Categories
ಯಕ್ಷಗಾನ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಸಣ್ಣಕ್ಕ ಬಂಗ್ಲೆಗುಡ್ಡೆ

ಅದ್ಭುತ ನೆನಪಿನ ಶಕ್ತಿಯ ಕಂಚಿನ ಕಂಠಸಿರಿಯ ಹಿರಿಯ ಜಾನಪದ ಪ್ರತಿಭೆ ಸಣ್ಣಕ್ಕ ಬಂಗ್ಲೆಗುಡ್ಡೆ.
ಪ್ರಕೃತಿ ಸಿರಿಯನ್ನು ನೋಡಿ, ಜಾನಪದ ಸಂಪತ್ತನ್ನು ಉಳಿಸಿ, ಬೆಳೆಸುತ್ತಲೇ ಬೆಳೆದ ಸಣ್ಣಕ್ಕ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಸಣ್ಣ ಗ್ರಾಮ ಕಸಬಾದವರು. ೮೫ ವರ್ಷ ವಯಸ್ಸಿನ ಸಣ್ಣಕ್ಕ ಜಾನಪದದ ಅಪ್ರತಿಮ ಪ್ರತಿಭೆ.
ಚಿಕ್ಕ ವಯಸ್ಸಿನಲ್ಲಿಯೇ ಮೌಖಿಕ ಸಾಹಿತ್ಯವನ್ನು ಆಸಕ್ತಿಯಿಂದ ಆಲಿಸುತ್ತಾ, ಅದನ್ನೇ ಅರಗಿಸಿಕೊಂಡು, ಸಂದರ್ಭ ಒದಗಿದಾಗಲೆಲ್ಲಾ ಹಾಡುತ್ತಾ ತಮ್ಮ ಒಂಟಿತನವನ್ನು ಮರೆತವರು ಅವರು. ಈಗವರು ಜಾನಪದ ಗೀತೆ, ಸಾಹಿತ್ಯ, ಕಥೆಗಳ ಬಹುದೊಡ್ಡ ಸಂಪತ್ತು.
ಈ ಜಾನಪದ ಸಿರಿಯಜ್ಜಿಯ ಪ್ರತಿಭೆಗಾಗಿ ಸುಳ್ಯ ತಾಲ್ಲೂಕಿನ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕನ್ನಡ ಸಿರಿ’, ತುಳು ಸಾಹಿತ್ಯ ಅಕಾಡೆಮಿಯಿಂದ ೨೦೦೭ರಲ್ಲಿ ಗೌರವ ಪ್ರಶಸ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ‘ಗಡಿನಾಡ ಸಿರಿ’ ಗೌರವ ಸಂದಿವೆ.
ಸಣ್ಣಕ್ಕ ಈಗ ನಮ್ಮ ನಡುವೆ ಇರುವ ದೊಡ್ಡ ಜಾನಪದ ಆಸ್ತಿ. ಅವರಿಂದ ಮೊಗೆದಷ್ಟೂ ಹೊರಬರುವ ಜಾನಪದ ಸಾಹಿತ್ಯಕ್ಕೆ ಬರ ಇಲ್ಲ.