Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಡಾ. ಮುದ್ದುಮೋಹನ್

ಸಾರ್ವಜನಿಕ ಆಡಳಿತ ಮತ್ತು ಸಂಗೀತ ಕ್ಷೇತ್ರದಲ್ಲಿ ಸಮನ್ವಯ ಸಾಧಿಸಿದ ವಿಶಿಷ್ಟ ಸಾಧಕರು ಡಾ.ಮುದ್ದುಮೋಹನ್, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿ ಸಂಗೀತ, ಸುಗಮ ಸಂಗೀತ ಕ್ಷೇತ್ರದಲ್ಲಿ ಸೇವೆಗೈದ ಬಹುಮುಖಿ.
ರಾಯಚೂರು ಜಿಲ್ಲೆಯ ಮಸ್ಕಿ ಮುದ್ದುಮೋಹನ್‌ ಹುಟ್ಟೂರು, ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಿಕಾಂ ಪದವಿಯಲ್ಲಿ ೨ನೇ ಬ್ಯಾಂಕ್ ಪಡೆದವರು. ಕೆ.ಎ.ಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬ್ಯಾಂಕ್ ಪಡೆದು ನಂತರ ಐಎಎಸ್ ಹುದ್ದೆಗೆ ಪದೋನ್ನತಿಗೊಂಡು ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿ ಹಾಗೂ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನಪರ ಕಾರ್ಯಕೈಗೊಂಡವರು, ಪದ್ಮಭೂಷಣ ಡಾ. ಬಸವರಾಜ ರಾಜಗುರು, ಪದ್ಮವಿಭೂಷಣ ಗಂಗೂಬಾಯಿ ಹಾನಗಲ್ ಮತ್ತು ಚಂದ್ರಶೇಖರ ಗವಾಯಿಗಳಿಂದ ಹಿಂದೂಸ್ತಾನಿ ಸಂಗೀತ ಕಲಿತವರು. ದಾಸವಾಣಿ, ಶರಣರ ವಚನ ಗಾಯನ ಪ್ರಸ್ತುತಪಡಿಸುವಲ್ಲಿ ಸಿದ್ಧಹಸ್ತರು. ರಂಗದಿಗ್ಗಜ ಏಣಗಿ ಬಾಳಪ್ಪರಿಂದ ತರಬೇತುಗೊಂಡು ನಾಟ್ಯಗೀತೆಗಳನ್ನು ಹಾಡಿದವರು, ಭಾವಗೀತೆಗಳನ್ನು ಹಾಡುವಲ್ಲಿ ಹೆಸರುವಾಸಿ, ಆಕಾಶವಾಣಿಯ ಬಿ’ಹೈ’ ಗ್ರೇಡ್ ಕಲಾವಿದರು, ದೂರದರ್ಶನ ಕಾರ್ಯಕ್ರಮಗಳ ಮೂಲಕ ಚಿರಪರಿಚಿತರು. ರಾಜ್ಯದ ಎಲ್ಲಾ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ, ದೇಶ- ವಿದೇಶಗಳಲ್ಲಿ ಗಾನಸುಧೆ ಹರಿಸಿದ, ನೂರಾರು ಸಿಡಿಗಳಿಗೆ ಹಾಡಿರುವ ಮುದ್ದು ಮೋಹನ್ ತಮ್ಮ ಬಹುಶ್ರುತ ಸಾಧನೆಗೆ ಕರ್ನಾಟಕ ಕಲಾಶ್ರೀ, ಆರ್ಯಭಟ ಪ್ರಶಸ್ತಿ, ಪಂಚಾಕ್ಷರ ಗವಾಯಿ, ಕೆಂಪೇಗೌಡ ಪ್ರಶಸ್ತಿಗಳಿಂದ ಭೂಷಿತರು. ೧೯೯೨ರಲ್ಲಿ ನವದೆಹಲಿಯಲ್ಲಿ ನಡೆದ ಅಖಿಲ ಭಾರತ ಸಿವಿಲ್ ಸರ್ವಿಸಸ್ ಸಾಂಸ್ಕೃತಿಕ ಸ್ಪರ್ಧೆಗಲ್ಲಿ ಭಾರತ ದೇಶಕ್ಕೆ ಪ್ರಥಮ ಸ್ಥಾನ ಪಡೆದು ಗೌರವಿಸಲ್ಪಟ್ಟಿದ್ದಾರೆ.