು ದೂರ. ಶುಚಿಯಾಗಿರುವವರು, ಶೀಲವಂತರು, ಕಷ್ಟಪಟ್ಟು ಕೆಲಸ ಮಾಡುವವರು ಇವರಲ್ಲಿ ನನಗೆ ಪ್ರೀತಿ” ಎಂದಳು.

ಲಕ್ಷ್ಮಿಯ ಅವತಾರಗಳಿಗೆ ಸಂಬಂಧಿಸಿದ ಕೆಲವು ಕಥೆಗಳುಂಟು.

ವೇದವತಿ

ಹಿಂದೆ ರಥಧ್ವಜನೆಂಬ ರಾಜನಿದ್ದನು. ಅವನ ವಂಶ ಪರಂಪರೆಯಲ್ಲಿ ಮಹಾಲಕ್ಷ್ಮಿಯ ಪೂಜೆ ನಡೆಯುತ್ತಿತ್ತು. ಆ ರಾಜನು ಅಸಡ್ಡೆಯಿಂದ ಲಕ್ಷ್ಮೀಪೂಜೆಯನ್ನು ತ್ಯಜಿಸಿಬಿಟ್ಟನು. ಅದರಿಂದ ಲಕ್ಷ್ಮಿಯ ಅನುಗ್ರಹ ತಪ್ಪಿತು. ಶತ್ರುಗಳು ದಂಡೆತ್ತಿ ಬಂದರು. ರಥಧ್ವಜನು ಯುದ್ಧದಲ್ಲಿ ಸೋತು ರಾಜ್ಯವನ್ನು ಕಳೆದುಕೊಂಡನು. ಅವನಿಗೆ ಕುಶಧ್ವಜ, ಧರ್ಮಧ್ವಜ – ಎಂಬ ಇಬ್ಬರು ಮಕ್ಕಳಿದ್ದರು. ಅವರು ತಂದೆಯು ಮಾಡಿದ ತಪ್ಪಿಗೆ ದುಃಖಪಟ್ಟರು. ಲಕ್ಷ್ಮಿಯನ್ನು ಕುರಿತು ಉಗ್ರ ತಪಸ್ಸನ್ನು ಮಾಡಿದರು. ಅವಳು ಪ್ರತ್ಯಕ್ಷಳಾದಾಗ, “ನಮ್ಮ ರಾಜ್ಯವು ನಮಗೆ ದೊರೆಯುವಂತೆ ಆಶೀರ್ವದಿಸು. ನೀನು ನಮಗೆ ಮಗಳಾಗಿ ಅನುಗ್ರಹಿಸು” ಎಂದು ಬೇಡಿದರು. ಲಕ್ಷ್ಮಿಯು ವರಗಳನ್ನು ಕೊಟ್ಟಳು. ಅವರು ಶತ್ರುಗಳೊಡನೆ ಪರಾಕ್ರಮದಿಂದ ಕಾದಾಡಿ ತಂದೆಯ ರಾಜ್ಯವನ್ನು ಮರಳಿ ಪಡೆದು ಸುಖವಾಗಿದ್ದರು.

ಕುಶಧ್ವಜನ ಮಡದಿಯ ಹೆಸರು ಮಾಲಾವತಿ. ಲಕ್ಷ್ಮೀದೇವಿಯು ತಾನು ಕೊಟ್ಟ ವರದಂತೆ ತನ್ನ ಒಂದಂಶದಿಂದ ಮಾಲಾವತಿಯ ಗರ್ಭವನ್ನು ಸೇರಿ ಮಗಳಾಗಿ ಹುಟ್ಟಿದಳು. ಅವಳು ಹುಟ್ಟಿದಾಗಲೇ ವೇದ ಮಂತ್ರಗಳನ್ನು ಸ್ಪಷ್ಟವಾಗಿ ಉಚ್ಚರಿಸುತ್ತಿದ್ದಳಂತೆ. ಆದ್ದರಿಂದ ತಂದೆ ತಾಯಿಗಳು ಅವಳಿಗೆ ವೇದವತಿ ಎಂದು ಹೆಸರಿಟ್ಟರು. ಕುಶಧ್ವಜನು ಬಹಳ ಪ್ರೀತಿಯಿಂದ ಅವಳನ್ನು ಲಾಲಿಸಿ ಪೋಷಿಸಿದನು. ವೇದವತಿಯು ಬಹಳ ಸುಂದರಿಯೂ ಗುಣವಂತೆಯೂ ಆಗಿ ಬೆಳೆದಳು. ಅವಳಿಗೆ ಯೌವನ ಬಂದಿತು. ದೇವತೆಗಳೂ ದಾನವರೂ ವೇದವತಿಯನ್ನು ಮದುವೆಯಾಗಲು ಬಯಸಿದರು. ಯಾರನ್ನೂ ಅವಳು ಒಪ್ಪಲಿಲ್ಲ. ವಿಷ್ಣುವೇ ತನಗೆ ಪತಿಯಾಗಬೇಕೆಂಬ ಇಚ್ಛೆಯಿಂದ ಪುಷ್ಕರ ಕ್ಷೇತ್ರಕ್ಕೆ ಹೋಗಿ ಘೋರವಾದ ತಪಸ್ಸು ಮಾಡಿದಳು. ಬಹು ಕಾಲ ತಪಸ್ಸು ಸಾಗಿತು. ಒಂದು ದಿನ “ವೇದವತಿ, ನೀನು ಇನ್ನೊಂದು ಅವತಾರವನ್ನು ತಾಳಬೇಕಾಗಿದೆ. ನಿನ್ನ ಮುಂದಿನ ಜನ್ಮದಲ್ಲಿ ವಿಷ್ಣು ಅವತರಿಸಿ ನಿನಗೆ ಪತಿಯಾಗುವನು” ಎಂದು ಅಶರೀರವಾಣಿಯಾಯಿತು. ಆದರೂ ಧೈರ್ಯಗೆಡದೆ ವೇದವತಿ ತಪಸ್ಸು ಮಾಡುತ್ತಲೇ ಇದ್ದಳು.

