ಹಿಂದೆ, ಯುಗಗಳ ಹಿಂದೆ, ಎಂದರೆ ಪುರಾಣಗಳ ಕಾಲದಲ್ಲಿ, ಧನ, ಜನ, ಶಕ್ತಿ, ಮದಗಳಿಂದ ಕೊಬ್ಬಿದ ಉಬ್ಬಿದ ದುಷ್ಟ ರಾಜರಿಂದ ನಮ್ಮೀ ಭರತಖಂಡದಲ್ಲಿ ಸಾಧು ಸಜ್ಜನರ ಜೀವಗಳಿಗೆ ತುಂಬಾ ಗಂಡಾಂತರ ಬಂದೊದಗಿತ್ತು!

ಲೋಕವನ್ನು ಅಂತಹ ಗಂಡಾಂತರದಿಂದ ಪಾರುಗೊಳಿಸಿ ದೇಶದಲ್ಲಿ ಸುಖಶಾಂತಿಗಳನ್ನು ನೆಲೆಗೊಳಿಸಲು ಸಮರ್ಥನಾದ ಮಹಾಪುರುಷನೊಬ್ಬನು ಉದಿಸಿ ಬರಬೇಕೆಂಬುದು ಅಂದಿನ ಜನತೆಯ ಹಾರೈಕೆಯಾಗಿತ್ತು.

ಹಾರೈಕೆ ರೂಪತಾಳಿತು

ಆಗ ಅವತಾರಪುರುಷನೊಬ್ಬನು ಹುಟ್ಟಿ ಬಂದನು. ಅವನಿಂದ ಒಂದು ಸಾಹಸಮಯ ಕ್ರಾಂತಿಕಾರಿ ರೋಮಾಂಚಕ ಘಟನೆ ನಡೆಯಿತು. ಅನ್ಯಾಯ ಅಳಿಸಿಹೋಗಿ ನ್ಯಾಯಸ್ಥಾಪನೆಯಾಯಿತು.

ಆ ಮಹಾ ತೇಜಸ್ವಿಯು ಕೊಡಲಿಯನ್ನು ಕೈಗೆತ್ತಿಕೊಂಡು, ಇಪ್ಪತ್ತೊಂದು ಸಲ ಭೂಪ್ರದಕ್ಷಿಣೆ ಮಾಡಿ, ದುಷ್ಟರೂ ಮದಾಂಧರೂ ಆದ ಕ್ಷತ್ರಿಯ ರಾಜರನ್ನು ಕೊಂದುಹಾಕಿದನು, ಗೊಂಡಾರಣ್ಯದ ಭೀಮವೃಕ್ಷಗಳನ್ನು ಕಡಿದು ಕೊಚ್ಚಿ ಕೆಡಹುವಂತೆ! ಹಾಗೆ ಕೆಡಹಿ ಆ ಪ್ರದೇಶವನ್ನು ಉಳುಮೆಗೆ, ಬೇಸಾಯಕ್ಕೆ ಯೋಗ್ಯವಾಗಿಸುವಂತೆ ದುಷ್ಟ ಸಂಹಾರ ಮಾಡಿ ಶಿಷ್ಟ ಸಂರಕ್ಷಣೆಗೈದನು. ದೇಶವು ಶಾಂತಿ, ಸುಭಿಕ್ಷಗಳಿಂದ ಮತ್ತೊಮ್ಮೆ ನಲಿಯಿತು. ಒಂದು ಹೊಸ ಸೃಷ್ಟಿಯೇ ಆಯಿತು.

ಅದೇ ಪರಶುರಾಮ ಸೃಷ್ಟಿ!

ಆ ತೇಜಸ್ವೀ ಮಹಾಪುರುಷನೇ ಪರಶುರಾಮ!

ಪರಶು ಎಂದರೆ ಸಂಸ್ಕೃತ ಭಾಷೆಯಲ್ಲಿ ಕೊಡಲಿ ಎಂಬರ್ಥ. ಪರಶುವನ್ನು ಆಯುಧವನ್ನಾಗಿ ಮಾಡಿಕೊಂಡ ರಾಮ ಎಂಬುದರಿಂದ ಆತನಿಗೆ ಪರಶುರಾಮ ಎಂದು ಹೆಸರಾಯಿತು.

ಪರಶುರಾಮನು ಮಹಾವಿಷ್ಣುವಿನ ಅಂಶದಿಂದ ಜನ್ಮವೆತ್ತಿಬಂದ ಆರನೆಯ ಅವತಾರಪುರುಷನೆಂದೂ ಅಶ್ವತ್ಥಾಮಾದಿ ಏಳು ಮಂದಿ ಚಿರಂಜೀವಿಗಳಲ್ಲಿ ಒಬ್ಬನೆಂದೂ ಪುರಾಣಗಳು ಸಾರುತ್ತವೆ. ಈ ಪುರಾಣ ಕಥೆಯನ್ನು ಭಾರತೀಯರು ನಂಬುತ್ತಾರೆ. ನಂಬಿ, ಪರಶುರಾಮನನ್ನು ದೇವರೆಂದು ಆರಾಧಿಸುತ್ತಾರೆ.

ಋಷಿಯ ಪ್ರಾರ್ಥನೆ

ಋಚೀಕನೆಂಬ ಋಷಿ ಕನ್ಯಾರ್ಥಿಯಾಗಿ ದೇಶಸಂಚಾರಕ್ಕೆ ಹೊರಟನು.

ಭರತಖಂಡದಲ್ಲಿ ಪುರಾಣಪ್ರಸಿದ್ಧವಾಗಿ ಸೂರ್ಯವಂಶ, ಚಂದ್ರವಂಶ ಎಂಬ ಎರಡು ವಂಶಗಳಿದ್ದುವು. ಅವುಗಳ ಪೈಕಿ ಚಂದ್ರವಂಶದ ಗಾಧಿರಾಜನಿಗೆ ಸತ್ಯವತಿ ಎಂಬ ಮಗಳು ಜನಿಸಿದಳು.

ಸತ್ಯವತಿ ಗುಣಶೀಲವತಿಯಾಗಿ, ಬಹಳ ಸುಂದರಿಯಾಗಿ ಬೆಳೆದಳು. ಪ್ರಾಯಭರಿತಳಾಗಲು ಗಾಧಿರಾಜನು ಆಕೆಗೆ ಯೋಗ್ಯನಾದ ಒಬ್ಬ ವರನನ್ನು ಹುಡುಕುತ್ತಿದ್ದನು.

ಆ ಸಂದರ್ಭದಲ್ಲಿಯೇ ಕನ್ಯಾರ್ಥಿಯಾಗಿ ದೇಶಸಂಚಾರಕ್ಕೆ ಹೊರಟಿದ್ದ ಋಚೀಕನು ಗಾಧಿರಾಜನ ಅರಮನೆಗೆ ಆಗಮಿಸಿದನು. ರಾಜನು ಋಷಿಗೆ ಉಚಿತವಾದ ಸತ್ಕಾರಗಳನ್ನು ಮಾಡಿದನು. ರಾಜಸತ್ಕಾರದಿಂದ ಸಂತುಷ್ಟನಾದ ಋಚೀಕನು ಹೇಳಿದನು:

“ಮಹಾರಾಜಾ, ನಾನು ಅಭ್ಯರ್ಥಿಯಾಗಿ ನಿನ್ನೊಡನೆ ಒಂದು ವಿಷಯವನ್ನು ಕೇಳಲು ಬಂದಿದ್ದೇನೆ, ಕೇಳಿದರೆ ಕೊಡುತ್ತೀಯಾ?”

“ಮುನಿಯೇ, ನಿಮ್ಮಂತಹ ಪುಣ್ಯವಂತರಿಗೆ ದಾನ ಮಾಡಿ ಕೃತಾರ್ಥನಾಗಲು ನಾನು ಬಹಳ ಸಂತೋಷ ಪಡುತ್ತೇನೆ; ಸಂಕೋಚವಿಲ್ಲದೆ ಕೇಳಿರಿ.”

“ರಾಜನೇ, ನಿನ್ನ ಪುತ್ರಿಯಾದ ಸತ್ಯವತಿಯನ್ನು ನನಗೆ ಮದುವೆ ಮಾಡಿಕೊಡು. ”

ಅರಮನೆಯಿಂದ ಎಲೆಮನೆಗೆ

ಈ ಮಾತಿನಿಂದ ರಾಜನು ಅವಾಕ್ಕಾದನು. ಅರಮನೆಯ ಅರಗಿಣಿಯನ್ನು ಎಲೆಮನೆಯ ಗೂಡಿಗೆ ಸೇರಿಸಲೆ? ಗಾಧಿರಾಜನ ಮನಸ್ಸು ಅಷ್ಟಾಗಿ ಇಷ್ಟಪಡಲಿಲ್ಲ. ಆದರೂ ಋಷಿಗೆ ಕೊಟ್ಟ ಮಾತನ್ನು ಮೀರುವುದೂ ಸಾಧ್ಯವಿಲ್ಲ. ಗಾಧಿರಾಜನು ಹೇಳಿದನು:

“ಋಷಿಯೇ, ಮಗಳನ್ನು ನಿನಗೆ ಮದುವೆ ಮಾಡಿಕೊಡಬಹುದು. ಆದರೆ ಒಂದು ಷರತ್ತು. ಒಂದು ಕಿವಿ ಕಪ್ಪಾದ, ಮೈ ಬಿಳುಪಾದ ಸಹಸ್ರ ದಿವ್ಯಾಶ್ವಗಳನ್ನು ಕನ್ಯಾಶುಲ್ಕವಾಗಿ ಒಪ್ಪಿಸಬಲ್ಲೆಯಾ?”

ಋಚೀಕನು ಆ ಮಾತಿಗೆ ಒಪ್ಪಿಕೊಂಡನು.

ವರುಣನನ್ನು ತಪಸ್ಸಿನಿಂದ ಮೆಚ್ಚಿಸಿದನು; ಆತನಿಂದ ಸಾವಿರ ದಿವ್ಯಾಶ್ವಗಳನ್ನು ಪಡೆದನು. ಅವುಗಳನ್ನು ತಂದು ಗಾಧಿರಾಜನಿಗೆ ಒಪ್ಪಿಸಿದನು.

ಅಳಿಯನ ಯೋಗ್ಯತೆಯ ಪರೀಕ್ಷೆಯಾಯಿತು. ಗಾಧಿರಾಜನು ಸಂತುಷ್ಟನಾಗಿ ಋಚೀಕನಿಗೆ ಸತ್ಯವತಿಯನ್ನು ಮದುವೆಮಾಡಿಕೊಟ್ಟನು. ಅರಮನೆಯ ಸಕಲ ಸುಖೋಪಭೋಗಗಳಿಂದ ಬೆಳೆದವಳಾದರೂ ಸತ್ಯವತಿ, ಎಲೆಮನೆಯಲ್ಲಿಯೂ ಪತಿಯೇ ಪರದೈವವೆಂದು ನಂಬಿ ಋಷಿಸೇವೆಯಲ್ಲಿಯೇ ತತ್ಪರಳಾಗಿದ್ದಳು. ಕೆಲಕಾಲದವರೆಗೂ ಆಕೆಗೆ ಮಕ್ಕಳಾಗಲಿಲ್ಲ.

ಪ್ರಸಾದ ಅದಲುಬದಲು

ಸತ್ಯವತಿಯ ತಂದೆ ಗಾಧಿರಾಜನಿಗೆ ಸತ್ಯವತಿಯೊಬ್ಬಳೇ ಮಗಳು; ಗಂಡುಮಕ್ಕಳಿರಲಿಲ್ಲ. ಅವನಿಗೂ ಅವನ ಹೆಂಡತಿಗೂ ಗಂಡುಮಕ್ಕಳಿಲ್ಲವಲ್ಲ, ಮುಂದೆ ಸಿಂಹಾಸನವನ್ನೇರಿ ರಾಜ್ಯವನ್ನು ಆಳುವವರು ಯಾರು ಎಂದೇ ಯೋಚನೆ. ಮಗಳು ಸತ್ಯವತಿಗೂ ಈ ಸಂಗತಿ ತಿಳಿದಿತ್ತು.

ಒಂದು ದಿನ ಋಚೀಕನು, “ನಿನಗೆ ಮನಸ್ಸಿನಲ್ಲಿ ಏನು ಆಸೆ ಇದೆ ಹೇಳು, ನಡೆಯುವಂತೆ  ವರ ಕೊಡುತ್ತೇನೆ” ಎಂದು ಸತ್ಯವತಿಗೆ ಹೇಳಿದ.

