Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಶಿವಪ್ಪ ಯಲ್ಲಪ್ಪ ಭಜಂತ್ರಿ

ಶಹನಾಯ್ ವಾದನದಲ್ಲಿ ಪರಿಣತಿ ಪಡೆದ ಕಲಾಸಾಧಕ, ಕಲೆಯ ಆರಾಧಕರೂ ಆಗಿರುವರು ಶಿವಪ್ಪ ಎಲ್ಲಪ್ಪ ಭಜಂತ್ರಿ ಅವರು.
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಬಾಳಬೀಡು ಗ್ರಾಮದಲ್ಲಿ ಶ್ರೀಯುತರ ಜನನ, ಮನೆತನದ ಕಸುಬಾದ ಶಹನಾಯ್ ವಾದನ ಚಿಕ್ಕಂದಿನಿಂದಲೇ ಅಭ್ಯಾಸ. ಜತೆಗೆ ಗದಗದ ಸಂಗೀತ ಸಾಹಿತ್ಯ ಮಹಾವಿದ್ಯಾಲಯದಲ್ಲಿ ಸಂಗೀತ ಮತ್ತು ಶಹನಾಯ್‌ಗಳ ಶಾಸ್ತ್ರೀಯ ಕಲಿಕೆ.
ಶಹನಾಯ್ ಸಂಗೀತ ಕಲಾವಿದರ ತಂಡ ಕಟ್ಟಿಕೊಂಡಿರುವ ಅವರು ಮದುವೆ, ಜಾತ್ರೆ, ಸಭೆ, ಸಮಾರಂಭಗಳಲ್ಲಿ ಶಹನಾಯ್ ನುಡಿಸುತ್ತ ತೃಪ್ತಿಕಂಡುಕೊಂಡು ಕಳೆದ ೩೦ ವರ್ಷಗಳಿಂದ ಇದೇ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವರು. ಅವರ ಶಹನಾಯ್ ಕೇಳಲು ಜನ ತುದಿಗಾಲಲ್ಲಿ ನಿಲ್ಲುವರು. ಮೋಡಿ ಮಾಡುವಂತಹ ಮಂತ್ರಶಕ್ತಿಯಿದೆ ಅವರ ಶಹನಾಯ್ ವಾದನಕ್ಕೆ.
ಹಾನಗಲ್‌ನ ಕುಮಾರೇಶ್ವರಮಠದಲ್ಲಿ ಹಾಗೂ ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರು ಸಾವಿರ ಮಠದಲ್ಲಿಯೂ ಶಹನಾಯ್ ವಾದಕರಾಗಿ ಶ್ರೀಯುತರಿಂದ ಹಲವು ವರ್ಷಗಳಿಂದ ಸೇವೆ ಸಲ್ಲಿಕೆ, ಅವರು ಕರಗತ ಮಾಡಿಕೊಂಡಿರುವ ಈ ಕಲೆಯನ್ನು ಹಲವು ವಿದ್ಯಾರ್ಥಿಗಳಿಗೂ ಕಲಿಸುತ್ತ ಶಹನಾಯ್ ಪ್ರಕಾರವನ್ನು ಬೆಳೆಸುತ್ತಿರುವರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಲವು ಕಾರ್ಯಕ್ರಮಗಳಲ್ಲಿ, ಹಾನಗಲ್‌ ನಾಡಹಬ್ಬ ಉತ್ಸವ ಸೇರಿದಂತೆ ಹಲವು ಸಾಂಸ್ಕೃತಿಕ ತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸನ್ಮಾನಿತರಾಗಿದ್ದಾರೆ ಶ್ರೀಯುತರು.
ಶಹನಾಯ್ ವಾದನದಲ್ಲಿ ನುರಿತ ಪ್ರಭಾವಶಾಲಿ ಕಲಾವಿದರೂ, ಅನುಭಾವಿಗಳೂ ಮತ್ತು ಸೇವಾ ಮನೋಭಾವವುಳ್ಳವರು ಶ್ರೀ ಶಿವಪ್ಪ ಯಲ್ಲಪ್ಪ ಭಜಂತ್ರಿ,