Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಎನ್. ಶಿವಲಿಂಗಯ್ಯ

ಕರ್ನಾಟಕ ರಂಗಭೂಮಿಯಲ್ಲಿ ಬಹುಮುಖಿ ಕಾರ್ಯಗಳ ಮೂಲಕ ಸೇವೆಗೈದವರು ಎನ್.ಶಿವಲಿಂಗಯ್ಯ. ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ಛಾಯಾಚಿತ್ರ ಮತ್ತು ದೃಶ್ಯಮಾಧ್ಯಮದಲ್ಲಿ ದುಡಿದ ಬಹುರೂಪಿ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ನೀಲಕಂಠನಹಳ್ಳಿಯವರಾದ ಶಿವಲಿಂಗಯ್ಯ ಬಿಎಸ್ಸಿ ಪದವೀಧರರು.ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ, ಪ್ರವೃತ್ತಿಯಲ್ಲಿ ರಂಗಕಲಾವಿದ. ಬಾಲ್ಯದಿಂದಲೂ ಆಸಕ್ತಿ ಹುಟ್ಟಿಸಿದ್ದ ರಂಗಭೂಮಿಗೆ ೧೯೭೩ರಲ್ಲಿ ಪ್ರವೇಶ. ಆನಂತರ ಕತ್ತಲೆಬೆಳಕು, ದೊರೆ ಈಡಿಪಸ್, ತೆರೆಗಳು, ಗೋಕರ್ಣದ ಗೌಡಶನಿ, ಸಂಕ್ರಾಂತಿ, ಬೆಳೆದವರು, ಪಂಚಮ ಮುಂತಾದ ನಾಟಕಗಳಲ್ಲಿ ನಟನೆ, ಕ್ರಮೇಣ ನಿರ್ದೇಶನಕ್ಕೂ ಅಡಿ. ಬಾಬಾಸಾಹೇಬ್ ಅಂಬೇಡ್ಕರ್, ಬುದ್ಧ ಮತ್ತಿತರ ದಾರ್ಶನಿಕರ ಬದುಕಿನ ಸಂಗತಿಗಳನ್ನು ಅಳವಡಿಸಿ ನಾಟಕಗಳ ಪ್ರದರ್ಶನ. ೪೦ಕ್ಕೂ ಹೆಚ್ಚು ನಾಟಕಗಳು, ನೂರಾರು ರಂಗಪ್ರದರ್ಶನಗಳಿಗೆ ಸಾರಥಿ. ೨೫ಕ್ಕೂ ಹೆಚ್ಚು ಕಾರ್ಯಕ್ರಮಗಳ ನಿರೂಪಣೆ, ಮೂರು ನಾಟಕಗಳ ರಚನೆ, ಮೂರು ಕಿರುನಾಟಕಗಳಿಗೆ ರಂಗರೂಪ ನೀಡಿಕೆ, ಹಲವೆಡೆ ದಾರ್ಶನಿಕರ ಜೀವನಚರಿತ್ರೆಯ ಛಾಯಾಚಿತ್ರಗಳ ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸಿದ ಹಿರಿಮೆ. ಸಾಕ್ಷ್ಯಚಿತ್ರಗಳ ನಿರ್ಮಾಣ, ಸಾಂಸ್ಕೃತಿಕ ಶಿಬಿರಗಳ ಆಯೋಜನೆ, ಕನ್ನಡೇತರರಿಗೆ ಕನ್ನಡ ಕಲಿಕಾ ತರಬೇತಿ, ರಂಗಶಿಬಿರಗಳ ನಿರ್ದೇಶಕ ಮುಂತಾದ ಸ್ತುತ್ಯಾರ್ಹ ಕಾರ್ಯದಲ್ಲಿ ನಾಲ್ಕು ದಶಕಗಳಿಂದಲೂ ನಿರತರಾಗಿರುವ ವಿಶಿಷ್ಟ ಸಾಂಸ್ಕೃತಿಕ ಜೀವಿ.