ಸತ್ಯವತಿಗೆ ತುಂಬ ಸಂತೋಷವಾಯಿತು. ತನಗೂ ತನ್ನ ತಾಯಿಗೂ ಗಂಡುಮಕ್ಕಳಾಗಬೇಕು ಎಂದು ಬೇಡಿದಳು.

ಋಷಿಯು ಇಬ್ಬರಿಗೂ ಬೇರೆ ಬೇರೆ ಚರಪನ್ನು ಮಂತ್ರಿಸಿಕೊಟ್ಟು ಅದನ್ನು ಸೇವಿಸಿ ಎಂದು ಹೇಳಿದ.

ಸತ್ಯವತಿಯ ತಾಯಿ, ಋಷಿಯು ತನ್ನ ಪತ್ನಿಗೆ ಶ್ರೇಷ್ಠವಾದ ಚರಪನ್ನು ಮಂತ್ರಿಸಿಕೊಟ್ಟಿರಬಹುದು ಎಂದುಕೊಂಡಳು. ಮಗಳಿಗೆ ಕೊಟ್ಟಿದ್ದ ಚರಪವನ್ನು ತಾನು ಸೇವಿಸಿದಳು. ಮಗಳು ತಾಯಿಯ ಚರಪವನ್ನು ತಿಂದಳು. ಹೀಗೆ ಮಂತ್ರಿಸಿದ ಚರಪ ಅದಲು ಬದಲಾಗಿ ತಾಯಿ ಮತ್ತು ಮಗಳು ಉಪಯೋಗಮಾಡಿಕೊಂಡರು.

ಶೂರನಾದ ಮೊಮ್ಮಗ

ಇಬ್ಬರೂ ಗರ್ಭವತಿಯರಾದರು. ತನ್ನ ಪತ್ನಿಯ ಮುಖದಲ್ಲಿ ಕ್ಷತ್ರಿಯ ತೇಜಸ್ಸನ್ನು ಋಚಿಕನು ಕಂಡನು. ಸತ್ಯವತಿಯ ತಾಯಿಯ ಹೊಟ್ಟೆಯಲ್ಲಿ ಹುಟ್ಟುವ ಹುಡುಗ ರಾಜನಾಗಬೇಕು, ಆದುದರಿಂದ ಕ್ಷತ್ರಿಯರ ಶೌರ್ಯ ಅವನಿಗೆ ಬರಬೇಕು ಎಂದು ಉದ್ದೇಶಿಸಿದದ ಋಷಿ. ತನ್ನ ಹೆಂಡತಿಯ ಮುಖದಲ್ಲಿ ಕ್ಷತ್ರಿಯ ತೇಜಸ್ಸನ್ನು ಕಂಡು ಅವನಿಗೆ ಆಶ್ಚರ್ಯವಾಯಿತು. ದಿವ್ಯದೃಷ್ಟಿಯಿಂದ ಅದರ ಕಾರಣವನ್ನೂ ಅರಿತುಕೊಂಡನು. ಸತ್ಯವತಿಯೊಡನೆ ಹೇಳಿದನು.

ಋಷಿಪತ್ನಿಗೆ ಆಗಿಹೋದ ಪ್ರಮಾದ ತಿಳಿಯಿತು. ಅವಳ ಮಗ ಋಷಿಯಾಗಲಿ, ಮೊಮ್ಮಗ ಕ್ಷಾತ್ರ ತೇಜಸ್ಸಿನವನಗಲಿ ಎಂದು ಬೇಡಿಕೊಂಡಳು.

ಋಷಿ ಹಾಗೇ ಆಗಲಿ ಎಂದು ಆಶೀರ್ವದಿಸಿದನು.

ಋಚೀಕನ ಮಗ ಜಮದಗ್ನಿ. ಜಮದಗ್ನಿಯ ಪುತ್ರನಾದ ಪರಶುರಾಮನೇ ಕ್ಷತ್ರಿಯರಂತೆ ಗಂಡುಗೊಡಲಿ ಹಿಡಿದು ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ದುಷ್ಟರಾಜರನ್ನು ನಿರ್ಮೂಲ ಮಾಡಿ ಸಾಧು ಸಜ್ಜನರಿಗೆ ಅಭಯವಿತ್ತ ಮಹಾಪುರುಷನು.

ಕಾರ್ತವೀರ್ಯಾರ್ಜುನ ಬಂದ

ಪರಶುರಾಮನ ತಾಯಿಯ ಹೆಸರು ರೇಣುಕೆ. ಈಗೆ ಪ್ರಸೇನಜಿತನೆಂಬ ಅರಸನ ಸಾಕುಮಗಳು; ಜಮದಗ್ನಿ ಮಹರ್ಷಿಯ ಕೈಹಿಡುದು ಆಕೆ ಪತಿಸೇವಾಸಕ್ತಿಳಾಗಿದ್ದಳು. ಪರಶುರಾಮನು ಅವಳ ಮೊದಲನೆಯ ಮಗ. ರುಮಣ್ವಂತ, ಸುಷೇಣ, ವಸು, ವಿಶ್ವಾಸು ಎಂಬ ನಾಲ್ವರು ಪರಶುರಾಮನ ಒಡಹುಟ್ಟಿದವರು. ಋಷಿಪುತ್ರನಾದ ಪರಶುರಾಮನಿಗೆ ಕ್ಷತ್ರಿಯ ವಂಶವನ್ನೇ ನಿರ್ಮೂಲ ಮಾಡುವಂತಹ ಮಹಾ ಕ್ರೋಧ ಉಂಟಾಗಲು ನಡೆದ ಘಟನೆಗಳು ಹಲವು.

ಚಂದ್ರವಂಶದಲ್ಲಿ ಕೃತವೀರ್ಯನೆಂಬ ರಾಜನಿದ್ದನು. ಆತನಿಗೆ ಕಾರ್ತವೀರ್ಯಾರ್ಜುನೆಂಬ ಮಹಾಪರಾಕ್ರಮ ಶಾಲಿಯಾದ ಪುತ್ರನಾದನು. ಕಾರ್ತವೀರ್ಯಾರ್ಜುನನು ದತ್ತಾತ್ರೇಯನ ಉಪಾಸನೆಯಿಂದ ಅಜೇಯತ್ವವನ್ನೂ ಯುದ್ಧಕಾಲದಲ್ಲಿ ಸಾವಿರ ತೊಳುಗಳ ಬಲವನ್ನೂ ಪಡೆದಿದ್ದನು. ರಾವಣ ಬಹು ಪರಾಕ್ರಮಿ ಎನ್ನಿಸಿಕೊಂಡಿದ್ದ; ಅವನ ಹೆಸರು ಕೇಳಿದರೇ ಎಲ್ಲರಿಗೂ ಭಯ. ಕಾರ್ತವೀರ್ಯಾರ್ಜುನ ಯುದ್ಧದಲ್ಲಿ ರಾವಣನನ್ನು ಪರಾಜಯಗೊಳಿಸಿ ಅತ್ಯಂತ ಅಹಂಕಾರದಿಂದ ತುಂಬಿ ಮಾಹಿಷ್ಮತೀ ನಗರದಲ್ಲಿ ರಾಜ್ಯಭಾರ ಮಾಡುತ್ತಿದ್ದನು.

ಹೀಗಿರಲು ಒಂದು ದಿನ, ಕಾರ್ತವೀರ್ಯಾರ್ಜುನನು ತನ್ನ ಅಪಾರವಾದ ಸೇನಾಸಮೇತ ಅರಣ್ಯಕ್ಕೆ ಬೇಟೆಗಾಗಿ ಹೊರಟನು. ಬೇಟೆಯಾಡುತ್ತಾ ಕಾಡಿನಲ್ಲಿ ಸಂಚರಿಸುತ್ತಿದ್ದ ಅವನಿಗೆ ಸಹಿಸಲಾರದ ಹಸಿವು, ಬಾಯಾರಿಕೆಗಳು ಆದುವು. ಎಲ್ಲಿಯಾದರೂ ಅರಣ್ಯದಲ್ಲಿ ಋಷಿಗಳ ಆಶ್ರಮವಿರಬಹುದೇ ಎಂದು ಹುಡುಕಿಸಿದನು. ಅಲ್ಲಿಯೇ ಹತ್ತಿರದಲ್ಲಿ ಜಮದಗ್ನಿ ಋಷಿಗಳ ಆಶ್ರಮ ಗೋಚರಿಸಿತು. ಆಶ್ರಮವನ್ನು ಪ್ರವೇಶಿಸಿದ ರಾಜನನ್ನು ಋಷಿ ಯಥೋಚಿತ ಸತ್ಕರಿಸಿದನು; ಒಂದು ದಿನ ತನ್ನ ಆಶ್ರಮದಲ್ಲಿ ವಿಶ್ರಮಿಸಿ ಮುಂದೆ ಹೋಗುವಂತೆ ಕೇಳಿಕೊಂಡನು.

‘ರೋಗಿ ಬಯಸಿದ್ದೂ ಹಾಲು, ವೈದ್ಯ ಕೊಟ್ಟದ್ದೂ ಹಾಲು’ ಎಂಬಂತೆ ಆಯಿತು. ಬೇಟೆಯಾಡಿ ಬಳಲಿದ್ದ ರಾಜನಿಗೂ ಅದೇ ಬೇಕಾಗಿತ್ತು. ರಾಜನಿಗೆ ಆಶ್ರಮದಲ್ಲಿ ರಾಜೋಚಿತ ಸತ್ಕರ ಸಮಾರಂಭಗಳು ನಡೆದವು!

ರಾಜನಿಗೆ ಬೆರಗು

ಲೋಕಕಲ್ಯಾಣಕ್ಕಾಗಿ ಋಷಿಗಳು ತಪಸ್ಸನ್ನು೭ ಮಾಡುವರಷ್ಟೆ? ಆದರಿಂದ ಅವರ ತಪಸ್ಸಿಗೆ ಎಲ್ಲರೂ ನೆರವಾಗುತ್ತಾರೆ. ಈ ಲೋಕದವರು ಮಾತ್ರವಲ್ಲ, ಸ್ವರ್ಗಲೋಕದವರೂ ಸಹಾಯ ಸಲ್ಲಿಸುವರು. ಜಮದಗ್ನಿ ಋಷಿ ಮಾಡುತ್ತಿದ್ದ ತಪಸ್ಸಿಗೆ ಸಹಾಯವಾಗಲೆಂದು ಇಂದ್ರನು ಕಾಮಧೇನುವನ್ನು ಕಳುಹಿಸಿಕೊಟ್ಟಿದ್ದನು.

ಕಾಮಧೇನು ಕೇಳಿದ್ದನ್ನೆಲ್ಲಾ ಕೊಡುವ ಗೋಮಾತೆ. ಆಶ್ರಮಕ್ಕೆ ಅರಸ ಬಂದನವಲ್ಲವೆ? ಅವನಿಗೆ ತಕ್ಕಂತೆ ಸತ್ಕಾರ ಮಾಡಬೇಕಲ್ಲ? ರಾಜೋಚಿತವಾದ ಪಂಚಭಕ್ಷಪರಮಾನ್ನ ಸಮೇತವಾದ ಮೃಷ್ಟಾನ್ನಭೋಜನವನ್ನು ಒದಗಿಸಿಕೊಡುವಂತೆ ಋಷಿ ಧೇನುವನ್ನು ಕೇಳಿಕೊಂಡನು. ತಕ್ಷಣ ಎಲ್ಲವೂ ಸಿದ್ಧವಾಯಿತು. ಅರಸ ಮತ್ತು ಆತನ ಪರಿವಾರ ಪರಿಪೂರ್ಣ ತೃಪ್ತಿಗೊಳ್ಳುವಂತೆ, ಋಷಿ ಎಲ್ಲರಿಗೂ ಉಣಬಡಿಸಿದನು. ಎಲ್ಲರೂ ಬೇಕು ಬೇಕಾದಷ್ಟು ತಿಂದು ತೇಗಿದರು.

ಪರಶುರಾಮ ಮತ್ತು ಕಾರ್ತವೀರ್ಯಾರ್ಜುನರ ಘನಘೋರ ಕಾಳಗ ನಡೆಯಿತು.

