Categories
ರಂಗಭೂಮಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಅಶೋಕ ಬಾದರದಿನ್ನಿ

ಹವ್ಯಾಸಿ ರಂಗಕರ್ಮಿಯಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ರಂಗಭೂಮಿಯನ್ನು ಕಟ್ಟಿ ಬೆಳೆಸುತ್ತಿರುವ ವಿರಳರಲ್ಲಿ ಒಬ್ಬರು ಶ್ರೀ ಅಶೋಕ ಬಾದರದಿನ್ನಿ ಅವರು.
೧೯೫೧ರಲ್ಲಿ ವಿಜಾಪುರ ಜಿಲ್ಲೆ ಅಚನೂರು ಗ್ರಾಮದಲ್ಲಿ ಜನನ. ಬಿ.ಎ. ಪದವೀಧರರು. ಬಾಲ್ಯದಿಂದಲೂ ರಂಗಭೂಮಿ ಕಡೆಗೆ ಒಲವು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಅಡ್ವಾನ್ಸ್ ಡ್ರಾಮಾದಲ್ಲಿ ಡಿಪ್ಲೊಮಾ ಪದವಿ.
ಶ್ರೀಯುತರು ನಿರ್ದೇಶಿಸಿದ ಅಂತಾರಾಷ್ಟ್ರೀಯ ಖ್ಯಾತಿಯ ರಂಗಕರ್ಮಿ ಬಿ.ವಿ.ಕಾರಂತರ ಬೆನಕ ತಂಡಕ್ಕಾಗಿ ಹ್ಯಾಮ್ಮೆಟ್ ನಾಟಕ ನಿರ್ದೇಶನ, ಅಶೋಕ್ ಅವರು ನಿರ್ದೇಶಿಸಿದ ಸಂದರ್ಭ, ಸಂಕ್ರಾಂತಿ, ಸಿಂಗಾರೆವ್ವ ಮತ್ತು ಅರಮನೆ, ಶಾಕುಂತಲ ಅತ್ಯಂತ ಜನಪ್ರಿಯ ನಾಟಕಗಳು.
ಗೆಳೆಯರ ಜತೆಗೂಡಿ ಬೆಂಗಳೂರಿನಲ್ಲಿ ‘ಅಭಿನಯ ತರಂಗ’ ಭಾನುವಾರದ ರಂಗ ಶಾಲೆ ಸ್ಥಾಪಕರು. ಅಲ್ಲಿ ಅವರು ಪ್ರಾಂಶುಪಾಲರಾಗಿ ನಿರ್ದೇಶಿಸಿದ ‘ಕೋತಿಕತೆ’, ‘ಮಾ ನಿಷಾದ ನಾಟಕಗಳು ವಿಶೇಷ ತಂತ್ರದಿಂದ ಗಮನ ಸೆಳೆದವು. ಸಿರಿಗೆರೆ ತರಳಬಾಳು ಬೃಹನ್ಮಠದಲ್ಲಿ, ಬಾಗಲಕೋಟೆ, ವಿಜಾಪುರ ಜಿಲ್ಲೆಗಳಲ್ಲಿ ರಂಗ ತರಬೇತಿ ಶಿಬಿರ ನಡೆಸಿಕೊಟ್ಟಿರುವರು. ದ.ರಾ. ಬೇಂದ್ರೆ, ಗಿರೀಶ್ ಕಾರ್ನಾಡ್, ಲಂಕೇಶ್, ಬಿ.ವಿ.ವೈಕುಂಠ ರಾಜು ಅವರ ನಾಟಕಗಳನ್ನು ರಂಗದ ಮೇಲೆ ಅಳವಡಿಸಿದ ಕೀರ್ತಿ ಅಶೋಕ್ ಅವರದು.
ಶ್ರೀಯುತರು ರಂಗಭೂಮಿಯಲ್ಲಿ ಮಾಡಿರುವ ಸಾಧನೆಗಾಗಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರಥಮ ವಿಶ್ವಕನ್ನಡ ಸಮ್ಮೇಳನದಲ್ಲಿ ಗೌರವ, ಕೆ.ವಿ.ಶಂಕರಗೌಡ ರಂಗಭೂಮಿ ಪ್ರಶಸ್ತಿ, ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಸೇವೆಗಾಗಿ ಸಾಣೇಹಳ್ಳಿ ಶ್ರೀಮಠದಿಂದ ಶ್ರೀ ಶಿವಕುಮಾರ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಭಾಜನರು ಶ್ರೀ ಅಶೋಕ ಬಾದರದಿನ್ನಿ.