Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಬಿ.ಕೆ. ಶ್ರೀನಿವಾಸಮೂರ್ತಿ

ಗ್ರಾಮೀಣ ಪ್ರದೇಶದಲ್ಲಿ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಿ ಸಹಸ್ರಾರು ಮಂದಿಯ ಆರೋಗ್ಯದ ಕಾಳಜಿ ವಹಿಸುತ್ತಿರುವ ಖ್ಯಾತ ಹೃದಯತಜ್ಞ ಡಾ|| ಬಿ.ಕೆ. ಶ್ರೀನಿವಾಸಮೂರ್ತಿ,
ಬಳ್ಳಾರಿಯವರಾದ ಶ್ರೀನಿವಾಸಮೂರ್ತಿ ಅವರು ಮೈಸೂರಿನಲ್ಲಿ ಎಂ.ಬಿ.ಬಿ.ಎಸ್. ಪೂರೈಸಿ ಇಂಗ್ಲೆಂಡಿನ ರಾಯಲ್ ಕಾಲೇಜ್‌ ಆಫ್ ಫಿಜಿಷಿಯನ್ಸ್ ನಿಂದ ಎಂ.ಆರ್.ಸಿ.ಪಿ. ವೈದ್ಯ ಪದವಿ ಪಡೆದಿದ್ದಾರೆ. ಬಳ್ಳಾರಿಯ ಸರಕಾರಿ ವೈದ್ಯಕೀಯ ಕಾಲೇಜು, ಅಮೇರಿಕಾದ ಚೆಸ್ಟ್‌ನಟ್ ಹಿಲ್ ಹಾಸ್ಪಿಟಲ್, ಇಂಗ್ಲೆಂಡಿನ ಡಾನ್‌ಕಾಸ್ಟ‌ ರಾಯಲ್ ಇನ್‌ಫರರೀ ಮೊದಲಾದ ಕಡೆ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಿ ಜನಪ್ರಿಯರಾಗಿದ್ದಾರೆ.
ಹೃದಯ ಹಾಗೂ ಮಧುಮೇಹ ಕಾಯಿಲೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಡಾ|| ಮೂರ್ತಿ ಅವರು ಅನೇಕ ಪ್ರಬಂಧಗಳನ್ನು ರಾಷ್ಟ್ರಮಟ್ಟದ ವಿವಿಧ ವೈದ್ಯ ವೇದಿಕೆಗಳಲ್ಲಿ ಮಂಡಿಸಿದ್ದಾರೆ.
ಚೀನಾ, ಥಾಯ್‌ಲ್ಯಾಂಡ್ ಇಂಡೋನೇಷ್ಯಾ, ಈಜಿಪ್ಟ್, ದುಬೈ ಮೊದಲಾದ ಕಡೆ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಭಾರತ ಸರ್ಕಾರದ ಸ್ವಾಸ್ಥ್ಯ ಸಚಿವಾಲಯದ ಸೆಂಟ್ರಲ್‌ ಕೌನ್ಸಿಲ್‌ನ ಮೆಂಬರಾಗಿ ಸೇವೆ ಸಲ್ಲಿಸಿರುವರು.
ಎ.ಪಿ.ಐ. ಕರ್ನಾಟಕ ಚಾಪ್ಟರ್‌ನಿಂದ ಬಂಗಾರ ಪದಕ ಪಡೆದಿರುವುದಲ್ಲದೇ ಕಾರ್ಡಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾದಿಂದ ಸನ್ಮಾನಿತರಾಗಿದ್ದಾರೆ. ಇನ್ನೂ ಅನೇಕ ಸಂಸ್ಥೆಗಳು ಇವರನ್ನು ಗೌರವಿಸಿವೆ. ಸದ್ಯ ಬಳ್ಳಾರಿಯಲ್ಲಿ ವೈದ್ಯಕೀಯ ಚಿಕಿತ್ಸೆ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಡಾ|| ಬಿ.ಕೆ. ಶ್ರೀನಿವಾಸಮೂರ್ತಿ ಅವರು.