“ಇಂತಹ ಮೃಷ್ಟಾನ್ನಭೋಜನ ನಾನು ಅರ ಮನೆಯಲ್ಲಿಯೂ ಇಷ್ಟೊಂದು ಶೀಘ್ರದಲ್ಲಿ ಒದಗಿಸಲಾರೆ; ಆಶ್ರಮದ ಋಷಿ ಹೇಗೆ ಸಿದ್ಧಪಡಿಸಿದನು ?”

ರಾಜನು ತನ್ನಲ್ಲಿಯೇ ಅಚ್ಚರಿಗೊಂಡು ಪ್ರಶ್ನಿಸಿದನು. ಮತ್ತೆ ಜಮದಗ್ನಿಯೊಡನೆ ಕೇಳಿದನು:

“ಋಷಿಯೇ, ಈ ಭೋಜನಸತ್ಕಾರವನ್ನು  ನೀನು ಹೇಗೆ ಸಿದ್ಧಗೊಳಿಸಿದೆ? ನಾನು ಅರಮನೆಯಲ್ಲೂ ಇಂತಹ ಊಟವನ್ನು ಒದಗಿಸಲಾರೆನಲ್ಲ!”

“ಮಹಾರಾಜನೆ, ಇದು ಕಾಮಧೇನುವಿನ ಪ್ರಭಾವ; ನನ್ನ ತಪಸ್ಸಿಗೆ ಸಹಾಯವಾಗಲೆಂದು ಇಂದ್ರನು ಈ ಧೇನುವನ್ನು ಕಳುಹಿಸಿಕೊಟ್ಟಿರುವನು. ಈಕೆ ಬೇಡಿದ್ದನ್ನೆಲ್ಲಾ ತಕ್ಷಣವೇ ಒದಗಿಸಬಲ್ಲಳು. ಇವೆಲ್ಲವೂ ಈಕೆಯ ಕರುಣೆ.”

ನನಗೆ ಬೇಕುಬೇಕೇ ಬೇಕು

ರಾಜನ ಹೃದಯವನ್ನು ಸ್ವಾರ್ಥದ ಪಿಶಾಚಿ ಪ್ರವೇಶಿಸಿತು!

“ಋಷಿಯೇ, ಇಂತಹ ಶ್ರೇಷ್ಠವಾದ ಧೇನು ಅರಮನೆಯಲ್ಲಿದ್ದರೆ ನಮಗೆ ತುಂಬಾ ಪ್ರಯೋಜನವಿದೆ. ದಿನಂಪ್ರತಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅತಿಥಿಗಳು ನಮ್ಮಲ್ಲಿಗೆ ಬರುತ್ತಾರಷ್ಟೆ. ಅವರನ್ನು ಕೂಡಲೇ ನಾವು ಸತ್ಕರಿಸಿ ಕಳುಹಿಸಬೇಕು. ನಿನ್ನ ಆಶ್ರಮಕ್ಕೆ ಅಂತಹ ಅಗತ್ಯ ಬರುವುದು ಅಪೂರ್ವವಷ್ಟೆ? ನಿನಗೆ ಬೇಕು ಬೇಕಾದ ಆಸ್ತಿಪಾಸ್ತಿಗಳನ್ನು ನಾನು ಉಂಬಳಿ ಬಿಡುತ್ತೇನೆ.  ಅದರ ಉತ್ಪತ್ತಿಯಿಂದ ನೀನು ಅತಿಥಿಗಳನ್ನು ಸತ್ಕರಿಸಬಹುದು. ಅದಕ್ಕೆ ಪ್ರತಿಯಾಗಿ ನನಗೆ ಈ ಧೇನುವನ್ನು ಕೊಟ್ಟುಬಿಡು”.

“ರಾಜಾ, ಈ ಧೇನುವನ್ನು ನಾನು ಪರಸ್ವಾಧೀನ ಮಾಡಬಾರದು; ನನ್ನ ಆಶ್ರಮದ ವಿನಿಯೋಗಗಳ ಬಗ್ಗೆ ಮಾತ್ರ ಉಪಯೋಗಿಸಬಹುದು. ಇದನ್ನು ಇತರರಿಗೆ ಕೊಡುವ ಹಕ್ಕು ನನಗಿಲ್ಲ. ದಯಾಡಿ ನೀನು ಈ ಧೇನುವನ್ನು ಕೇಳಬಾರದು. ಕೇಳಿದರೂ ನಾನು ಕೊಡಲಾರೆ” – ಋಷಿ ಉತ್ತರಿಸಿದ.

ಮದೋನ್ಮತ್ತನಾದ ರಾಜನ ಗರ್ವ ಉಕ್ಕೇರಿತು. ಸೈನಿಕರಿಗೆ ಆತನು ಆಜ್ಞೆಯಿತ್ತನು:

“ಎಲಾ, ಏನು ನೋಡುತ್ತೀರಿ, ಈ ಧೇನುವನ್ನು ಕಟ್ಟಿ ಕೊಂಡೊಯ್ಯಿರಿ.”

ಸೈನಿಕರು ಕಾಮಧೇನುವನ್ನು ಕಟ್ಟಿ ಮಾಹಿಷ್ಮತೀ ನಗರಕ್ಕೆ ಎಳೆದುಕೊಂಡು ಹೋದರು!

ಜಮದಗ್ನಿ ತುಂಬಾ ಖಿನ್ನನಾದನು.

ಮಾಣಿಕ್ಯವೆಂದು ಮುಟ್ಟಿದ್ದು ಕೆಂಡವಾಯಿತು

ರಾಜನಿಗೆ ಮಾಡಿದ ಉಪಕಾರವೇ ಈ ಅಪಕಾರಕ್ಕೆ ಕಾರಣವಾಯಿತು!

ಪರಶುರಾಮ ಹೊರಟ

ಪರಶುರಾಮನು ಯಜ್ಞಕ್ಕೆ ಸಾಮಗ್ರಿಗಳನ್ನು ಸಂಗ್ರಹಿಸಲು ಋಷಿಕುಮಾರರೊಡನೆ ಅರಣ್ಯಕ್ಕೆ ತೆರಳಿದ್ದ. ಆಗ ತಾನೇ ಅವನು ಆಶ್ರಮಕ್ಕೆ ಕಾಲಿಟ್ಟನು.

ಧುಃಖಪಡುತ್ತಿದ್ದ ತಂದೆಯಿಂದ ವಿಷಯ ತಿಳಿಯಿತು.

ಪರಶುರಾಮನ ಸಿಟ್ಟು ನೆತ್ತಿಗೇರಿತು!
ಬಳಲಿ ಬಂದ ರಾಜನಿಗೆ ಸತ್ಕಾರ ಮಾಡಿದುದಕ್ಕೆ ಈ ಪ್ರತಿಫಲ!

ಮದಾಂಧನಾದ ಕಾರ್ತವೀರ್ಯಾರ್ಜುನನನ್ನು ಬೆನ್ನಟ್ಟಬೇಕು. ಆತನಿಂದ ಕೊಡಲೇ ಧೇನುವನ್ನು ಬಿಡಿಸಿ ತರಬೇಕು, ತಂದೆಗೆ ಅನ್ಯಾಯವನ್ನು ಮಾಡಿದಾತನಿಗೆ ಯೋಗ್ಯ ಶಿಕ್ಷೆ ವಿಧಿಸಬೇಕು ಎಂದು ಸಂಕಲ್ಪಿಸಿದ ಪರಶುರಾಮ ಹರಿತಮಾಡಿದ ಕೊಡಲಿಯನ್ನು ತನ್ನ ಹೆಗಲಿಗೇರಿಸಿಕೊಂಡನು. ಬಿಲ್ಲುಬಾಣಗಳನ್ನು ಧರಿಸಿಕೊಂಡನು. ಮದಗಜವನ್ನು ಸಿಂಹವು ಬೆನ್ನಟ್ಟಿ ಬರುವಂತೆ ರಾಜನನ್ನು ಬೆನ್ನಟ್ಟಿಹೋದನು.

ಋಷಿಕುಮಾರನಿಗೆ ರಾಜನು ಹೆದರುವುದುಂಟೆ?

ರಾಜನ ಸೇವೆ ಪರಶುರಾಮನ ಮೇಲೆ ಎರಗಿತು. ಅಷ್ಟು ಜನ ಅವನೊಬ್ಬನ ಮೇಲೆ! ಆದರೆ ಬೆದರುವವನೆ, ಹೆಜ್ಜೆ ಹಿಂದಿಡುವವನೆ ಪರಶುರಾಮ? ಕುರುಚಲು ಗಿಡಗಳನ್ನು ಮಸೆದ ಕೊಡಲಿಯಿಂದ ತರಿದೊಗೆಯುವಂತೆ ಸೈನಿಕರನ್ನು ಕಡಿದೊಗೆದನು. ಕೊನೆಗೆ ಕಾರ್ತವೀರ್ಯಾರ್ಜುನನೇ ಇದಿರಾದನು; ಇಬ್ಬರೊಳಗೆ ಘನಘೋರಕಾಳಗ ನಡೆಯಿತು. ಆತನ ಸಹಸ್ರ ಬಾಹುಗಳನ್ನು ಕೊಡಲಿಯಿಂದ ಪರಶುರಾಮನು ತರಿದೊಗೆದು; ಕಾರ್ತವೀರ್ಯಾರ್ಜುನನ್ನು ಕೊಂದು ಹಾಕಿದನು. ಆತನ ಮಕ್ಕಳೂ ಉಳಿದ ಸೈನಿಕರೂ ಜೀವದಾಸೆಯಿಂದ ಹೆದರಿ ಕಾಮಧೇನುವನ್ನು ಬಿಟ್ಟು ಓಡಿಹೋದರು. ಪರಶುರಾಮ ಧೇನುವನ್ನು ಮರಳಿ ಆಶ್ರಮಕ್ಕೆ ತಂದು ತಂದೆಗೊಪ್ಪಿಸಿದನು; ಸಾಷ್ಟಾಂಗವೆರಗಿದನು.

ನೀನು ಧೀರನೇ, ಆದರೆ

ಪುತ್ರನ ಪರಾಕ್ರಮವನ್ನು ಕಂಡು ಜಮದಗ್ನಿ ಹಿಗ್ಗಿದನು. ಕೈಬಿಟ್ಟುಹೋದ ಕಾಮಧೇನು ಮರಳಿ ಬಂದದಕ್ಕಾಗಿ ಅಮಿತಾನಂದವೂ ಆಯಿತು. ಆದರೆ ಬ್ರಾಹ್ಮಣನಾಗಿ ಜನಿಸಿದವನು ಇಷ್ಟೊಂದು ಕ್ರೋಧಪರವಶನಾದರೆ ಹೇಗೆ? ಮಗನಿಗೆ ಬುದ್ಧಿ ಹೇಳಿದನು:

“ಮಗು ಪರಶುರಾಮ, ನೀನು ಅಸಾಧಾರಣ ವೀರನೆ. ಯಾರಿಗಾದರೂ ಭೂಷಣ ಈ ಪರಾಕ್ರಮ. ಆದರೆ ನೋಡು, ನೀನು ಕೋಪವನ್ನು ತಡೆಹಿಡಿಯಬೇಕಾಗಿತ್ತು. ನೋಡು, ಈಗ ನೀನು ಎಷ್ಟು ಜನರನ್ನು ಕೊಂದೆ! ಅದರ ಪಾಪ  ಪರಿಹಾರ ಮಾಡಿಕೊಳ್ಳಬೇಕು. ತೀರ್ಥಯಾತ್ರೆ ಮಾಡಬೇಕು. ಪವಿತ್ರ ಸ್ಥಳಗಳಿಗೆ ಹೋಗಿ ಪಾಪವನ್ನು ಕಳೆದುಕೊಂಡು ಶುದ್ಧನಾಗಿ ಆಶ್ರಮಕ್ಕೆ ಬಾ.”

“ಅಪ್ಪಣೆ” ಎಂದು ತಲೆಬಾಗಿದ ಪರಶುರಾಮ.

ತಂದೆಯ ಆದೇಶದಂತೆ ಪರಶುರಾಮನು ಒಂದು ವರ್ಷ ಕಾಲ ತೀರ್ಥಯಾತ್ರೆಗೈದನು; ಮರಳಿ ಆಶ್ರಮಕ್ಕೆ ಬಂದು ತಂದೆಯ ತಪಶ್ಚರ್ಯೆಯಲ್ಲಿ ಆತನಿಗೆ ನೆರವಾಗಿ ನಿಂತನು.

