Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಕೋಟೆಮೂಲೆ ಗುಣವಂತೇಶ್ವರ ಭಟ್

ಶಿಲ್ಪಿಯಾಗಿ, ಶಿಲ್ಪಕಲಾ ಶಿಕ್ಷಕರಾಗಿ ಕೋಟೆಮೂಲೆ ಗುಣವಂತೇಶ್ವರ ಭಟ್ ಅವರು ಮಾಡಿದ ಕೆಲಸ ಅನುಪಮ. ಉಡುಪಿ ಜಿಲ್ಲೆ ಕಾರ್ಕಳ ಸಮೀಪದ ಹಿರಿಯಂಗಡಿಯಲ್ಲಿ ೧೯೬೦ರಲ್ಲಿ ಜನನ. ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ. ತಂದೆ ಶಂಕರ ಭಟ್ಟರಿಂದ ಬಾಲ್ಯದಿಂದಲೇ ಮರದ ಕೆತ್ತನೆ ತರಬೇತಿ. ೧೯೮೫ರಲ್ಲಿ ಪುತ್ತೂರಿನಲ್ಲಿ ವಿವೇಕಾನಂದ ವುಡ್ ಆರ್ಟ್ಸ್ ಸಂಸ್ಥೆ ಆರಂಭಿಸಿ, ಹತ್ತಾರು ಮಂದಿಗೆ ಉದ್ಯೋಗದಾತರಾದವರು ಗುಣವಂತೇಶ್ವರ ಭಟ್. ೧೯೯೧ರಲ್ಲಿ ಬಿಡದಿಯ ಕೆನರಾ ಬ್ಯಾಂಕಿನ ಕುಶಲಕರ್ಮಿಗಳ ತರಬೇತಿ ಸಂಸ್ಥೆಯಲ್ಲಿ ಗುರುಗಳಾದ ಅಶೋಕ ಗುಡಿಗಾರ ಮತ್ತು ಜಿ.ಎಲ್.ಭಟ್ ಅವರ ಮಾರ್ಗದರ್ಶನದಲ್ಲಿ ಎರಡು ವರ್ಷಗಳ ಕಾಲ ಮರ ಮತ್ತು ಕಲ್ಲಿನ ಸಾಂಪ್ರದಾಯಿಕ ಕಲೆ ಅಭ್ಯಾಸ. ೧೯೯೭ರಲ್ಲಿ ಕಾರ್ಕಳದ ಸಿ.ಇ.ಕಾಮತ್ ಕುಶಲಕರ್ಮಿಗಳ ತರಬೇತಿ ಸಂಸ್ಥೆಯಲ್ಲಿ ಶಿಲ್ಪಕಲಾ ಶಿಕ್ಷಕರಾಗಿ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಅನುಭವ ಶ್ರೀಯುತರದು.
ನಲ್ಲೂರು ಕೂಷ್ಮಾಂಡಿನಿ ಬಸದಿ ಸಮೀಪ ಐದೂವರೆ ಅಡಿ ಎತ್ತರದ ಆನೆ ನಿರ್ಮಾಣ, ರಾಮಚಂದ್ರಾಪುರ ಮಠಕ್ಕೆ ಕಲ್ಲಿನ ಹನುಮಂತ, ನಾಗನಕಟ್ಟೆ, ಬೆಳ್ಳಿಯ ಮಂಟಪ, ಮರದ ಸಿಂಹಾಸನ ರಚಿಸಿಕೊಟ್ಟಿರುವುದು ಗುಣವಂತೇಶ್ವರ ಭಟ್ ಅವರ ಹಿರಿಮೆ.
೧೯೯೪ರಲ್ಲಿ ಮೈಸೂರು ದಸರಾ ಪ್ರಶಸ್ತಿ ಪಡೆದಿರುವ ಶ್ರೀಯುತರು ಅನೇಕ ಶಿಬಿರಗಳಲ್ಲಿ, ಕಾರ್ಯಾಗಾರಗಳಲ್ಲಿ ಕಿರಿಯರಿಗೆ ಶಿಲ್ಪಕಲಾ ಕುಶಲತೆಯ ಅನುಭವವನ್ನು ಧಾರೆ ಎರೆದಿರುವರು.
ಮರದ ಕೆತ್ತನೆ ಕಲೆಯಲ್ಲಿ ಹಾಗೂ ಶಿಲ್ಪಕಲಾಕೃತಿಗಳ ನಿರ್ಮಾಣದಲ್ಲಿ ಪ್ರಾವೀಣ್ಯತೆ ಪಡೆದು ಈ ಎರಡೂ ಕ್ಷೇತ್ರದಲ್ಲಿ ಹೆಸರು ಮಾಡಿದವರು ಕೋಟೆಮೂಲೆ ಗುಣವಂತೇಶ್ವರ ಭಟ್.