Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಸಿದ್ಧನಗೌಡ ಚೆನಬಸಗೌಡ ಪಾಟೀಲ

ಕರ್ನಾಟಕದ ಗಡಿ ಭಾಗವಾದ ಬೆಳಗಾವಿಯಲ್ಲಿ ಕನ್ನಡಪರ ಹೋರಾಟದ ಮುಂಚೂಣಿ ನಾಯಕರಲ್ಲಿ ಶ್ರೀ ಸಿದ್ಧನಗೌಡ ಪಾಟೀಲ ಅವರು, ಸಹಕಾರ ಗ್ರಾಹಕ ಕ್ಷೇತ್ರದಲ್ಲೂ ಇವರದು ಅನನ್ಯ ಸಾಧನೆ.
ಬೆಳಗಾವಿ ನಗರದ ಒಂದು ನೂರು ವರ್ಷದ ಇತಿಹಾಸದಲ್ಲಿ ಪ್ರಪ್ರಥಮ ಕನ್ನಡ ಮೇಯರ್‌ರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದು.ಅನೇಕರ ವಿರೋಧದ ನಡುವೆಯೂ ಜನ ಹಿತವಾದ ಅಭಿವೃದ್ಧಿ ಯೋಜನೆಗಳ ‘ಮಾಸ್ಟರ್‌ಪ್ಲಾನ್’ ತಯಾರಿಸಿ ನಾಗರಿಕ ಸಮಸ್ಯೆಗಳನ್ನು ಪರಿಹರಿಸಿದ ಕೀರ್ತಿ ಇವರದು. ಬೆಳಗಾವಿಯಲ್ಲಿ ಅನೇಕ ಕನ್ನಡ ಶಾಲೆಗಳನ್ನು ಸ್ಥಾಪಿಸಿ ಅವುಗಳ ಬೆಳವಣಿಗೆಗೆ ಯೋಜನೆ ರೂಪಿಸಿ ಜಾರಿಗೆ ತಂದರು. ನಗರದ ಅನೇಕ ಬೀದಿಗಳಿಗೆ ಹಾಗೂ ವರ್ತುಲಗಳಿಗೆ ಕನ್ನಡದ ಹೆಸರುಗಳನ್ನು ನಾಮಕರಣ ಮಾಡಿದರು. ೧೯೫೯-೬೦ರ ಜನಗಣತಿ ಸಮಯದಲ್ಲಿ ಅರ್ಜಿಯಲ್ಲಿ ‘ಕನ್ನಡಿಗ’ ರೆಂದು ನಮೂದಿಸುವಂತೆ ಜನರನ್ನು ಜಾಗೃತಗೊಳಿಸಿದರು. ೧೯೫೨-೫೩ರಲ್ಲಿ ಪಂಡಿತ ಜವಾಹರಲಾಲ ನೆಹರೂ ಅವರಿಗೆ ಕಪ್ಪು ಬಾವುಟ ತೋರಿಸಿ ಆಂಧ್ರಪ್ರದೇಶಕ್ಕೆ ಸೇರಿಸಿದ್ದ ಬಳ್ಳಾರಿಯನ್ನು ಕರ್ನಾಟಕಕ್ಕೆ ಹಿಂಪಡೆಯಲು ಶ್ರಮಿಸಿದವರಲ್ಲಿ ಒಬ್ಬರು.
ಪ್ರತಿಕೂಲ ಸನ್ನಿವೇಶದಲ್ಲಿಯೂ ೧೯೫೪ ರಿಂದ ಬೆಳಗಾವಿಯಲ್ಲಿ ನಾಡಹಬ್ಬ ಆಚರಣೆಯನ್ನು ಪ್ರಾರಂಭಿಸಿದ್ದು ಶ್ರೀಯುತ ಪಾಟೀಲ ಅವರು.
ಸುಮಾರು ೪೦ ವರ್ಷಗಳ ಕಾಲ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಶ್ರೀಯುತರು ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕರ ಮಹಾ ಮಂಡಳದ ನಿರ್ದೇಶಕರಾಗಿ, ಅಧ್ಯಕ್ಷರಾಗಿ ದುಡಿದು ರಾಜ್ಯದಲ್ಲಿಯೇ ಮಾದರಿ ಸಂಸ್ಥೆ ಎಂಬ ಗೌರವ ಪಡೆಯಲು ಕಾರಣರಾದರು. ಅನೇಕ ಪ್ರಶಸ್ತಿ ಗೌರವಗಳನ್ನು ಪಡೆದಿರುವ ಸಿದ್ಧನಗೌಡ ಚನಬಸಗೌಡ ಪಾಟೀಲ ಅವರು ಕರ್ನಾಟಕದ ಹೆಮ್ಮೆಯ ಪುತ್ರರು.