Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಅಗಡಿ ತೋಟ ಸಂಸ್ಥೆ

ಹಾವೇರಿ ಜಿಲ್ಲೆಯಲ್ಲಿ ನೆಲೆನಿಂತಿರುವ ಅಗಡಿ ತೋಟ ಸಾವಯವ ಕೃಷಿ ಪದ್ಧತಿ ಪ್ರಚಾರಕ್ಕಾಗಿ ಶ್ರಮಿಸುತ್ತಿರುವ ಸಂಸ್ಥೆ. ಕೃಷಿ, ತೋಟಗಾರಿಕೆ, ಕೃಷಿ ಅರಣ್ಯ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೇಂದ್ರ, ಹಾವೇರಿ ಜಿಲ್ಲೆ ಕುನ್ನೂರು ಗ್ರಾಮದ ಹಚ್ಚಹಸಿರಿನ ಪರಿಸರದಲ್ಲಿರುವ ಅಗಡಿ ತೋಟವನ್ನು ಜಯದೇವ್‌ ಅಗಡಿ ಅವರು ೨೦೦೦ರಲ್ಲಿ ಸ್ಥಾಪಿಸಿದರು. ಸಾವಯವ ಕೃಷಿಯನ್ನು ಉತ್ತೇಜಿಸುವುದು, ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ನೈಸರ್ಗಿಕ ಸಾವಯವ ಆಹಾರ ಸಂಸ್ಕೃತಿಯ ಕುರಿತು ಅರಿವು ಮೂಡಿಸುವುದು ಸಂಸ್ಥೆಯ ಪ್ರಮುಖ ಧ್ಯೇಯ. ಗೋಡಂಬಿ ಮತ್ತು ಅಡಿಕೆ ಕೃಷಿಯೊಂದಿಗೆ ನಲವತ್ತು ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿರುವ ‘ಅಗಡಿತೋಟ’ ಸಂಸ್ಕೃತಿ ಮತ್ತು ಸಂಪ್ರದಾಯದೊಂದಿಗೆ ಸಾವಯವ ಆರೋಗ್ಯವಾಗಿರಿ ಎಂಬ ಮಂತ್ರವನ್ನು ಪಠಿಸುತ್ತಲಿದೆ. ಹಳ್ಳಿ, ಸಂಸ್ಕೃತಿ, ಸಂಪ್ರದಾಯ ಮತ್ತು ಆರೋಗ್ಯಕರ ಆಹಾರ ಪದ್ಧತಿಯ ಜೀವನಶೈಲಿಯನ್ನು ಸ್ವಂತವಾಗಿ ಅನುಭವಿಸಲು ಶಿಕ್ಷಣ ನೀಡುತ್ತಲೇ ಅಳಿವಿನಂಚಿನಲ್ಲಿರುವ ೧೦೦೦ಕ್ಕೂ ಹೆಚ್ಚು ವಿವಿಧ ಔಷಧೀಯ ಸಸ್ಯಗಳನ್ನು ತೋಟದಲ್ಲಿ ನೆಡಲಾಗಿದೆ. ಮೆಕ್ಕೆಜೋಳ, ಸೋಯಾಬಿನ್ ಮತ್ತು ಭತ್ತದ ಕೃಷಿಯ ಹೊರತಾಗಿ ಬದನೆ, ಟೊಮೊಟೊ, ಬೀನ್ಸ್ ಮತ್ತು ಕೊತ್ತಂಬರಿಯನ್ನೂ ಬೆಳೆಯಲಾಗುತ್ತಿದೆ. ತೋಟದಲ್ಲಿ ಪರಿಸರ ಹಾನಿ ಮಾಡುವ ಸರ್ವ ಚಟುವಟಿಕೆಗಳನ್ನೂ ನಿಷೇಧಿಸಲಾಗಿದ್ದು ಇದೊಂದು ಮಾದರಿ ಸಾವಯವ ಕೃಷಿ ತೋಟವಾಗಿ ಗಮನ ಸೆಳೆದಿದೆ. ತೋಟದ ಸಂಸ್ಥಾಪಕ ಜಯದೇವ್‌ ಅಗಡಿ ಅವರು ಕೃಷಿಪಂಡಿತ್‌, ಕೃಷಿರತ್ನ ಮುಂತಾದ ಪ್ರಶಸ್ತಿಗಳಿಂದ ಭೂಷಿತರಾಗಿದ್ದಾರೆ.