Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಎಸ್.ಎಂ. ಶಂಕರಾಚಾರ್ಯ

ಸಾಂಪ್ರದಾಯಿಕ ಶಿಲ್ಪಕಲೆಯ ವಿವಿಧ ಪ್ರಕಾರಗಳಲ್ಲಿ ಪರಿಣತಿ ಪಡೆದಿರುವ ಶಿಲಾ ಹಾಗೂ ಲೋಹ ಶಿಲ್ಪಿ ಶ್ರೀ ಎಸ್.ಎಂ. ಶಂಕರಾಚಾರ್ಯ ಅವರು.
ಕೋಲಾರ ಜಿಲ್ಲೆಯ ಶಿವಾರಪಟ್ಟಣದವರು. ೧೨.೦೭.೧೯೨೧ರಲ್ಲಿ ಜನನ. ತಂದೆ ಶ್ರೀ ಮಾಳಿಗಾಚಾರ್ಯರಿಂದ ಮಾರ್ಗದರ್ಶನ. ಅಮರಕೋಶ, ಸಂಸ್ಕೃತ, ಶಿಲ್ಪ, ಶಿಲ್ಪಾಗಮ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ ಅನುಭವ. ಹೆಸರಾಂತ ಶಿಲ್ಪಿಗಳಾದ ಶ್ರೀ ಚನ್ನಪ್ಪಾಚಾರ್ಯರಲ್ಲಿ ಶಿಷ್ಯವೃತ್ತಿ.
ಶಿಲ್ಪಾಗಮ ರೀತ್ಯಾ ಇವರು ನಿರಿಸಿಕೊಡುವ ವಿಗ್ರಹಗಳಿಗೆ ವಿಶೇಷ ಬೇಡಿಕೆ ಇದೆ. ಮಧುಗಿರಿಯ ಸರ್ಕಾರಿ ಕಾಲೇಜಿಗೆ ವೀಣಾ ಸರಸ್ವತಿ ವಿಗ್ರಹ, ಚಿಕ್ಕಬಳ್ಳಾಪುರದ ವಿದ್ಯುತ್ ಇಲಾಖೆಗೆ ಶ್ರೀ ಚಾಮುಂಡೇಶ್ವರಿ ವಿಗ್ರಹ, ಲಿಂಗರಾಜಪುರಂನ ಶಂಕರಮಠಕ್ಕೆ ರಾಜಗೋಪುರದ ಹಿತ್ತಾಳೆ ಕಳಸಗಳು, ಬಂಗಾರಪೇಟೆಯ ಬಸವೇಶ್ವರ ದೇವಾಲಯಕ್ಕೆ ಬಸವೇಶ್ವರ ವಜ್ರಾಂಗಿ ಮತ್ತು ಬಾಗಿಲುವಾಡಗಳು, ಅನೇಕ ಊರುಗಳ ಬೇಡಿಕೆಗಳಂತೆ ಶ್ರೀ ವಿಷ್ಣುಸಂಪುಟ, ದೇವಿಸಂಪುಟ ಹಾಗೂ ಶಿವ ಸಂಪುಟ ಶಿಲಾವಿಗ್ರಹಗಳನ್ನು ರಚಿಸಿಕೊಟ್ಟಿರುತ್ತಾರೆ.
ತಮ್ಮ ಕಲಾಸಾಧನೆಗೆ ಅನೇಕ ಬೆಳ್ಳಿಪದಕಗಳನ್ನು, ಗೌರವ ಸನ್ಮಾನಗಳನ್ನು ಪಡೆದಿದ್ದಾರೆ. ಶಿವಾರಪಟ್ಟಣದಲ್ಲಿರುವ ಶಿಲ್ಪಕಲಾ ಸಹಕಾರ ಸಂಘದ ಕಾರ್ಯದರ್ಶಿಯಾಗಿ ೧೨ ವರ್ಷ ಸೇವೆಸಲ್ಲಿಸಿದ್ದಾರೆ.
೨೦೦೩ನೇ ಸಾಲಿನ ಶಿಲ್ಪಕಲಾ ಅಕಾಡೆವಿಯ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ ಶಿಲ್ಪಿ ಶ್ರೀ ಎಸ್. ಎಂ. ಶಂಕರಾಚಾರ್ಯ ಅವರು