Categories
ಯಕ್ಷಗಾನ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಂ.ಎ. ನಾಯ್ಕ

ಯಕ್ಷಗಾನ ಕ್ಷೇತ್ರ ಕಂಡ ಶ್ರೇಷ್ಠ ಕಲಾಕುಸುಮಗಳಲ್ಲಿ ಪ್ರಮುಖರು ಎಂ.ಎ. ನಾಯ್ಕ, ಬಡಗುತಿಟ್ಟಿನ ಅಗ್ರಪಂಕ್ತಿಯ ಸ್ತ್ರೀ ವೇಷಧಾರಿ. ಮೇಳಗಳ ಕೀರ್ತಿ ಬೆಳಗಿದ ಕಲಾವಿದರು. ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ಮಂದಾರ್ತಿ ಗ್ರಾಮದಲ್ಲಿ ೧೯೫೨ ರಲ್ಲಿ ಜನಿಸಿದ ಎಂ.ಎ.ನಾಯ್ಕ ಅವರ ಮೂಲ ಹೆಸರು ಮಂದಾತಿ ಅಣ್ಣಪ್ಪ ಮರಕಾಲ, ಬಡತನದ ಬೇಗೆಗೆ ಆರನೇ ತರಗತಿಗೆ ಓದು ಸ್ಥಗಿತ. ಮಂದಾರ್ತಿ ಮೇಳದ ಚಂಡೆಯ ಶಬ್ದಕ್ಕೆ ಮನಸೋತು ಕಲಾರಂಗಪ್ರವೇಶ. ಹಿರಿಯ ಯಕ್ಷಗಾನ ಕಲಾವಿದ ಭಾಗವತ ನಾರಾಯಣ ಉದ್ದೂರರ ಶಿಷ್ಯರಾಗಿ ಪ್ರವರ್ಧಮಾನಕ್ಕೆ, ಸ್ತ್ರೀವೇಷಧಾರಿಯಾಗಿ ಜನಜನಿತ. ಸ್ತ್ರೀವೇಷಕ್ಕೆ ಬೇಕಾದ ಒನಪು, ವೈಯ್ಯಾರ, ಶರೀರ, ಶಾರೀರ, ಸ್ವರಭಾರಗಳ ಸರ್ವ ಅಂಗಗಳಲ್ಲಿ ಉತ್ಕರ್ಷ ಹೊಂದಿರುವ ವಿಶಿಷ್ಟ ಕಲಾವಿದರು. ಮೋಹಿನಿ, ಸೈರೇಂದ್ರಿ, ದಮಯಂತಿ, ದ್ರೌಪದಿ, ಚಂದ್ರಮತಿ, ಸೀತೆ, ದೇವಿ ಮುಂತಾದವು ನಾಯ್ಕರ ಜನಪ್ರಿಯ ಸ್ತ್ರೀಪಾತ್ರಗಳು, ಅಮೃತೇಶ್ವರಿ ಮೇಳ, ಶಿರಸಿ ಮಾರಿಕಾಂಬ ಮೇಳ, ಇಡಗುಂಜಿ ಮೇಳ, ಮಂದಾತಿ ಮೇಳ ಸೇರಿದಂತೆ ಹಲವು ಮೇಳಗಳಲ್ಲಿ ಒಟ್ಟು ೪೨ ವರ್ಷಗಳ ಸುದೀರ್ಘ ಕಾಲ ಕಲಾಸೇವೆಗೈದ ಹಿರಿಮೆ, ಜರ್ಮನಿ, ಪೋಲೆಂಡ್, ಸ್ವಿಜರ್‌ಲ್ಯಾಂಡ್, ಹಾಂಗಕಾಂಗ್‌ ಮುಂತಾದೆಡೆಯೂ ಕಲಾಪ್ರದರ್ಶನ ನೀಡಿದ ಹೆಗ್ಗಳಿಕೆಯ ಎಂ.ಎ.ನಾಯ್ಕ ಅವರು ಕಾಳಿಂಗನಾವಡ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕೋಟ ವೈಕುಂಠ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಂದ ಭೂಷಿತರಾದ ಕಲಾಚೇತನ.