Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ

ಭೌಗೋಳಿಕ ಮತ್ತು ಭಾಷೆಗಳ ಎಲ್ಲೆ ಮೀರಿದ ಸಾಧನೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರದು. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೊನೆಟಮ್ಮಪೇಟದಲ್ಲಿ ೧೯೪೬ರ ಜೂನ್ ೪ರಂದು ಜನನ, ತೆಲುಗು ಚಿತ್ರರಂಗದ ಮೂಲಕ ಗಾಯನ ಕ್ಷೇತ್ರಕ್ಕೆ ೧೯೬೬ರಲ್ಲಿ ಪದಾರ್ಪಣೆ. ಒಟ್ಟು ೩೯ ಸಾವಿರಕ್ಕೂ ಅಧಿಕ ಗೀತೆಗಳ ಸರದಾರರು ಶ್ರೀಯುತರು. ಕನ್ನಡ, ಮಾತೃಭಾಷೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಭಾವಪರವಶತೆಯಿಂದ ಹಾಡಿರುವರು. ಎಸ್‌ಪಿಬಿ ಅವರ ದಾಖಲೆಗಳು ಹತ್ತು-ಹಲವು. ೩೫ ವರ್ಷಗಳ ಸೇವೆ ಸಲ್ಲಿಸಿರುವ ಅವರು ೧೯೮೧ರ ಫೆಬ್ರವರಿ ೮ರಂದು ಬೆಂಗಳೂರಿನಲ್ಲಿ ಬೆಳಗಿನ ೯ರಿಂದ ರಾತ್ರಿ ೯ರವರೆಗೂ ೧೭ ಹಾಡುಗಳ ಧ್ವನಿ ಮುದ್ರಣದಲ್ಲಿ ಭಾಗವಹಿಸಿದ್ದು ಇಂದಿಗೂ ಒಂದು ಅದ್ಭುತ ದಾಖಲೆ.
ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರಕ್ಕಾಗಿ ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಹಾಡಿದ ಗೀತೆಗೆ ೧೯೯೫ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಗೌರವ. ೧೯೯೯ರಲ್ಲಿ ಆಂಧ್ರದ ಪೊಟ್ಟಿ ಶ್ರೀರಾಮುಲು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ, ೨೦೦೧ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸಂದಿದೆ. ಹಿಂದಿಯ ‘ಏಕ್ ದುಜೇ ಕೇ ಲಿಯೇ’ಚಿತ್ರವೂ ಸೇರಿದಂತೆ ಒಟ್ಟು ಆರು ಬಾರಿ ರಾಷ್ಟ್ರೀಯ ಪ್ರಶಸ್ತಿ ರಾಜ್ಯದ ‘ಸಂಗೀತಾ ಗಂಗಾ’ ಪ್ರಶಸ್ತಿ, ಅನೇಕ ಬಾರಿ ಆಂಧ್ರ ಸರ್ಕಾರದ ನಂದಿ ಪ್ರಶಸ್ತಿ ಇವರಿಗೆ ಸಂದ ಗೌರವಗಳು.
ಅವರು ನಡೆಸಿಕೊಡುವ ‘ಎದೆ ತುಂಬಿ ಹಾಡುವೆನು’ ಎಂಬ ಕನ್ನಡದ ಪ್ರತಿಭಾ ಶೋಧ ಕಾರ್ಯಕ್ರಮ ಜನಪ್ರಿಯತೆ ಪಡೆದಿದೆ. ತಮ್ಮ ಹಾಡುಗಳ ಮೂಲಕ ಕನ್ನಡ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಹೃದಯವಂತ ಹಿನ್ನೆಲೆ ಗಾಯಕರು ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ.