Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಎಸ್.ಪಿ.ಜಯಣ್ಣಾಚಾರ್

ಶಿಲ್ಪಕಲೆ, ಎರಕದ ವಿಗ್ರಹಗಳ ತಯಾರಿಕೆ, ಸ್ವರ್ಣ ಶಿಲ್ಪ ರಚನೆ ಹಾಗೂ ತಗಡಿನಲ್ಲಿ ರೇಖಿನ ಕೆಲಸ ಮಾಡುವುದರಲ್ಲಿ ನಿಷ್ಣಾತರೆನಿಸಿದ ಕಲಾವಿದರು ಎಸ್.ಪಿ.ಜಯಣ್ಣಾಚಾರ್ ಅವರು.
ಚಿಕ್ಕಮಗಳೂರು ಜಿಲ್ಲೆ ಬೀರೂರು ತಾಲ್ಲೂಕಿನ ಹುಲ್ಲೇನಹಳ್ಳಿಯಲ್ಲಿ ೧೯೪೭ರಲ್ಲಿ ಶ್ರೀಯುತರ ಜನನ. ತಂದೆ ಕೆ.ಎಸ್.ಪುಟ್ಟಶಾಮಾಚಾರ್ ಹೆಸರಾಂತ ಶಿಲ್ಪಿ ಮತ್ತು ನಕಾಶೆ ಕೆಲಸಗಾರರು. ಅವರಿಗೆ ಸಹಾಯಕರಾಗಿ ಕೆಲಸ ಮಾಡುತ್ತ ಹಲವು ಕಲಾಪ್ರಕಾರಗಳಲ್ಲಿ ಪರಿಣತಿ. ಜತೆಗೆ ಮೈಸೂರಿನ ಹೆಸರಾಂತ ಸ್ವರ್ಣಶಿಲ್ಪಿ ಚನ್ನಪ್ಪಾಚಾರ್ ಅವರ ಬಳಿ ನಕಾಶೆ ಕೆಲಸ ಕುರಿತ ಕೌಶಲ್ಯಗಾರಿಕೆ ಸಿದ್ಧಿ.
ಶ್ರೀ ಜಯಣ್ಣಾಚಾರ್‌ರವರು ತಯಾರಿಸಿರುವ ಮೂಡಬಿದರೆ ಜೈನಮಠದಲ್ಲಿರುವ ಜೈನ ತೀರ್ಥಂಕರ ಪ್ರತಿಮೆಗಳು, ಬೆಂಗಳೂರಿನ ವಿವಿಧೆಡೆ ಇರುವ ವಿಶ್ವೇಶ್ವರಯ್ಯ ಮತ್ತು ಮಹಾತ್ಮಾ ಗಾಂಧಿಯವರ ಎದೆಮಟ್ಟದ ಪ್ರತಿಮೆಗಳು, ತಮಿಳುನಾಡಿನ ಗೋಪಿನಾಥಂನಲ್ಲಿರುವ ಮಾರಿಯಮ್ಮನ ವಿಗ್ರಹಗಳು ವಿಶಿಷ್ಟ ಕಲೆಗಾರಿಕೆಯಿಂದ ಗಮನ ಸೆಳೆಯುತ್ತವೆ.
ಹಿತ್ತಾಳೆ, ಬೆಳ್ಳಿಯ ದ್ವಾರ ಕವಚಗಳು, ಪ್ರಭಾವಳಿಗಳು, ಕಿರೀಟ, ಆಭರಣಗಳು, ಕಾರ್ಕಳದ ಮಹಾಮ್ಮಾಯಿ ದೇವಾಲಯಕ್ಕೆ ಬಾಗಿಲುವಾಡ ತಯಾರಿಕೆ ಹಾಗೂ ಭೂತಾರಾಧನೆಗೆ ಬೇಕಾದ ದೈವಗಳಿಗೆ ತಲೆಪಟ್ಟಿ, ತಲೆಮಣಿ, ಕತ್ತಿ, ಗುರಾಣಿಗಳು, ಕವಚಗಳ ತಯಾರಿಕೆಯಲ್ಲಿ ಶ್ರೀಯುತರು ಕೈಚಳಕ ಮೆರೆದಿರುವರು.
ಸ್ವರ್ಣಶಿಲ್ಪ ತಯಾರಿಕೆಯಲ್ಲಿ ಹಾಗೂ ವಿಗ್ರಹಗಳ ಎರಕದ ಕಲೆಗಾರಿಕೆಯಲ್ಲೂ ಪರಿಣತರಿರುವ ಶ್ರೀಯುತರಿಗೆ ೧೯೮೮ರಲ್ಲಿ ಮೈಸೂರು ದಸರಾ ಪ್ರಶಸ್ತಿ, ಕರ್ನಾಟಕ ಕರಕುಶಲ ನಿಗಮದಿಂದ ರಾಜ್ಯಮಟ್ಟದ ಪ್ರಶಂಸಾ ಪತ್ರ, ಬೇಲೂರಿನಲ್ಲಿ ನಡೆದ ಶಿಲೋತ್ಸವದ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ಸಂದಿವೆ.
ಹಲವು ಕಲಾಪ್ರಕಾರಗಳಲ್ಲಿ ಕಲಾಕೃತಿಗಳ ನಿರ್ಮಾಣದ ಜತೆಗೆ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಶಿಲ್ಪಕಲೆಯ ಪರಿಚಯ, ಪ್ರಾತ್ಯಕ್ಷಿಕೆ ನೀಡುತ್ತ ಕಲೆಯ ಪ್ರಸಾರ ಮಾಡುತ್ತಿರುವವರು ಶ್ರೀ ಜಯಣ್ಣಾಚಾರ್.