Categories
ಚಿತ್ರಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ. ಚಂದ್ರನಾಥ ಆಚಾರ್ಯ

ಜಲವರ್ಣ, ತೈಲವರ್ಣ ಮತ್ತು ಇಲ್ಲಸ್ಟ್ರೇಟೆಡ್ ಮಾಧ್ಯಮಗಳಲ್ಲಿ ಸಮಾನ ಪ್ರಭುತ್ವ ಹೊಂದಿರುವ ಕಲಾವಿದ ಕೆ.ಚಂದ್ರನಾಥ
ಆಚಾರ್ಯ ಅವರು.
೧೯೪೯ರಲ್ಲಿ ಪುತ್ತೂರಿನ ಕಲಾವಿದರ ಕುಟುಂಬದಲ್ಲಿ ಜನನ. ಚಂದ್ರನಾಥರಿಗೆ ಅವರ ಅಜ್ಜ ಮಹಾಲಿಂಗಾಚಾರ್ಯರೇ ಕಲಾಜೀವನದ ಮೊದಲ ಗುರು, ಆದರ್ಶ, ಪ್ರೇರಕ ಶಕ್ತಿ, ಖ್ಯಾತ ಕಲಾವಿದ ದಿ.ಕೆ.ಕೆ.ಹೆಬ್ಬಾರ್‌ರವರ ಪ್ರೋತ್ಸಾಹದಿಂದ ಕಲಾಲೋಕ ಪ್ರವೇಶ, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಶಿಷ್ಯ ವೇತನದಿಂದ ಎರಡು ವರ್ಷ ಕಾಲ ‘ಶಾಂತಿ ನಿಕೇತನ’ದಲ್ಲಿ ಗ್ರಾಫಿಕ್ಸ್ ಡಿಪ್ಲೊಮಾ ಅಭ್ಯಾಸ.
ಹಸಿವು, ತೃಷೆ, ಸಂತೋಷಗಳಂತಹ ಸುಪ್ತ ಆಕಾಂಕ್ಷೆಗಳು ಮತ್ತು ಸಾವನ್ನು ಕುರಿತು ಇರುವ ಭಯವನ್ನು ಮನಸ್ಸಿನ ಒಳಹೊಕ್ಕು ನೋಡಿ ಪೇಂಟಿಂಗ್ಸ್ ಮೂಲಕ ಬಿಂಬಿಸುವಲ್ಲಿ ಶ್ರೀಯುತರು ಪರಿಣಿತರು.
ಪ್ರಿಂಟ್‌ಮೇಕಿಂಗ್, ಪುಸ್ತಕಗಳ ರಕ್ಷಾಪುಟ ವಿನ್ಯಾಸದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಆಚಾರ್ಯರು. ಕಲಾತ್ಮಕ ಚಲನಚಿತ್ರಗಳಿಗೆ ಕಲಾನಿರ್ದೇಶನ ನೀಡಿದ ಖ್ಯಾತಿಯೂ ಅವರದು.
ಮೂರೂವರೆ ದಶಕಗಳಿಗೂ ಹೆಚ್ಚು ಕಾಲ ನಿಯತಕಾಲಿಕಗಳಲ್ಲಿ ಚಿತ್ರಕಲಾವಿದರಾಗಿ ಸೇವೆ. ಕುಂಚ ಕಲೆಯ ಶ್ರೀಮಂತಿಕೆಯನ್ನು ಪರಿಚಯಿಸಿಕೊಡುವ ಮೂಲಕ ನಿಯತಕಾಲಿಕಗಳಿಗೆ ವಿಭಿನ್ನ ಆಯಾಮ ನೀಡಿದ ಕೀರ್ತಿ ಅವರದು.
ಶ್ರೀಯುತರ ಸಾಧನೆಯನ್ನು ಪರಿಗಣಿಸಿ ಎರಡು ಬಾರಿ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ೨೦೦೪ರಲ್ಲಿ ನಾಡೋಜ ಹಡಪದ್‌ ಪ್ರಶಸ್ತಿ ಹಾಗೂ ಬೇಂದ್ರೆ ಸ್ಮಾರಕ ಸಂಘದಿಂದ ಗೌರವ ಸಂದಿದೆ. ದೇಶ ವಿದೇಶಗಳಲ್ಲಿ ಚಂದ್ರನಾಥ್ ಅವರ ಕಲಾಕೃತಿಗಳು ಪ್ರದರ್ಶನ ಕಂಡಿವೆ.
ಸ್ವಂತ ಕಲ್ಪನೆ, ಪರಿಶ್ರಮ ಮತ್ತು ಕುಶಲತೆಗಳ ಮೂಲಕ ವ್ಯಕ್ತಿತ್ವ ರೂಪಿಸಿಕೊಂಡಿರುವ ಚಂದ್ರನಾಥ ಆಚಾರ್ಯ ಕಿರಿಯ ತಲೆಮಾರಿನ ಕಲಾವಿದರಿಗೆ ಆದರ್ಶಪ್ರಾಯ.