Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಮಂಜಪ್ಪಶೆಟ್ಟಿ ಮಸಗಲಿ

ಕವಿ, ವಿಮರ್ಶಕ, ಸಂಶೋಧಕ, ಸಂಪಾದಕ, ಜೀವನಚರಿತ್ರೆಕಾರ, ವ್ಯಾಕರಣಕಾರ ಹಾಗೂ ಹಸ್ತಪ್ರತಿ ತಜ್ಞರೂ ಆಗಿರುವ ಮಂಜಪ್ಪಶೆಟ್ಟಿ ಮಸಗಲಿ ಅವರು ಬಹುಮುಖಿ ಆಸಕ್ತಿಯ ಪ್ರತಿಭಾಶಾಲಿ.
ಚಿಕ್ಕಮಗಳೂರು ತಾಲ್ಲೂಕಿನ ಮಸಗಲಿ ಮಂಜಪ್ಪಶೆಟ್ಟರ ಹುಟ್ಟೂರು. ಚಿಕ್ಕಮಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್‌ಡಿ. ಚಿನ್ನದಪದಕ ವಿಜೇತರು. ಮೈಸೂರು ವಿ.ವಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರದಲ್ಲಿ ಹಿರಿಯ ಸಂಶೋಧಕ-ಸಹ ನಿರ್ದೇಶಕರಾಗಿ ಸಾರ್ಥಕ ಸೇವೆ. ಅಧ್ಯಯನ- ಅಧ್ಯಾಪನ ಜೊತೆಗೆ ಸಂಶೋಧನೆಯಲ್ಲಿ ವಿಶೇಷ ಆಸಕ್ತಿ-ಕ್ರಿಯಾಶೀಲರು. ಅರವತ್ತಕ್ಕೂ ಹೆಚ್ಚು ಕೃತಿಗಳು, ೮೦ಕ್ಕೂ ಅಧಿಕ ಸಂಶೋಧನಾ ಲೇಖನಗಳು, ಅಪಾರ ಜಾನಪದ ಸಾಹಿತ್ಯದ ಸಂಗ್ರಹ, ಹಲವಾರು ಶಾಸನಗಳ ಪತ್ತೆಹಚ್ಚುವಿಕೆ ಮಂಜಪ್ಪ ಶೆಟ್ಟರ ಕ್ರಿಯಾಶೀಲತೆ-ಪ್ರತಿಭಾವಂತಿಕೆಗೆ ಸಾಕ್ಷಿ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸಾಹಿತ್ಯ ಗೋಷ್ಠಿಗಳಲ್ಲಿ ವಿಶೇಷ ಉಪನ್ಯಾಸ ಮಂಡಿಸಿದ ಹಿರಿಮೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಅಖಿಲ ಕರ್ನಾಟಕ ೧೪ನೇ ಹಸ್ತಪ್ರತಿಶಾಸ್ತ್ರ ಸಮ್ಮೇಳನ, ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಅತ್ತಿಮಬ್ಬೆ ಪ್ರಶಸ್ತಿ, ಸಾಹಿತ್ಯಸಿರಿ ಪ್ರಶಸ್ತಿ, ಕಸಾಪ ದತ್ತಿ ಮತ್ತಿತರ ಪ್ರಶಸ್ತಿಗಳಿಗೆ ಪುರಸ್ಕೃತ ತರಾಗಿರುವ ದೈತ್ಯ ಪ್ರತಿಭೆ.