ಹೀಗಿರುವಾಗ ಒಂದು ದಿನ ರಾವಣನು ಪುಷ್ಪಕ ವಿಮಾನದಲ್ಲಿ ಕುಳಿತು ತಿರುಗುತ್ತ ಅಲ್ಲಿಗೆ ಬಂದನು. ಆಶ್ರಮಕ್ಕೆ ಅತಿಥಿಯೊಬ್ಬನು ಬಂದನೆಂದು ವೇದವತಿ ಅವನನ್ನು ಸತ್ಕರಿಸಿದಳು. ಆಮೇಲೆ ರಾವಣನು ಅವಳ ವೃತ್ತಾಂತವನ್ನು ವಿಚಾರಿಸಿದನು. ವೇದವತಿಯು “ನಾನು ಕುಶಧ್ವಜ ರಾಜನ ಮಗಳು. ನನ್ನ ಹೆಸರು ವೇದವತಿ, ಶ್ರೀಮನ ನಾರಾಯಣನೇ ಪತಿಯಾಗಬೇಕೆಂಬ ಉದ್ದೇಶದಿಂದ ತಪಸ್ಸನ್ನು ಕೈಗೊಂಡಿದ್ದೇನೆ” ಎಂದಳು. ಅದನ್ನು ಕೇಳಿ ರಾವಣನು ಗಹಗಹಿಸಿ ನಕ್ಕು “ಸುಂದರಿ, ಯುವತಿಯಾದ ನೀನು ತಪಸ್ಸು ಮಾಡಬಹುದೆ? ನಾರಾಯಣನೆಂದು ಹೇಳುತ್ತೀಯಲ್ಲ. ಯಾರವನು? ಅವನಿಗೆ ನನ್ನಷ್ಟು ಐಶ್ವರ್ಯ ಉಂಟೆ? ಬಲವುಂಟೆ? ನಾನು ಲಂಕೇಶ್ವರನಾದ ರಾವಣ. ನನ್ನನ್ನು ಮದುವೆಯಾಗಿ ಸುಖವಾಗಿರು” ಎಂಧನು. ಅದಕ್ಕೆ ವೇದವತಿಯು “ರಾವಣ, ಹಾಗೆನ್ನಬೇಡ. ನಾರಾಯಣನೆಂದರೆ ಸರ್ವಲೋಕೇಶ್ವರನಾದ ವಿಷ್ಣು, ಅವನನ್ನು ನೀನು ದೂಷಿಸಬಹುದೆ? ದೊಡ್ಡ ಅವಿವೇಕಿ ನೀನು” ಎಂದಳು. ಇವಳು ಸಾಮಕ್ಕೆ ಬಗ್ಗುವುದಿಲ್ಲವೆಂದು ತಿಳಿದು ರಾವಣನು ವೇದವತಿಯ ತಲೆಗೆ ಕೈಹಾಕಿ ಅವಳ ಕೇಶವನ್ನು ಹಿಡಿದೆಳೆದನು. ಕೋಪಗೊಂಡ ವೇದವತಿ ಒಡನೆಯೇ ತನ್ನ ಕೇಶವನ್ನು ಕೈಯಿಂದ ಕತ್ತರಿಸಿಕೊಂಡಳು. ತಪೋಮಹಿಮೆಯಿಂದ ಅವಳ ಕೈಯೇ ಕತ್ತಿಯಂತೆ ತಲೆಗೂದಲನ್ನು ಕತ್ತರಿಸಿತು. ಅವಳು ರಾವಣನನ್ನು ನೋಡಿ “ಎಲಾ ದುರುಳ, ನನ್ನನ್ನು ಬಲಾತ್ಕರಿಸವೆಯಾ? ನಿನ್ನ ಸ್ಪರ್ಶದಿಂದ ನನ್ನ ದೇಹ ಅಪವಿತ್ರವಾಯಿತು. ನೋಡುತ್ತಿರು, ಈಗಲೇ ಈ ದೇಹವನ್ನು ತೊರೆಉವೆನು. ಇನ್ನೊಬ್ಬ ಧರ್ಮಾತ್ಮನಿಗೆ ಮಗಳಾಗಿ ಹುಟ್ಟಿ ನಿನ್ನ ಸಾವಿಗೆ ನಾನೇ ಕಾರಣಳಾಗುವೆನು” ಎಂದಳು. ಕೂಡಲೇ ಆಶ್ರಮದಲ್ಲಿದ್ದ ಉರಿಯುವ ಅಗ್ನಿಕುಂಡದಲ್ಲಿ ಧುಮುಕಿ ದೇಹತ್ಯಾಗ ಮಾಡಿದಳು. ರಾವಣನು ಚಿಂತಾತುರನಾಗಿ ಲಂಕೆಗೆ ಹೋದನು.

