Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಇಮ್ರಾನ್ ಖುರೇಷಿ

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ ಸಂವೇದನಾಶೀಲ ಪತ್ರಕರ್ತ ಇಮ್ರಾನ್ ಖುರೇಷಿ ಅವರು.
ಶ್ರೀಯುತರದು ಸುದ್ದಿ ಮಾಧ್ಯಮದಲ್ಲಿ ಸಾರ್ಥಕ ೩೦ ವರ್ಷಗಳ ಸೇವಾ ಕೈಂಕರ್ಯ. ಮುದ್ರಣ, ವಿದ್ಯುನ್ಮಾನ ಹೀಗೆ ಮಾಧ್ಯಮ ಯಾವುದೇ ಇರಲಿ ಸುದ್ದಿ ಮೂಲಕ ಸಮಾಜವನ್ನು ಜಾಗೃತಿಗೊಳಿಸುವ ಸಾರ್ಥಕ ಕೆಲಸ.
ಪ್ರತಿಷ್ಠಿತ ಸುದ್ದಿ ಸಂಸ್ಥೆಯೊಂದಕ್ಕೆ ಟ್ರೈನಿ ಜರ್ನಲಿಸ್ಟ್ ಆಗಿ ವೃತ್ತಿ ಜೀವನಕ್ಕೆ ಕಾಲಿಟ್ಟ ಅವರು ಆನಂತರ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗೆ ಸೇರಿದರು. ಬಳಿಕ ‘ಇಂಡಿಯನ್ ಎಕ್ಸ್‌ಪ್ರೆಸ್‌’ಗೆ ವೃತ್ತಿ ಜೀವನದ ಜಿಗಿತ. ೧೯೮೪ರಲ್ಲಿ ‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗೆ ಮುಖ್ಯ ವರದಿಗಾರರಾಗಿ ಸೇರಿ ಅನೇಕ ಯುವ ಪತ್ರಕರ್ತರನ್ನು ರೂಪಿಸಿದ ಹಿರಿಮೆ
ಅವರದು.
ರಂಜಕತೆಗೆ ಒತ್ತು ನೀಡುವ ಮಾಧ್ಯಮದಲ್ಲಿದ್ದರೂ ಇಮ್ರಾನ್ ಅವರು ವೃತ್ತಿಯಲ್ಲಿ ಮಾನವೀಯತೆಯನ್ನು ಮೆರೆಯುವ ಪತ್ರಕರ್ತರೆಂಬುದಕ್ಕೆ ಅವರು ಮಾಡಿರುವ ವರದಿಗಳೇ ಸಾಕ್ಷಿ. ೧೯೮೧ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಸರ್ಕಸ್
ಕಂಪೆನಿಯ ಬೆಂಕಿ ದುರಂತ ಕುರಿತು ಅವರು ಮಾಡಿದ ವರದಿ ಮರೆಯಲಸದಳ.
೧೯೯೪ರಲ್ಲಿ ವಿದ್ಯುನ್ಮಾನ ಮಾಧ್ಯಮಕ್ಕೆ ಪ್ರವೇಶ. ಶ್ರೀಯುತರು ಸದ್ಯ ಆಜ್ ತಕ್/ಹೆಡ್‌ಲೈನ್ಸ್ ಟುಡೇ ರಾಷ್ಟ್ರೀಯ ಸುದ್ದಿ
ವಾಹಿನಿಯ ಸಂಪಾದಕರು.
‘ಮೊದಲು ಮಾನವೀಯತೆ ಆನಂತರ ವರದಿ’ ಎಂಬ ಜೀವನತತ್ವ ಅಳವಡಿಸಿಕೊಂಡ ವೃತ್ತಿಯಲ್ಲಿ ಬದ್ಧತೆ, ಪ್ರಾಮಾಣಿಕ ಹಾಗೂ ನೈತಿಕತೆಗಳನ್ನು ಉಳಿಸಿಕೊಂಡ ಅಪರೂಪದ ಪತ್ರಕರ್ತರು ಶ್ರೀ ಇಮ್ರಾನ್ ಖುರೇಷಿ.