Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಶ್ರೀ ಬಿ ಎಸ್ ಶಿವಪ್ಪ ಶೆಟ್ಟರು

ಗಾನವಿಶಾರದ, ದಾನಚಿಂತಾಮಣಿ, ಸ್ವಾತಂತ್ರ್ಯ ಹೋರಾಟಗಾರ, ಕೃಷಿಕ, ಶ್ರೀ ಬಿ ಎಸ್ ಶಿವಪ್ಪ ಶೆಟ್ಟರು.

೧೯೨೩ರಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಬಸವಾಪಟ್ಟಣದಲ್ಲಿ ಜನಿಸಿದ ಶ್ರೀ ಬಿ ಎಸ್ ಶಿವಪ್ಪ ಶೆಟ್ಟರ ಸರಳ ಸಜ್ಜನಿಕೆಯ ಜೀವನವೇ ಒಂದು ಆದರ್ಶ.

ಪ್ರೌಢಶಾಲಾ ಹಂತದಲ್ಲಿ ಮಹಾತ್ಮಾಗಾಂಧಿಯವರ ಕರೆಗೆ ಓಗೊಟ್ಟು ವ್ಯಾಸಂಗಕ್ಕೆ ತಿಲಾಂಜಲಿಯಿತ್ತು, ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ಬಾಲಕ ಶೆಟ್ಟರು ಅಂದಿನ ಸ್ವಾತಂತ್ರ್ಯ ಹೋರಾಟದ ನಾಯಕರುಗಳಾದ ಶ್ರೀ ಕೆ.ಸಿ. ರೆಡ್ಡಿ, ಶ್ರೀ ಬಿ ಡಿ ಜತ್ತಿ ಹುಲ್ಲೂರು ಶ್ರೀನಿವಾಸಜೋಯಿಸರು ಮುಂತಾದ ದೇಶಭಕ್ತರೊಡನೆ ಸಕ್ರಿಯವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡರಲ್ಲದೆ ಅರಣ್ಯ ಸತ್ಯಾಗ್ರಹ, ಕರ ನಿರಾಕರಣೆ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿ, ಶಿವಪುರ ಸತ್ಯಾಗ್ರಹ ಮುಂತಾದವುಗಳಲ್ಲಿ ಸಕ್ರಿಯ ಪಾತ್ರ ವಹಿಸಿದರು.

ಸಾಬರಮತಿ ಆಶ್ರಮದಲ್ಲಿ ಗಾಂಧೀಜಿಯವರ ಒಡನಾಡಿಯಾಗಿದ್ದು, ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಪ್ರೇರಣೆ ಪಡೆದ ಇವರು ಲಾಲ್ ಬಹದ್ದೂರ್ ಶಾಸ್ತ್ರಿ, ಜವಹರಲಾಲ್ ನೆಹರು, ರಾಜಗೋಪಾಲಾಚಾರಿ, ನಿಜಲಿಂಗಪ್ಪ, ಬಿ.ಡಿ. ಜತ್ತಿ ಇಂದಿರಾಗಾಂಧಿ ಮುಂತಾದ ಹಲವಾರು ರಾಷ್ಟ್ರನಾಯಕರ ನಿಕಟ ಸಂಪರ್ಕವಿರಿಸಿಕೊಂಡು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡವರು. ಹಲವಾರು ಸಂಸ್ಥೆಗಳ ಅಧ್ಯಕ್ಷರಾಗಿ, ಸೇವೆಸಲ್ಲಿಸಿರುವ ಶ್ರೀಯುತರ ಕಾರ್ಯಕ್ಷಮತೆಗೆ, ಸಜ್ಜನಿಕೆಗೆ ಮತ್ತು ಕಾರ್ಯದಕ್ಷತೆಗೆ ಅರಸಿ ಬಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು. ೧೯೫೬ರಲ್ಲಿ ರಾಜ್ಯ ಸರ್ಕಾರದಿಂದ ಮೈಸೂರು ಜಿಲ್ಲಾ ಪ್ರಗತಿಪರ ರೈತ’ ಎಂಬ ಪ್ರಶಸ್ತಿ, ರಂಭಾಪುರಿ ಮಠದ ಜಗದ್ಗುರುಗಳಿಂದ ಆಚಾರ್ಯ ಸೇವಾಸಾಗರ’ ಎಂಬ ಬಿರುದು ಪ್ರದಾನ, ಶ್ರೀ ಶೈಲ ಜಗದ್ಗುರುಗಳಿಂದ ‘ಗುರು ಸೇವಾ ಧುರೀಣ’, ಶ್ರೀ ಕಾಶಿ ಜಗದ್ಗುರುಗಳಿಂದ ‘ದಾನ ಚಿಂತಾಮಣಿ’ ಎಂಬ ಬಿರುದು.

ಹೀಗೆ ಅನೇಕ ಸಂಘ ಸಂಸ್ಥೆಗಳು ಸ್ವಾತಂತ್ರ್ಯ ಹೋರಾಟಗಾರ ಶ್ರೀ ಬಿ ಎಸ್ ಶಿವಪ್ಪ ಶೆಟ್ಟರ ಸರಳ ಸಜ್ಜನಿಕೆಯನ್ನು ಮೆಚ್ಚಿ ಗೌರವಿಸಿವೆ.