ಸೀತೆ

ವೇದವತಿಯು ಮುಂದೆ ಜನಕರಾಜನಿಗೆ ಮಗಳಾಗಿ ಹುಟ್ಟಿದಳಲು. ಜನಕರಾಜನು ಅವಳಿಗೆ ಸೀತೆಯೆಂದು ಹೆಸರಿಟ್ಟನು. ಆಗ ಅಯೋಧ್ಯೆಯಲ್ಲಿ ದಶರಥನು ರಾಜ್ಯಭಾರಮಾಡುತ್ತಿದ್ದನು. ಅವನ ಪತ್ನಿಯಾದ ಕೌಸಲ್ಯೆಯ ಗರ್ಭದಲ್ಲಿ ವಿಷ್ಣು ಅವತರಿಸಿ ಶ್ರೀರಾಮನೆಂದು ವಿಖ್ಯಾತನಾದನು.ಅವನು ವಿಶ್ವಾಮಿತ್ರ ಮುನಿಗಳೊಡನೆ ಜನಕನ ರಾಜಧಾನಿಗೆ ಬಂದು ಅಲ್ಲಿದ್ದ ಶಿವಧನುಸ್ಸನ್ನು ಮುರಿದನು. ಆಗ ಶ್ರೀರಾಮನ ಪರಾಕ್ರಮಕ್ಕೆ ಮೆಚ್ಚಿದ ಜನಕರಾಜನು ಸೀತಾದೇವಿಯನ್ನು ಶ್ರೀರಾಮನಿಗೆ ಕೊಟ್ಟು ವಿವಾಹ ಮಾಡಿದನು. ಕೆಲವು ಕಾಲದ ಮೇಲೆ ಶ್ರೀರಾಮನು ತಂದೆಯ ಮಾತಿನಂತೆ ಸೀತಾಲಕ್ಷ್ಮಣರೊಡನೆ ದಂಡಕಾರಣ್ಯಕ್ಕೆ ಹೋಗಬೇಕಾಯಿತು. ಅಲ್ಲಿದ್ದಾಗ ರಾವಣನು ಸೀತೆಯನ್ನು ಅಪಹರಿಸಿ ಲಂಕೆಗೆ ಒಯ್ದನು. ಶ್ರೀರಾಮನು ಸುಗ್ರೀವ, ಹನುಮಂತ-ಮೊದಲಾದ ಕಪಿವೀರರೊಡನೆ ಹೋಗಿ ಲಂಕೆಯನ್ನು ಮುತ್ತಿದನು. ಆಮೇಲೆ ನಡೆದ ಘೋರಯುದ್ಧದಲ್ಲಿ ಶ್ರೀರಾಮನು ರಾವಣನನ್ನು ಸಂಹರಿಸಿದನು. ಅನಂತರ ಸೀತಾದೇವಿ ಶ್ರೀರಾಮನೊಡನೆ ಅಯೋಧ್ಯೆಗೆ ಬಂದು ಸುಖವಾಗಿದ್ದಳು. ಈ ಕಥೆ ರಾಮಾಯಣದಲ್ಲಿ ವಿಸ್ತಾರವಾಗಿ ಬಂದಿದೆ.

