Categories
ಜಾನಪದ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗುಡ್ಡ ಪಾಣಾರ

ಕರಾವಳಿ ಭಾಗದ ಅತ್ಯಂತ ಹಿರಿಯ ಅನುಭವಿ ದೈವ ನರ್ತಕರು ಗುಡ್ಡ ಪಾಣಾರ, ದೈವ ಸೇವೆಯಲ್ಲಿ ಬದುಕಿನ ಧನ್ಯತೆಯನ್ನು ಕಂಡುಕೊಂಡ ಅಪರೂಪದ ಕಲಾವಂತರು. ಗುಡ್ಡ ಪಾಣಾರ ಅವರಿಗೆ ದೈವನರ್ತನ ಅಪ್ಪನಿಂದ ಬಂದ ಬಳುವಳಿ, ಕೋಲ ನರ್ತಕರಾಗಿದ್ದ ತಂದೆ ನಾಣು ಪಾಣಾರ ಅವರ ದೈವನರ್ತನವನ್ನು ಕಣ್ಣುಂಬಿಕೊಳ್ಳುತ್ತಲೇ ಬಾಲ್ಯದಲ್ಲೇ ಹೆಜ್ಜೆಹಾಕುತ್ತಾ ದೈವನರ್ತನ ಕಲೆಯನ್ನು ಮೈಗೂಡಿಸಿಕೊಂಡವರು. ಅತ್ಯಂತ ಕಿರಿಯ ವಯಸ್ಸಿನಲ್ಲೇ ದೈವನರ್ತನ ಆರಂಭಿಸಿದ ಗುಡ್ಡ ಪಾಣಾರ ಅವರು ವಿವಿಧ ದೈವ ಸಾನಿಧ್ಯಗಳಲ್ಲಿ ಪಂಜುರ್ಲಿ, ಬೊಬ್ಬರ, ಧಮಾವತಿ ಹಾಗೂ ಸ್ತ್ರೀ ದೈವಗಳಾದ ವರ್ತೆ, ತನಿಮಾನಿಗ ಮುಂತಾದ ದೈವಗಳ ನರ್ತನವನ್ನು ಮಾಡುವುದು ವಿಶೇಷ. ಕರಾವಳಿ ದೈವಭಕ್ತರ ಮನದಲ್ಲಿ ಗುಡ್ಡ ಪಾಣಾರ ಅವರು ಮೂಡಿಸಿರುವ ನರ್ತನದ ಛಾಪು ಮತ್ತು ದೈವಭಾವ ವರ್ಣಿಸಲಸದಳ. ಒಂದಲ್ಲ ಎರಡಲ್ಲ ಬರೋಬ್ಬರಿ ೪೬ ವರ್ಷಗಳಿಂದ ಈ ದೈವನರ್ತನದಲ್ಲಿ ಅನವರತ ನಿರತರು. ಕಾಪುವಿನ ಸುತ್ತಮುತ್ತಲೂ ಜರುಗುವ ಪಿಲಿಕೋಲದಲ್ಲಿ ಗುಡ್ಡ ಪಾಣಾರ ದೈವನರ್ತನ ಅತ್ಯಂತ ಜನಪ್ರಿಯ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೂ ಪಾತ್ರರಾಗಿರುವ ಗುಡ್ಡ ಪಾಣಾರ ಅವರ ದೈವನರ್ತನಕ್ಕೆ ಅವರಷ್ಟೇ ಸಾಟಿ ಎನ್ನುವಷ್ಟು ಅಪೂರ್ವ ಕಲೆಗಾರಿಕೆ.