Categories
ಆರೋಗ್ಯ ಔಷಧೀಯ ಸಸ್ಯಗಳು ಕೃಷಿ ಕೃಷಿ ಶಿಕ್ಷಣ ವೈದ್ಯಕೀಯ ಕೃಷಿ

ಔಷಧೀಯ ಸಸ್ಯಗಳು-ಕೃಷಿ ಮತ್ತು ಮಾರುಕಟ್ಟೆ

ಕೃತಿ : ಔಷಧೀಯ ಸಸ್ಯಗಳು-ಕೃಷಿ ಮತ್ತು ಮಾರುಕಟ್ಟೆ

ಲೇಖಕರು : ಡಾ. ವಿಘ್ನೇಶ್ವರ ವರ್ಮುಡಿ.

ಕೃತಿಯನ್ನು ಓದಿ

Categories
ಕೃಷಿ ವೈದ್ಯಕೀಯ ಕೃಷಿ

ಸ್ಟಿವಿಯಾ

ಅರಿಕೆ

ಇತ್ತೀಚಿನ ವರ್ಷಗಳಲ್ಲಿ ನಮ್ಮಲ್ಲಿ ಬೆಳೆಯುವ ವಿವಿಧ ರೀತಿಯ ಸಾಂಪ್ರದಾಯಿಕ ಬೆಳೆಗಳ ಧಾರಣೆಯು ಕುಸಿಯಲಾರಂಭಿಸಿ ರೈತರು ಕಂಗೆಡುವಂತಾಗಿದೆ. ಇದರಿಂದಾಗಿ ಇಲ್ಲಿಂದು ವಿವಿಧ ಬಗೆಯ ಹೊಸ ಬೆಳೆಗಳ ಪರಿಚಯವಾಗುತ್ತಿದೆ. ಇವುಗಳ ಪೈಕಿ ಸ್ಟಿವಿಯಾವು ಒಂದು. ಆದರೆ ಈ ಬೆಳೆಯ ಬಗ್ಗೆ ನಮ್ಮ ರೈತರಿಗೆ ಸರಿಯಾದ ಮಾಹಿತಿಯಿನ್ನೂ ದೊರಕಿಲ್ಲ. ಅಲ್ಲಲ್ಲಿ ಇದರ ಬಗ್ಗೆ ಚರ್ಚೆಗಳಾಗುತ್ತಿವೆ. ಕೆಲವೊಂದು ರೈತರು ಸ್ಟಿವಿಯಾದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಇನ್ನು ಕೆಲವರು ಮಾಹಿತಿಗಾಗಿ ಹುಡುಕಾಟ ಆರಂಭಿಸಿದ್ದಾರೆ.ಈ ದೃಷ್ಟಿಯಿಂದ ಸ್ಟಿವಿಯಾದ ಬಗ್ಗೆ ಪ್ರಕೃತ ಲಭ್ಯವಿರುವ ಮಾಹಿತಿಗಳನ್ನೆಲ್ಲಾ ಕಲೆ ಹಾಕಿ ಇಲ್ಲಿ ಕೊಡುತ್ತಿದ್ದೇನೆ. ಈ ಪುಸ್ತಕವು ನಮ್ಮ ರೈತರಿಗೆ ಉಪಯುಕ್ತ ವಾಗಬಹುದೆಂಬ ನಂಬಿಕೆ ನನ್ನದು. ಈ ಪುಸ್ತಕದ ರಚನೆಗಾಗಿ ಮಾಹಿತಿಗಳನ್ನು ಗ್ರೋಮೋರ್ ಬಯೋಟೆಕ್‌, ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳು ಮತ್ತು ವೆಬ್‌ಸೈಟ್‌ಗಳಿಂದ ಸಂಗ್ರಹಿಸಲಾಗಿದೆ. ಈ ಎಲ್ಲಾ ಮಾಧ್ಯಮಗಳಿಗೆ ನಾನು ಋಣಿಯಾಗಿದ್ದೇನ. ಈ ಪುಸ್ತಕವು ಕೇವಲ ಮಾಹಿತಿಯನ್ನೊದಗಿಸುವ ದೃಷ್ಟಿಯಿಂದ ರಚನೆಯಾಗಿದ್ದು, ಇದರ ಪ್ರಯೋಜನವನ್ನು ನಮ್ಮೆಲ್ಲಾ ಕೃಷಿಕರು ಪಡೆಯುವರೆಂಬ ಭಾವನೆ ನನ್ನದು.

ನನ್ನ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರ ಮತ್ತು ಬೆಂಬಲವನ್ನು ನೀಡುತ್ತಿರುವ ವಿವೇಕಾನಂದ ಕಾಲೇಜು ಪುತ್ತೂರು ಇದರ ಆಡಳಿತ ಮಂಡಳಿ, ಪ್ರಾಂಶುಪಾಲರು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪಿ.ಕೆ. ಬಾಲಕೃಷ್ಣ, ಸ್ನೇಹಿತ ಡಾ.ಪಿ. ಡಬ್ಲ್ಯೂ ಪ್ರಭಾಕರ್ ಇವರುಗಳಿಗೆ ನಾನು ಋಣಿಯಾಗಿದ್ದೇನೆ.

ಮುದ್ರಣಕ್ಕೆ ಸಹಾಯ ಮಾಡಿದ ಶ್ರೀ ಲಕ್ಷ್ಮೀ ಕಾಂತ್‌ ಶೆಣೈ, ವಿಟ್ಲ ಮತ್ತು ಅಂದವಾಗಿ ಮುದ್ರಿಸಿಕೊಟ್ಟ ಶ್ರೀನಿಧಿ ಆ‌ಫ್‌ಸೆಟ್‌ ಪ್ರಿಂಟರ್ಸ್ ಅಲ್ಲದೆ ಸ್ಟಿವಿಯಾ ಕೃಷಿಯ ಬಗ್ಗೆ ವಿಶೇಷ ಮಾಹಿತಿ ಒದಗಿಸಿದ ಶ್ರೀ ಗೋವಿಂದ ರಾಜ್‌ರವರಿಗೆ ನಾನು ಕೃತಜ್ಞನಾಗಿದ್ದೇನೆ.

ನನ್ನ ಬರಹಗಳಿಗೆ ನಿಜ ಸ್ಫೂರ್ತಿ ತುಂಬುವ ನನ್ನ ಕುಟುಂಬದ ಸದಸ್ಯರುಗಳನ್ನೆಲ್ಲಾ ಇಲ್ಲಿ ನೆನೆಸುತ್ತಿದ್ದೇನೆ.

ಡಾವಿಘ್ನೇಶ್ವರ ವರ್ಮುಡಿ
ವರ್ಮುಡಿ ಗುಂಪೆ
೦೫-೦೭-೨೦೦೩.

ಸ್ಟಿವಿಯಾದ ಇತಿಹಾಸ

ದಕ್ಷಿಣ ಅಮೇರಿಕಾದ ಪೆರುಗ್ವೆಗೆ ವಲಸೆ ಹೋಗಿ ನೆಲೆಸಿದ್ದ ಭಾರತೀಯ ಮೂಲದ ಗೌರಾನಿ ನಿವಾಸಿಗಳು ಹಲವು ಶತಮಾನಗಳ ಹಿಂದೆ ಸ್ಟಿವಿಯಾವನ್ನು ಗುರುತಿಸಿದ್ದರು. ಅವರು ಇದನ್ನು ಕಾ – ಹೆ – ಹಿ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಕಾ-ಹೆ-ಹಿ ಎಂದರೆ ಸಿಹಿ ಮೂಲಿಕೆ ಎಂದಾಗುತ್ತದೆ. ಈ ಜನರು ಸ್ಟಿವಿಯಾದ ಎಲೆಗಳನ್ನು ಅವರು ಸೇವಿಸುತ್ತಿದ್ದ ಮೇಟ್‌ ಎಂಬ ಪಾನೀಯದಲ್ಲಿ ಬಳಸಿಕೊಳ್ಳುತ್ತಿದ್ದರು. ಇದರೊಂದಿಗೆ ಸ್ಟಿವಿಯಾದ ಎಲೆಗಳನ್ನು ಅದರಲ್ಲಿರುವ ಸಿಹಿಯಿಂದಾಗ ಸೇವನೆಯನ್ನು ಮಾಡುತ್ತಿದ್ದರು. ಅಲ್ಲದೆ ಇದರ ಔಷಧೀಯ ಗುಣಗಳ ಬಗ್ಗೆ ಅವರಿಗೆ ಅರಿವೂ ಇತ್ತು. ಈ ಎಲ್ಲಾ ವಿಚಾರಗಳ ಬಗ್ಗೆ ಇತಿಹಾಸಕಾರರು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿರುತ್ತಾರೆ. ೧೮೦೦ ವೇಳೆಗೆ ಸ್ಟಿವಿಯಾದ ಬಳಕೆಯು ಪೆರುಗ್ವೆಯಿಂದ ಬ್ರೆಜಿಲ್‌ ಮತ್ತು ಅರ್ಜೆಂಟಿನಾಗಳಿಗೆ ಪಸರಿಸಿತ್ತು.