ತುಳಸಿ

ಇತ್ತ ಧರ್ಮಧ್ವಜನ ಪತ್ನಿಯಾದ ಮಾಧವಿಯಲ್ಲಿಯೂ ಲಕ್ಷ್ಮಿಯು ತನ್ನ ಒಂದಂಶದಿಂದ ಅವತರಿಸಿದಳು. ಅವಳಿಗೆ ತುಳಸಿ ಎಂದು ತಂದೆ ತಾಯಿಗಳು ಹೆಸರಿಟ್ಟರು. ಮಗು ಬಹು ಸುಂದರವಾಗಿತ್ತು. ಅವಳು ಶೀಲವಂತೆಯಾಗಿ ಬೆಳೆದಳು. ಮುಂದೆ ಅವಳು ಶ್ರೀ ವಿಷ್ಣುವಿನ ಕೈ ಹಿಡಿದಳು. ವಿಷ್ಣುವು ಅವಳಿಗೆ ‘ನೀನು ಈ ದೇಹವನ್ನು ತ್ಯಜಿಸಿ ನನ್ನ ಜೊತೆಗಿರು. ನಿನ್ನ ದೇಹವು ಗಂಡಕೀ ನದಿಯಾಗಿ ಪ್ರವಹಿಸಲಿ. ನಾನು ಸಾಲಿಗ್ರಾಮ ಶಿಲೆಯಾಗಿ ಗಂಡಕೀ ನದಿಯಲ್ಲಿ ನೆಲೆಸುತ್ತೇನೆ. ನಿನ್ನ ಕೂದಲು ಗಿಡವಾಗಲಿ, ತುಳಸಿ ಎಂಬ ಹೆಸರಿನಿಂದ ಪ್ರಸಿದ್ಧವಾಗಲಿ, ಜನರಿಂದ ಪೂಜೆಯನ್ನು ಪಡೆಯಲಿ, ತುಳಸೀ ದಳದ ಹಾರವು ನನಗೆ ಅತ್ಯಂತ ಪ್ರಿಯವಾಗಿರುವುದು’ ಎಂದು ಹೇಳಿದನು. ತುಳಸಿಯ ದೇಹವು ಗಂಡಕೀನದಿಯಾಗಿ ಹರಿಯಿತು. ನಾರಾಯಣನು ಸಾಲಿಗ್ರಾಮ ಶಿಲೆಯಾಗಿ ಅದರಲ್ಲಿ ನೆಲೆಸಿದನು. ತುಳಸಿಯ ಕೇಶದಿಂದ ತುಳಸೀ ಗಿಡವು ಹುಟ್ಟಿ ಪವಿತ್ರವೆನಿಸಿತು.

ರುಕ್ಮಿಣಿ

ವಿದರ್ಭದೇಶದಲ್ಲಿ ಭೀಷ್ಮಕನೆಂಬ ರಾಜನಿದ್ದನು. ಅವನಿಗೆ ರುಕ್ಮಿ, ರುಕ್ಮ ರಥ, ರುಕ್ಮಬಾಹು, ರುಕ್ಮಕೇಶ, ರುಕ್ಮಮಾಲಿ ಎಂಬ ಐವರು ಗಂಡು ಮಕ್ಕಳಿದ್ದರು. ಶ್ರೀಮನ್ನಾರಾಯಣನು ಕಂಸಾದಿಗಳನ್ನು ಸಂಹರಿಸಿ ಧರ್ಮವನ್ನು ಸ್ಥಾಪಿಸುವುದಕ್ಕಾಗಿ ಶ್ರೀಕೃಷ್ಣನಾಗಿ ಅವತರಿಸಿದನು. ಹೀಗೆ ಅವನು ಕೃಷ್ಣಾವತಾರ ಮಾಡಿದಾಗ ಅವನ ಪತ್ನಿಯಾಗಿರಲು ಲಕ್ಷ್ಮಿಯು ಭೀಷ್ಮಕನ ಮಗಳಾಗಿ ರುಕ್ಮಿಣಿ ಎಂಬ ಹೆಸರಿನಿಂದ ಅವತರಿಸಿದಳು. ಅವಳು ರೂಪವತಿಯೂ ಗುಣಶಾಲಿಯೂ ಆಗಿದ್ದಳು. ತಂದೆಯಾದ ಭೀಷ್ಮಕನು ದೈವಭಕ್ತನಾಗಿದ್ದನಲ್ಲದೆ ಶ್ರೀಕೃಷ್ಣನಲ್ಲಿ ಗೌರವಭಾವನೆಯನ್ನು ತಳೆದಿದ್ದನು. ಮಗಳಾದ ರುಕ್ಮಿಣಿಯನ್ನು ಶ್ರೀಕೃಷ್ಣನೊಡನೆ ವಿವಾಹಮಾಡಬೇಕೆಂದು ಆಲೋಚಿಸಿದನು.

