Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ವೀರಬ್ರಹ್ಮಾಚಾರ್

ಶಿಲ್ಪಕಲೆಯಲ್ಲಿ ಅಪೂರ್ವ ಪಾಂಡಿತ್ಯವನ್ನು ಸಂಪಾದಿಸಿ, ಶಾಸ್ತ್ರೀಯವಾದ ರೀತಿಯಲ್ಲಿ ಪ್ರತಿಮೆಗಳನ್ನು ನಿರ್ಮಿಸುವಲ್ಲಿ ಸಿದ್ಧಹಸ್ತರಾಗಿರುವವರು ಲೋಹಶಿಲ್ಪಿ ಶ್ರೀ ವೀರಬ್ರಹ್ಮಾಚಾರ್ ಅವರು.

೧೯೫೩ರಲ್ಲಿ ಜನಿಸಿದ ಶ್ರೀ ವೀರಬ್ರಹ್ಮಾಚಾರ್ಯರು ಶಿಲ್ಪಿಗಳ ಕೌಟುಂಬಿಕ ಹಿನ್ನೆಲೆಯುಳ್ಳವರು. ತಂದೆ ಶ್ರೀ ಮೂರ್ತಾಚಾರ್ಯ ಅವರ ಮಾರ್ಗದರ್ಶನದಲ್ಲಿ ಲೋಹಶಿಲ್ಪಕಲೆಯನ್ನು ಕರಗತ ಮಾಡಿಕೊಂಡರು.

ಬಹುವಿಧ ವಿನ್ಯಾಸಗಳ ಲೋಹದ ಪ್ರತಿಮೆಗಳನ್ನು, ಗುಡಿಗೋಪುರಗಳ ಕಳಶಗಳನ್ನು, ಪ್ರಭಾವಳಿ, ವಿಗ್ರಹ ಕವಚಗಳನ್ನು, ಮುಖಮಂಡಲಗಳನ್ನು, ಮೂರ್ತಿಗಳ ಕಿರೀಟಗಳನ್ನು, ಅತ್ಯಾಕರ್ಷಕವಾದ, ಸೂಕ್ಷ್ಮವಾದ ಕುಸುರಿ ಕೆಲಸಗಳಿಂದ ಒಡಗೂಡಿ ರಚಿಸುವುದರಲ್ಲಿ ಶ್ರೀ ವೀರಬ್ರಹ್ಮಾಚಾರ್ ಅವರು ಸಿದ್ಧಹಸ್ತರು.

ಪರಂಪರೆ, ಸಂಪ್ರದಾಯಗಳನ್ನು ಅನುಲಕ್ಷಿಸಿ ಅತ್ಯಂತ ಶಾಸ್ತ್ರಬದ್ಧವಾಗಿ ಲೋಹಕೃತಿಗಳನ್ನು ಕಂಡರಿಸುವುದರ ಜೊತೆಗೆ ಅವುಗಳಿಗೆ ಅತ್ಯಾಕರ್ಷಕ ಸುರೂಪವನ್ನು ತಂದುಕೊಡುವುದು ಶ್ರೀವೀರಬ್ರಹ್ಮಾಚಾರ್ ಅವರ ವೈಶಿಷ್ಟ್ಯ.

ತಾವು ಕಷ್ಟಪಟ್ಟು, ಸತತ ಸಾಧನೆಯಿಂದ ಸಂಪಾದಿಸಿಕೊಂಡಿರುವ ಶಿಲ್ಪಪ್ರತಿಭೆಯನ್ನು ಯುವ ಪೀಳಿಗೆಗೆ ಧಾರೆ ಎರೆಯುವ ಕಾಯಕವನ್ನು ನಿರ್ವಂಚನೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಲೋಹಶಿಲ್ಪಕಲೆಯಲ್ಲಿ ಉನ್ನತ ಮಟ್ಟದ ಪ್ರಾವೀಣ್ಯತೆಯನ್ನು ಪಡೆದು ಜನಪ್ರಿಯರಾಗಿ ಅನೇಕ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟವರು. ‘ಶಿಲ್ಪಬ್ರಹ್ಮ ಶ್ರೀ ವೀರಬ್ರಹ್ಮಾಚಾರ್ ಅವರು.