Categories
ರಂಗಭೂಮಿ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಚಂದ್ರಕುಮಾರ್ ಸಿಂಗ್

ಕರ್ನಾಟಕ ಹಿರಿಯ ರಂಗಕರ್ಮಿಗಳಲ್ಲಿ ಒಬ್ಬರಾದ ಚಂದ್ರಕುಮಾರ್ ಸಿಂಗ್ ರಂಗಭೂಮಿಯಲ್ಲಿಯೇ ತಮ್ಮ ಬದುಕನ್ನ ಕಂಡುಕೊಂಡವರು. ಅಭಿನಯ, ಸಂಘಟನೆ, ಬೆಳಕು ವಿನ್ಯಾಸ, ರಂಗಸಜ್ಜಿಕೆ ಹೀಗೆ ನಾಟಕ ರಂಗದ ಎಲ್ಲ ವಿಭಾಗಗಳಲ್ಲಿಯೂ ದುಡಿದವರು. ಹಯವದನ, ಸಂಕ್ರಾಂತಿ, ಹ್ಯಾಬ್ಲೆಟ್, ತಬರನ ಕತೆ, ಮೊದಲಾದ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ರಂಗಕ್ಕೆ ತಂದಾಗ ಅದಕ್ಕೆ ರಂಗವಿನ್ಯಾಸ ಮತ್ತು ಬೆಳಕಿನ ವಿನ್ಯಾಸಗಳ ಮೂಲಕ ಜೀವ ತುಂಬಿದವರು ಚಂದ್ರಕುಮಾರ್ ಸಿಂಗ್,
ಬೀದಿ ನಾಟಕ, ಮೂಕಾಭಿನಯ, ಕ್ಷೇತ್ರಗಳಲ್ಲಿ ಚಂದ್ರಕುಮಾರ್ ಸಿಂಗ್ ತಮ್ಮ ಪ್ರತಿಭೆಯನ್ನು ತೋರಿದವರು. ನಾಡಿನ ಹಿರಿಯ ರಂಗಕರ್ಮಿಗಳೊಡನೆ ಸಕ್ರಿಯ ಸಂವಹನವನ್ನಿಟ್ಟುಕೊಂಡಿರುವ ಚಂದ್ರಕುಮಾರ್ ಸಿಂಗ್ ಬೆಳಕು ಮತ್ತು ರಂಗವಿನ್ಯಾಸ ತಜ್ಞರಾಗಿ ಅನೇಕ ಶಿಬಿರಗಳನ್ನು ಸಹ ನಡೆಸಿಕೊಟ್ಟಿದ್ದಾರೆ.
ಸರ್ಕಾರದ ಪಠ್ಯಪುಸ್ತಕ ಸಮಿತಿಯಲ್ಲಿ ಕೆಲಸ ಮಾಡಿರುವ ಚಂದ್ರಕುಮಾರ್ ಸಿಂಗ್ ಚಲನಚಿತ್ರ ಹಾಗೂ ಕಿರುತೆರೆಯಲ್ಲಿಯೂ ಅಭಿನಯಿಸಿದ್ದಾರೆ. ಅವರ ಸೇವೆ ಸಾಧನೆಗೆ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಸಂದಿವೆ.