Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಪಿ. ವಲಿ

ರಸ್ತೆ ಅಪಘಾತಗಳಲ್ಲಿ ಮಡಿದ, ಕಾಲುವೆ, ಬಾವಿಗಳಲ್ಲಿ ತೇಲುವ ಅನಾಥ ಶವಗಳಿಗೆ ಸಂಸ್ಕಾರ ಮಾಡುವ ಮೂಲಕ ನಿಸ್ವಾರ್ಥ ಸೇವೆಗೆ ಹೆಸರಾದವರು ಪಿ. ವಲಿ ಅವರು.
ಮೂಲತಃ ಬಳ್ಳಾರಿಯವರಾದ ವಲಿ ಹುಟ್ಟಿನಿಂದ ಬಡವರು. ಆದರೆ ಮನಸ್ಸು ಮತ್ತು ಸೇವಾ ಕೈಂಕರ್ಯ ಯಾವ ಸಿರಿವಂತಿಕೆಯನ್ನು ನಾಚಿಸುವಂಥದ್ದು. ಶ್ರೀಯುತರು ಬಳ್ಳಾರಿ, ಸಂಡೂರು ಮತ್ತು ಆಂಧ್ರ ಗಡಿಭಾಗದ ಅನಾಥ ಶವಗಳ ಆಪ್ತಬಂಧು ಎನಿಸಿದ್ದಾರೆ.
ವಾರಸುದಾರರಿಲ್ಲದ ಶವಗಳ ಸಂಸ್ಕಾರಕ್ಕೆ ವಲಿಯೇ ವಾರಸುದಾರರು. ಜಾತಿ, ಕುಲ, ಮತ, ವರ್ಗ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಅತ್ಯಂತ ಶ್ರದ್ಧೆಯಿಂದ, ನಿಷ್ಠೆಯಿಂದ ಸಂಸ್ಕಾರ ಮಾಡುವ ಶ್ರೀಯುತರ ಸಾಮಾಜಿಕ ಸೇವೆ ಸ್ತುತ್ಯಾರ್ಹ.
ಆಟೋ ಚಾಲಕ ವೃತ್ತಿಯ ವಲಿ ಅವರಿಗೆ ಅದರಿಂದ ಸಿಗುವ ಸಂಪಾದನೆಯಿಂದಲೇ ಜೀವನ ದೂಗಿಸಬೇಕಾದ ಅನಿವಾರ್ಯತೆ. ಪ್ರತಿಫಲಾಪೇಕ್ಷೆ ಇಲ್ಲದ ಶವಸಂಸ್ಕಾರದ ಸೇವೆಗೆ ಪತ್ರ ಪತ್ನಿ ಸಹಕಾರ ಉಂಟು.
‘ಮಾನವ ಜನ್ಮ ದೊಡ್ಡದು. ನಾವು ಇನ್ನೊಬ್ಬರಿಗೆ ಒಳ್ಳೆಯದು ಮಾಡಿದರೆ ದೇವರು ನಮಗೆ ಒಳ್ಳೆಯದು ಮಾಡುತ್ತಾನೆ’ ಎಂದು ನಂಬಿದ ಅವರ ಈ ಸೇವಾ ಕೈಂಕರ್ಯಕ್ಕೆ ಸಂಘ-ಸಂಸ್ಥೆಗಳಿಂದ ಸಂದಿರುವ ಗೌರವ ಹತ್ತಾರು. ಇಂಥ ನಿಸ್ವಾರ್ಥ ಸಮಾಜ ಸೇವಕನನ್ನು ದಸರಾ ನವರಾತ್ರಿ ರಂಗೋತ್ಸವ ೨೦೦೮ರ ಸಂದರ್ಭದಲ್ಲಿ ರಂಗಾಯಣ ಸಂಸ್ಥೆ ಸನ್ಮಾನಿಸಿ ಗೌರವಿಸಿದೆ. ದೀನರ ವಾರಸುದಾರ, ಆಪ್ತಬಂಧು ಮತ್ತು ಸಮಾಜ ಸೇವಕ ಶ್ರೀ ಪಿ.ವಲಿ.