Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಹನುಮಂತ ಬಾಳಪ್ಪ ಹುಕ್ಕೇರಿ

ಶಿಲ್ಪಕಲೆಯಿಂದಲೇ ಬದುಕಿನಲ್ಲಿ ನೆಲೆ ಕಂಡುಕೊಂಡ ಕಲಾವಿದರು ಹನುಮಂತ ಬಾಳಪ್ಪ ಹುಕ್ಕೇರಿ, ದೇವರಮೂರ್ತಿಗಳ ಕೆತ್ತನೆಯಲ್ಲಿ ಪಳಗಿದ ಹಿರಿಯ ಕಲಾವಿದರು. ಶಿಲ್ಪಕಲೆಯಲ್ಲಿ ದೇವರ ಮೂರ್ತಿಗಳ ಕೆತ್ತನೆಗೆ ವಿಶೇಷ ಮಾನ್ಯತೆ, ಪ್ರತಿಯೊಂದು ದೇವರಮೂರ್ತಿಗಿರುವ ವಿಭಿನ್ನ ಅಳತೆ-ಸ್ವರೂಪ ಮತ್ತು ಕೆತ್ತನೆಯ ಕುಶಲಗಾರಿಕೆಯನ್ನು ಕರಗತ ಮಾಡಿಕೊಳ್ಳುವುದು ಸುಲಭಸಾಧ್ಯವಲ್ಲ. ಕಲಾಬದ್ಧತೆ, ನಿಷ್ಠೆ, ಪರಿಶ್ರಮ ಮತ್ತು ತನ್ಮಯತೆಗಷ್ಟೆ ಒಲಿಯುವ ಆ ಅಪರೂಪದ ಕಲೆಯಲ್ಲಿ ವಿಶಿಷ್ಟತೆ ಮೆರೆದವರು ಹನುಮಂತ ಬಾಳಪ್ಪ ಹುಕ್ಕೇರಿ, ಗಡಿನಾಡಿನ ಕಲಾಕುಸುಮ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಜಾಗನೂರು ಶಿಲ್ಪಕಲಾವಿದರಿಗೆ ಹೆಸರುವಾಸಿ. ಆ ಊರಿನ ಪ್ರತಿಮನೆಯೂ ಕಲಾಕುಟುಂಬ, ಅಂತಹುದೇ ಪರಿಸರದಲ್ಲಿ ಅಪ್ಪನಿಂದ ಶಿಲ್ಪಕಲೆ ಕಲಿತ ಹನುಮಂತ ಹುಕ್ಕೇರಿ ಇಡೀ ಬದುಕನ್ನೇ ದೇವರಮೂರ್ತಿಗಳ ತಯಾರಿಕೆಗೆ ಅರ್ಪಿಸಿಕೊಂಡಿದ್ದು ವಿಶೇಷ. ಲಕ್ಷ್ಮಿ, ಸರಸ್ವತಿ, ಆಂಜನೇಯ, ವೀರಭದ್ರೇಶ್ವರ ಮುಂತಾದ ದೇವತೆಗಳ ಮೂರ್ತಿ ಕೆತ್ತನೆಯಲ್ಲಿ ನಿಸ್ಸೀಮರು. ವಿವಿಧ ಬಗೆಯ ಕಲ್ಲುಗಳನ್ನು ಸಂಗ್ರಹಿಸಿ ಮೂರ್ತಿಯ ಆಕಾರ ನೀಡುವ ಹನುಮಂತ ಹುಕ್ಕೇರಿ ಅವರ ಕಲಾನೈಪುಣ್ಯತೆಗೆ ತಲೆದೂಗದವರೇ ಇಲ್ಲ. ಹಲವು ಪ್ರಶಸ್ತಿ-ಗೌರವಗಳಿಗೆ ಪಾತ್ರರಾಗಿರುವ ಹನುಮಂತ ಹುಕ್ಕೇರಿ ಕಲಾನಿಷ್ಠ ಪ್ರತಿಭೆ.