Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್.ಕೆ. ಭಗವಾನ್ (ದೊರೆ-ಭಗವಾನ್)

ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ಮಿಸುವ ಮೂಲಕ ಕನ್ನಡ ಜನತೆಗೆ ಸದಭಿರುಚಿಯ ಚಿತ್ರಗಳನ್ನು ನೀಡಿದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಜೋಡಿಯಲ್ಲಿ (ದೊರೆ-) ಭಗವಾನರೂ ಒಬ್ಬರು.
೭೪ ವರ್ಷದ ಶ್ರೀಯುತರು ಮೂಲತಃ ಬೆಂಗಳೂರಿನವರು. ‘ಕರ್ನಾಟಕ ನಾಟಕ ಸಭಾ’ದ ಮೂಲಕ ವೃತ್ತಿರಂಗಭೂಮಿ ಪ್ರವೇಶ. ಆನಂತರ ಚಿತ್ರ ನಿರ್ಮಾಪಕರಾಗಿ, ನಿರ್ದೇಶಕ, ಸಹ ನಿರ್ದೇಶಕರಾಗಿ ದುಡಿದ ಅವರಿಂದ ಕನ್ನಡ ಚಿತ್ರರಂಗಕ್ಕೆ ಸಂದ ಕಾಣಿಕೆ ಅಪಾರ, ಅನನ್ಯ.
ಅವರು ನಿರ್ದೇಶಿಸಿದ ೪೮ ಚಿತ್ರಗಳಲ್ಲಿ ೨೦ ಚಿತ್ರಗಳು ಕನ್ನಡದ ಪ್ರಸಿದ್ಧ ಲೇಖಕರ ಕಾದಂಬರಿಗಳನ್ನು ಆಧರಿಸಿ ನಿರ್ಮಿಸಿದವು ಎಂಬುದು ಗಮನಾರ್ಹ ಸಂಗತಿ. ಭಗವಾನರ ನಿರ್ದೇಶನದ ‘ಸಂಧ್ಯಾರಾಗ’ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಿರ್ದೇಶನ ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿಯ ಗರಿ. ಎರಡು ಕನಸು, ಚಂದನದ ಗೊಂಬೆ, ಮುನಿಯನ ಮಾದರಿ, ಹೊಸ ಬೆಳಕು, ಜೀವನ ಚೈತ್ರ ಚಿತ್ರಗಳಿಗೆ ರಾಜ್ಯ ಪ್ರಶಸ್ತಿಯ ಗೌರವ.
೧೯೭೦-೮೦ರ ದಶಕದಲ್ಲಿ ಕನ್ನಡ ಚಿತ್ರರಂಗ ಕಂಡ ಅನೇಕ ಉತ್ತಮ ಚಿತ್ರಗಳ ಪೈಕಿ ಶ್ರೀಯುತರು ನಿರ್ಮಿಸಿದ ಚಿತ್ರಗಳೂ ಉಂಟು. ಡಾ. ರಾಜ್‌ಕುಮಾರ್ ಮತ್ತು ಅನಂತನಾಗ್ ಅವರಂಥ ಕಲಾವಿದರನ್ನು ರೂಪಿಸುವಲ್ಲಿ ದೊರೆ-ಭಗವಾನ್ ನಿರ್ದೇಶಕದ್ವಯರ ಕಾಣಿಕೆ ಹಿರಿದು.
ಸದ್ಯ ಶ್ರೀಯುತರು, ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಅವರು ಮೈಸೂರಿನಲ್ಲಿ ಸ್ಥಾಪಿಸಿರುವ ‘ಶಕ್ತಿಧಾಮ’ ಮಹಿಳಾ ಪುನರ್ವಸತಿ ಕೇಂದ್ರದ ಸ್ಥಾಪಕ ಟ್ರಸ್ಟಿ, ಇಳಿವಯಸ್ಸಿನಲ್ಲೂ ಚಿತ್ರರಂಗದ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವವರು ಶ್ರೀ ಭಗವಾನ್.