Categories
ಕ್ರೀಡೆ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ದತ್ತಾತ್ರೇಯ ಗೋವಿಂದ ಕುಲಕರ್ಣಿ

ಕ್ರೀಡೆಯೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ವಿಕಲಚೇತನ ದತ್ತಾತ್ರೇಯ ಗೋವಿಂದ ಕುಲಕರ್ಣಿ, ಶಿಕ್ಷಕ, ಪತ್ರಕರ್ತ, ಲೇಖಕ, ತರಬೇತಿಗಾರ, ಜಾನಪದ ಗಾಯಕರಾಗಿ ಅವರದ್ದು ಬಹುಮುಖಿ ಸಾಧನೆ.
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮದಲ್ಲಿ ೧೯೬೫ರಲ್ಲಿ ಜನಿಸಿದ ದತ್ತಾತ್ರೇಯ ಗೋವಿಂದ ಕುಲಕರ್ಣಿ ಅವರು ಹುಟ್ಟು ವಿಕಲಚೇತನರು. ಆದರೆ, ಆತ್ಮವಿಶ್ವಾಸದಿಂದ ಬದುಕಿನಲ್ಲಿ ಸಾಧಕರಾಗಿ ರೂಪುಗೊಂಡವರು. ಬಿ.ಎ. ಪದವೀಧರರು, ಕಿವುಡ ಮಕ್ಕಳ ವಿಶೇಷ ತರಬೇತಿ ಪಡೆದವರು. ಅನೇಕ ಕಾರ್ಯಾಗಾರಗಳಲ್ಲಿ ಪಾಲ್ಗೊಂಡವರು. ನರೇಗಲ್ಲಿನ ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯು ಸ್ಥಾಪಿಸಿದ ಕಿವುಡ ಮಕ್ಕಳ ವಸತಿ ಶಾಲೆಯ ಶಿಕ್ಷಕರಾಗಿ ೩೨ ವರ್ಷಗಳಿಂದಲೂ ಅಹರ್ನಿಶಿ ಸೇವೆ ಸಲ್ಲಿಸುತ್ತಿರುವ ಗುರು. ಕಿವುಡ–ಮೂಕ ಮಕ್ಕಳನ್ನು ಕ್ರೀಡೆಗೆ ಪ್ರೇರೇಪಿಸಿದವರು. ಶಾಲಾ ಮಕ್ಕಳನ್ನು ಕ್ರೀಡಾಪಟುವಾಗಿ ರೂಪಿಸಿದ ಹಿರಿಮೆ. ಮೂಕವಿದ್ಯಾರ್ಥಿಗಳಿಗೆ ರಾತ್ರಿ ವೇಳೆ ಉಚಿತ ಪಾಠ, ಕಿರುನಾಟಕಗಳನ್ನು ರಚಿಸಿ ನಿರ್ದೇಶನ, ಮಕ್ಕಳಿಗಾಗಿ ಕೋಲಾಟದ ಪದಗಳನ್ನು ಬರೆದು ಹಾಡಿಸಿದ ಹೆಗ್ಗಳಿಕೆ. ಹಲವಾರು ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದು ಶಾಲೆಗೆ ಕೀರ್ತಿ ತಂದ ಕ್ರೀಡಾಪಟು. ಪತ್ರಕರ್ತನಾಗಿಯೂ ದುಡಿದ ಅನುಭವ. ಭಾಷಣ, ಉಪನ್ಯಾಸ ಮತ್ತಿತರ ತುಂಬು ಚಟುವಟಿಕೆಗಳಿಂದ ಗಮನಸೆಳೆದ, ವಿಕಲಚೇತನ ಮಕ್ಕಳಿಗೆ ಸ್ಫೂರ್ತಿ ತುಂಬಿದ ಮಾದರಿ ಸಾಧಕರು.