Categories
ರಂಗಭೂಮಿ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಿ ಬಸವಲಿಂಗಯ್ಯ

ನಟರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ, ಸಂಘಟಕರಾಗಿ, ಕನ್ನಡ ರಂಗಭೂಮಿಗೆ ವಿಶೇಷತೆ ತಂದುಕೊಟ್ಟವರು ಶ್ರೀ ಸಿ ಬಸವಲಿಂಗಯ್ಯ ಅವರು.

ಜನನ ೧೯೫೮ರಲ್ಲಿ, ಕನ್ನಡ ಸ್ನಾತಕೋತ್ತರ ಪದವಿಯ ಜೊತೆಗೆ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಶ್ರೀಯುತರು ಕನ್ನಡ ರಂಗಭೂಮಿಗೆ ರಾಷ್ಟ್ರೀಯ ಮಾನ್ಯತೆ ತಂದುಕೊಟ್ಟಿರುವ ಪ್ರಮುಖ ಕಲಾವಿದರು.

ರಾಷ್ಟ್ರೀಯ ನಾಟಕ ಶಾಲೆಯ ಫೆಲೋಶಿಪ್‌ನಲ್ಲಿ ಉತ್ತರ ಕರ್ನಾಟಕದ ಜಾನಪದ ರಂಗಕಲೆಗಳ ಅಧ್ಯಯನ ಮಾಡಿದ ಬಸವಲಿಂಗಯ್ಯನವರು ರಂಗಭೂಮಿಯ ಸಮಗ್ರ ಅಭಿವೃದ್ಧಿಯ ಸಂಚಾಲಕರಾಗಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ, ನಾಟಕ ಕರ್ನಾಟಕ ರಂಗಾಯಣದ ರೆಪರ್ಟರಿಯಲ್ಲಿ ರಂಗಪ್ರಮುಖರಾಗಿ ಹಾಗೂ ರಂಗ ತರಬೇತಿ ಶಿಬಿರಗಳ ಸಂಘಟಕರಾಗಿ ಹಾಗೂ ರಂಗಾಯಣದ ನಿರ್ದೆಶಕರಾಗಿ ರಂಗಭೂಮಿಗಾಗಿ ಇವರು ನೀಡಿದ ಕೊಡುಗೆ ಅಮೂಲ್ಯವಾದುದು.

ಶ್ರೀಯುತರು ಕನ್ನಡ, ಹಿಂದಿ, ತೆಲುಗು, ಮಲಯಾಳಂ ಸೇರಿದಂತೆ ೩೦ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶನ ನೀಡಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಮಾದಾರಿ ಮಾದಯ್ಯ, ಸಂಕ್ರಾಂತಿ, ಹುಲಿಯ ನೆರಳು, ಮ್ಯಾಕ್ ಬೆತ್, ಸಂತ್ಯಾಗ ನಿಂತಾನ, ಕಬೀರ, ಅಂಧಯುಗ, ಉಚಲ್ಯ, ಕುಸುಮಬಾಲೆ ಇವರ ನಿರ್ದೆಶನದ ಪ್ರಮುಖ ನಾಟಕಗಳಾಗಿದ್ದು, ಜನಮನದಲ್ಲಿ

ನೆಲೆಯೂರಿವೆ.

ಸುಮಾರು ೮೦ಕ್ಕೂ ಹೆಚ್ಚು ರಂಗತರಬೇತಿ ಶಿಬಿರಗಳನ್ನು ರಾಷ್ಟ್ರವ್ಯಾಪಿ ಸಂಘಟಿಸಿ ರಂಗಚಳುವಳಿಯನ್ನು ನಿರಂತರವಾಗಿ ಕಾಯ್ದಿಟ್ಟುಕೊಂಡ ಕ್ರಿಯಾಶೀಲ ಕಲಾವಿದರಿಗೆ ೧೯೯೬ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್ ನೀಡಿ ಗೌರವಿಸಿದೆ.