Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಹನುಮಂತಕುಮಾರ್ ಮುಧೋಳ್

ಕುಲಕಸುಬುಗಳಾದ ಕೊಳಲು ಮತ್ತು ಶಹನಾಯ್ ವಾದನಗಳಲ್ಲಿ ಪಾಂಡಿತ್ಯ ಗಳಿಸಿ ನಾಡಿನಾದ್ಯಂತ ಈ ಕಲೆಗಳ ಪ್ರಸಾರದಲ್ಲಿ ತೊಡಗಿರುವವರು ಹನುಮಂತ ಕುಮಾರ ಮುಧೋಳ್ ಅವರು.
ಕೊಪ್ಪಳ ಜಿಲ್ಲೆಯ ಕುದರಿಮೋತಿ ಗ್ರಾಮದಲ್ಲಿ ೧೯೪೭ರಲ್ಲಿ ಜನನ. ತಂದೆ ಬಸಪ್ಪ ಭಜಂತ್ರಿಯವರ ಪೂರ್ವಜರ ಕಾಲದಿಂದಲೂ ಬೆಳೆದು ಬಂದ ಸಂಗೀತ ಮನೆತನ ಹನುಮಂತ ಕುಮಾರ್ ಅವರದು. ಪಂಡಿತ್ ಪುಟ್ಟರಾಜ ಗವಾಯಿಗಳ ಬಳಿ ಹಿಂದೂಸ್ತಾನಿ ಸಂಗೀತ ಅಭ್ಯಾಸ.
ಕೊಳಲು, ಹಾರ್ಮೋನಿಯಂ, ಕ್ಲಾರಿಯೋನೇಟ್ ವಾದಕರಾದ ಶ್ರೀಯುತರು ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ನಾಟಕ ಕಂಪೆನಿಗಳಲ್ಲಿ ಸಂಗೀತ ನಿರ್ದೇಶಕರಾಗಿ ದುಡಿದಿರುವರು. ಹೂವಿನ ಹಡಗಲಿಯ ರಂಗ ಭಾರತಿ ತಂಡದೊಂದಿಗೆ ಸಂಗ್ಯಾ ಬಾಳ್ಯಾ, ಜೋಕುಮಾರ ಸ್ವಾಮಿ ನಾಟಕಗಳಿಗೆ ಸಂಗೀತ ಸೇವೆ ನೀಡಿದ ಹಿರಿಮೆ ಅವರದು.
ಆಕಾಶವಾಣಿ ಮತ್ತು ದೂರದರ್ಶನಗಳಿಗೂ ಕಾರ್ಯಕ್ರಮ ನೀಡಿರುವ ಹನುಮಂತ ಕುಮಾರ್‌ ಅವರಿಂದ ಆನೆಗೊಂದಿ, ಹಂಪಿ, ಇಟಗಿ ಉತ್ಸವಗಳಲ್ಲಿ ಕೊಳಲು ವಾದನ ಪ್ರಸ್ತುತಿ. ಶ್ರೀಯುತರು ಸುಗಮ ಸಂಗೀತ ಗಾಯನಕ್ಕೆ ಸಂಗೀತದ ಸಾಥ್ ನೀಡಿರುವ ಕ್ಯಾಸೆಟ್‌ಗಳು ಹೊರಬಂದಿವೆ.
ಶ್ರೀಯುತರ ಸಂಗೀತ ಸೇವೆಗೆ ಕಲಾಪ್ರತಿಭೋತ್ಸವ ಪ್ರಶಸ್ತಿ, ವಿಶ್ವವಿಖ್ಯಾತ ದಸರಾ ಉತ್ಸವದಲ್ಲಿ ಪ್ರಶಸ್ತಿ, ಆನೆಗೊಂದಿ ಉತ್ಸವ ಸೇರಿದಂತೆ ಅನೇಕ ಉತ್ಸವಗಳಲ್ಲಿ ಸನ್ಮಾನಿತರು.
ಸಂಗೀತ ಸೇವೆಯ ಜತೆಗೆ ಹವ್ಯಾಸಿ ತಂಡಗಳಿಗಾಗಿ ನಾಟಕ ನಿರ್ದೇಶನ ಮಾಡುತ್ತ, ಹಾರ್ಮೋನಿಯಂ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ವಿದ್ಯೆಧಾರೆಯುತ್ತಿರುವವರು ಶ್ರೀ ಹನುಮಂತ ಕುಮಾರ ಮುಧೋಳ್.