Categories
ರಂಗಭೂಮಿ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಲಲಿತಾ ರಾಚಪ್ಪ ಪಾತ್ರೋಟ

ಜಾನಪದ ರಂಗಭೂಮಿಯ ಸಣ್ಣಾಟದ ವೃತ್ತಿ ಕಲಾವಿದೆಯಾಗಿ ಸುಮಾರು ಒಂದು ಸಾವಿರದ ಏಳುನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿ ಎಲೆಮರೆಯ ಕಾಯಿಯಂತೆ ಬದುಕುತ್ತಿರುವ ಅಪ್ಪಟ ಕಲಾವಿದೆ ಶ್ರೀಮತಿ ಲಲಿತಾ ರಾಚಪ್ಪ ಪಾತ್ರೋಟ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕು ನಾವಲಗಟ್ಟಿಯಲ್ಲಿ ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಶ್ರೀಮತಿ ಲಲಿತಾ ರಾಚಪ್ಪ ಪಾತ್ರೋಟ ಅವರು ತಮ್ಮ ೧೭ನೆಯ ವಯಸ್ಸಿನಲ್ಲಿಯೇ ರಂಗಭೂಮಿ ಪ್ರವೇಶಿಸಿದರು. ಸಂಗ್ಯಾಬಾಳ್ಯಾ, ರಾಧಾಕೃಷ್ಣ ಶ್ರೀ ಕೃಷ್ಣಪಾರಿಜಾತ ಮುಂತಾದ ಸಣ್ಣಾಟಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಿವಂಗತ ಪರಪ್ಪಾ ಬಳಿಗಾರ, ಕಾಸಪ್ಪಗೆಜ್ಜಿ ದಿವಂಗತ ಭಾಗೀರತವ್ವ ತಾಯಿ ಬಸವಣ್ಣೆಪ್ಪ ಮುಂತಾದವರಿಂದ ಸಣ್ಣಾಟ ಕಲಿತು ಕರಗತ ಮಾಡಿಕೊಂಡವರು. ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲದೆ ಮಹಾರಾಷ್ಟ್ರ ರಾಜ್ಯದ ಗಡಿಭಾಗಗಳಲ್ಲೂ ಬಹು ಪ್ರಸಿದ್ದಿ.

ಕರ್ನಾಟಕದ ಜಾನಪದ ಯಕ್ಷಗಾನ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದು. ಕಲೆಯನ್ನೇ ಉಸಿರಾಗಿಸಿಕೊಂಡ ಇವರಿಗೆ ಭಾರತ ಸರ್ಕಾರದ ಸೀನಿಯರ್ ಫೆಲೋಶಿಪ್ -೨೦೦೦, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ-೯೩, ಜಾನಪದ ಸಂಶೋಧನಾ ಕೇಂದ್ರ, ಕಿತ್ತೂರು ಪ್ರಶಸ್ತಿ-೯೭, ಕರ್ನಾಟಕ ಜಾನಪದ ಪರಿಷತ್ತಿನ ಪ್ರಶಸ್ತಿ-೯೯ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ತಾಯಿ, ಅಜ್ಜಿಯವರ ಮೂಲಕ ಮನೆತನದಲ್ಲಿ ಪರಂಪರಾನುಗತವಾಗಿ ಹರಿದುಬಂದ ಸಣ್ಣಾಟ ಕಲೆಯಲ್ಲಿ ಅಸಾಧಾರಣ ಸಾಧನೆಗೈದ ಶ್ರೀಮತಿ ಲಲಿತಾ ರಾಚಪ್ಪ ಪಾತ್ರೋಟರು ಮಂಡಲ ಪಂಚಾಯತ್ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ ವಿಶಿಷ್ಟ ಕಲಾವಿದೆ.