ಸುದರ್ಶನಚಕ್ರದ ಗರ್ವ ಇಳಿಸಲು

ಪರಶುರಾಮಾವತಾರದ ಕುರಿತು ಒಂದು ಕಥೆ ಇದೆ.

ವೈಕುಂಠಕ್ಕೆ ನಾರದಮುನಿಯ ಆಗಮನವಾಯಿತು.

ನಾರದನು ಬಗೆಬಗೆಯಾಗಿ ಶ್ರೀಮನ್ನಾರಾಯಣನನ್ನು ಕೊಂಡಾಡಿದನು.

ಮಹಾವಿಷ್ಣುವಿನ ಆಯುಧ ಒಂದು ಚಕ್ರ. ಅದನ್ನು ಎದುರಿಸಬಲ್ಲವರಿಲ್ಲ. ಅದರ ಹೆಸರು ಸುದರ್ಶನಚಕ್ರ. ಆ ಚಕ್ರಕ್ಕೆ ಒಬ್ಬ ಅಭಿಮಾನದೇವತೆ. ಅವನಿಗೆ ಬಹು ಹೆಮ್ಮೆ. ‘ಮಹಾವಿಷ್ಣುವಿನ ಬಲವೆಲ್ಲ ನನ್ನಿಂದ. ನಾನಿಲ್ಲದಿದ್ದರೆ ವಿಷ್ಣು ರಾಕ್ಷಸರನ್ನು ಕೊಲ್ಲಲು ಸಾಧ್ಯವೇ ಆಗುತ್ತಿರಲಿಲ್ಲ’ ಎಂದು ಅವನಿಗೆ ಹೆಮ್ಮೆ.

ನಾರದರು ವಿಷ್ಣುವನ್ನು ಹೊಗಳಿದ್ದನ್ನು ಕೇಳಿ ಆ ದೇವತೆಗೆ ತುಂಬ ಅಸಮಾಧಾನವಾಯಿತು. ‘ನನ್ನ ಶಕ್ತಿಯನ್ನು ಮರೆತೇ ಬಿಟ್ಟರು ನಾರದರು’ ಎಂದು ಕೋಪ ಬಂದಿತು.

ಅವನ ಅಂತರಂಗ ಮಹಾವಿಷ್ಣುವಿಗೆ ತಿಳಿಯಿತು. ಅವನನ್ನು ಹತ್ತಿರಕ್ಕೆ ಕರೆದು ಹೇಳಿದನು:

“ಅಯ್ಯಾ ಸುದರ್ಶನನೇ, ನಾನು ನಿನ್ನನ್ನು ಉಪಯೋಗಿಸಿ ರಾಕ್ಷಸರನ್ನು ಸಂಹರಿಸಿದುದು ನಿಜ. ಆದರೆ ನೀನು ಹೋಗಿ ಭೂಮಿಯಲ್ಲಿ ಸಹಸ್ರಬಾಹುವಾಗಿ ಹುಟು; ನಾನು ಋಷಿಪುತ್ರನಾಗಿ ಜನಿಸುತ್ತೇನೆ. ಅಲ್ಲಿ ನಮ್ಮಿಬ್ಬರ ಪರಾಕ್ರಮಗಳು ಲೋಕಕ್ಕೆ ವಿದಿತವಾಗಲಿ.”

ಹೀಗೆಂದು ಅಪ್ಪಣೆಯಿತ್ತನು.

ಅಂತೆಯೇ, ಸುದರ್ಶನಚಕ್ರ ವೈಕುಂಠದಲ್ಲಿರಲಾರದೆ ಭೂಲೋಕಕ್ಕೆ ಇಳಿಯಿತು. ಚಂದ್ರವಂಶದ ಕೃತವೀರ್ಯನಿಗೆ ಬಹುಕಾಲ ಮಕ್ಕಳೇ ಆಗಲಿಲ್ಲ. ಮುಂದೆ ತೋಳುಗಳಿಲ್ಲದ ಒಬ್ಬ ಪುತ್ರನು ಜನಿಸಿದನು. ಆತನು ದತ್ತಾತ್ರೇಯ ಮುನಿಯ ವರಬಲದಿಂದ ಸಹಸ್ರ ಬಾಹುಗಳನ್ನೂ ಅಜೇಯತ್ವವನ್ನೂ ಪಡೆದನು. ಹೀಗೆ ಗರ್ವಿಷ್ಠನಾದ ಕಾರ್ತವೀರ್ಯಾರ್ಜುನನು ಪರಶುರಾಮನಿಗಿದಿರಾಗಿ ಯುದ್ಧದಲ್ಲಿ ಹತನಾದನು!

ಅಂದಿನಿಂದ ಸುದರ್ಶನಚಕ್ರದ ಗರ್ವ ಇಳಿಯಿತು!

ರೇಣುಕೆಯನ್ನು ಕೊಲ್ಲಿ!’

ಅದೊಂದು ಸುಂದರ ವಸಂತ ಋತುವಿನ ದಿನ. ಪ್ರಕೃತಿ ಎಲ್ಲೆಡೆ ಚೆಲುವಿಂದ ತುಂಬಿತ್ತು. ಸುತ್ತು ಹೂಗಳು ಅರಳಿ ಪರಿಮಳಿಸುತ್ತಿದ್ದವು. ಪತಿಸೇವಾಸಕ್ತೆಯಾದ ರೇಣುಕೆ ಆ ದಿನ,  ಜಮದಗ್ನಿಗೆ ಅಗ್ನಿಹೋತ್ರದ ಕಾರ್ಯಕ್ಕಾಗಿ ಗಂಗಾಜಲವನ್ನು ತರಬೇಕಾಗಿತ್ತು. ಕೊಡವನ್ನು ಎತ್ತಿಕೊಂಡು ನದೀತಟಕ್ಕೆ ಹೋದಳು. 

ಶ್ರೀರಾಮ - ಪರಶುರಾಮರ ದೃಷ್ಟಿಗಳು ಸಂಧಿಸಿದವು.

ಮೃದು ಗಂಭೀರ ನಿನಾದದಿಂದ ಗಂಗಾನದಿ ಪ್ರವಹಿಸುತ್ತಿತ್ತು. ಅಲ್ಲಿಗೆ ಚಿತ್ರರಥನೆಂಬೊಬ್ಬ ಗಂಧರ್ವನು ತನ್ನ ಹೆಂಡತಿಯರೊಡಗೂಡಿ ಜಲಕ್ರೀಡೆಗಾಗಿ ಬಂದಿದ್ದನು. ಅವರೆಲ್ಲರೂ ನದಿಗೆ ಇಳಿದರು. ತರುಣಿಯರೊಂದಿಗೆ ಜಲಕ್ರೀಡೆಯಾಡುತ್ತಿರುವ ಚಿತ್ರರಥನ ಸುಂದರ ರೂಪವನ್ನು ರೇಣುಕೆ ನೋಡುತ್ತಾ ನಿಂತಳು. ಕೆಲಕಾಲ ಹಾಗೆಯೇ ಕಳೆಯಿತು.

ಮತ್ತೆ ಆಕೆಗೆ ಎಚ್ಚರವಾಯಿತು. ಪತಿದೇವನು ಅಗ್ನಿಹೋತ್ರಕ್ಕಾಗಿ ಗಂಗಾಜಲಕ್ಕಾಗಿ ಕಾದುಕುಳಿತಿರಬಹುದು. ಲಗುಬಗೆಯಿಂದ ಕೊಡದಲ್ಲಿ ನೀರು ತುಂಬಿಸಿ ಕಂಕುಳಲ್ಲಿ ಇಟ್ಟುಕೊಂಡು ವೇಗವಾಗಿ ಸಾಗಿದಳು. ಪತಿಯ ಮುಂದೆ ಗಂಗಾಜಲವನ್ನು ತಂದಿರಿಸಿದಳು.

ಜಮದಗ್ನಿ ದಿವ್ಯಜ್ಞಾನಿಯಾದ ಋಷಿ; ಆತನಿಗೆ ರೇಣುಕೆಯ ವಿಳಂಬದ ಕಾರಣ ತಿಳಿಯಿತು. ಚಿತ್ರರಥನನ್ನು ಆಸಕ್ತಿಯಿಂದ ನೋಡುತ್ತಿದ್ದ ಆಕೆಯ ಬಗೆಗೆ ಋಷಿ ಅತ್ಯಂತ ಕೋಪಗೊಂಡ. ತನ್ನ ಪತ್ನಿ ಅಪವಿತ್ರಳಾದಳೆಂದು ಉರಿದೆದ್ದ!

“ಈ ಪಾಪಿಯನ್ನು ಕೊಂದುಬಿಡಿ”-ಬಳಿಯಿದ್ದ ಮಕ್ಕಳನ್ನು ಕೂಗಿಕರೆದು ಹೇಳಿದ.

ಮಕ್ಕಳು ಬೆಚ್ಚಿದರು. ತಮ್ಮ ಕಿವಿಗಳನ್ನೆ ನಂಬಲಾಗಲಿಲ್ಲ ಅವರಿಗೆ. ಹಡೆದ ತಾಯಿಯನ್ನು ಮಕ್ಕಳಾದವರು ತಮ್ಮ ಕೈಯಾರೆ ಕೊಲ್ಲಬಲ್ಲರೆ? ಎಲ್ಲರೂ ಬೊಂಬೆಗಳಂತೆ ನಿಂತುಬಿಟ್ಟರು! ಜಮದಗ್ನಿಗೆ ಸಿಟ್ಟು ತಡೆಯಲಾಗಲಿಲ್ಲ. ತನ್ನ ಮಕ್ಕಳೇ ತನ್ನ ಅಪ್ಪಣೆಯನ್ನು ಮೀರುತ್ತಿದ್ದಾರೆ!

ಆ ಹೊತ್ತಿಗೆ ಆಶ್ರಮದಿಂದ ಹೊರಗೆ ಹೋಗಿದ್ದ ಪರಶುರಾಮನು ಹಿಂದಿರುಗಿ ಬಂದನು.

ಮತ್ತೆ ಋಷಿ ಆರ್ಭಟಿಸಿ ಆದೇಶವಿತ್ತ:

“ಮಗನೇ, ಈ ನಿನ್ನ ತಾಯಿಯನ್ನು, ತಮ್ಮಂದಿರನ್ನು ಕೊಂದುಹಾಕಿಬಿಡು.”

ಕೊಂದವನೇ ಬದುಕಿಸಿದ

ತಂದೆಯ ಮಾತಿಗೆ ಮಗನು ಹಿಂದುಮುಂದು ನೋಡಲಿಲ್ಲ. ಪತೃವಾಕ್ಯಪಾಲನೆಗೆ ಆತನು ಸಿದ್ಧನಾದನು. ಕೊಡಲಿಯೆತ್ತಿ ಮೊದಲು ತಾಯಿಯ ರುಂಡವನ್ನು ತರಿದು ಆಮೇಲೆ ತಮ್ಮಂದಿರನ್ನು ಕೊಂದುಹಾಕಿದನು. ತಂದೆಯ ಮುಂದೆ ಮತ್ತೆ ತಲೆಬಾಗಿ ನಿಂತನು.

ಜಮದಗ್ನಿಯ ಕೋಪ ಆರಿಹೋಯಿತು! ಐದು ಜೀವಿಗಳ ಪ್ರಾಣವೂ ಹಾರಿಹೋಗಿತ್ತು!

“ಮಗನೇ, ನಿನ್ನ ಪಿತೃಭಕ್ತಿಗೆ ನಾನು ಮೆಚ್ಚಿದ್ದೇನೆ. ನಿನಗೆ ಬೇಕಾದ ವರವನ್ನು ಬೇಡು”- ಎಂದನು ಜಮದಗ್ನಿ ಸಮಧಾನಗೊಂಡು.

“ತಂದೆಯೇ, ನಿನ್ನ ತೃಪ್ತಿಯೇ ನನಗೆ ಮಹಾಪ್ರಸಾದ. ನನಗೆ ವರವನ್ನು ಕೊಡುವಿಯಾದರೆ ಇಗೋ, ಇಲ್ಲಿ ಸತ್ತುಬಿದ್ದಿರುವ ನನ್ನ ತಾಯಿಯನ್ನೂ ತಮ್ಮಂದಿರನ್ನೂ ಮರಳಿ ಜೀವಿಸುವಂತೆ ಅನುಗ್ರಹಿಸು; ಅವರ ಅಪರಾಧಗಳನ್ನು ಕ್ಷಮಿಸಿಬಿಡು” – ಪರಶುರಾಮನು ವಿನಯಪೂರ್ವಕ ವಿನಂತಿಸಿಕೊಂಡನು.