ಆದರೆ ಭೀಷ್ಮಕನ ಹಿರಿಯ ಮಗನಾದ ರುಕ್ಮಿ ಇದಕ್ಕೆ ಒಪ್ಪಲಿಲ್ಲ. ಅವನು ಶಿಶುಪಾಲನೇ ಮೊದಲಾದ ದುಷ್ಟರ ಕೂಟದಲ್ಲಿ ಸೇರಿಕೊಂಡಿದ್ದನು. ತಂಗಿಯಾದ ರುಕ್ಮಿಣಿಯನ್ನು ಶಿಶುಪಾಲನಿಗೆ ಕೊಟ್ಟು ಮದುವೆ ಮಾಡಬೇಕೆಂದು ತಲೆಯ ಮೇಲೆ ಒತ್ತಡವನ್ನು ತಂದನು. ರುಕ್ಮಿಣಿಯು ಶ್ರೀಕೃಷ್ಣನನ್ನು ದ್ವೇಷಿಸುತ್ತಿದ್ದುದರಿಂದ ಅವನೊಡನೆ ಸಂಬಂಧವನ್ನು ಬೆಳೆಸಲು ಒಪ್ಪಲಿಲ್ಲ. ಅವನ ಮಾತನ್ನು ಮೀರಿಹೋಗಲು ಭೀಷ್ಮಕನಿಗೆ ಧೈರ್ಯವಾಗಲಿಲ್ಲ.

ಶಿಶುಪಾಲನೊಡನೆ ರುಕ್ಮಿಣಿಯ ಮದುವೆ ನಿಶ್ಚಿತವಾಯಿತು. ಆದರೆ ರುಕ್ಮಿಣಿ ಶ್ರೀಕೃಷ್ಣನ ಗುಣಗಳನ್ನು  ಮಹಿಮೆಗಳನ್ನು ಕೇಳಿ ಅವನನ್ನೇ ಮನಸ್ಸಿನಲ್ಲಿ ವರಿಸಿದ್ದಳು. ಒಬ್ಬ ದೂತನನ್ನು ದ್ವಾರಕೆಗೆ ಕಳುಹಿಸಿದಳು. ತಾನು ಕೃಷ್ಣನನ್ನು ಮದುವೆಯಾಗುವುದಾಗಿಯೂ ಅದು ಸಾಧ್ಯವಾಗದೆ ಹೋದರೆ ಪ್ರಾಣವನ್ನೇ ಬಿಡುವುದಾಗಿಯೂ ತಿಳಿಸಿದಳು.

ಶ್ರೀಕೃಷ್ಣನು ರುಕ್ಮಿಣಿಯ ಗುಣ, ಶೀಲ, ರೂಪಗಳನ್ನು ಮೊದಲೇ ಕೇಳಿದ್ದನು. ಅವಳನ್ನು ಮದುವೆಯಾಗಬೇಕೆಂದು ಅಪೇಕ್ಷಿಸಿದ್ದನು. ಆದ್ದರಿಂದ ಅವನು ಕೂಡಲೇ ರಥವನ್ನೇರಿ ಒಡನೆಯೇ ಭೀಷ್ಮಕನ ಊರಿಗೆ ಧಾವಿಸಿದನು. ಶ್ರೀಕೃಷ್ಣನು ಒಬ್ಬನೇ ಹೋದನೆಂದು ಬಲರಾಮನಿಗೆ ಗೊತ್ತಾಯಿತು . ಕೂಡಲೇ ಆತನು ತಮ್ಮನ ಸಹಾಯಕ್ಕಾಗಿ ದೊಡ್ಡ ಸೈನ್ಯದೊಡನೆ ಹಿಂಬಾಲಿಸಿ ಹೋದನು.

ಇತ್ತ ವಿದರ್ಭ ರಾಜಧಾನಿಯಲ್ಲಿ ರುಕ್ಮಿಣಿಯ ವಿವಾಹಕ್ಕಾಗಿ ಸಕಲ ಸಿದ್ಧತೆಗಳು ನಡೆದಿದ್ದವು. ಶಿಶುಪಾಲನು ತನ್ನ ಮಿತ್ರರಾದ ಜರಾಸಂಧ, ಸಾಲ್ವ, ಪೌಂಡ್ರಕ ಮೊದಲಾದವರೊಡನೆ ಆಗಮಿಸಿದ್ದನು. ಬಲರಾಮ ಕೃಷ್ಣರೂ ಬಂದು ಸೇರಿದರು. ಬಲರಾಮ ತನ್ನ ಸೇನೆಯನ್ನು ಪಟ್ಟಣದ ಹೊರಗೆ ದೂರದಲ್ಲಿ ನಿಲ್ಲಿಸಿದ್ದನು.

