Categories
ಆಡಳಿತ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಡಾ. ಎಚ್.ಎಲ್. ಮಂಜುನಾಥ್

ಆಡಳಿತದಲ್ಲಿ ಜನಪರತೆ, ದಕ್ಷತೆ ಮತ್ತು ಸೇವಾತತ್ಪರತೆಗೆ ಹೆಸರಾದವರು ಡಾ. ಎಚ್.ಎಲ್. ಮಂಜುನಾಥ್, ಸಾರ್ವಜನಿಕ ಹುದ್ದೆಗಳ ಘನತೆ ಹೆಚ್ಚಿಸಿದ ಆಡಳಿತ ತಜ್ಞ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯಶಸ್ಸಿನ ರೂವಾಲಿ, ಡಾ. ಎಲ್.ಎಚ್.ಮಂಜುನಾಥ್ ಮೂಲತಃ ಪಶುವೈದ್ಯರು. ರಾಯಚೂರಿನ ಕುಕ್ಕನೂರಿನಲ್ಲಿ ವೃತ್ತಿಬದುಕು ಆರಂಭಿಸಿ ಬಳಿಕ ಮಣಿಪಾಲಕ್ಕೆ ಬಂದವರು. ಬಿ.ಎ.ಪೈ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಥಮ ನಿರ್ದೇಶಕ, ಗ್ರಾಮೀಣಾಭಿವೃದ್ಧಿ ಮತ್ತು ಸ್ವಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕರಾಗಿ ದಶಕದವರೆಗೆ ದುಡಿದವರು. ಆನಂತರ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಯಾಗಿ ದೇಶದ ವಿವಿಧೆಡೆ ಸೇವೆ. ೨೦೦೧ರಲ್ಲಿ ಸ್ವಯಂ ನಿವೃತ್ತಿ ಪಡೆದ ಮೇಲೆ ಬದುಕಿನ ಚಿತ್ರಣವೇ ಬದಲು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಹೊಸ ಪರ್ವ ಸೃಷ್ಟಿ. ಬೆಳ್ತಂಗಡಿ ತಾಲ್ಲೂಕಿಗೆ ಸೀಮಿತವಾಗಿದ್ದ ಯೋಜನೆ ಇಡೀ ರಾಜ್ಯಕ್ಕೆ ವಿಸ್ತಾರ. ೫೦ ಲಕ್ಷ ಕುಟುಂಬಗಳ ಆರ್ಥಿಕ ಪರಿವರ್ತನೆ. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ೧೭ ವರ್ಷಗಳ ಕಾಲ ಆಡಳಿತ ನಿರ್ದೇಶಕರಾಗಿ ಸಾವಿರಾರು ಮಹಿಳೆಯರಿಗೆ ಕೌಶಲ್ಯದ ತರಬೇತಿ. ದುಶ್ಚಟಗಳ ಮುಕ್ತಿಗೆ ಜಾಗೃತಿ. ೪೫ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿಗೆ ಉದ್ಯೋಗದ ಅವಕಾಶ. ಹಲವು ಪ್ರಶಸ್ತಿಗಳ ಪುರಸ್ಕೃತರು, ಐದು ಕೃತಿಗಳ ಲೇಖಕರೂ ಆಗಿರುವ ಮಂಜುನಾಥ್ ದುರ್ಬಲ ವರ್ಗದ ಜನರನ್ನು ಸ್ವಾವಲಂಬಿಗಳನ್ನಾಗಿಸಿದ ಸಾಮಾಜಿಕ ಪರಿವರ್ತಕರು.