Categories
ಚಲನಚಿತ್ರ ರಾಜ್ಯೋತ್ಸವ 2022

ಹೆಚ್. ಜಿ. ದತ್ತಾತ್ರೇಯ

ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಭಿಜಾತ ಕಲಾವಿದರಾದ ದತ್ತಣ್ಣ ಕನ್ನಡ ನಾಡಿನ ಹೆಮ್ಮೆ, ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಪಾತ್ರಗಳಿಗೆ ಜೀವತುಂಬಿದ ಚಿರಂಜೀವಿ ನಟರು. ೧೯೪೨ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದ ದತ್ತಣ್ಣ ಎಸ್‌ಎಸ್‌ಎಲ್‌ಸಿಯಲ್ಲಿ ಮೊದಲ ಬ್ಯಾಂಕ್‌. ಪಿಯುಸಿಯಲ್ಲಿ ಎರಡನೇ ಬ್ಯಾಂಕ್, ಇಂಜಿನಿಯರಿಂಗ್ ಮುಗಿಸಿ ಭಾರತೀಯ ವಿಜ್ಞಾನಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್ ಆಗಿ ಬಹುವರ್ಷ, ಎಚ್‌ಎಎಲ್‌ನ ಉಪಪ್ರಧಾನ ವ್ಯವಸ್ಥಾಪಕ, ಸಿಬ್ಬಂದಿ ಕಾಲೇಜಿನ ಪ್ರಾಂಶುಪಾಲರಾಗಿ ಕೆಲವರ್ಷ ದುಡಿದವರು. ಶಾಲಾದಿನಗಳಲ್ಲೇ ನಾಟಕದ ಗೀಳು ಹಚ್ಚಿಕೊಂಡಿದ್ದ ದತ್ತಣ್ಣರ ರುಸ್ತುಂ ನಾಟಕ ಬಲು ಜನಪ್ರಿಯವಾಗಿತ್ತು. ಅಳಿಯದೇವರು, ದೇವದಾಸಿ ನಾಟಕಗಳಲ್ಲಿ ಸ್ತ್ರೀಪಾತ್ರಧಾರಿಯಾಗಿ ಮಿಂಚಿದ್ದರು. ೪ನೇ ವಯಸ್ಸಿನಲ್ಲಿ ಬಿ.ಎಸ್‌.ರಂಗರ ‘ಉದ್ಭವ್‌’ ಕಿರುಚಿತ್ರದ ಮೂಲಕ ಬಣ್ಣದಲೋಕಕ್ಕೆ ಮರುಪ್ರವೇಶ, ೨ನೇ ಚಿತ್ರ ‘ಆಸ್ಫೋಟ’ದ ನಟನೆಗೆ ಅತ್ಯುತ್ತಮ ಪೋಷಕನಟ ಪ್ರಶಸ್ತಿಯ ಗರಿ. ಆನಂತರದ ಸಿನಿಯಾನದಲ್ಲಿ ದತ್ತಣ್ಣರ ಪಾತ್ರಗಳದ್ದೇ ಮೇಲುಗೈ, ಮುನ್ನುಡಿ ಚಿತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ದಕ್ಕಿದರೆ, ಮೌನಿ, ಭಾರತ್‌ಸ್ಟೋ‌ರ್ ರಾಷ್ಟ್ರೀಯ ತೀರ್ಪುಗಾರರ ಪ್ರಶಸ್ತಿಗೆ ಭಾಜನ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ನಟನೆ, ಪಾತ್ರ ಯಾವುದೇ ಇರಲಿ ದತ್ತಣ್ಣರದ್ದು ಪರಕಾಯ ಪ್ರವೇಶ. ಅದ್ಭುತ ಭಾವಾಭಿನಯ, ಇಡೀ ಚಿತ್ರವನ್ನೇ ತಮ್ಮ ಹೆಗಲಮೇಲೆ ಕೊಂಡೊಯ್ಯುವಷ್ಟು ಕಲೆಗಾರಿಕೆ. ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಅನೇಕ ರಾಜ್ಯ ಪ್ರಶಸ್ತಿಗಳಿಗೆ ಭಾಜನರಾಗಿರುವ ದತ್ತಣ್ಣರದ್ದು ನಾಡಿಗೆ ನಾಡೇ ತಲೆದೂಗುವಂತಹ ಸೋಪಜ್ಞ ಕಲೆ.