ಆಮೇಲೆ ವಿವಾಹವಿಧಿ ಆರಂಭವಾಯಿತು. ರುಕ್ಮಿಣಿಯು ಗೌರೀ ಪೂಜೆಗಾಗಿ ತನ್ನ ಪರಿವಾರದೊಡನೆ ದೇವಸ್ಥಾನಕ್ಕೆ ಹೋದಳು. ಗೌರಿಯನ್ನು ಪೂಜಿಸಿ “ಶ್ರೀಕೃಷ್ಣನೇ ನನಗೆ ಪತಿಯಾಗಲಿ” ಎಂದು ಬೇಡಿಕೊಂಡಳು. ಶ್ರೀಕೃಷ್ಣನು ನಗರಕ್ಕೆ ಬಂದಿರುವ ವಿಷಯ ಅವಳಿಗೆ ಗೊತ್ತಿರಲಿಲ್ಲ. ಏನಾಗುವುದೋ ಎಂದು ಅವಳು ಕಳವಳಿಸುತ್ತಿದ್ದಳು. ರುಕ್ಮಿಣಿಯು ಗೌರೀ ಪೂಜೆಯನ್ನು ಮುಗಿಸಿ ದೇವಸ್ಥಾನದಿಂದ ಹೊರಗೆ ಬಂದಳು. ಒಡನೆಯೇ ಶ್ರೀಕೃಷ್ಣನು ತನ್ನ ರಥವನ್ನು ತಂದು, ಅವಳನ್ನು ರಥಕ್ಕೆ ಹತ್ತಿಸಿ ದ್ವಾರಕೆಯ ಕಡೆಗೆ ಧಾವಿಸಿದನು. ಈ ವಿಚಾರವು ತಿಳಿದ ಕೂಡಲೇ ಜರಾಸಂಧನೇ ಮೊದಲಾದವರು ಕುಪಿತರಾಗಿ ಶ್ರೀಕೃಷ್ಣನನ್ನು ಅಟ್ಟಿಸಿಕೊಂಡು ಹೋದರು. ಭೀಕರವಾದ ಯುದ್ಧ ನಡೆಯಿತು. ಕೃಷ್ಣ ಬಲರಾಮರು ಎಲ್ಲರನ್ನೂ ಸೋಲಿಸಿ ದ್ವಾರಕೆಯತ್ತ ನಡೆದರು.

ಅನಂತರ ದ್ವಾರಕೆಯಲ್ಲಿ ಶ್ರೀಕೃಷ್ಣನಿಗೂ ರುಕ್ಮಿಣಿಗೂ ವೈಭವದಿಂದ ವಿವಾಹ ನಡೆಯಿತು. ರುಕ್ಮಿಣಿಯು ಹಿರಿಯ ರಾಣಿಯಾಗಿದ್ದಳು. ಪ್ರದ್ಯುಮ್ನನು ರುಕ್ಮಿಣಿಯ ಮಗ.

ಪದ್ಮಾವತಿ

ಒಂದು ಸಲ ಭೃಗುಮಹರ್ಷಿಗಳು ವೈಕುಂಠಕ್ಕೆ ಹೋದರು. ಅಲ್ಲಿ ವಿಷ್ಣು ಆದಿಶೇಷನ ಮೇಲೆ ಮಲಗಿ ನಿದ್ರಿಸುತ್ತಿದ್ದನು. ಮುನಿಗಳಿಗೆ ಕೋಪ ಬಂದು, ವಿಷ್ಣುವಿನ ಎದೆಗೆ ಒದ್ದರು. ಆಗ ವಿಷ್ಣು ಎಚ್ಚೆತ್ತು “ಓ ಮುನಿಗಳೇ, ನಿಮಗ ಸ್ವಾಗತ! ನನ್ನನ್ನು ಕ್ಷಮಿಸಿರಿ, ನನ್ನ ಗಟ್ಟಿಯಾದ ಎದೆಗೆ ತಾಕಿದ್ದರಿಂದ ನಿಮ್ಮ ಪಾದಕ್ಕೆ ಎಷ್ಟು ನೋವಾಯಿತೋ!” ಎಂದು ಹೇಳಿ ಅವರ ಪಾದವನ್ನು ಒತ್ತಿ ಉಪಚರಿಸಿದನು. ಭೃಗು ಮುನಿಗಳು ಸಂತುಷ್ಟರಾಗಿ “ನಿನ್ನನ್ನು ಒದೆದರೂ ಕೋಪಗೊಳ್ಳದೆ ನನಗೆ ಉಪಚಾರ ಮಾಡಿದ್ದೀಯೆ. ನೀನು ಸತ್ವಗುಣದವನು. ನೀನೇ ಶ್ರೇಷ್ಠ” ಎಂದು ಹೇಳಿ ಹೊರಟು ಹೋದರು.

