Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಖಾಸೀಂಸಾಬ್ ಜಮಾದಾ

ಕಲೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದನ್ನು ಇಷ್ಟಪಡದ ತಂದೆಯ ಮನೆಯಿಂದ ಹೊರಬಂದ ಖಾಸೀಂಸಾಬ್ ಜಮಾದಾರ್ ನಾಟಕ, ಕಥಕ್ ನೃತ್ಯ, ಸಂಗೀತ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ನಂತರ ಗುರುಕುಲ ಪದ್ದತಿಯಲ್ಲಿ ಕಥಕ್ ಹಾಗೂ ತಬಲಾ ಶಿಕ್ಷಣವನ್ನು ಪಡೆಯಲಾರಂಭಿಸಿದ ಖಾಸೀಂಸಾಬ್ ಜಮಾದಾ ಅವರಿಗೆ ಮೊದಮೊದಲು ಬೆಂಬಲ ಕೊಟ್ಟವರು ಬೈಲಹೊಂಗಲದ ಪಂಡಿತ್ ಚಿನ್ನಯ್ಯಶಾಸ್ತ್ರಿಗಳು.
ಕಥಕ್ ಹಾಗೂ ತಬಲಾ ಅಭ್ಯಾಸವನ್ನು ಗುರುಕುಲ ಪದ್ಧತಿಯಲ್ಲಿ ಪಡೆದುಕೊಂಡ ಜಮಾದಾರ್ ಹಸಿರು ಚಿಮ್ಮುವ ದಾಂಡೇಲಿಯಲ್ಲಿ ನೆಲೆಗೊಂಡರು. ತಬಲಾ ವಾದಕರಾಗಿ ತಮ್ಮನ್ನು ಗುರುತಿಸಿಕೊಂಡು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಬಲಾ ವಾದನ ಮಾಡುತ್ತಿದ್ದ ಇವರು ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳಿಗೆ ಅನಿವಾರ್ಯವಾದರು.
ತಾವು ಕಲಿತ ತಬಲಾ ಕಲೆಯನ್ನು ಸತತ ೫೧ ತಾಸುಗಳ ಕಚೇರಿ ನೀಡುವ ಮೂಲಕ ವಿಶ್ವದಾಖಲೆ ಮಾಡಿ ಗಿನ್ನೆಸ್ ಪುಸ್ತಕದಲ್ಲಿ ದಾಖಲಾದ ಕಾಸೀಂಸಾಬ್ ಆಸಕ್ತರಿಗಾಗಿ ತಬಲಾ ಕಲೆಯನ್ನು ಕಲಿಸತೊಡಗಿದರು. ತಬಲಾ ತರಬೇತಿ ಪಡೆದ ಹಲವಾರು ಶಿಷ್ಯರು ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಆಕಾಶವಾಣಿಯಲ್ಲಿಯೂ ಕೆಲ ಕಾಲ ತಬಲಾ ವಾದಕರಾಗಿದ್ದ ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳು ಸಂದಿವೆ.