“ಹಾಗೆಯೇ ಆಗಲಿ” – ಜಮದಗ್ನಿ ಹೇಳಿದ.

ನಿದ್ದೆಯಿಂದ ಎದ್ದು ಬಂದವರಂತೆ ಎಲ್ಲರೂ ಸಚೇತನರಾದರು; ಸರ್ವರೂ ಜಮದಗ್ನಿಗೆ ಸಾಷ್ಟಾಂಗವೆರಗಿದರು. ಹೋಮಕಾರ್ಯ ಮತ್ತೆ ಸಾಂಗವಾಗಿ ಸಾಗಿತು.

ಹೀಗೆ ಪರಶುರಾಮ ತಾಯಿಯನ್ನೂ ತಮ್ಮಂದಿರನ್ನೂ ಉಳಿಸಿಕೊಂಡ.

ಸೇಡು ತೀರಿಸಿಕೊಂಡರು
ಅತ್ತ ಮಾಹಿಷ್ಮತೀನಗರದಲ್ಲಿ ಕಾರ್ತವೀರ್ಯಾರ್ಜುನನ ಮಕ್ಕಳು ಸೇಡಿಗಾಗಿ ಕುದಿಯುತ್ತಿದ್ದರು; ತಂದೆಯ ವಧೆಗಾಗಿ, ತಮಗಾದ ಪರಾಭವಕ್ಕಾಗಿ! ಒಮ್ಮೆ ಪರಶುರಾಮನ ಕೊಡಲಿಯೇಟಿನ ನೋವನ್ನು ತಿಂದ ಅವರಿಗೆ ಮತ್ತೆ ಆತನನ್ನು ಪ್ರತ್ಯಕ್ಷವಾಗಿ ಇದಿರಿಸುವ ಧೈರ್ಯ ಇರಲೇ ಇಲ್ಲ. ಹಾಗಾಗಿ ಗುಪ್ತವಾದ ಹಂಚಿಕೆ ಹೂಡಿದರು.

ಯಾವುದೋ ಒಂದು ಕಾರ್ಯನಿಮಿತ್ತ ಪರಶುರಾಮನು ತಮ್ಮಂದಿರೊಡಗೂಡಿ ಆಶ್ರಮ ಬಿಟ್ಟು ಹೊರಗೆ ಹೋಗಿದ್ದನು. ಈ ಸುದ್ದಿ ಗೂಢಚಾರರಿಂದ ಮಾಹಿಷ್ಮ ನಗರಕ್ಕೆ ತಲುಪಿತು.  ತಲುಪಿದ್ದೇ ತಡ, ಕಾರ್ತವೀರ್ಯಾರ್ಜುನನ ಮಕ್ಕಳು ಜಮದಗ್ನಿಯ ಆಶ್ರಮಕ್ಕೆ ಮುತ್ತಿಗೆ ಹಾಕಿದರು. ತಮ್ಮ ತಂದೆಯನ್ನು ಕೊಂದ ಸೇಡನ್ನು, ತಾವು ಪರಶುರಾಮನ ತಂದೆಯನ್ನು ಕೊಂದು ತೀರಿಸುವುದಾಗಿ ಆಯುಧಪಾಣಿಗಳಾಗಿ ಆಶ್ರಮದ ಒಳಹೊಕ್ಕರು.

ಅಲ್ಲಿ ಋಷಿ ಧ್ಯಾನಮಗ್ನನಾಗಿ ಕುಳಿತಿದ್ದನು. ಬಿರುಗಾಳಿಯಂತೆ ಕಾರ್ತವೀರ್ಯಾರ್ಜುನನ ಮಕ್ಕಳು ಒಳಕ್ಕೆ ನುಗ್ಗಿದರು. ರೇಣುಕೆ ಪತಿಗೊದಗುವ ವಿಪತ್ತನ್ನು ಪರಿಭಾವಿಸಿ ಅವರೊಡನೆ ವಿಧವಿಧವಾಗಿ ಬೇಡಿಕೊಂಡಳು. ಅವರ ಕಠಿಣಮನಸ್ಸುಗಳನ್ನು ಆಕೆಯ ಅಳುವು ಕರಗಿಸಲಿಲ್ಲ. ಸಮಾಧಿಸ್ಥನಾದ ಜಮದಗ್ನಿಯ ರುಂಢವನ್ನು ಛೇದಿಸಿ, ನಗರಕ್ಕೆ ಕೊಂಡೊಯ್ದರು; ಆಶ್ರಮವನ್ನು ಧ್ವಂಸ ಮಾಡಿದರು.

ಮತ್ತೆ ಹೊರಟ ಪರಶುರಾಮ

“ಹೆ ರಾಮಾ, ಹೇ ರಾಮಾ, ಹೇ ರಾಮಾ” ಎಂದು ರೇಣುಕೆ ಕೂಗಿದಳು.

ತಮ್ಮಂದಿರೊಡನೆ ಆಶ್ರಮದತ್ತ ಸಾಗುತ್ತಿದ್ದ ಪರಶುರಾಮನಿಗೆ ಈ ಆರ್ತನಾದ ಕೇಳಿಸಿತು.  ನಿಲ್ಲದೆ ಎಲ್ಲರೂ ಅಲ್ಲಿಗೆ ಧಾವಿಸಿಬಂದರು.

ಅಲ್ಲಿ ನೋಡುವುದೇನು?

ತಂದೆಯ ದೇಹ ರಕ್ತದ ಮಡುವಿನಲ್ಲಿ ಬಿದ್ದಿದೆ, ತಲೆ ಇಲ್ಲ. ತಾಯಿ ಮೂರ್ಛೆಗೊಂಡು ಬಂದಿದ್ದಾಳೆ. ಮಕ್ಕಳು ಉಪಚಾರ ಮಾಡಿದರು. ತಾಯಿಗೆ ಜ್ಞಾನ ಬಂದಿತು. ಅಳುತ್ತಳುತ್ತ ನಡೆದ ಘೋರವನ್ನು ವಿವರಿಸಿದಳು.

ತಂದೆಯ ಮುಂಡವನ್ನು ಮೇಲೆತ್ತಿಕೊಂಡು ತಾಯಿಯೊಂದಿಗೆ ಮಕ್ಕಳು ಗೊಳೋ ಎಂದು ಅತ್ತರು. ಆದರೆ ಪರಶುರಾಮನು ಅಳುತ್ತಾ ಸುಮ್ಮನೆ ಕುಳಿತುಕೊಳ್ಳಲಿಲ್ಲ. ನಡೆದ ಸಂಗತಿಯನ್ನು ಆಶ್ರಮವಾಸಿಗಳಿಂದ ಅರಿತುಕೊಂಡನು. ಹಲ್ಲುಕಡಿದನು. ತನ್ನ ಗಂಡುಗೊಡಲಿಯನ್ನು ಹೆಗಲಿಗೇರಿಸಿಕೊಂಡು ಮಾಹಿಷ್ಮತೀ ನಗರದತ್ತ ಶರವೇಗದಿಂದ ಧಾವಿಸಿದನು.

ನಗರದ ಮಹಾದ್ವಾರದ ಕಾವಲುಪಡೆಯ ಭಟರನ್ನು ಕೊಚ್ಚಿಹಾಕಿದನು. ಹೆಬ್ಬಾಗಿಲನ್ನು ಒಡೆದು ಒಳಹೊಕ್ಕನು. ಕಣ್ಣುಗಳಲ್ಲಿ ಕಿಡಿಗಳನ್ನು ಕಾರುತ್ತಾ ಕೊಡಲಿಯನ್ನು ಝಳಪಿಸುತ್ತಾ ಅರಮನೆಯ ಕಡೆ ಸಾಗಿದನು. ಮುತ್ತಿಬಂದ ಸೇನಾ ಸಹಸ್ರವನ್ನು ತರಿದೂಗೆದನು. ರಾಜಪುತ್ರರನ್ನೆಲ್ಲಾ ಕೊಂದುಹಾಕಿದನು; ಅವರ ವಶವಿದ್ದ ತಂದೆಯ ರುಂಡವನ್ನು ವಶಪಡಿಸಿಕೊಂಡನು.

ಅಲ್ಲಿಂದ ಆಶ್ರಮಕ್ಕೆ ಹಿಂದಿರುಗಿದನು. ಅವನೂ ತಮ್ಮಂದಿರೂ ತಂದೆಗೆ ನಡೆಸಬೇಕಾದ ಕರ್ಮಗಳನ್ನು ಮಾಡಿದರು.

ಕ್ರೋಧದ ಬೆಂಕಿ

ಇಷ್ಟಾದರೂ ಆತನ ಕ್ರೋಧದ ಬೆಂಕಿ ಆರಲೇ ಇಲ್ಲ; ಮನಸ್ಸಿಗೆ ನೆಮ್ಮದಿ ಸಿಕ್ಕಲಿಲ್ಲ. ತಾಯಿಯ ಕಣ್ಣೀರನ್ನು ಕಂಡಾಗ ಮನದ ವೇದನೆ ಇಮ್ಮಡಿಸುತ್ತಿತ್ತು!

ಪರಶುರಾಮನ ಮನದ ನೋವು ಕುದಿಕುದಿದು ಮಹಾಕ್ರಾಂತಿಯ ಪಾಕವೊಂದು ಸಿದ್ಧವಾಗುತ್ತಿತ್ತು.

“ಈ ರಾಜರೆಲ್ಲರೂ ಮಹಾ ದುಷ್ಟರು. ಅನ್ನವಿತ್ತ ಉಪಕಾರ ಸ್ಮರಿಸದೆ ಧೇನುವನ್ನು ಅಪಹರಿಸಿದರು; ತಂದೆಯನ್ನು ಕೊಂದುಹಾಕಿದರು. ತಾಯಿಗೆ ನಿರಂತರವಾದ ವೈಧವ್ಯದ ನೋವನ್ನು ಉಂಟುಮಾಡಿದರು. ಇವರ ವಂಶವನ್ನೇ ನಿರ್ಮೂಲ ಮಾಡಬೇಕು. ಇಂತಹ ದುಷ್ಟರು ಇರುವವರೆಗೆ ಸಾಧು ಸಜ್ಜನರ ಜೀವಗಳಿಗೆ ರಕ್ಷಣೆಯಿಲ್ಲ. ಕೊಡಲಿಯನ್ನು ಮಸೆಯುತ್ತೇನೆ. ಕ್ರಾಂತಿಗೆ ಸಿದ್ಧನಾಗುತ್ತೇನೆ. ಇವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ.”

ಹೀಗೆಂದು ಪರಶುರಾಮನು ಪಂಥ ತೊಟ್ಟ. ಮತ್ತೆ ಕೊಡಲಿಯನ್ನು ಹೆಗಲ ಮೇಲೆ ಹೊತ್ತು ಹೊರಟ. ಇಪ್ಪತ್ತೊಂದು ಬಾರಿ ಭೂಮಿಯನ್ನು ಸುತ್ತಿ ಮದಿಸಿದ್ದ ಕ್ಷತ್ರಿಯರನ್ನೆಲ್ಲ ಕತ್ತರಿಸಿದ; ಬೇರುಸಹಿತ ನಿರ್ಮೂಲ ಮಾಡಿದ.

ದಾನಿ ರಾಮ

ದುಷ್ಟ ಕ್ಷತ್ರಿಯರ ವಂಶವನ್ನು ಹೀಗೆ ನಿರ್ಮೂಲಗೊಳಿಸಿ ಅವರ ರಕ್ತದಿಂದಲೇ ಐದು ಸರೋವರಗಳನ್ನು ನಿರ್ಮಿಸಿದನು. ಅಲ್ಲಿಗೆ ತಂದೆಗೆ ತರ್ಪಣವಿತ್ತು  ಸಿಟ್ಟನ್ನು ಶಾಂತಗೊಳಿಸಿದನು. ಆ ಸರೋವರಗಳೇ ಸ್ಯಮಂತ ಪಂಚಕಗಳೆಂದು ಪ್ರಸಿದ್ಧವಾದುವು.

