Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಕೆ. ನಾರಾಯಣ ರಾವ್‌

ಮಲೆನಾಡಿನ ಮಣ್ಣಿನಲ್ಲಿ ಹುಟ್ಟಿ ಆ ಮಣ್ಣಿಗೆ ಜೀವ ತುಂಬುವ ಕಲಾವಂತಿಕೆಯನ್ನು ಪಡೆದ ಪ್ರತಿಭಾವಂತ ಕಲಾವಿದರು
ಕೆ.ನಾರಾಯಣ ರಾವ್ ಅವರು.
ಕಲೆ ಎಂದರೆ ತಪಸ್ಸು ಎಂದು ನಂಬಿದವರು ಈ ಕಲಾವಿದ. ಚಿಕ್ಕಂದಿನಿಂದಲೂ ಇದ್ದ ಕಲಾಸಕ್ತಿಯಿಂದ ಮಣ್ಣಿನಲ್ಲಿ ಗೊಂಬೆಗಳನ್ನು ತಯಾರಿಸುವ ಕಲೆ ಸಿದ್ಧಿ. ಮುಂದೆ ಸಿಮೆಂಟ್ ಮಾಧ್ಯಮದಲ್ಲಿ ಬೃಹದಾಕಾರದ ಶಿಲ್ಪಗಳನ್ನು, ಗೋಪುರಗಳನ್ನು ನಿರ್ಮಿಸಿ ಕರ್ನಾಟಕದಲ್ಲಿ ಮಾತ್ರವೇ ಅಲ್ಲದೆ ಗಡಿಯಾಚೆಗೂ ಕನ್ನಡದ ಕೀರ್ತಿ ಪತಾಕೆ ಹಾರಿಸಿದವರು ಶ್ರೀಯುತರು.
ಶಿವಮೊಗ್ಗದಲ್ಲಿ ೧೯೫೩ರಲ್ಲಿ ಜನನ. ಅವರಿಗೆ ಕಲೆ ವಂಶಪಾರಂಪರ್ಯವಾಗಿ ಬಂದ ಬಳುವಳಿ. ನಾರಾಯಣರಾವ್‌ ಅವರ ಮುತ್ತಜ್ಜ ತಿಪ್ಪಜ್ಜನವರು ರಚಿಸಿರುವ ‘ಶ್ರೀ ವಿಶ್ವರೂಪ ದರ್ಶನ’ ಕೃತಿ ಕರ್ನಾಟಕ ಸಾಂಪ್ರದಾಯಿಕ ಕಲೆಯ ಉತ್ಕೃಷ್ಟ ಕೃತಿ ಎಂಬ ಮನ್ನಣೆಗೆ ಪಾತ್ರ
ಸಾಂಪ್ರದಾಯಿಕ ಶಿಲ್ಪಗಳಿಗೂ ನೈಜತೆಯ ಸ್ಪರ್ಶ ನೀಡಿ ಯಶ ಕಂಡವರು ನಾರಾಯಣರಾವ್‌, ಹಿತಮಿತ ಆಭರಣ, ಪ್ರಮಾಣ ಬದ್ಧತೆ, ಮುಖದಲ್ಲಿನ ಭಾವ ಅವರ ಕೃತಿಗಳ ವೈಶಿಷ್ಟ್ಯ. ಅವರು ರಚಿಸಿದ ಬೃಹತ್ ಶಿಲ್ಪಗಳಲ್ಲಿ ಪ್ರಮುಖವಾದವು- ಕುಂದಾಪುರ ಹಂಗೂರಿನ ೮೫ ಅಡಿ ಎತ್ತರದ ವೀರಾಂಜನೇಯ ವಿಗ್ರಹ, ತುಮಕೂರಿನಲ್ಲಿ ಶ್ರೀ ರಾಮಲಕ್ಷ್ಮಣರನ್ನು ಹೊತ್ತ ೭೦ ಅಡಿ ಎತ್ತರದ ಪ್ರಸನ್ನಾಂಜನೇಯ ವಿಗ್ರಹಗಳು.
ವಿಶ್ವ ವಿಖ್ಯಾತ ಮೈಸೂರು ದಸರಾ ಮೆರವಣಿಗೆಗಾಗಿ ೧೯೯೯ರಲ್ಲಿ ಶಿವಮೊಗ್ಗ ಜಿಲ್ಲೆಗಾಗಿ ಅವರು ರಚಿಸಿಕೊಟ್ಟ ಈಸೂರು ದುರಂತ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ ಸಂದಿದೆ.
ಸಿಮೆಂಟ್ ಮಾಧ್ಯಮದಲ್ಲಿ ಗೋಪುರ ಶಿಲ್ಪಗಳನ್ನು ರಚಿಸುವುದರಲ್ಲಿ ವಿಶೇಷ ಆಸಕ್ತಿ ತಳೆದು, ಅದನ್ನೇ ವೃತ್ತಿಯಾಗಿಸಿ ಸ್ವೀಕರಿಸಿದ ಶ್ರೀ ಕೆ.ನಾರಾಯಣ ರಾವ್ ಕಲೆಯೆಂಬುದು ನಿಂತ ನೀರಾಗದೆ, ಸದಾ ಹರಿಯುವ ನದಿಯಂತಿರಬೇಕು
ಎಂದು ಬಯಸುವವರು.