Categories
ಬಯಲಾಟ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅಡವಯ್ಯ ಚನ್ನಬಸವಯ್ಯ ಹಿರೇಮಠ

ಉತ್ತರಕರ್ನಾಟಕದ ಗಂಡುಕಲೆ ದೊಡ್ಡಾಟದಲ್ಲಿ ಅನನ್ಯ ಸಾಧನೆಗೈದ ಮೌನಸಾಧಕರು ಅಡವಯ್ಯ ಚನ್ನಬಸವಯ್ಯ ಹಿರೇಮಠ, ಭಾಗವತಿಕೆ ಕಲಾವಿದರು, ದೊಡ್ಡಾಟದ ನಿರ್ದೇಶಕರು.ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಬೆಲವಂತರ ಗ್ರಾಮದಲ್ಲಿ ೧೯೩೮ರಲ್ಲಿ ಜನಿಸಿದ ಅಡವಯ್ಯ ಹಿರೇಮಠ ಅಪ್ಪಟ ದೇಸೀ ಕಲಾಚೇತನ, ಅಕ್ಷರ ಅರಿಯದ ಜಾನಪದ ಪುಷ್ಪ, ಹದಿನೈದನೇ ವಯಸ್ಸಿನಲ್ಲಿ ಗ್ರಾಮದಲ್ಲಿ ನೋಡಿದ ದೊಡ್ಡಾಟದಿಂದ ಪ್ರಭಾವಿತರಾಗಿ ಕಲಾರಂಗ ಪ್ರವೇಶ. ಸತತ ಪರಿಶ್ರಮದಿಂದ ಕಲೆ ಕರಗತ ಮಾಡಿಕೊಂಡು ತಪಸ್ವಿ, ಉತ್ತಮ ಕಂಠ ಹೊಂದಿದ್ದರಿಂದ ಮಾಸ್ತರ ಆಸೆಯಂತೆ ಕತೆಗಾರಿಕೆಯಲ್ಲಿ ತಲ್ಲೀನ, ೨೫ನೇ ವಯಸ್ಲಿನಿಂದ ದೊಡ್ಡಾಟದ ಕತೆಗಾರಿಕೆ, ನಿರ್ದೇಶನ, ಹಳ್ಳಿಯಿಂದ ಹಳ್ಳಿಗೆ ಕಾಲ್ನಡಿಗೆಯಲ್ಲಿ ಅಲೆದಾಡುತ್ತಾ ಆಸಕ್ತರಿಗೆ ದೊಡ್ಡಾಟ ಕಲಿಸಿದ ಗುರು. ಮೂಡಲಪಾಯ ದೊಡ್ಡಾಟ ಹಾಡುಗಾರಿಕೆಯಲ್ಲಿನ ಮೂವತ್ತು ರಾಗಗಳನ್ನು ಈವರೆಗೂ ಉಳಿಸಿಕೊಂಡು ಬಂದಿರುವ ಏಕೈಕ ಕಲಾವಿದ, ೨೦೦ಕ್ಕೂ ಹೆಚ್ಚು ದೊಡ್ಡಾಟಗಳಿಗೆ ನಿರ್ದೇಶನ ಮಾಡಿರುವ ಹೆಗ್ಗಳಿಕೆ, ಧಾರವಾಡದ ಆಕಾಶವಾಣಿಯಿಂದ ಅಡವಯ್ಯರ ಕತೆಗಾರಿಕೆ ದಾಖಲೀಕರಣಗೊಂಡಿದ್ದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರವಾಗಿರುವ ಅಡವಯ್ಯ ೮೪ರ ಇಳಿವಯಸ್ಸಿನಲ್ಲೂ ಕಲಾಧ್ಯಾನದಲ್ಲಿ ತೊಡಗಿರುವ ಅನನ್ಯ ಜಾನಪದ ಸಂಪತ್ತು.