Categories
ಚಲನಚಿತ್ರ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅವಿನಾಶ್

ಕನ್ನಡ ಚಿತ್ರರಂಗದ ಮಧ್ಯತಲೆಮಾರಿನ ಅತ್ಯಂತ ಪ್ರಮುಖ ಪೋಷಕ ಕಲಾವಿದರು ಅವಿನಾಶ್, ಚಾರಿತ್ರಿಕ ಪಾತ್ರಗಳಿಗೆ ಜೀವತುಂಬಿದ ಅಭಿಜಾತ ನಟ, ರಂಗಭೂಮಿ, ಸಿನಿಮಾ, ಕಿರುತೆರೆಯಲ್ಲಿ ವಿಶಿಷ್ಟ ಛಾಪೊತ್ತಿದ ಪಂಚಭಾಷಾ ತಾರೆ, ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನಲ್ಲಿ ೧೯೫೯ರಲ್ಲಿ ಜನಿಸಿದ ಅವಿನಾಶ್ ಅಪ್ಪಟ ಬಹುಮುಖ ಪ್ರತಿಭೆ, ಮೈಸೂರು ವಿವಿಯಲ್ಲಿ ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ, ಎಂ.ಫಿಲ್ ಪಡೆದ ಸುಶಿಕ್ಷಿತರು, ಮೈಸೂರಿನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯಲಿಂಗ್‌ ಹಾಗೂ ಬೆಂಗಳೂರಿನ ಎಂಇಎಸ್‌ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದವರು. ಬಾಲ್ಯದಿಂದಲೂ ನಟನೆ, ರಂಗಭೂಮಿಯೆಡೆಗೆ ಅಪಾರ ಒಲವು, ಲಂಡನ್‌ನ ಮರ್ಮೈಡ್ ಥಿಯೇಟರ್‌ನಲ್ಲಿ ಅಭಿನಯದ ಪಟ್ಟುಗಳನ್ನು ಕಲಿತ ಕನಸುಗಾರ, ಬಿ.ಜಯಶ್ರೀ ಅವರ ಸ್ಪಂದನ ಹಾಗೂ ಶಂಕರ್‌ನಾಗ್‌ರ ಸಂಕೇತ್‌ ತಂಡಗಳ ರಂಗಪ್ರಯೋಗಗಳಲ್ಲಿ ಬಣ್ಣ ಹಚ್ಚುವ ಮೂಲಕ ಕಲಾರಂಗಕ್ಕೆ. ಜಿವಿ ಅಯ್ಯರ್‌ರ ಮಧ್ವಾಚಾರ್ಯ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶ. ‘ಸಂಯುಕ್ತ’ ಚಿತ್ರದಿಂದ ಮುನ್ನೆಲೆಗೆ, ಆನಂತರದ ಮೂರೂವರೆ ದಶಕಗಳು ಅಪ್ಪಟ ಸಿನಿಯಾನ, ಕಠಿಣ ಎನಿಸುವಂತಹ ಸಂಕೀರ್ಣ ಪಾತ್ರಗಳನ್ನು ನಿರ್ವಹಿಸಿದ ಹೆಗ್ಗಳಿಕೆ, ಪೋಷಕಪಾತ್ರಗಳ ಘನತೆ ಹೆಚ್ಚಿಸಿದ ಕಲಾವಂತಿಕೆ, ೨೦೦ಕ್ಕೂ ಹೆಚ್ಚು ನಿರ್ದೇಶಕರ ಗರಡಿಯಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲೀಷ್ ಸೇರಿದಂತೆ ಒಟ್ಟು ೭೦೦ ಚಿತ್ರಗಳಲ್ಲಿ ನಟಿಸಿದ ಮಹಾಹಿರಿಮೆ, ಕರ್ನಾಟಕ, ತಮಿಳುನಾಡು ರಾಜ್ಯ ಪ್ರಶಸ್ತಿಗಳಿಗೂ ಪಾತ್ರವಾಗಿರುವ ಅವಿನಾಶ್ ಬೆಳ್ಳಿತೆರೆ ಕಂಡ ಅತ್ಯುತ್ತಮ ಪೋಷಕ ಕಲಾವಿದರು.