Categories
ರಂಗಭೂಮಿ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗುರುನಾಥ್ ಬಿ.ಹೂಗಾರ

ವೃತ್ತಿ ರಂಗಭೂಮಿಯಲ್ಲಿ ಅನೂಹ್ಯ ಸೇವೆಗೈದು ಅದ್ವಿತೀಯ ಛಾಪು ಮೂಡಿಸಿರುವ ದೇಸೀ ಪ್ರತಿಭೆ ಗುರುನಾಥ್ ಬಿ.ಹೂಗಾರ, ನಟ, ನಿರ್ದೇಶಕ, ಪ್ರಸಾದನ ಕಲಾವಿದ, ವಸ್ತ್ರವಿನ್ಯಾಸಕ, ಸಂಘಟಕರಾಗಿ ಅವರದ್ದು ಬಹುರೂಪಿ ರಂಗಕೈಂಕರ್ಯ. ಕಲಬುರಗಿ ಜಿಲ್ಲೆಯ ಖಣದಾಳ ಗ್ರಾಮದವರಾದ ಗುರುನಾಥ್ ಬಿ.ಹೂಗಾರ ಅವರಿಗೆ ವೃತ್ತಿ-ಪ್ರವೃತ್ತಿ, ಬದುಕು-ಭಾವ ಎಲ್ಲವೂ ರಂಗಭೂಮಿಯೇ. ಓದಿದ್ದು ಕೇವಲ ಏಳನೇ ತರಗತಿವರೆಗೆ ಮಾತ್ರ. ಎಳೆವೆಯಲ್ಲೇ ಬಣ್ಣದ ಮೋಹಕ್ಕೆ ಸಿಲುಕಿ ರಂಗಪ್ರವೇಶ. ಹುಟ್ಟೂರನ್ನೇ ಕಲಾಕೈಂಕರ್ಯದ ಕೇಂದ್ರಸ್ಥಾನವಾಗಿ ಮಾಡಿಕೊಂಡು ಆರು ದಶಕಗಳಿಂದಲೂ ನಿರಂತರ ರಂಗಸೇವೆ. ನಟನೆ, ನಿರ್ದೇಶನ ಜತೆಗೆ ಪ್ರಸಾದನ ಕಲಾವಿದರಾಗಿ ಹೆಜ್ಜೆಗುರುತು. ಸಂಪತ್ತಿಗೆ ಸವಾಲ್‌, ಚೀನಾದುರಾಕ್ರಮಣ, ನನ್ನಭೂಮಿ, ಗರೀಬಿ ಹಠಾವೋ, ನೀತಿಗೆಲ್ಲಿದೆ ಜಾತಿ?, ಹಾರಕೂಡ ಚೆನ್ನಬಸವೇಶ್ವರ ಮಹಾತ್ಮ, ವಿಶ್ವಜ್ಯೋತಿ ಶರಣಬಸವ, ಕಾರ್ಗಿಲ್ ಕೂಗು ಮುಂತಾದ ೧೧೦ಕ್ಕೂ ಹೆಚ್ಚು ನಾಟಕಗಳಲ್ಲಿ ಹಾಸ್ಯನಟ, ಖಳನಟನಾಗಿ ರಂಜಿಸಿದ ಕಲಾವಿದರು. ತವರುಮನೆ ತಣ್ಣಗಿರಲಿ, ಆಶಾಲತಾ, ಗೌಡ್ರಗದ್ಲ, ಜೋಕುಮಾರಸ್ವಾಮಿ ಮತ್ತಿತರ ೨೫ಕ್ಕೂ ಹೆಚ್ಚು ನಾಟಕಗಳ ನಿರ್ದೇಶಕರು. ನೂರಾರು ನಟ–ನಟಿಯರಿಗೆ ವಸ್ತ್ರವಿನ್ಯಾಸಕರು. ಕಿರುಚಿತ್ರ-ಸಾಕ್ಷ್ಯಚಿತ್ರಗಳಲ್ಲೂ ಪ್ರತಿಭೆ ಮೆರೆದ ರಂಗಕರ್ಮಿ, ಹತ್ತಾರು ಗೌರವಗಳಿಗೆ ಪಾತ್ರರಾದ ಗುರುನಾಥ್‌ ಹೂಗಾರ ಅವರು ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯಿಂದಲೂ ಪುರಸ್ಕೃತರು.