ಆಮೇಲೆ, ಶಾಂತಿಯ ಸ್ಥಾಪನೆಗೆ ಪರಶುರಾಮನು ಅಶ್ವಮೇಧ, ವಾಜಪೇಯಾದಿ ಯಾಗಗಳನ್ನು ನೆರವೇರಿಸಿದನು. ಕ್ಷತ್ರಿಯರಿಂದ ಪಡೆದ ಭೂಮಿಯನ್ನು ಯಾಗಗಳಿಗೆ ಬಂದಿದ್ದ ಹೋತೃಗಳಿಗೆ ದಾನವಾಗಿತ್ತನು. ಸರಸ್ವತೀ ನದಿಯಲ್ಲಿ ಕಡೆಗೆ ಸ್ನಾನಮಾಡಿ ಪಾಪರಹಿತನಾಗಿ ಮಹೇಂದ್ರ ಪರ್ವತದ ತಪ್ಪಲಲ್ಲಿ ಆಶ್ರಮ ಕಟ್ಟಿದ , ತಪಸ್ಸಿಗೆ ನಿಂತ.

ಇಂದಿಗೂ ಪರಶುರಾಮ ಚಿರಂಜೀವಿಯಾಗಿ ಇರುವನೆಂದು ಪುರಾಣಗಳು ಸಾರುತ್ತವೆ.

ಪರಶುರಾಮ ಆಶ್ರಮ ಕಟ್ಟಿಕೊಂಡು ತಪಸ್ಸಿಗೆ ನಿಲ್ಲಲು ತೀರ್ಮಾನಿಸಿದ, ಅಲ್ಲವೇ? ಆಗ ಅವನಿಗೆ ಒಂದು ಸಮಸ್ಯೆ ಉಂಟಾಯಿತು.

ಆಗಲೇ ಭೂಮಿಯನ್ನೆಲ್ಲ ಗೆದ್ದು ಇತರರಿಗೆ ದಾನವಾಗಿ ಕೊಟ್ಟುಬಿಟ್ಟಿದ್ದ. ಈಗ ತಾನು ಎಲ್ಲಿ ನಿಂತರೂ ದಾನವಾಗಿ ಕೊಟ್ಟ ಭೂಮಿಯ ಮೇಲೆ ನಿಂತಹಾಗಾಯಿತು. ದಾನವಾಗಿ ಕೊಟ್ಟುದನ್ನು ಮತ್ತೆ ತೆಗೆದುಕೊಂಡಹಾಗಾಯಿತು. ಇದು ತಪ್ಪು, ಏನು ಮಾಡುವುದು?

ಸಮಸ್ಯೆಗೆ ಪರಿಹಾರ ಕಂಡುಹಿಡಿದ.

ಪರಶುರಾಮ ಕೈಯಲ್ಲಿದ್ದ ಕೊಡಲಿಯನ್ನು ಸಮುದ್ರಕ್ಕೆ ಎಸೆದ. ಕೊಡಲಿ ಬಿದ್ದಷ್ಟು ಸ್ಥಳವನ್ನು ಸಮುದ್ರರಾಜನಿಂದ ಪಡೆದ. ಪಶ್ಚಿಮ ಸಮುದ್ರತೀರದ ವಿಶಾಲ ಭೂಭಾಗದಲ್ಲಿ ನೆಲೆನಿಂತು ಹೊಸ ಸೃಷ್ಟಿಯನ್ನು ಮಾಡಿದ. ಅದಕ್ಕೆ ‘ಪರಶುರಾಮಸೃಷ್ಟಿ’ ಎಂದು ಹೆಸರಾಯಿತು.

ಪರಶುರಾಮಸೃಷ್ಟಿಗೆ ಕ್ಷಾಮಡಾಮರಗಳು ಎಂದೆಂದಿಗೂ ಬಾಧಿಸವು; ಸದಾಕಾಲ ಅಲ್ಲಿ ಶಾಂತಿ, ಸುಭಿಕ್ಷಗಳೇ ನೆಲೆಸಿರುವವು – ಹೀಗೆಂದು ಬಹುಕಾಲದ ನಂಬುಗೆಯಿದೆ.

ದಯಾವಂತ ರಾಮ

ಪರಶುರಾಮನ ಕ್ರಾಂತಿಯ ರಕ್ತೇತಿಹಾಸದ ಕಥೆಯಲ್ಲಿಯೂ ಧರ್ಮದೃಷ್ಟಿಯ ಕೆಲವು ಹೃದಯಸ್ಪರ್ಶಿ ಘಟನೆಗಳ ವಿವರಗಳಿವೆ.

ಕ್ಷತ್ರಿಯರಾದರೂ ಯಜ್ಞಯಾಗಾದಿಗಳಲ್ಲಿ ದೀಕ್ಷಿತರಾದವರನ್ನು ಪರಶುರಾಜಮನು ಕೊಲ್ಲಲಿಲ್ಲ; ಅದರಿಂದ ಜನಕಾದಿಗಳು ಉಳಿದರು. ವಿವಾಹಿತರಾದವರನ್ನು ಕೊಲ್ಲಲಿಲ್ಲ; ಅದರಿಂದ ದಶರಥಾದಿಗಳು ಬದುಕಿದರು. ಸ್ತ್ರೀಹತ್ಯೆ ಮಾಡಲಿಲ್ಲ. ಪರಶುರಾಮ ಹೆಂಗಸರನ್ನು ಕೊಲ್ಲುವುದಿಲ್ಲ ಎಂದು ತಿಳಿದು ಕೆಲವರು ಕ್ಷತ್ರಿಯ ಪುರುಷರು ಹೆಂಗಸರ ವೇಷ ಧರಿಸಿ, ಹೆಂಗಸರ ಮಧ್ಯೆ ಸೇರಿಕೊಂಡರು. ಹೀಗೆ ಪ್ರಾಣ ಉಳಿಸಿಕೊಂಡರು. ಇದರಲ್ಲಿ ಒಬ್ಬನಿಗೆ ‘ನಾರೀಕವಚ’ ಎಂದೇ ಹೆಸರಾಯಿತು. (ಎಂದರೆ ಹೆಂಗಸರ ರಕ್ಷಣೆ ಪಡೆದವನು ಎಂಧರ್ಥ.)

ಪರಶುರಾಮ ದಶರಥತನಯ ಶ್ರೀರಾಮ

ರಾಮಾಯಣ, ಮಹಾಭಾರತಗಳಲ್ಲಿ ಪರಶುರಾಮನ ಕೆಲವು ಕಥೆಗಳು, ಬಂದಿವೆ;

ಮಹಾವಿಷ್ಣು ಶ್ರೀರಾಮನೆಂಬ ಹೆಸರಿನಿಂದ ದಶರಥ ಪುತ್ರನಾಗಿ ಜನಿಸಿದನು; ಮಹಾಲಕ್ಷ್ಮಿ ಸೀತೆಯೆಂಬ ಹೆಸರಿನಿಂದ ಜನಕನ ಮನೆಯಲ್ಲಿ ಬೆಳೆದಳು. ಪ್ರಾ ಯ ತುಂಬಿದಾಗ ಸೀತಾದೇವಿಗೆ ಅರಮನೆಯಲ್ಲಿ ಸ್ವಯಂವರವೇರ್ಪಟ್ಟಿತ್ತು. ಜನಕನ ಅರಮನೆಯಲ್ಲಿ ಶಿವಧನುಸ್ಸು ಒಂದಿತ್ತು. ಅದನ್ನು ಬಾಗಿಸಿ ಹೆದೆಯೇರಿಸಿದ ವೀರನಿಗೆ ಸೀತೆ ಮಾಲೆ ಹಾಕುವಳೆಂದು ಜನಕ ತೀರ್ಮಾನಿಸಿದ್ದ. ಸೀತೆಯನ್ನು ಮದುವೆಯಾಗುವ ಆಸೆಯಿಂದ ಬಂದ ರಾಜಪುತ್ರರು ಎಷ್ಟು ಮಂದಿಯೋ! ಆದರೆ ಶಿವಧನಸ್ಸನ್ನು ಎಲ್ಲರೂ ಎತ್ತಲಾರದೆ ಕಂಗಾಲಾದರು. ಶ್ರೀರಾಮನು ಮಾತ್ರ ಲೀಲಾಜಲವಾಗಿ ಶಿವಧನುಸ್ಸನ್ನೆತ್ತಿ ಮುರಿದನು; ಸೀತೆ ಶ್ರೀರಾಮನನ್ನು ವರಿಸಿದಳು.

ದಶರಥನು ಮಕ್ಕಳು, ಸೊಸೆಯಂದಿರೊಡಗೂಡಿ ಅಯೋಧ್ಯೆಗೆ ಬರುತ್ತಿದ್ದನು.

ಪರಶುರಾಮನು ಶಿವನಿಂದ ಧನುರ್ವಿದ್ಯೆಯನ್ನು ಕಲಿತವನು. ಶಿವನ ಧನುಸ್ಸನ್ನು ಶ್ರೀರಾಮ ಭಂಗಿಸಿದ ಎಂದು ಕೋಪ; ಅದೂ ಓರ್ವ ಕ್ಷತ್ರಿಯ ಕುಮಾರನಿಂದ ಆಯಿತು ಎಂಬುದರಿಂದ ಪರಶುರಾಮನಿಗೆ ಇನ್ನೂ ಕೋಪ.

ತಂದೆ ದಶರಥ, ಹೆಂಡತಿ ಸೀತೆ ಮತ್ತು ಪರಿವಾರದೊಂದಿಗೆ ತರುಣ ಶ್ರೀರಾಮ ಅಯೋಧ್ಯೆಗೆ ಹೊರಟಿದ್ದ.

ಪರಶುರಾಮ ಅವನಿಗೆ ಇದಿರಾದ, ಅವನನ್ನು ತಡೆದ.

ಪರಶುರಾಮ-ಶ್ರೀರಾಮರೊಳಗೆ ಕೈಕೈ ಮಸಗಿತು. ಶ್ರೀರಾಮನು ಕೋದಂಡವನ್ನು ಎತ್ತಿಕೊಂಡು ಝೆಂಕಾರ ಮಾಡಿದನು. ಪರಶುರಾಮನು ಕೊಡಲಿಯನ್ನು ಮೇಲೆತ್ತಿ ನಿಂತನು. ಇಬ್ಬರ ನೋಟಗಳೂ ಒಮ್ಮೆ ಪರಸ್ಪರ ಸಂಧಿಸಿದವು. ಇಬ್ಬರೂ ತಾವು ಒಂದೇ ಮೂಲಶಕ್ತಿಯ ಅವತಾರವೆಂದು ಅರ್ಥಮಾಡಿಕೊಂಡರು. ಪರಶುರಾಮನ ವೈಷ್ಣವ ತೇಜಸ್ಸು ಶ್ರೀರಾಮನಲ್ಲಿ ಅಂತರ್ಲೀನವಾಯಿತು. ತನ್ನ ಅವತಾರದ ಕಾರ್ಯ ಮುಗಿಯತೆಂದು ತಿಳಿದ ಪರಶುರಾಮನು ಮತ್ತೆ ಮಹೇಂದ್ರ ಪರ್ವತದ ತನ್ನ ಆಶ್ರಮಕ್ಕೆ ಹಿಂತೆರಳಿದನು.

ಕಷ್ದದಲ್ಲಿರುವ ಹೆಣ್ಣಿಗಾಗಿ

ಮಹಾಭಾರತದಲ್ಲಿಯೂ ಹಲವು ಕಡೆಗಳಲ್ಲಿ ಪರಶುರಾಮನ ಕುರಿತು ಪ್ರಸ್ತಾಪ ಬರುತ್ತದೆ.

ಕಾಶೀರಾಜನೆಂಬ ಒಬ್ಬ ಅರಸನಿದ್ದನು. ಆತನಿಗೆ ಮೂವರು ಪುತ್ರಿಯರಿದ್ದರು. ಅಂಬೆ, ಅಂಬಿಕೆ, ಅಂಬಾಲಿಕೆ ಎಂದು ಅವರ ಹೆಸರು. ಅವರಿಗೆ ಮದುವೆಯ ವಯಸ್ಸಾಯಿತು. ಕಾಶೀರಾಜನು ತನ್ನ ಪುತ್ರಿಯರಿಗೆ ಸ್ವ ಯಂವರ ಏರ್ಪಡಿಸಿದನು. ಯಾರು ಯುದ್ಧದಲ್ಲಿ ಎಲ್ಲರನ್ನೂ ಸೋಲಿಸುವರೋ ಅವರನ್ನೇ ತನ್ನ ಪುತ್ರಿಯರು ವರಿಸುವರೆಂಧು ಕಾಶೀರಾಜನು ಸಾರಿದನು.

