Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ನಿತಿನ್ ಷಾ

ಪುಸ್ತಕ ಪ್ರಕಾಶಕರಾಗಿ ಕನ್ನಡ ಸಾಹಿತ್ಯ ಬೆಳವಣಿಗೆಗೆ ಹಾಗೂ ಪುಸ್ತಕ ಸಂಸ್ಕೃತಿಯ ಉಳಿವಿಗೆ ಶ್ರಮಿಸುತ್ತಿರುವ ಅಪರೂಪದ ವ್ಯಕ್ತಿ ನಿತಿನ್ ಷಾ ಅವರು.
೧೯೬೧ರಲ್ಲಿ ಶ್ರೀಯುತರ ಜನನ. ಭಾರತದಲ್ಲೇ ಅತಿ ದೊಡ್ಡದಾದ ಪುಸ್ತಕ ಭಂಡಾರ ಸಪ್ನಬುಕ್ ಹೌಸ್ ಸ್ಥಾಪಕರು. ಅಮ್ಮಾ ಬುಕ್‌ನಲ್ಲಿ ದಾಖಲೆ ನಿರ್ಮಿಸಿದ ಖ್ಯಾತಿಗೆ ಪಾತ್ರರು ಶ್ರೀ ನಿತಿನ್ ಷಾ.
ದಕ್ಷ ಷಾ ಚಾರಿಟಬಲ್ ಟ್ರಸ್ಟ್ ಮೂಲಕ ಜಾತಿ ಭೇದವಿಲ್ಲದೆ ಬಡಬಗ್ಗರು, ದೀನದಲಿತರ ಸೇವೆ. ಹಲವು ಶಾಲೆಗಳಿಗೆ ದಾನ-ದತ್ತಿ ನೀಡಿಕೆ, ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿವರೆಗೆ ಉಚಿತ ಶಿಕ್ಷಣ ಕೊಡಿಸುತ್ತಿರುವ ಕೊಡುಗೈ ದಾನಿ ಅವರು. ಗುಜರಾತ್‌ನ ಭೂಕಂಪ ನಿರಾಶ್ರಿತರಿಗೆ ಲಕ್ಷಾಂತರ ರೂಪಾಯಿ ನೆರವು ನೀಡಿ ಮಾನವೀಯತೆ ಮೆರೆದವರು ಶ್ರೀಯುತರು.
೧೯೯೦ರಿಂದ ಕನ್ನಡ ಪುಸ್ತಕಗಳ ಪ್ರಕಾಶನ ಆರಂಭಿಸಿ ಸಾಹಿತ್ಯ, ವಿಮರ್ಶೆ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿರುವುದು ಶ್ರೀಯುತರ ಹಿರಿಮೆ. ಎರಡು ವರ್ಷಗಳಿಂದೀಚೆಗೆ ದಿನಕ್ಕೊಂದು ಪುಸ್ತಕದಂತೆ ಅನೇಕ ಕೃತಿಗಳ ಪ್ರಕಟಣೆಗೆ ಬದ್ಧರಾಗಿರುವರು.
ಶ್ರೀಯುತರು ಅಖಿಲ ಭಾರತ ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರ ಸಂಘದ ಕಾರ್ಯನಿರ್ವಾಹಕ ಸಮಿತಿ ಸದಸ್ಯರು, ಜೈನ ಸಮಾಜ ವಿಭಾಗದ ಸದಸ್ಯರು, ಪ್ರೆಸ್‌ಕ್ಲಬ್‌ನ ಕಾರ್ಪೋರೇಟ್ ಸದಸ್ಯರೂ ಆಗಿರುವರು.
ಶ್ರೀಯುತರ ಸೇವೆಯನ್ನು ಪರಿಗಣಿಸಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಅತ್ಯುತ್ತಮ ಪ್ರಕಾಶನ ಸಂಸ್ಥೆ ಪ್ರಶಸ್ತಿಯ ಗೌರವ, ಸುಪ್ರಸಿದ್ಧ ಲೇಖಕರು ಮತ್ತು ಸಂಘ ಸಂಸ್ಥೆಗಳಿಂದ ಸನ್ಮಾನ ಸಂದಿದೆ.
ಸ್ಪರ್ಧೆಗೆ ಎದೆಯೊಡ್ಡಿ ಪುಸ್ತಕ ಸಂಸ್ಕೃತಿಯನ್ನು ಕಾಪಾಡುತ್ತಿರುವ ಹಾಗೂ ಸಾಮಾಜಿಕ ಸೇವೆಗೂ ತಮ್ಮನ್ನು ತೆರೆದುಕೊಂಡ ಅಪರೂಪದ ವ್ಯಕ್ತಿತ್ವ ಶ್ರೀ ನಿತಿನ್ ಷಾ ಅವರದು.