Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಹೂಲಿ ಶೇಖ‌ರ್‌

ಬರವಣಿಗೆಯಿಂದಲೇ ರಂಗಭೂಮಿ, ಕಿರುತೆರೆ, ಸಾಹಿತ್ಯ ಕ್ಷೇತ್ರದಲ್ಲಿ ಮೈಲಿಗಲ್ಲಿನ ಸಾಧನೆ ಮಾಡಿದವರು ಹೂಲಿಶೇಖರ್, ಮೂಡಲಮನೆಯ ಸಂಭಾಷಣಕಾರರಾಗಿ ಜನಜನಿತರು.
ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮದವರಾದ ಶೇಖರ್ ಹುಟ್ಟಿದ್ದು ೧೯೫೧ರ ಜೂನ್ ಒಂದರಂದು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಬರವಣಿಗೆ ಬಾಲ್ಯದಲ್ಲೇ ಅಂಟಿಕೊಂಡ ಹವ್ಯಾಸ. ೭೦ರ ದಶಕದಲ್ಲಿ ಕಥಾರಚನೆ ಮೂಲಕ ಸಾರಸ್ವತ ಲೋಕಕ್ಕೆ ೨೫೦ಕ್ಕೂ ಹೆಚ್ಚು ಕಥೆಗಳು, ೧೫ಕ್ಕೂ ಅಧಿಕ ಕಾದಂಬರಿಗಳನ್ನು ಬರೆದ ಹಿರಿಮೆ, ರಂಗಭೂಮಿಯಲ್ಲೇ ಹೆಚ್ಚು ಕ್ರಿಯಾಶೀಲರು. ೩೫ಕ್ಕೂ ಹೆಚ್ಚು ನಾಟಕಗಳ ಪೈಕಿ ವೃತ್ತಿ ನಾಟಕ ಕಂಪನಿಗಾಗಿ ಬರೆದ ನಾಟಕಗಳೂ ಉಂಟು. ಆಕಾಶವಾಣಿಗೆ ೧೫ ನಾಟಕಗಳು, ಹದಿನೈದಕ್ಕೂ ಹೆಚ್ಚು ಬೀದಿನಾಟಕಗಳು ಹೂಲಿಶೇಖರ್‌ರ ಸೃಜನಶೀಲತೆಗೆ ಸಾಕ್ಷಿಯಾಗಿವೆ. ೯೦ರ ದಶಕದ ಅಂತ್ಯದಲ್ಲಿ ಕಿರುತೆರೆ ಪ್ರವೇಶಿಸಿದ ಹೂಲಿಶೇಖರ್ ಗೆಳತಿ, ಸೌಭಾಗ್ಯವತಿ, ಕಿನ್ನರಿ, ಕಾವ್ಯಕಸ್ತೂರಿ, ಕಿಚ್ಚು, ಗಂಗಾ ಸೇರಿ ೨೫ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಸಾಹಿತ್ಯ ಒದಗಿಸಿದ್ದು ‘ಮೂಡಲಮನೆ’ಯ ಸಂಭಾಷಣೆಗೆ ನಾಡಿಗರೆಲ್ಲರೂ ತಲೆದೂಗಿದ್ದು ವಿಶೇಷ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ ಮತ್ತಿತರ ಪ್ರಶಸ್ತಿಗಳಿಗೆ ಪುರಸ್ಕೃತರಾಗಿರುವ ಹೂಲಿಶೇಖರ್‌ಗೆ ಸದಾಕಾಲಕ್ಕೂ ಬರಹವೇ ಬದುಕು.