ಹಿಂದೆ ಹಸ್ತಿನಾವತಿ ಎಂಬ ಪಟ್ಟಣದಲ್ಲಿ ಒಬ್ಬ ರಾಜನಿದ್ದನು. ಶಂತನು ಎಂದು ಅವನ ಹೆಸರು. ಅವನಿಗೆ ದೇವವ್ರತ ಎಂಬ ಮಗ. ದೇವವ್ರತನ ತಾಯಿ ಕಾರಣಾಂತರದಿಂದ ಹೊರಟುಹೋದಳು. ಅನಂತರ ಶಂತನು ಒಬ್ಬ ಹುಡುಗಿಯನ್ನು ಮದುವೆಯಾಗಬೇಕು ಎಂದು ಆಸೆಪಟ್ಟ. ಅದು ಸಾಧ್ಯವಾಗುವಂತೆ ದೇವವ್ರತ ಎರಡು ಪ್ರತಿಜ್ಞೆಗಳನ್ನು ಮಾಡಿದ. ತನಗೆ ರಾಜ್ಯ ಬೇಡ, ತನ್ನ ಮದುವೆಯಾಗುವುದೇ ಇಲ್ಲ ಎಂದು. ಇಂತಹ ಭೀಷ್ಮ ಪ್ರತಿಜ್ಞೆ ಮಾಡಿದ ಎಂದು ಅವನಿಗೆ ಭೀಷ್ಮ ಎಂದು ಹೆಸರಾಯಿತು. ಶಂತನು ತೀರಿಕೊಂಡ ನಂತರ ಭೀಷ್ಮ ತನ್ನ ಮಲತಮ್ಮ ವಿಚಿತ್ರವೀರ್ಯನಿಗೆ ಪಟ್ಟ ಕಟ್ಟಿದ.

ಕಾಶಿಯ ರಾಜಕುಮಾರಿಯರಿಗೆ ಸ್ವಯಂವರವಾಗುವ ಸುದ್ದಿ ಭೀಷ್ಮನಿಗೆ ತಿಳಿಯಿತು. ಅವರನ್ನು ತಮ್ಮ ತಮ್ಮನಿಗೆ ಮದುವೆ ಮಾಡಬೇಕು ಎಂದು ತೀರ್ಮಾನಿಸಿದ. ಭೀಷ್ಮನೇ ಸ್ವಯಂವರಕ್ಕೆ ಹೋದ. ರಾಜಪುತ್ರರನ್ನೆಲ್ಲಾ ಸೋಲಿಸಿ ಮೂವರು ರಾಜಪುತ್ರಿಯರನ್ನೂ ಕರೆತಂದ. ವಿಚಿತ್ರವೀರ್ಯನನ್ನು ವರಿಸುವಂತೆ ಅವರಿಗೆ ಹೇಳಿದ. ಅಂಬಿಕೆ, ಅಂಬಾಲಿಕೆ ಇಬ್ಬರೂ ಒಪ್ಪಿದರು.

ಆದರೆ ಅಂಬೆ -?

ಅಂಬೆಗೆ ಮೊದಲೇ ಸಾಲ್ವರಾಜನನ್ನು ವರಿಸುವ ಆಸೆಯಿದ್ದಿತು. ತನ್ನನ್ನು ಆತನಲ್ಲಿಗೆ ಕಳುಹಿಸಿಕೊಡಬೇಕೆಂದು ಭೀಷ್ಮನನ್ನು ಕೇಳಿಕೊಂಡಳು. ಅಂತೆಯೇ, ಭೀಷ್ಮನು ಆಕೆಯನ್ನು ಕಳುಹಿಸಿಕೊಟ್ಟನು.

ಆದರೆ ಸ್ವಯಂವರದಲ್ಲಿ ಎಲ್ಲರನ್ನೂ ಸೋಲಿಸಿ ಕರೆದುಕೊಂಡು ಹೋದ ಆಕೆಯನ್ನು ತಾನು ಪುನಃ ಪರಿಗ್ರಹಿಸಲಾರೆನೆಂದು ಅಂಬೆಯನ್ನು ಸಾಲ್ವರಾಜನು ತಿರಸ್ಕರಿಸಿದನು.

ಅಂಬೆ ಮರಳಿ ಭೀಷ್ಮನಲ್ಲಿಗೆ ಬಂದಳು. ತನ್ನನ್ನು ಭೀಷ್ಮನೆ ಮದುವೆಯಾಗಬೇಕೆಂದು ಹಟಹಿಡಿದಳು. ಬ್ರಹ್ಮಚಾರಿಯಾದ ತಾನು ವ್ರತಭಂಘ ಮಾಡಲರೆನೆಂದು ಭೀಷ್ಮನು ದೃಢವಾಗಿ ನುಡಿದನು.

ಭೀಷ್ಮನಿಗೆ ಪರಶುರಾಮನಲ್ಲಿ ಗೌರವ ಭಾವನೆಯಿತ್ತು. ಪರಶುರಾಮನು ಹೇಳಿದರೆ ಭೀಷ್ಮನು ತನ್ನನ್ನು ಮದುವೆಯಾಗಬಹುದು ಎಂದು ಅಂಬೆಯ ಆಸೆ. ಅವಳು ಪರಶುರಾಮನಲ್ಲಿಗೆ ನಡೆದಳು. ತನ್ನ ಕರುಣೆಯ ಕಥೆಯನ್ನು ಹೇಳಿಕೊಂಡಳು. ಪರಶುರಾಮನಹು ಅವಳೊಂದಿಗೆ ಹೊರಟ.

“ಅಂಬೆಯನ್ನು ಮದುವೆಯಾಗು” ಎಂದು ಭೀಷ್ಮನಿಗೆ ಹೇಳಿದ.

“ಅಂಬೆಯನ್ನು ವಿವಾಹವಾದರೆ ನನ್ನ ವ್ರತಭಂಗವಾಗುತ್ತದೆ. ಅವಳ ಕೈ ಹಿಡಿಯಲಾರೆ” ಎಂದ ಭೀಷ್ಮ.

ಪರಶುರಾಮನಿಗೂ ಭೀಷ್ಮನಿಗೂ ಕಾಳಗ ಮಸಗಿತು. ಹಲವು ದಿನಗಳ ಹೋರಾಟ ನಡೆಯಿತು.  ಇಬ್ಬರೂ ಶೂರರು. ಜಯಾಪಜಯಗಳು ಇತ್ಯರ್ಥವಾಗಲಿಲ್ಲ. ಇಬ್ಬರೂ ಕೊನೆಗೆ ಕದನ ನಿಲ್ಲಿಸಿ ಅವರವರ ಸ್ಥಾನಗಳಿಗೆ ತೆರಳಿದರು. ನಿರಾಶಳಾದ ಅಂಬೆ ಬೆಂಕಿಗೆ ಬಿದ್ದು ಮೃತಹೊಂದಿ ಪುನರ್ಜನ್ಮದಲ್ಲಿ ಶಿಖಂಡಿಯಾಗಿ ಜನಿಸಿ ಭೀಷ್ಮನ ಮೇಲೆ ಪ್ರತೀಕಾರ ಸಾಧಿಸಿಕೊಂಡಳು.

ಶಿಷ್ಯ ಕರ್ಣ

ಪರಶುರಾಮನು ಹರನಲ್ಲಿಯೇ ಧನುರ್ವೇದವನ್ನು ಕಲಿತು ಶಸ್ತ್ರಾಸ್ತ್ರ ಪ್ರಯೋಗಗಳಲ್ಲಿ ಮಹಾ ಪ್ರವೀಣನಾಗಿದ್ದ. ಈಶ್ವರನೇ ಅವನ ಭಕ್ತಿಗೆ ಮೆಚ್ಚಿ ಕೊಡಲಿಯನ್ನು ಅನುಗ್ರಹಿಸಿದನಂತೆ. ಪಾರ್ವತಿ ಅವನಿಗೆ ದಿವ್ಯಾಸ್ತ್ರಗಳನ್ನು ದಯಪಾಲಿಸಿದಳಂತೆ. ಹಾಗಾಗಿ ಆತನಿಂದ ಧನುರ್ವಿದ್ಯೆ ಕಲಿಯಲು ಅನೇಕರು ಶಿಷ್ಯರಾಗಿ ಬರುತ್ತಿದ್ದರು.

ಆದರೆ ಪರಶುರಾಮನು ಕ್ಷತ್ರಿಯರಿಗೆ ಆ ವಿದ್ಯೆಯನ್ನು ಕಲಿಸುತ್ತಿರಲಿಲ್ಲ. ದುಷ್ಟರ ಕೈಯಲ್ಲಿ ಆಯುಧ ವಿತ್ತರೆ ಸಜ್ಜನರ ಪ್ರಾಣಕ್ಕೆ ಅಪಾಯವೆಂಬ ಕಾರಣದಿಂದ!
ಕರ್ಣ ಎಂಬವನು ಮಹಾಬಾರತದ ಒಬ್ಬ ವೀರ. ಚಿಕ್ಕ ವಯಸ್ಸಿನಲ್ಲೆ ತಾಯಿಯಿಂದ ದೂರವಾಗಬೇಕಾಯಿತು.

ಕರ್ಣನಿಗೆ ಹೇಗಾದರೂ ಮಾಡಿ ಪರಶುರಾಮನಲ್ಲಿಯೆ ಬಿಲ್ಲುವಿದ್ಯೆ ಕಲಿತುಕೊಳ್ಳಬೇಕೆಂಬ ಆಸೆಯಾಯಿತು. ಆಸೆಯನ್ನು ಈಡೇರಿಸಲು ಬೇರೆ ದಾರಿಯೇ ಇರಲಿಲ್ಲ. ಕರ್ಣನು ಬ್ರಾಹ್ಮಣ ವಟು ವೇಷ ಧರಿಸಿದನು. ಪರಶುರಾಮನಲ್ಲಿಗೆ ಹೋಗಿ ಶಿಷ್ಯತ್ವ ವಹಿಸಿದನು.

ಕರ್ಣನ ಶ್ರದ್ಧೆಗೆ, ಚುರುಕು ಬುದ್ಧಿಗೆ ಪರಶುರಾಮನು ಮೆಚ್ಚಿ ಆತನಿಗೆ ಬಿಲ್ಲುವಿದ್ಯೆಯನ್ನು ಹೇಳಿಕೊಟ್ಟನು. ಗುರುವಿನ ಪದತಲದಲ್ಲಿ ಕುಳಿತು ಶಿಷ್ಯನು ಆ ವಿದ್ಯೆಯಲ್ಲಿ ಪಾಂಡಿತ್ಯ ಪಡೆಯುತ್ತಿದ್ದನು. ಶಿಷ್ಯನ ಮೇಲೆ ಆ ಗುರುವಿಗೆ ತುಂಬಾ ಪ್ರೀತಿ.

ಕರ್ಣನ ದೌರ್ಭಾಗ್ಯ

ಒಂದು ದಿನ ಶಿಷ್ಯನ ತೊಡೆಯ ಮೇಲೆ ತಲೆಯಿಟ್ಟು ಪರಶುರಾಮನು ಮಲಗಿ ನಿದ್ದೆಹೋಗಿದ್ದನು.

ಇಂದ್ರ ದೇವತೆಗಳ ರಾಜ. ಪಾಂಡವರಲ್ಲಿ ಒಬ್ಬನಾದ ಅರ್ಜುನ ಇಂದ್ರನ ಆಶೀರ್ವಾದದಿಂದ ಕುಂತಿಯ ಮಗನಾಗಿ ಹುಟ್ಟಿದವನು. ಆದುದರಿಂದ ಅರ್ಜುನನಲ್ಲಿ ಇಂದ್ರನಿಗೆ ಬಹು ಪ್ರೀತಿ, ಪಕ್ಷಪಾತ.

ಮುಂದೆ ಪಾಂಡವರಿಗೂ ಅವರ ದೊಡ್ಡಪ್ಪನ ಮಕ್ಕಳಾದ ದುರ್ಯೋಧನ ಮೊದಲಾದ ಕೌರವರಿಗೂ ಯುದ್ಧವಾಗುತ್ತದೆ. ಎಂದು ಗೊತ್ತಿತ್ತು ಇಂದ್ರನಿಗೆ. ಕರ್ಣ ದುರ್ಯೋಧನ ಸ್ನೇಹಿತನಾಗುತ್ತಾನೆ ಎಂದೂ ತಿಳಿದಿತ್ತು. ಕರ್ಣನನ್ನು ಸೋಲಿಸಬೇಕೆಂದೂ ತನ್ನ ಮಗನಾದ ಅರ್ಜುನನಿಗೆ ಕರ್ಣನಿಂದ ಬರಬಹುದಾದ ಅಪಾಯವನ್ನು ತಪ್ಪಿಸಬೇಕೆಂದೂ ಇಂದ್ರ ತೀರ್ಮಾನಿಸಿದ.

