Categories
ಪತ್ರಿಕೋದ್ಯಮ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಜಿ.ಎಂ. ಶಿರಹಟ್ಟಿ

ಬಾನುಲಿ ಮತ್ತು ಬಾನುಲಿ ಸಾಹಿತ್ಯವನ್ನು ಜನಪ್ರಿಯಗೊಳಿಸಿದ ಪ್ರಮುಖರು ಜಿ.ಎಂ.ಶಿರಹಟ್ಟಿ. ಬರವಣಿಗೆಯ ಸಾಹಿತ್ಯವನ್ನು ಪರಿವರ್ತಿಸಿ ಶ್ರವಣ ಸಾಹಿತ್ಯವನ್ನು ರಚಿಸಿದ ಸಾಹಿತಿ, ಬಹುಮಾಧ್ಯಮಗಳ ಬಹುಶ್ರುತ ಸಾಧಕರು. ಜಿ.ಎಂ.ಶಿರಹಟ್ಟಿ ಎಂದೇ ಜನಪ್ರಿಯರಾದ ಗೌಸ್ ಮೊಹದ್ದೀನ ಶಿರಹಟ್ಟಿ ಅವರು ೧೯೪೧ರಲ್ಲಿ ಜನಿಸಿದವರು. ಪತ್ರಿಕೋದ್ಯಮ, ರೇಡಿಯೋ ಹಾಗೂ ದೂರದರ್ಶನ ಅವರ ತ್ರಿವಳಿ ಕಾರ್ಯಕ್ಷೇತ್ರಗಳು, ನಲವತ್ತು ವರ್ಷಗಳ ಕಾಲ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಸೇವೆ ಸಲ್ಲಿಸಿದ ಶಿರಹಟ್ಟಿ ಬೆಂಗಳೂರು ವಿವಿ, ಭಾರತೀಯ ವಿದ್ಯಾಭವನ, ರೇವಾಗಾರ್ಡನ್ ಮತ್ತಿತರ ಸಂಸ್ಥೆಗಳಲ್ಲಿ ಮಾಧ್ಯಮ ಪ್ರಾಧ್ಯಾಪಕರಾಗಿ ದುಡಿದವರು. ಕನ್ನಡಸಾಹಿತ್ಯದಲ್ಲಿ ಪ್ರಸಾರ ಸಾಹಿತ್ಯವನ್ನು ನಾಟಕ, ರೂಪಕ, ಸಂದರ್ಶನ, ಸಾಕ್ಷ್ಯಚಿತ್ರಗಳಲ್ಲಿ ಅಳವಡಿಸಿ ಬಾನುಲಿ ಸಾಹಿತ್ಯವನ್ನು ಬೆಳಕಿಗೆ ತಂದ ಹೆಗ್ಗಳಿಕೆ, ಸಾರ್ಕ ದೇಶದ ಕ್ವಿಜ್ ಕಾರ್ಯಕ್ರಮಗಳ ಭಾರತೀಯ ತಂಢಗಳ ನಾಯಕರಾಗಿ ಡಾಕಾದಲ್ಲೂ ಸೇವೆ ಸಲ್ಲಿಸಿದ ಶಿರಹಟ್ಟಿ ಅವರು ಚೇತನಚಿಲುಮೆ, ಪ್ರಬಂಧಗಳ ಸಂಕಲನ, ಮಕ್ಕಳ ನಾಟಕಗಳ ಕತೃ, ಆಕಾಶವಾಣಿ ಕಾರ್ಯಕ್ರಮಗಳಿಗೆ ಐದು ರಾಷ್ಟ್ರೀಯ, ೨ ಅಂತಾರಾಷ್ಟ್ರೀಯ, ಒಂದು ರಾಜ್ಯ ಪ್ರಶಸ್ತಿಗೆ ಭಾಜನರಾದವರು. ಕರ್ನಾಟಕ ನಾಟಕ ಅಕಾಡೆಮಿ, ಮಾಧ್ಯಮ ಅಕಾಡೆಮಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಮತ್ತಿತರ ಗೌರವಗಳಿಂದ ಭೂಷಿತರಾದ ಶಿರಹಟ್ಟಿ ಬಾನುಲಿ ಮಾಧ್ಯಮದಲ್ಲಿ ಹೊಸ ಅಧ್ಯಾಯವನ್ನೇ ಬರೆದ ಸಾಧಕಮಣಿ.