Categories
ರಂಗಭೂಮಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ವಾಣಿ ಸರಸ್ವತಿ ನಾಯ್ಡು

ಭರತನಾಟ್ಯ, ಕಥಕ್ ಮತ್ತು ಕಥಕ್ಕಳಿ ನೃತ್ಯ ಪಟು, ರಂಗಭೂಮಿ ನಟಿ, ನೃತ್ಯಗುರು, ಕನ್ನಡ, ತೆಲುಗು, ತಮಿಳು, ಹಿಂದಿ, ಮರಾಠಿ ಭಾಷೆಬಲ್ಲ ಹಿರಿಯ ಕಲಾವಿದೆ ಶ್ರೀಮತಿ ವಾಣಿ ಸರಸ್ವತಿ ಅವರು.
೧೯೩೫ರಲ್ಲಿ ಜನನ. ಅಲಗೇರಿ ಜಟ್ಟೆಪ್ಪಾ ಕಂಪನಿಯ ಮೂಲಕ ತಮ್ಮ ೮ನೇ ವಯಸ್ಸಿನಲ್ಲಿ ರಂಗ ಪ್ರವೇಶ. ಚಿಕ್ಕಂದಿನಿಂದಲೇ ನೃತ್ಯಾಭ್ಯಾಸ ಪ್ರಾರಂಭಿಸಿ, ಶ್ರೀ ಗೋವಿಂದರಾಜ ಪಿಳ್ಳೆ ಮುಂಬೈ ಅವರಲ್ಲಿ ಭರತನಾಟ್ಯವನ್ನು ಹಾಗೂ ಮುಂಬೈನ ಶ್ರೀ ಗಣೇಶ ಪಾಂಡೆ ಮತ್ತು ಗುರು ಪಾಣಿಕರದ್ ಅವರಲ್ಲಿ ಕಥಕ್, ಕಥಕ್ಕಳಿಯಲ್ಲಿ ವಿಶೇಷ ತರಬೇತಿ ಪಡೆದರು. ನಾಟಕಗಳಲ್ಲಿ ನೃತ್ಯ ಕಲಾವಿದೆಯಾಗಿ ಪ್ರಸಿದ್ಧಿಗೆ ಬಂದರು. ಉತ್ತರ ಕರ್ನಾಟಕದ ಬಹುತೇಕ ಪ್ರಮುಖ ನಾಟಕ ಕಂಪನಿಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯ. ಮುಂಬೈಯ ಪೃಥ್ವಿರಾಜ ಕಪೂರ್ ಅವರ ಹಿಂದಿನಾಟಕ ಕಂಪನಿಯಲ್ಲಿ ಒಂದು ವರ್ಷ ಅಮೋಘ ನೃತ್ಯ ಪ್ರದರ್ಶನ ನೀಡಿ ‘ನಾಟ್ಯರಾಣಿ’ ಪ್ರಶಸ್ತಿ ಗಳಿಕೆ.
ನೃತ್ಯ ಶಾಲೆಯನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡಿಕೆ. ಇವರ ಶಿಷ್ಯರಲ್ಲಿ ಅನೇಕರು ವಿದೇಶಗಳಲ್ಲಿ ನೆಲೆಸಿದ್ದು ಅಲ್ಲಿ ನೃತ್ಯಶಾಲೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಮಹಿಳೆಯರಿಂದಲೇ ಅಭಿನಯಿಸಲ್ಪಡುವ ‘ಶ್ರೀ ಗುರುರಾಜ ಸ್ತ್ರೀ ನಾಟ್ಯ ಸಂಘ’ ಸ್ಥಾಪನೆ.
ಇವರ ಕಲಾಸೇವೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿಯಿಂದ ಗೌರವ ಪ್ರಶಸ್ತಿ, ಅಲ್ಲದೇ ಅನೇಕ ಸಂಘ ಸಂಸ್ಥೆಗಳಿಂದ ಪುರಸ್ಕೃತರು.
ಅರವತ್ತನಾಲ್ಕು ವರ್ಷಗಳಿಂದ ನೃತ್ಯಸೇವೆ, ರಂಗಸೇವೆಯನ್ನು ವ್ರತದಂತೆ ಕೈಗೊಂಡು ಬಂದಿರುವ ಎಲೆಮರೆಯ ಹಿರಿಯ ಚೇತನ ಶ್ರೀಮತಿ ವಾಣಿ ಸರಸ್ವತಿ ಅವರು.