ಇದಕ್ಕೆ ಉಪಾಯವೇನು?

ಕರ್ಣ ಪರಶುರಾಮನಿಂದ ಸಂಪೂರ್ಣವಾಗಿ ವಿದ್ಯೆ ಕಲಿತ ಎಂದರೆ ಯಾರು ಅವನಿಗೆ ಸಮನಾಗಬಹುದು?

ಗುರುವಿಗೆ ಶಿಷ್ಯನ ಮೇಲೆ ಕೋಪ ಬರುವಂತೆ ಮಾಡಬೇಕು ಎಂದು ಯೋಚಿಸಿದ ಇಂದ್ರ. ಒಂದು ವಜ್ರಕೀಟದ ರೂಪ ಧರಿಸಿದ. ಕರ್ಣನ ತೊಡೆಯನ್ನು ಕೊರೆಯಲು ಪ್ರಾರಂಭಿಸಿದ.

ವಜ್ರಕೀಟ ತೊಡೆಯನ್ನು ಕೊರೆಯುತ್ತಿದ್ದರೆ ಯಾರಿಗಾದರೂ ನೋವಾಗದೆ ಇದ್ದೀತೆ? ಆಗಿಯೇ ಆದೀತು. ಆದರೆ ತಾನು ತೊಡೆಯನ್ನು ಅಲುಗಾಡಿಸಿದಲ್ಲಿ ಗುರುವಿನ ನಿದ್ರಾಭಂಗವಾದೀತು ಎಂದು ಕರ್ಣನಿಗೆ ಭಯ. ತನ್ನ ನೋವನ್ನು ಸಂಪೂರ್ಣ ಸಹಿಸಿಕೊಂಡನು. ತೊಡೆಯ ಕೊರೆತದಿಂದ ರಕ್ತ ಸೋರಿತು. ನೆಲವು ಒದ್ದೆಯಾಯಿತು. ಇದರಿಂದ ಪರಶುರಾಮನಿಗೆ ಎಚ್ಚರವಾಯಿತು!

ಗುರು ಎದ್ದು ನೋಡುತ್ತಾನೆ. ಪರಮಾಶ್ಚರ್ಯ! ಶಿಷ್ಯನ ತೊಡೆಯಿಂದ ರಕ್ತ ಹರಿದುಬರುತ್ತಿದ್ದರೂ ನೋವನ್ನು ನುಂಗಿಕೊಂಡಿದ್ದಾನೆ!

ಪರಶುರಾಮನಿಗೆ ಸಂಶಯ ಬಂತು. ಈತ ಬ್ರಾಹ್ಮಣವಟುವಲ್ಲ. ಆಗಿದ್ದರೆ ಇಂತಹ ನೋವನ್ನು ಎಂದಿಗೂ ಸಹಿಸುತ್ತಿರಲಿಲ್ಲ. ಕ್ಷತ್ರಿಯನಾಗಿರಬೇಕು ಇವನು. ತನ್ನನ್ನು ವಂಚಿಸಿ ವಿದ್ಯೆಯನ್ನು ಕಲಿತಿದ್ದಾನೆ.

ಪರಶುರಾಮನು ಕೆರಳಿದನು ‘ನನ್ನಲ್ಲಿ ಪಡೆದ ಧನುರ್ವಿದ್ಯೆ ಕಷ್ಟಕಾಲದಲ್ಲಿ ನಿನಗೆ ನೆರವಾಗದಿರಲಿ’  ಎಂದು ಶಾಪವಿತ್ತನು!

ಮುಂದೆ ಮಹಾಭಾರತ ಯುದ್ಧದ ಕಾಲದಲ್ಲಿ ಕರ್ಣನಿಗೂ ಅರ್ಜುನನಿಗೂ ಘೋರವಾದ ಯುದ್ಧ ನಡೆಯಿತು. ಕರ್ಣನು ಅರ್ಜುನನ್ನು ಕೊಲ್ಲಲು ಬಿಟ್ಟ ಸರ್ಪಾಸ್ತ್ರ ವ್ಯರ್ಥವಾಯಿತು. ಕರ್ಣ ತೀರ ಅಪಾಯದಲ್ಲಿದ್ದ. ಆಗಲೇ ಪರಶುರಾಮನು ಹೇಳಿಕೊಟ್ಟಿದ್ದ ಮಹಾಸ್ತ್ರವು ಮರೆತುಹೋಯಿತು. ಕರ್ಣನು ಅರ್ಜುನನ ಬಾಣಗಳಿಂದ ಪ್ರಾಣಬಿಟ್ಟ.

ಮಹೋನ್ನತ ವ್ಯಕ್ತಿತ್ವ

ಹೀಗೆ ಪರಶುರಾಮನ ಕಥೆ ನಮ್ಮ ಪುರಾಣಗಳಲ್ಲಿ ಸಾಹಸಮಯವಾದ ಕ್ರಾಂತಿಯ ರೋಮಾಂಚಕ ಘಟನೆಗಳಿಂದ ಕೂಡಿದ ಕಥೆ. ಪರಶುರಾಮ ಸಾಹಿಸಿ, ವೀರಯೋಧ ಮಾತ್ರವಲ್ಲ, ವಿವೇಕಿಯೂ ಹೌದು.  ಮಹಾಭಾರತ ಯುದ್ಧಕ್ಕೆ ಮೊದಲು ಶ್ರೀಕೃಷ್ಣ ಪಾಂಡವರ ರಾಯಭಾರಿಯಾಗಿ ದುರ್ಯೋಧನನ ಆಸ್ಥಾನಕ್ಕೆ ಬಂದ. ಯುದ್ಧ ಮಾಡದೆ, ಪಾಂಡವರಿಗೆ ನ್ಯಾಯವಾಗಿ ಸಲ್ಲಬೇಕಾದ ಅರ್ಧ ರಾಜ್ಯವನ್ನು ಕೊಟ್ಟುಬಿಡುವಂತೆ ದುರ್ಯೋಧನನಿಗೆ ಬುದ್ಧಿ ಹೇಳಿದ. ಪರಶುರಾಮ ಆಗ ಆಸ್ಥಾನದಲ್ಲಿ ಇತರ ಹಿರಿಯರೊಡನೆ ಕುಳಿತಿದ್ದ. ಅವನೂ ದುರ್ಯೋಧನನಿಗೆ ಬುದ್ಧಿ ಹೇಳಿದ. “ಪಾಂಡವರು ಆಡಿದ ಮಾತಿನಂತೆ ನಡೆದುಕೊಂಡಿದ್ದಾರೆ. ಈಗ ನೀನು ನ್ಯಾಯವಾಗಿ ನಡೆದುಕೋ, ಅವರ ರಾಜ್ಯವನ್ನು ಅವರಿಗೆ ಕೊಟ್ಟುಬಿಡು. ಇಲ್ಲವಾದರೆ ನಾಶವಾಗುತ್ತಿಯೆ” ಎಂದು ಎಚ್ಚರಿಸಿದ. ಆದರೆ ದುರ್ಯೋಧನ ತನ್ನ ಹಟವನ್ನು ಬಿಡಲಿಲ್ಲ. ಯುದ್ಧ ಮಾಡಿ ಸಾವಿರಾರು ಮಂದಿಯ ಸಾವಿಗೆ ಕಾರಣನಾದ. ಅವನ ತಮ್ಮಂದಿರು, ಸ್ನೇಹಿತರು ಎಲ್ಲ ಹತರಾದರು. ಅವನೂ ತೊಡೆ ಮುರಿದು ಸತ್ತ.

ಪರಶುರಾಮನು ದುರ್ಯೋಧನನಿಗೆ ಬುದ್ಧಿ ಹೇಳಿದ.

ತಂದೆಯ ಮಾತನ್ನು ನಡೆಸಿಕೊಡುವಲ್ಲಿ ಕಾಣುವ ಅಸಾಧಾರಣ ಪಿತೃಭಕ್ತಿ, ಮೃತಳಾದ ತಾಯಿಯನ್ನೂ ತಮ್ಮಂದಿರನ್ನೂ ಬದುಕಿಸಲು ವರವನ್ನು ಬೇಡುವಲ್ಲಿ ಕಂಡುಬರುವ ಅನನ್ಯ ಮಾತೃಭಕ್ತಿ ಹಾಗೂ ಭ್ರಾತೃವಾತ್ಸಲ್ಯ, ತಂದೆಯನ್ನು ವಧಿಸಿದ ದುಷ್ಟ ಕ್ಷತ್ರಿಯರ ವಂಶವನ್ನು ನಿರ್ಮೂಲಗೊಳಿಸಿದ ದೃಢಸಂಕಲ್ಪ, ಕ್ಷತ್ರಿಯರನ್ನು ನಿರ್ಮೂಲಗೊಳಿಸಿ ಗಳಿಸಿದ ಭೂಮಿಯನ್ನು ತಾನು ಅನುಭವಿಸಿದೆ ಸಜ್ಜನರಿಗೆ ದಾನವಾಗಿತ್ತ. ಉದಾರತೆ, ಕೊಡಲಿಯೆಸೆದು ಸಮುದ್ರಾಜನಿಂದ ಪಡೆದ ಭೂಮಿಯಲ್ಲಿ ತೋರಿಸದ ಹೊಸ ಸೃಷ್ಟಿಯ ಸಾಮರ್ಥ್ಯ, ಧನುರ್ವಿದ್ಯೆಯ ಅಪಾರ ಪಾಂಡಿತ್ಯ, ಧರ್ಮದೃಷ್ಟಿ – ಇಂತಹ ಹಲವಾರು ಅಲೌಕಿಕವಾದ ಯೋಗ್ಯತೆಗಳಿಂದ ಕೂಡಿದ ಮಹೋನ್ನತವಾದ ವ್ಯಕ್ತಿತ್ವ ಪರಶುರಾಮನದು!

ಅಂತಲೇ ವಿಷ್ಣುವಿನ ಆರನೆಯ ಅವತಾರವೆಂದು ಆರಾಧನೆಗೆ ಪರಶುರಾಮ ಅರ್ಹತೆ ಪಡಿದಿದ್ದಾನೆ.

ಅಶ್ವತ್ಥಾಮೋ ಬಲಿರ್ವ್ಯಾಸಃ ಹನುಮಾಂಶ್ಚ ವಿಭೀಷಣಃ
ಕೃಪಃ ಪರಶುರಾಮಶ್ಚ ಸಪ್ತೈ ತೇ ಚಿರಜೀವನಃ

ಎಂದು ನಮ್ಮಲ್ಲಿ ಹೇಳುತ್ತಾರೆ. ಈ ಏಳು ಜನ ಚಿರಂಜೀವಿಗಳು – ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪ ಮತ್ತು ಪರಶುರಾಮ. ಪರಶುರಾಮನನ್ನು ಕುರಿತು ನಮ್ಮಲ್ಲಿ ಇನೊಂದು ಸುಂದರ ಕಲ್ಪನೆ ಇದೆ. ಅವನು ಚಿರಂಜೀವಿ ಮಾತ್ರವಲ್ಲ, ಮಹೇಂದ್ರ ಪರ್ವತದಲ್ಲಿ ಈಗಲೂ ತಪಸ್ಸು ಮಾಡುತ್ತಿದ್ದಾನಂತೆ. ತಪಸ್ಸೇಕೆ? ತನಗೆ ಏನಾದರೂ ಬೇಕು ಎಂದಲ್ಲ, ಲೋಕಹಿತಾರ್ಥವಾಗಿ – ಎಂದರೆ ಪ್ರಪಂಚಕ್ಕೆ ಒಳ್ಳೆಯದಾಗಲಿ ಎಂದು.

ಪರಶುರಾಮ ಹೀಗೆ ಜನತೆಯ ಮೆಚ್ಚಿಗೆ ಗಳಿಸಿದ್ದಾನೆ; ಚಿರಂಜೀವಿ ಎಂದು ಪ್ರಸಿದ್ದನಾಗಿದ್ದಾನೆ.