Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ವೀರಣ್ಣ ಬಿ.ರಾಜೂರ

ವಚನ, ಸಾಂಗತ್ಯ ಮತ್ತು ಜಾನಪದ ಕ್ಷೇತ್ರಗಳಲ್ಲಿ ಕೃಷಿ ಮಾಡಿದವರು ಡಾ. ವೀರಣ್ಣ ಬಿ. ರಾಜೂರ ಅವರು. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಬೆನಕನಾಳದಲ್ಲಿ ಜನನ, ‘ಕನ್ನಡ ಸಾಂಗತ್ಯ ಸಾಹಿತ್ಯ’ ಕುರಿತು ಸಂಶೋಧನೆ ನಡೆಸಿ ಬಳಿಕ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಅಧ್ಯಾಪನ ವೃತ್ತಿ ಆರಂಭ.
ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾಗಿ, ಅಂತಾರಾಷ್ಟ್ರೀಯ ಕಿಟೆಲ್ ಸಮ್ಮೇಳನದ ನಿರ್ದೇಶಕರಾಗಿ ಸೇವೆ ಸಲ್ಲಿಕೆ. ೨೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಮತ್ತು ಎಂ.ಫಿಲ್ ಮಾರ್ಗದರ್ಶಕರು. ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಫೆಲೋಶಿಪ್ ಪಡೆದಿರುವ ಶ್ರೀಯುತರು, ಹಲವಾರು ವಿಚಾರ ಕಮ್ಮಟ, ಸಮ್ಮೇಳನಗಳಲ್ಲಿ ವಿಶೇಷ ಉಪನ್ಯಾಸ ನೀಡಿರುವರು.
ಕನ್ನಡ ಸಾಂಗತ್ಯ ಸಾಹಿತ್ಯ, ವಚನ ಅಧ್ಯಯನ, ಸ್ವರವಚನಗಳು, ಬಸವೋತ್ತರ ಯುಗದ ವಚನಕಾರರು, ಏಕಾಂಕ ನಾಟಕಗಳ ಸಂಗ್ರಹ ಅವರ ಸ್ವತಂತ್ರ ಕೃತಿಗಳು. ಉರಿಲಿಂಗ ದೇವರ ವಚನಗಳು, ಶರಣರ ನುಡಿಮುತ್ತುಗಳು, ವಚನಾಮೃತಸಾರ ಅವರು ಸಂಪಾದಿಸಿರುವ ಕೃತಿಗಳಲ್ಲಿ ಪ್ರಮುಖವಾದವು.
ವಚನ, ಸಾಂಗತ್ಯ ಮತ್ತು ಜಾನಪದ ಕ್ಷೇತ್ರಗಳಲ್ಲಿ ಡಾ. ವೀರಣ್ಣ ಬಿ.ರಾಜೂರ ಅವರು ಸಲ್ಲಿಸಿರುವ ಸೇವೆ ಮೌಲ್ಯಯುತ.