Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಶ್ರೀ ರಾಮಚಂದ್ರ ಹಮ್ಮಣ್ಣ ನಾಯಕ

ಬಾಲ್ಯದಲ್ಲೇ ಬ್ರಿಟಿಷರ ವಿರುದ್ಧ ಭೂಗತ ಚಟುವಟಿಕೆ ನಡೆಸಿದ ಸಾಹಸಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ದೇಶಪ್ರೇಮಿ ಹಾಗೂ ಯಕ್ಷಗಾನ ಕಲಾವಿದ ಶ್ರೀ ರಾಮಚಂದ್ರ ಹಮ್ಮಣ್ಣ ನಾಯಕ,

೧೯೧೮ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸೂರ್ವೆಯಲ್ಲಿ ಹಮಣ್ಣ ನಾಯಕರು ಜನಿಸಿದರು. ೧೯೩೦-೩೨ರ ಅವಧಿಯಲ್ಲಿ ಅಂಕೋಲ ತಾಲೂಕು ಸಮರ ಭೂಮಿಯಾಗಿತ್ತು. ಅಂಥ ನೆಲದಿಂದ ಬಂದ ನಾಯಕರು ಸಹಜವಾಗೇ ಚಳವಳಿಗೆ ತಮ್ಮನ್ನು ಅರ್ಪಿಸಿಕೊಂಡರು. ಗರುಡಾ ಮೂಲೆಯಲ್ಲಿದ್ದ ಭೂಗತ ಶಿಬಿರಕ್ಕೆ ಸಂಪರ್ಕ ಸೇತುವಾಗಿ ಕೆಲಸ ಮಾಡುತ್ತಿದ್ದ ಹನ್ನೆರಡು ವರ್ಷದ ಒಬ್ಬ ಬಾಲಕ ಬ್ರಿಟಿಷರ ಕಣ್ಣಿಗೆ ಮಣ್ಣೆರಚಿ ಕರಪತ್ರಗಳನ್ನು ಊರಿಗೆ ಹಂಚುವುದು, ಊರಿನ ಮಾಹಿತಿಯನ್ನು ಶಿಬಿರಗಳಿಗೆ ತಲುಪಿಸುವುದು, ಪೊಲೀಸರ ಕಣ್ಣು ತಪ್ಪಿಸಿ, ಸ್ವಾತಂತ್ರ ಹೋರಾಟಗಾರರಿಗೆ ನೆರವಾಗುವುದು ಮುಂತಾದ ದೇಶರಕ್ಷಣೆ ಕಾರ್ಯದಲ್ಲಿ ತೊಡಗಿದ್ದ. ಆ ಬಾಲಕನೇ ಇಂದು ೮೪ರ ವೃದ್ಧಾಪ್ಯದಲ್ಲೂ ದೇಶದ ಬಗ್ಗೆ ಚಿಂತಿಸುತ್ತಿರುವ ಶ್ರೀ ರಾಮಚಂದ್ರ ಹಮ್ಮಣ್ಣನಾಯಕ.

ಶ್ರೀ ರಾಮಚಂದ್ರ ಹಮ್ಮಣ್ಣ ನಾಯಕರು ಸ್ವಾತಂತ್ರ ಹೋರಾಟದಲ್ಲಿದ್ದರೂ, ತಮ್ಮ ಆಸಕ್ತಿಯ ಕ್ಷೇತ್ರವಾದ ಯಕ್ಷಗಾನವನ್ನು ಉಳಿಸಿ ಬೆಳೆಸಿದುದು ಗಮನಾರ್ಹ. ತಮ್ಮ ೮೦ನೆಯ ವಯಸ್ಸಿನವರೆಗೂ ಗೆಜ್ಜೆಕಟ್ಟಿ ರಂಗದ ಮೇಲೆ ಅಭಿನಯಿಸಿ, ಕಲಾಭಿಮಾನಿಗಳ ಮನಗೆದ್ದ ದಣಿವರಿಯದ ನಾಯಕರು.

ಸ್ವಾತಂತ್ರ್ಯ ಹೋರಾಟ ನಡೆಸಿ, ಜೈಲು ಶಿಕ್ಷೆ ಅನುಭವಿಸಿ, ತಮ್ಮ ಸರ್ವಸ್ವವನ್ನು ಕಳೆದುಕೊಂಡರೂ ತಮ್ಮ ಅಭಿಮಾನ, ಆತ್ಮವಿಶ್ವಾಸ, ಕಲಾಸಂಪತ್ತು ಉಳಿಸಿಕೊಂಡ ಹಿರಿಯ ಚೇತನ ಶ್ರೀ ರಾಮಚಂದ್ರ ಹಮ್ಮಣ್ಣ ನಾಯಕರು.