Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎ.ಎಸ್. ಹೆಗಡೆ

ನರವಿಜ್ಞಾನ ವೈದ್ಯಕೀಯ ರಂಗದಲ್ಲಿ ಅಪೂರ್ವ ಸಾಧನೆ ಮಾಡಿ, ಹದಿನೈದು ಸಾವಿರಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆಯ ಮೂಲಕ ಜನರಿಗೆ ಜೀವದಾನ ಮಾಡಿದ ಮಹಾನ್ ವೈದ್ಯ ಡಾ|| ಅಲಂಗಾ‌ ಸತ್ಯರಂಜನದಾಸ ಹೆಗ್ಡೆ,
ಕರ್ನಾಟಕದ ಪೆರ್ಡೂರಿನಲ್ಲಿ ೧೯೫೨ರಲ್ಲಿ ಜನಿಸಿದ ಅಲಂಗಾರ್ ಸತ್ಯರಂಜನದಾಸ್ ಹೆಗ್ಡೆ ಬಾಲ್ಯದ ಶಿಕ್ಷಣದ ನಂತರ ವೈದ್ಯಕೀಯ ಪದವಿಗಾಗಿ ಬೆಂಗಳೂರಿನ ಸೆಂಟ್ ಜಾನ್ಸ್ ವೈದ್ಯಕೀಯ ಸಂಸ್ಥೆ ಸೇರಿದರು. ನಂತರ ನಿಮ್ಹಾನ್ಸ್‌ನಲ್ಲಿ ನರ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿಯನ್ನು ಪಡೆದು, ಜಪಾನಿನ ಶಿಂಶು ವಿಶ್ವವಿದ್ಯಾಲಯದಲ್ಲಿ ಪಿಹೆಚ್.ಡಿ. ಪದವಿ ಗಳಿಸಿದರು. ಜಪಾನ್ ಸರ್ಕಾರದಿಂದ ‘ಮೊನ್‌ಬುಷೋ’ ವಿದ್ಯಾರ್ಥಿ ವೇತನ ಪಡೆದು ವಿಶೇಷ ತರಬೇತಿಗಾಗಿ ಕೆನಡಾದ ಪ್ರಸಿದ್ಧ ವಿಶ್ವವಿದ್ಯಾನಿಲಯ ಸೇರಿದರು.
ದೇಶವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಆಹ್ವಾನಿತ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ, ನಂತರ ಬೆಂಗಳೂರಿನ ಮಣಿಪಾಲ್ ನರರೋಗ ಸಂಸ್ಥೆಯ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು. ಪ್ರಸಕ್ತ ಶ್ರೀ ಸತ್ಯಸಾಯಿ ಉನ್ನತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನರವಿಜ್ಞಾನ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಲವಾರು ಆಸ್ಪತ್ರೆಗಳಲ್ಲಿ ನರವಿಜ್ಞಾನ ವಿಭಾಗ ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿರುವ ಡಾ|| ಎ. ಎಸ್. ಹೆಗ್ಡೆ ಅವರು ಅನೇಕ ಅತ್ಯಾಧುನಿಕ ಚಿಕಿತ್ಸಾ ಪದ್ಧತಿಗಳನ್ನು ಕಂಡುಹಿಡಿದಿದ್ದಾರೆ. ಮಿದುಳು ರಕ್ಷಣೆ ಹಾಗೂ ಮಿದುಳಿನ ಶಸ್ತ್ರ ಚಿಕಿತ್ಸೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ನರ ರೋಗದಿಂದ ಬಳಲುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಲು ಹಾಗೂ ಆ ಬಗ್ಗೆ ಇತರರಿಗೂ ಅರಿವು ಮೂಡಿಸಲು ಶಿರ ಸುಭದ್ರ ಫೌಂಡೇಷನ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಅಂಗವಿಕಲ ಮಕ್ಕಳಿಗೆ ಉಚಿತ ನರಪರೀಕ್ಷೆ ನೀಡುವುದು, ಬಡ ರೋಗಿಗಳಿಗೆ ಸಹಾಯಧನ ನೀಡುವುದು, ಉಚಿತ ನರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುವುದು, ಮಿದುಳು ಗಡ್ಡೆ, ಮಿದುಳು ರಕ್ತಸ್ರಾವ ಕುರಿತು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿ, ಪ್ರದರ್ಶಿಸಿ ಜನರಲ್ಲಿ ಅರಿವು ಮೂಡಿಸುವುದು ಇತ್ಯಾದಿ ಸಾಮಾಜಿಕ ಹಿತಾಸಕ್ತಿಯ ಕಾರ್ಯಗಳಲ್ಲಿ ತೊಡಗಿದ್ದಾರೆ. ದೇಶ ವಿದೇಶಗಳ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ಸದಸ್ಯರು, ಗೌರವ ಸದಸ್ಯರೂ ಆಗಿ ನೇಮಕಗೊಂಡಿರುವ ಶ್ರೀಯುತರು ಮಿದುಳು, ನರರೋಗ, ಪಾರ್ಶ್ವವಾಯು, ನರ ಕ್ಯಾನ್ಸರ್ ಇತ್ಯಾದಿ ವಿಷಯಗಳಲ್ಲಿ ವ್ಯಾಪಕ ಸಂಶೋಧನೆ ನಡೆಸುತ್ತಿದ್ದಾರೆ. ಮಕ್ಕಳಲ್ಲಿ ಮಿದುಳು ಆಘಾತದ ನಂತರದ ಸ್ಥಿತಿ ಬಗ್ಗೆ ಅಧ್ಯಯನದಲ್ಲಿ ತೊಡಗಿದ್ದಾರೆ.
ನರ ವಿಜ್ಞಾನಕ್ಕೆ ಅತ್ಯಂತ ಮಹತ್ವದ ಕೊಡುಗೆಯನ್ನು ನೀಡಿ, ನರರೋಗಿಗಳ ಚಿಕಿತ್ಸಾ ವಿಧಾನದಲ್ಲಿ ಸಂಶೋಧನೆಗಳನ್ನು ಮಾಡಿರುವ ನರರೋಗತಜ್ಞ ಡಾ. ಎ.ಎಸ್. ಹೆಗ್ಡೆ ಅವರು.