ಇತ್ತ ನಾರಾಯಣನ ಪತ್ನಿ ಲಕ್ಷ್ಮಿಗೆ ಅಸಮಾಧಾನವಾಯಿತು. “ನಾನು ನೆಲಸಿದ ವಕ್ಷ ಸ್ಥಳವನ್ನು ಆ ಮುನಿ ಒದ್ದನಲ್ಲ! ನನಗೇ ಅವಮಾನ ಮಾಡಿದಂತಾಯಿತು. ಅವನನ್ನು ದಂಡಿಸದೆ ನನ್ನ ಪತಿ ಅವನನ್ನೇ ಉಪಚರಿಸುತ್ತಾನೆ”  ಎಂದು ಕೋಪಗೊಂಡಳು. ಇನ್ನ ತಾನು ವಕ್ಷಸ್ಥಳದಲ್ಲಿ ಇರಲಾರೆನೆಂದು ಬೇಸರದಿಂದ ಹೊರಟು ಹೋಗಿ ಕೊಲ್ಹಾಪುರುದಲ್ಲಿ ನೆಲೆಸಿದಳು. ಈಗಲೂ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನ ಪ್ರಸಿದ್ಧವಾಗಿದೆ.

ಲಕ್ಷ್ಮಿ ಹೊರಟು ಹೋದುದರಿಂದ ವಿಷ್ಣು ದುಃಖಿತನಾಗಿ ವೈಕುಂಠದಿಂದ ಹೊರಟು ತಿರುಪತಿಯ ವೆಂಕಟಾದ್ರಿಯಲ್ಲಿ ವೆಂಕಟೇಶನೆಂಬ ಹೆಸರಿನಿಂದ ನೆಲೆಸಿದನು.

ಚೋಳ ದೇಶದ ದೊರೆ ಆಕಾಶರಾಜನಿಗೆ ಮಕ್ಕಳಿರಲಿಲ್ಲ. ಅದಕ್ಕಾಗಿ ಒಂದು ಯಾಗವನ್ನು ಮಾಡಬೇಕೆಂದು ಅವನ ಗುರುಗಳು ಹೇಳಿದರು. ರಾಜನು ಅದಕ್ಕೆ ಒಪ್ಪಿ ನೆಲವನ್ನು ಸರಿಮಾಡಲು ತಾನೇ ನೇಗಿಲಿನಿಂದ ನೆಲವನ್ನು ಉಳುತ್ತಿದ್ದನು. ನೇಗಿಲಿನಿಂದ ನೆಲವು ಸೀಳಿದಾಗ ಸಹಸ್ರದಳವುಳ್ಳ ಒಂದು ತಾವರೆ ಹೂ ಕಾಣಿಸಿತು. ಅದರಲ್ಲಿ ಒಂದು ಹೆಣ್ಣು ಮಗು ಮಲಗಿತ್ತು. ಆಗ “ಎಲೈ ರಾಜನೆ, ಈ ಮಗು ಬಹಳ ಭಾಗ್ಯಶಾಲಿ. ಇದೇ ನಿನ್ನ ಮಗಳೆಂದು ತಿಳಿದು ಪಾಲಿಸು” ಎಂದು ಆಕಾಶವಾಣಿಯಾಯಿತು. ರಾಜನು ಸಂತೋಷದಿಂದ ಆ ಮಗುವನ್ನು ತನ್ನ ರಾಣಿಯಾದ ಧಾರಿಣೀದೇವಿಗೆ ಒಪ್ಪಿಸಿದನು. ಮಗುವಿಗೆ ಪದ್ಮಾವತಿ ಎಂದು ಹೆಸರಿಟ್ಟರು. ಅವಳನ್ನು ಬಹಳ ಪ್ರೀತಿಯಿಂದ ಸಾಕಿದರು. ಅವಳು ಶುಕ್ಲಪಕ್ಷದ ಚಂದ್ರನಂತೆ ಬೆಳೆಯುತ್ತ ಪ್ರಾಯಕ್ಕೆ ಬಂದಳು.

ಒಂದು ದಿನ ಪದ್ಮಾವತಿ ತನ್ನ ಗೆಳತಿಯರೊಂದಿಗೆ ಉದ್ಯಾನವನದಲ್ಲಿ ವಿಹರಿಸುತ್ತಿರುವಾಗ ನಾರದರು ಅಲ್ಲಿಗೆ ಬಂದರು. ಪದ್ಮಾವತಿಯನ್ನು ನೋಡಿ “ಅಮ್ಮ ನೀನು ಯಾರೆಂಬುದು ನನಗೆ ಗೊತ್ತು. ನೀನು ಸಾಕ್ಷಾತ್‌ ಲಕ್ಷ್ಮಿಯಾಗಿದ್ದೀಯೆ. ಮಹಾವಿಷ್ಣುವನ್ನು ಅಗಲಿರಲಾರದೆ ಈ ಜನ್ಮವನ್ನು ತಾಳಿ ಬಂದಿದ್ದೀಯೆ. ಆತನು ಈಗ ವೆಂಕಟಾದ್ರಿಯಲ್ಲಿ ವೆಂಕಟೇಶನೆಂಬ ಹೆಸರಿನಿಂದ, ನಿನ್ನ ವಿರಹದಿಂದ ದುಃಖಿಸುತ್ತ ವಾಸವಾಗಿದ್ದಾನೆ. ಸ್ವಲ್ಪ ದಿನಗಳಲ್ಲಿ ನಿಮ್ಮಿಬ್ಬರ ವಿವಾಹ ಜರುಗುವುದು” ಎಂದು ಹೇಳಿ ಹೊರಟುಹೋದನು.

ಪದ್ಮಾವತಿಗೆ ವೆಂಕಟೇಶನಲ್ಲಿ ಮನಸ್ಸು ನೆಟ್ಟಿತು. ಒಂದು ದಿನ ಪದ್ಮಾವತಿ ವನದಲ್ಲಿ ವಿಹರಿಸುತ್ತಿದ್ದಾಗ ವೆಂಕಟೇಶನು ಬಂದು ಅವಳನ್ನು ಕಂಡನು. ಇಬ್ಬರಿಗೂ ಪರಿಚಯವಾಗಿ ಪ್ರೀತಿ ಬೆಳೆಯಿತು. ಇದು ಆಕಾಶರಾಜನಿಗೆ ಗೊತ್ತಾಗಲು, ಅವನು ಸಂತೋಷದಿಂದ ಅವರಿಬ್ಬರ ಮದುವೆಗೆ ಒಪ್ಪಿದನು. ವೆಂಕಟೇಶನ ಅಪೇಕ್ಷೆಯಂತೆ ಬ್ರಹ್ಮಾದಿದೇವತೆಗಳೆಲ್ಲರೂ ವಿವಾಹಕ್ಕೆ ಬಂದರು. ವಿವಾಹವು ವಿಜೃಂಭಣೆಯಿಂದ ನಡೆಯಿತು.

ಶ್ರೀನಿವಾಸ-ಪದ್ಮಾವತಿಯರ ವಿವಾಹ ವಿಜೃಂಭಣೆಯಿಂದ ನಡೆಯಿತು

ಶ್ರೀಯು ತಿರುಪತಿ ವೆಂಕಟೇಶನ ವಕ್ಷಸ್ಥಳದಲ್ಲಿ ಮತ್ತೆ ಶಾಶ್ವತವಾಗಿ ನೆಲೆಸಿದ್ದರಿಂದ ಅವನಿಗೆ ಶ್ರೀನಿವಾಸನೆಂಬ ಹೆಸರು ಬಂದಿತು.

ಹೀಗೆ ಲಕ್ಷ್ಮಿಯನ್ನು ಕುರಿತು ಅನೇಕ ಕಥೆಗಳಿವೆ. ಲಕ್ಷ್ಮಿಯನ್ನು ನಮ್ಮ ಹಿರಿಯರು ಭಾಗ್ಯದೇವತೆಯೆಂದು ತಿಳಿದು ಪೂಜಿಸುತ್ತ ಬಂದಿದ್ದಾರೆ. ಅವಳನ್ನು ಭಕ್ತಿಯಿಂದ ಪೂಜಿಸುವುದರಿಂದಲೂ ಸ್ತುತಿಸುವುದರಿಂದಲೂ ನಮ್ಮ ಆಯುಸ್ಸು, ತೇಜಸ್ಸು ಮತ್ತು ಸಂಪತ್ತು ವರ್ಧಿಸುತ್ತದೆ.

ಪದ್ಮಾನನೇ ಪದ್ಮವಿಪದ್ಮ ಪತ್ರೇ
ಪದ್ಮಪ್ರಿಯೇ ಪದ್ಮದಲಾಯತಾಕ್ಷಿ|
ವಿಶ್ವಪ್ರಿಯೇ ವಿಶ್ವಮನೋನುಕೂಲೇ
ತತ್ಪಾದ ಪದ್ಮಂ ಮಯಿ ಸಂನಿಧತ್ಸ್ವ||